ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ ಸ್ವಚ್ಛತೆ: ಮೋದಿ ಸಾಮರ್ಥ್ಯಕ್ಕೆ ಸವಾಲು

ಗಂಗಾ ಶುದ್ಧೀಕರಣಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಾ­ಣಸಿಯ ಘನತ್ಯಾಜ್ಯ ಹಾಗೂ ಕೊಳಚೆ ನೀರು ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಿವೆ. ಈ ನಗರದ ಘನತ್ಯಾಜ್ಯ ಹಾಗೂ  ಕೊಳಚೆ ನೀರು ಗಂಗಾ ನದಿಯನ್ನು ನಿತ್ಯ ಮಲಿನ­ಗೊಳಿಸುತ್ತಿವೆ. ಹತ್ತು ಲಕ್ಷಕ್ಕೂ ಹೆಚ್ಚು ಜನರು ಮತ್ತು ಸದಾ ಯಾತ್ರಿಗಳಿಂದ ತುಂಬಿ ತುಳುಕುವ ಪ್ರವಾಸಿ ಕೇಂದ್ರದ ಸಮಸ್ಯೆ ಒಂದೆರೆಡಲ್ಲ.

ಅನಿಯಮಿತ ವಿದ್ಯುತ್‌ ಕಡಿತ, ಹದಗೆಟ್ಟ ಕಿರಿ ದಾದ ರಸ್ತೆಗಳು, ಸಂಚಾರ ದಟ್ಟಣೆ, ಪ್ರವಾಸಿ­ಗರಿಗೆ ಉತ್ತಮ ಊಟ, ವಸತಿ ಸೌಲಭ್ಯಗಳ ಕೊರತೆ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಂಗೆಯ ದಡದಲ್ಲಿರುವ ವಾರಾಣಸಿ ಲೋಕ­ಸಭಾ ಕ್ಷೇತ್ರದಿಂದ ಆಯ್ಕೆಯಾದ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಸ್ಥಳೀಯರಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದೆ. ‘ಈ ಎಲ್ಲ ಸಮಸ್ಯೆಗಳಿಗೆ ನನ್ನ ಬಳಿ ಪರಿಹಾರವಿದೆ’ ಎಂದು ಅವರು ನೀಡಿರುವ ಆಶ್ವಾಸನೆಯಿಂದ ಜನರ ನಿರೀಕ್ಷೆ ಮುಗಿಲು ಮುಟ್ಟಿದೆ.

ಗಂಗಾ ಶುದ್ಧೀಕರಣದ ಜೊತೆ ವಾರಾಣಸಿಯ ಪ್ರಮುಖ ಆದಾಯವಾಗಿರುವ ಪ್ರವಾ­ಸೋದ್ಯಮ ಮತ್ತು ನೇಕಾರಿಕೆಗೆ ಉತ್ತೇಜನ ನೀಡುವುದಾಗಿ ಅವರು ಹೇಳಿದ್ದಾರೆ. ಜತೆಗೆ ನಿರಂತರ ವಿದ್ಯುತ್‌ ಸರಬರಾಜು, ಹೊಸ ವರ್ತುಲ ರಸ್ತೆ ನಿರ್ಮಾಣ, ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ, ಅವು ಅಷ್ಟು ಸುಲಭವಾಗಿ ಈಡೇರಿಸುವಂಥ ಭರವಸೆಗಳಲ್ಲ.

ಮೋದಿಗೆ ಸಾಧ್ಯವೆ?: ರಸ್ತೆಯ ಮೇಲೆ ಹರಿಯುವ ಚರಂಡಿ ನೀರು, ಕೊಳಚೆ ಗುಂಡಿಗಳಿಂದ ತುಂಬಿದ ರಸ್ತೆಗಳು, ಬೀದಿಯಲ್ಲಿಯೇ ರಾಜಾರೋಷವಾಗಿ ಬೀಡು ಬಿಟ್ಟ ಬಿಡಾಡಿ ದನಗಳು, ಇಕ್ಕೆಲಗಳಲ್ಲಿ ಬಿದ್ದ ಕಸದ ರಾಶಿಯಲ್ಲಿ ಆಹಾರ ಹೆಕ್ಕುವ ನಾಯಿ, ಹಂದಿಗಳು,  ಬೇಕಾಬಿಟ್ಟಿ  ಓಡಾಡುವ ವಾಹನ­ಗಳು, ಮುಂಗಾರು ಕಾಲದಲ್ಲಿ ಊರೊಳಗೆ  ನುಗ್ಗುವ ಗಂಗೆಯ ಪ್ರವಾಹ, ಸ್ನಾನ­ಘಟ್ಟ ದಲ್ಲಿಯ ಗದ್ದಲ, ಗಲೀಜು, ಬೀದಿ ಬದಿಯ ಭಿಕ್ಷುಕರು, ವರ್ತಕರು,  ಸಾಧು, ಸನ್ಯಾಸಿಗಳು... ಇವನ್ನೆಲ್ಲ ಸುಲಭವಾಗಿ ಬದಲಿಸಲು ಸಾಧ್ಯವೇ ?  ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ.

1970ರಲ್ಲಿ ರೈಲು ನಿಲ್ದಾಣ ನಿರ್ಮಾಣ ಹಾಗೂ ಇನ್ನಿತರ ಸಣ್ಣಪುಟ್ಟ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆದಿರುವುದನ್ನು ಹೊರತುಪಡಿಸಿದರೆ ನಂತರ ಈ ನಗರದಲ್ಲಿ  ಯಾವುದೇ ಬೃಹತ್‌ ಕಾಮಗಾರಿ ನಡೆದಿಲ್ಲ. ಗರಿಗೆದರಿದ ಜನರ ನಿರೀಕ್ಷೆ: ಮೋದಿ ಲೋಕಸಭೆ ಚುನಾವಣೆಗೆ ಇಲ್ಲಿಂದ ಸ್ಪರ್ಧಿ­ಸಿದಾಗ ಆಸೆಗಳು ಚಿಗುರಿದವು. ಬಜೆ­ಟ್‌­ನಲ್ಲಿ ವಾರಾಣಸಿಯ ರೈಲು ನಿಲ್ದಾಣದ ಆಧು­ನೀಕರಣ ಮತ್ತು ಗಂಗಾ ಶುದ್ಧೀ ಕರಣಕ್ಕಾಗಿ ಕೇಂದ್ರ ಸರ್ಕಾರ ರೂ.200 ಕೋಟಿ ತೆಗೆದಿರಿಸಿದೆ. ಪ್ರಧಾನಿಯ ಮಹತ್ವಾಕಾಂಕ್ಷೆಯ ‘ಗಂಗಾ ಶುದ್ಧೀಕರಣ’ ಯೋಜನೆ ವಾರಾ­ಣಸಿಯ ಅಭಿವೃದ್ಧಿಗೆ ಮುನ್ನುಡಿ ಬರೆಯುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್‌ನಲ್ಲಿ ಗಂಗಾನದಿಯ ಐತಿಹಾಸಿಕ  ಘಟ್ಟಗಳ ದುರಸ್ತಿಗೆ ರೂ.100 ಕೋಟಿ, ಕೈಮಗ್ಗ ಮತ್ತು ಕರಕುಶಲ ಉದ್ಯಮ  ಪುನಶ್ಚೇತನಕ್ಕೆ ರೂ.200 ಕೋಟಿ, ಸಾರನಾಥ, ಗಯಾ ಮತ್ತು ವಾರಾ­­­ಣಸಿ­ಯನ್ನು ಜೋಡಿಸುವ ಪ್ರವಾ­ಸೋದ್ಯಮ ಜಾಲ ಅಭಿವೃದ್ಧಿಗೆ ರೂ.500 ಕೋಟಿ ಪ್ಯಾಕೇಜ್‌ ಘೋಷಿ­ಸಲಾಗಿದೆ. ಈ ಎಲ್ಲದಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿ ವಾರಾಣಸಿ­ಯಲ್ಲಿ ಕಚೇರಿ ತೆರೆಯುವುದಾಗಿ ಹೇಳಿರುವುದು ಇಲ್ಲಿಯ ಜನರಲ್ಲಿ ಸಂಚಲನ ಮೂಡಿಸಿದೆ.

ಅನೇಕ ಮಹತ್ವಗಳ ನಗರ: ವಾರಾಣಸಿ ಅನೇಕ ದೃಷ್ಟಿಯಿಂದ ಅತ್ಯಂತ ಮಹ­ತ್ವದ ನಗರ. ಏಷ್ಯಾದ ಅತ್ಯಂತ ದೊಡ್ಡ ವಸತಿ ಕಾಲೇಜು ಇಲ್ಲಿದೆ.  ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸೇರಿದಂತೆ ನಾಲ್ಕು ವಿಶ್ವವಿದ್ಯಾಲಯಗಳು ಇಲ್ಲಿವೆ. ಬೌದ್ಧರು ಮತ್ತು ಹಿಂದೂಗಳಿಗೆ ಈ ನಗರ ಪವಿತ್ರ  ಶ್ರದ್ಧಾ ಕೇಂದ್ರವಾಗಿದೆ.

ವಾರಾಣಸಿಯಲ್ಲಿ ಮರಣ ಹೊಂದುವು­ದರಿಂದ ಮುಕ್ತಿ ಸಿಗುತ್ತದೆ ಎಂಬುವುದು ಹಿಂದೂಗಳ ನಂಬಿಕೆ.  ಜ್ಞಾನೋದಯದ ಬಳಿಕ ಗೌತಮ ಬುದ್ಧ ತನ್ನ ಮೊದಲ ಬೋಧನೆ ನೀಡಿದ್ದು ಇಲ್ಲಿಯೇ ಎನ್ನುವುದು ಈ ನಗರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿವರ್ಷ 30 ಲಕ್ಷ ಪ್ರವಾಸಿಗರು, ಯಾತ್ರಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಪ್ರವಾಸೋದ್ಯಮ ಈ ನಗರದ ಎರಡನೇ  ದೊಡ್ಡ ಆದಾಯ ತರುವ ಉದ್ಯಮವಾಗಿದೆ. ಪ್ರವಾಸೋದ್ಯಮ ಹೊರತು ಪಡಿಸಿದರೆ ನೇಕಾರಿಕೆ, ಕಂಚು ಮತ್ತು ತಾಮ್ರ ಆಭರಣ ತಯಾರಿಕೆ, ವಿಳ್ಯದೆಲೆ ತೋಟ ಇಲ್ಲಿಯ ಇನ್ನಿತರ ಉದ್ಯೋಗಗಳಾಗಿವೆ.

ಆದರೆ, ಪ್ರವಾಸೋದ್ಯಮ ಕೇಂದ್ರಕ್ಕೆ ಬೇಕಾದ ಮೂಲಸೌಲಭ್ಯಗಳೇ ಇಲ್ಲಿ ಇಲ್ಲದಿರುವುದು ಬಹುದೊಡ್ಡ ಕೊರತೆಯಾಗಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಈ ನಗರ ಪ್ರಮುಖ ಪ್ರವಾ­ಸೋದ್ಯಮ ಕೇಂದ್ರವಾಗಿ ಬೆಳೆಯಲು ಸಾಧ್ಯ­ವಾಗಿಲ್ಲ. ಮುಖ್ಯವಾಗಿ ಪ್ರವಾಸಿಗರಿಗೆ ಅಗತ್ಯ­ವಾಗಿ ಬೇಕಾದ ಊಟ, ವಸತಿಗಾಗಿ ಉತ್ತಮ ಹೋಟೆಲ್‌, ವಸತಿಗೃಹಗಳು ಇಲ್ಲದಿರುವುದ­ರಿಂದ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆ­ಯಾಗಿದೆ. ನಗರದ ಹೃದಯ ಭಾಗಕ್ಕಿಂತ ಗಂಗಾ ನದಿಯ ಸುತ್ತಮುತ್ತ ಉತ್ತಮ ಹೋಟೆಲ್‌, ವಸತಿ­ಗೃಹಗಳು ತಲೆ ಎತ್ತಬೇಕಿದೆ ಎನ್ನುವುದು ಪ್ರವಾಸೋದ್ಯಮದಲ್ಲಿ ತೊಡಗಿಸಿ­ಕೊಂಡಿರುವ ಸ್ಥಳೀಯರ ಬೇಡಿಕೆ.

ಸಮಸ್ಯೆ ನೂರು: ಇಕ್ಕಟ್ಟಾದ ರಸ್ತೆಗಳಿಂದ ವಾಹನ ಮತ್ತು ಜನ ಸಂಚಾರ ದಟ್ಟಣೆ ಹೆಚ್ಚುತ್ತಿ ರುವ ಕಾರಣ ವರ್ತುಲ ರಸ್ತೆಯ ಅಗತ್ಯವಿದೆ ಎನ್ನುವುದು ಇಲ್ಲಿಯ ವರ್ತಕರ ವಾದ. ನಗರದ ಸಮಸ್ಯೆ  ಮತ್ತು ಪರಿಹಾರ ಕುರಿತು ಚರ್ಚಿಸಲು ಮೇಯರ್‌ ಮೊಹ್ಲೆ ಹಾಗೂ ಪಾಲಿಕೆ ಸದಸ್ಯರನ್ನು ಮೋದಿ ದೆಹಲಿ ಬರುವಂತೆ ಸೂಚಿಸಿದ್ದಾರೆ.

ಪಾರ್ಕಿಂಗ್ ಸಮಸ್ಯೆ, ಪಾದಾ­ಚಾರಿ ರಸ್ತೆ, ಕೊಳಚೆ ನೀರು ಸಂಸ್ಕರಣಾ ಘಟಕ, ಒಳಚರಂಡಿ, ವರ್ತುಲ ರಸ್ತೆ, ಪಾಲಿಕೆ ಆಸ್ತಿ ಒತ್ತುವರಿ ತೆರುವು ಮುಂತಾದ ಸಮಸ್ಯೆಗಳನ್ನು  ಮೇಯರ್‌ ಪಟ್ಟಿ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರದ ಸಹಕಾರ ಇಲ್ಲದೆ ಕೇಂದ್ರ ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಮೊಹ್ಲೆ ಅಭಿಪ್ರಾಯ.

ವಾರಾಣಸಿಗೆ ತಲೆನೋವಾಗಿರುವ ಕೊಳಚೆ ನೀರು ಸಂಸ್ಕರಣೆ,  ತ್ಯಾಜ್ಯ ವಿಲೇವಾರಿ ಸಮಸ್ಯೆ ಇತ್ಯರ್ಥವಾಗದ ಹೊರತು ಗಂಗಾ ನದಿಯ ಶುದ್ಧೀಕರಣ ಯೋಜನೆಯ ಕನಸು ನನಸಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರಧಾನಿ ಆಪ್ತ ಸುಧೀರ್‌ ಕೃಷ್ಣ. ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು ಘನತ್ಯಾಜ್ಯ ಹಾಗೂ ಚರಂಡಿಯ ಕೊಳಚೆ ನೀರು ಸಂಸ್ಕರಣ ಘಟಕ ಸೌಲಭ್ಯಗಳನ್ನು ವೀಕ್ಷಿಸಿದ ನಂತರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT