ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆಗಣ್ಣು

Last Updated 30 ಏಪ್ರಿಲ್ 2016, 20:24 IST
ಅಕ್ಷರ ಗಾತ್ರ

ಪೇಚಿಗೆ ಸಿಲುಕಿದ ಶಾಸಕ!
ವಿಜಯಪುರ:
ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬರ ನಿರ್ವಹಣೆ ಕಾಮಗಾರಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಪೇಚಿಗೆ ಸಿಲುಕಿದರು.

ಗೋಷ್ಠಿಯ ನಡುವೆ, ಈಚೆಗೆ ವಿಜಯಪುರ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಯನ್ನು ಪ್ರಸ್ತಾಪಿಸಿದ ಶಾಸಕರು, ‘ನೀವು ವ್ಯಾಪಕ ಟೀಕೆ ನಡೆಸಿದಿರಿ. ಆದರೆ ನಾವು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದೆವು’ ಎಂದು ಹೇಳಿದರು. ತಕ್ಷಣವೇ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗರೆದರು.

‘ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದ್ದ ದಿನ ಕೂಲಿ ಕಾರ್ಮಿಕರನ್ನು ಸರ್ಕಾರಿ ಜೀಪ್‌ಗಳಲ್ಲಿ ಕರೆ ತಂದಿದ್ದು ಏತಕ್ಕೆ? ಅದೊಂದು ಸರ್ಕಾರಿ ಹೈಡ್ರಾಮಾ ಅಲ್ಲವೇ? ಯಾರನ್ನೂ ಟೀಕಿಸುವ ಇರಾದೆ ಪತ್ರಿಕೆಗಳದ್ದಲ್ಲ. ಅಂದು ನಡೆದ ಘಟನೆಗಳನ್ನು ನಾಡಿನ ಜನತೆಗೆ ತಿಳಿಸಿದ್ದೇವೆ’ ಎನ್ನುತ್ತಿದ್ದಂತೆಯೇ ಶಾಸಕರು ನಿರುತ್ತರರಾದರು. ಕೆಲ ಹೊತ್ತಿನ ಬಳಿಕ ಪ್ರತಿಕ್ರಿಯಿಸಿದ ಯಶವಂತರಾಯಗೌಡ, ಇಲ್ಲಿಂದ ಮುಂದೆ ‘ಆಫ್‌ ದ ರೆಕಾರ್ಡ್‌’ ಎಂದು ಹೇಳುವ ಮೂಲಕ ವಾಸ್ತವ ಬಿಚ್ಚಿಟ್ಟರು! 

‘ಮೊದಲು ಕಿವಿ ತೋರಸ್ಕೊ...’
ಧಾರವಾಡ:
ತಮ್ಮ ದೂರನ್ನು ಕೇಳಿಸಿಕೊಳ್ಳಲಾಗದ ಸಚಿವರಿಗೆ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಕಿವಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು! ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆಯುತ್ತಿತ್ತು. 

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು. ಪಂಚಾಯ್ತಿ ಸದಸ್ಯರು ತಮ್ಮೂರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಈ ನಡುವೆ, ಕರಡಿಗುಡ್ಡ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು, ‘ಜಿಲ್ಲಾ ಆಸ್ಪತ್ರ್ಯಾಗ ಬಾಣತ್ಯಾರ್‍ನ (ಬಾಣಂತಿಯರು) ನೋಡಾಕ ಸಂಬಂಧಿಕರ್‍ನ ಒಳಗ ಬಿಡವಲ್ರು. ಎಷ್ಟ್‌ ಬೇಡ್ಕೊಂಡ್ರೂ ಕೇಳವಲ್ರು. ನೀವರ ಸ್ವಲ್ಪ್‌ ಅವ್ರಿಗೆ ಹೇಳ್ರಿ’ ಎಂದರು. ಸಚಿವರು ಅವರ ಮಾತನ್ನು ಹಸನ್ಮುಖದಿಂದಲೇ ಆಲಿಸಿದರು.

ಆದರೆ, ಸಭಾ ಭವನದ ಬಾಲ್ಕನಿಯಲ್ಲಿ ನಿಂತು ಆ ಸದಸ್ಯೆ ಮಾತನಾಡುತ್ತಿದ್ದುದರಿಂದ ಸಚಿವರಿಗೆ ಸರಿಯಾಗಿ ಕೇಳಲಿಲ್ಲ. ‘ನೀನು ಅಲ್ಲೇ ನಿಂತು ಮಾತಾಡುವ ಬದಲು ಕೆಳಗೆ ಬಂದು ಸಮಸ್ಯೆ ಹೇಳವ್ವ’ ಎಂದು ವಿನಯ ಕುಲಕರ್ಣಿ ಹೇಳಿದರು. ಸ್ವಲ್ಪ ಕೋಪಗೊಂಡಂತೆ ಕಂಡು ಬಂದ ಆ ಮಹಿಳೆ, ‘ಈಗ ನಿಂಗ ನನ್ನ ಮಾತು ಕೇಳಲ್ಲ, ನಿನಗ ಕಿವಿ ಕೇಳ್ದಂಗ ಆಗೈತಿ. ಅದ... ಸರ್ಕಾರಿ ಆಸ್ಪತ್ರೀಗೆ ಹೋಗಿ ನಿನ್ನ ಕಿವಿ ತೋರಸ್ಕೊಂಡು ಬಾ’ ಎಂದು ಹೇಳಿ ಕುಳಿತರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT