ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆಗಣ್ಣು

Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಭವಿಷ್ಯತ್‌ ಕಾಲದ್ದೇ ಮಾತು
ಬಳ್ಳಾರಿ: ‘ಮಾಹಿತಿ ಕೊಡಲು ನಿಮಗೆ ಏನಾದರೂ ತೊಂದರೆ ಇದೆಯೇ?’
‘ಏನೂ ಇಲ್ಲ’.

‘ಹಾಗಿದ್ದರೆ ಯಾಕೆ ಮಾಹಿತಿ ಕೊಟ್ಟಿಲ್ಲ’.
‘ಮುಂದಿನ ಸಭೆಯ ವೇಳೆಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ’.
‘ಅರೆ, ಯಾಕೆ ಎಲ್ಲರೂ ಫ್ಯೂಚರ್‌ ಟೆನ್ಸ್‌ನಲ್ಲೇ ಮಾತನಾಡುತ್ತಿದ್ದೀರಾ?’
ಸಭೆಯಲ್ಲಿ ಮೌನ.

–ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸಮೀರ್‌ ಶುಕ್ಲ ಮತ್ತು ಅಧಿಕಾರಿಗಳ ನಡುವೆ ಕೆಡಿಪಿ ಸಭೆಯಲ್ಲಿ ನಡೆದ ಸಂಭಾಷಣೆ ಇದು. ಅಧಿಕಾರಿಗಳು ಬಳಸಿದ ಭವಿಷ್ಯತ್‌ ಕಾಲ ಸೂಚಿಯಾದ ಪ್ರತಿಕ್ರಿಯೆಗಳು ಶುಕ್ಲ ಅವರನ್ನು ನಿರಂತರವಾಗಿ ಕಾಡಿದವು.

‘ವೈಯಕ್ತಿಕ ಶೌಚಾಲಯ ಪ್ರಗತಿ ಶೋಚನೀಯವಾಗಿದೆ. ಪ್ರಗತಿ ಸಾಧಿಸಲು ಏನಾದರೂ ಸಮಸ್ಯೆ ಇದೆಯೇ’ ಎಂದು ಕೇಳಿದರೂ ಅಧಿಕಾರಿಗಳು ‘ಏನೂ ಇಲ್ಲ’ ಎನ್ನುತ್ತಿದ್ದರು. ‘ಇದುವರೆಗೆ ಯಾಕೆ ಪ್ರಗತಿ ಆಗಿಲ್ಲ?’ ಎಂಬುದಕ್ಕೆ ಯಾವೊಬ್ಬ ಅಧಿಕಾರಿಯ ಉತ್ತರವೂ ಜಿಲ್ಲಾಧಿಕಾರಿಗೆ ಸಮಾಧಾನ ತರಲಿಲ್ಲ.

ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ಕಾರ್ಯಾಚರಣೆ, ಭ್ರೂಣಲಿಂಗ ಪತ್ತೆ ಯಂತ್ರ ಬಳಸುವ ಘಟಕಗಳಿಗೆ ದಿಢೀರ್‌ ಭೇಟಿ, ಶಾಲೆಗಳಲ್ಲಿ ನೀರಿನ ಸಮಸ್ಯೆ ಎಲ್ಲಕ್ಕೂ  ಅಧಿಕಾರಿಗಳು ‘ಮುಂದಿನ ದಿನ’ಗಳತ್ತಲೇ ಗಮನ ಸೆಳೆಯುತ್ತಿದ್ದರು. ಅದರಿಂದ ಬೇಸತ್ತ ಜಿಲ್ಲಾಧಿಕಾರಿ ಎಲ್ಲರಿಗೂ ಗಡುವು ನಿಗದಿ ಮಾಡಿ ಎಚ್ಚರಿಕೆ ನೀಡಿದರು.
- ಕೆ.ನರಸಿಂಹಮೂರ್ತಿ

ಜಲಸಂಪನ್ಮೂಲ ಖಾತೆ ಇರದು!
ಕಲಬುರ್ಗಿ: ‘ರಾಜ್ಯದಲ್ಲಿ ಮುಂದೆ ಆಡಳಿತ ನಡೆಸುವ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆಯೇ ಇರುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ  ಅವರು ಹೇಳಿದ್ದರಿಂದ, ಸಮಾರಂಭದಲ್ಲಿ ನೆರೆದಿದ್ದ ಜನರೆಲ್ಲ ಅಚ್ಚರಿಪಟ್ಟ ಪ್ರಸಂಗ ನಡೆಯಿತು.

ಜೇವರ್ಗಿ ತಾಲ್ಲೂಕು ಸೊನ್ನ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತವು ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ರಾಜ್ಯದಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಇದೇ ಸರ್ಕಾರದ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಯೋಜನೆಗಳೆಲ್ಲವೂ ಒಂದು ನಿರ್ಣಾಯಕ ಹಂತಕ್ಕೆ ಬಂದಿರುತ್ತವೆ. ಜಲಸಂಪನ್ಮೂಲ ಖಾತೆಯಲ್ಲಿ ಮಾಡುವುದಕ್ಕೆ ಯಾವ ಹೊಸ ಯೋಜನೆಗಳೂ ಉಳಿದಿರುವುದಿಲ್ಲ. ಹೀಗಾಗಿ ಮುಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಬದಲು ‘ಬಾಕಿ ಕಾಮಗಾರಿ (ಸ್ಪಿಲ್‌ಓವರ್)’ ಸಚಿವ ಸ್ಥಾನ ಕೊಡಬೇಕಾಗುತ್ತದೆ’ ಎಂದು ಹೇಳಿಕೊಂಡರು. ಒಂದು ಕ್ಷಣ ಅಚ್ಚರಿಪಟ್ಟ ಜನರೆಲ್ಲ ಸಚಿವರ ಮಾತು ಕೇಳಿ ಚಪ್ಪಾಳೆ ಹಾಕಿದರು.

‘ನಾನು ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದೇನೆ. ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಇದೇ ಮೊದಲ ಬಾರಿಗೆ ಪತ್ರಿಕೆಗಳಲ್ಲಿ ಎರಡು ಪುಟಗಳ ಜಾಹೀರಾತು ನೀಡಿದ್ದೇನೆ’ ಎಂದು ಅವರು ಸ್ವಪ್ರಶಂಸೆಯನ್ನೂ ಮಾಡಿಕೊಂಡರು. 
- ನಾಗರಾಜ ಚಿನಗುಂಡಿ

ಕೈಮುಗಿದ ಕಾಗೋಡು...
ಬೆಂಗಳೂರು: ಮಾತು ಆರಂಭಿಸಿದರೆ ಸರ್ಕಾರದ ವಿರುದ್ಧ ಸಿಡಿಲು–ಗುಡುಗು ತರಿಸುತ್ತಿದ್ದ ಕಾಗೋಡು ತಿಮ್ಮಪ್ಪ ಅವರು ಸಚಿವರಾದ ಮೇಲೆ ಮುಗುಳ್ನಕ್ಕು, ಕೈಮುಗಿದು ನಡೆದುಬಿಡುವ ಶೈಲಿ ಬೆಳೆಸಿಕೊಂಡಿದ್ದಾರೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಸಚಿವರು, ಅವರ ಮಕ್ಕಳು, ಶಾಸಕರು ಭಾಗಿಯಾಗಿರುವ ಬಗ್ಗೆ ಆರ್ಭಟಿಸುತ್ತಿದ್ದರು. ಅಷ್ಟರಲ್ಲಿ ಕಾಗೋಡು ತಿಮ್ಮಪ್ಪ ವಿಧಾನ ಪರಿಷತ್ತಿನ ಸಭಾಂಗಣ ಪ್ರವೇಶಿಸಿದರು. ಸಚಿವ ಡಿ.ಕೆ.ಶಿವಕುಮಾರ್‌ ಅವರು, ಕಾಗೋಡು ತಿಮ್ಮಪ್ಪ ಅವರನ್ನು ಔಪಚಾರಿಕವಾಗಿ ಪರಿಚಯಿಸಿದರು.

ಕಾಗೋಡು ಅವರನ್ನು ಕಂಡೊಡನೆ ಈಶ್ವರಪ್ಪ ಅವರ ಉತ್ಸಾಹ ಇಮ್ಮಡಿಸಿತು. ‘ನಮ್ಮ ಜಿಲ್ಲೆಯವರು ಸಚಿವರಾಗಿರುವುದು ನಮಗೆ ಹೆಮ್ಮೆ. ಅದರಲ್ಲೂ ಸ್ಪೀಕರ್ ಆಗಿದ್ದ  ಕಾಗೋಡು ತಿಮ್ಮಪ್ಪನವರು ಸರ್ಕಾರದ ವಿರುದ್ಧ ದಿನವೂ ಚಾಟಿ ಬೀಸಿ, ನಿಜವಾದ ವಿರೋಧ ಪಕ್ಷವಾಗಿದ್ದರು. ನೋಡಿ ಸ್ವಾಮಿ, ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ತಡೆಯಲು ಹೋದ ಅಧಿಕಾರಿಗಳ ಮೇಲೆ ಲಾರಿ ಹತ್ತಿಸಲಾಗುತ್ತಿದೆ. ಕಾಗೋಡು ತಿಮ್ಮಪ್ಪನವರೆ ನೀವಾದರೂ ವಿರೋಧ ಪಕ್ಷದ ನೆರವಿಗೆ ಬನ್ನಿ’ ಎಂದು ಕೋರಿಕೆ ಸಲ್ಲಿಸಿದರು.

ವಿರೋಧ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಕಾಗೋಡು ಕುರ್ಚಿಯಿಂದ ಮೇಲೆದ್ದು ಕ್ಷಣ ನಿಂತರು. ಬಾಯನ್ನೇ ತೆರೆಯದೆ ಕೇವಲ ನಗೆಸೂಸಿ  ಈಶ್ವರಪ್ಪನವರಿಗೆ, ಸದನಕ್ಕೆ ಕೈಮುಗಿದು ಹೊರನಡೆದೇ ಬಿಟ್ಟರು. ಪೆಚ್ಚಾಗುವ ಸರದಿ ಈಶ್ವರಪ್ಪ ಅವರದ್ದಾಗಿತ್ತು.
- ವೈ.ಗ.ಜಗದೀಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT