ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಅಭಿವೃದ್ಧಿಯಲ್ಲಿ ತಾರತಮ್ಯ

ಜ್ಞಾನಭಾರತಿಯಲ್ಲಿ ಹೆಜ್ಜೆಗೊಂದು ಉದ್ಯಾನ * ಲಗ್ಗೆರೆಯಲ್ಲಿ ಹೆಸರಿಗೂ ಒಂದು ವನವಿಲ್ಲ!
Last Updated 30 ಜೂನ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅರ್ಧದಷ್ಟು ವಾರ್ಡ್‌ಗಳಲ್ಲಿ ಕೆರೆ ಹಾಗೂ ಪೊಲೀಸ್‌ ಠಾಣೆಗಳ ಸುಳಿವಿಲ್ಲ. ನಾಲ್ಕನೇ ಒಂದು ಭಾಗದಷ್ಟು ವಾರ್ಡ್‌ಗಳಿಗೆ ಆಟದ ಮೈದಾನಗಳಿಲ್ಲ. 20 ವಾರ್ಡ್‌ಗಳಲ್ಲಿ ಒಣತ್ಯಾಜ್ಯ ಸಂಗ್ರಹ ಘಟಕಗಳಿಲ್ಲ. ಆರು ವಾರ್ಡ್‌ಗಳಲ್ಲಿ ಒಂದೇ ಒಂದು ಉದ್ಯಾನ ಇಲ್ಲ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಹೇಗೆ ಅಸಮಾನವಾಗಿ ಹರಿದು ಹಂಚಿಕೆಯಾಗಿವೆ ಎಂಬುದನ್ನು ಈ ಅಂಶಗಳು ಎತ್ತಿ ತೋರುತ್ತವೆ. ಬಹುತೇಕ ವಾರ್ಡ್‌ಗಳ ಸ್ಥಿತಿ ಐದು ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೇ ಇದೆ. ಇಂತಹ ಸನ್ನಿವೇಶದಲ್ಲೇ ಮತ್ತೊಂದು ಚುನಾವಣೆ ಬಂದಿದೆ.

ಬಿಬಿಎಂಪಿ ಆಡಳಿತ ಪುನರ್‌ರಚನಾ ಸಮಿತಿ ಸಿದ್ಧಪಡಿಸಿರುವ ವಾರ್ಡ್‌ವಾರು ಮಾಹಿತಿ ಪದರಿನಿಂದ ಈ ವಿವರ ಲಭ್ಯವಾಗಿದೆ. ಯಾವ ವಾರ್ಡ್‌ನ ಸ್ಥಿತಿ, ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಈ ಮಾಹಿತಿ ಪದರಿನಿಂದ ಸಾಧ್ಯವಾಗಿದೆ.

ಜ್ಞಾನಭಾರತಿ ವಾರ್ಡ್‌ ನಗರದ ಅತ್ಯಧಿಕ ಉದ್ಯಾನ ಹೊಂದಿದ ಪ್ರದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ವಾರ್ಡ್‌ ‘ಉದ್ಯಾನಗಳ ಶತಕ’ ಪೂರೈಸಲು ಇನ್ನೊಂದೇ ಕೊರತೆ ಇದೆ. ಉದ್ಯಾನಗಳ ವಿಷಯದಲ್ಲಿ ಹೆಮ್ಮಿಗೆಪುರ ವಾರ್ಡ್‌ ಸಹ ಜ್ಞಾನಭಾರತಿ ಹಿಂದೆಯೇ ಇದೆ.

ಬೇಗೂರು ವಾರ್ಡ್‌ ಒಟ್ಟಾರೆ 12 ಕೆರೆ ಹೊಂದಿದ್ದು, ಆ ಭಾಗ ಜಲಮೂಲದಿಂದ ಶ್ರೀಮಂತವಾಗಿದೆ. ಹೀಗಿದ್ದೂ ಕುಡಿಯುವ ನೀರಿನ ಸಮಸ್ಯೆ ಇದೆ. ನಗರದ ನೂರಕ್ಕೂ ಅಧಿಕ ವಾರ್ಡ್‌ಗಳಲ್ಲಿ ಒಂದೂ ಕೆರೆ ಇಲ್ಲ. ಈ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಆಗುತ್ತಿದೆ. ನೀರಿನ ಸಮಸ್ಯೆ ಅಲ್ಲಿಯೂ ಇದೆ.

ಆಟದ ಮೈದಾನ ಮತ್ತು ಪೊಲೀಸ್‌ ಠಾಣೆಗಳ ಸೌಲಭ್ಯದ ವಿಷಯದಲ್ಲಿ ಸಹ ಇಂತಹದ್ದೇ ಸ್ಥಿತಿ ಇದೆ. ಹಲವು ವಾರ್ಡ್‌ಗಳು ಎರಡು ಠಾಣೆ ಹೊಂದಿದ್ದರೆ, ಅರ್ಧದಷ್ಟು ವಾರ್ಡ್‌ಗಳಿಗೆ ಠಾಣೆಗಳೇ ಇಲ್ಲ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಸೌಲಭ್ಯ ನೀಡುವಲ್ಲಿ ವಾರ್ಡ್‌ಗಳ ಮಧ್ಯೆ ತಾರತಮ್ಯ ಮಾಡಿದೆ. ಉದಾಹರಣೆಗೆ ಚಿಕ್ಕಪೇಟೆಯಲ್ಲಿ ಒಂದೇ ಬಸ್‌ ನಿಲುಗಡೆ ತಾಣವಿದ್ದರೆ ಸಂಪಂಗಿರಾಮನಗರ ವಾರ್ಡ್‌ನಲ್ಲಿ 89 ಬಸ್‌ ನಿಲುಗಡೆ ಸ್ಥಳಗಳಿವೆ!

ಮುನೇಶ್ವರನಗರ ವಾರ್ಡ್‌ ಕೇವಲ 0.5 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಇಲ್ಲಿರುವ ಬೀದಿ ದೀಪಗಳ ಸಂಖ್ಯೆ 666. ಅದೇ ಹೆಮ್ಮಿಗೆಪುರ 30.5 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, 6,802 ಬೀದಿ ದೀಪಗಳಿವೆ.

ಪಾದರಾಯನಪುರದಲ್ಲಿ ಪ್ರತಿ ಚದರ ಕಿ.ಮೀ.ಯಲ್ಲಿರುವ ಜನಸಾಂದ್ರತೆ ಒಂದು ಲಕ್ಷವನ್ನು ಮೀರಿದ್ದರೆ, ಹೆಮ್ಮಿಗೆಪುರದಲ್ಲಿ ಸಾವಿರ ಲೆಕ್ಕದಲ್ಲಿದೆ.

ಕಿಷ್ಕಿಂಧೆಯಂತಹ ಪುಟ್ಟ ಪ್ರದೇಶವಾದ ಪಾದರಾಯನಪುರ ಮತ್ತು ವಿಸ್ತಾರವಾಗಿ ಹರಡಿರುವ ಹೆಮ್ಮಿಗೆಪುರ ಎರಡೂ ವಾರ್ಡ್‌ಗಳಲ್ಲಿ ಇರುವ ಮನೆಗಳ ಸಂಖ್ಯೆಯಲ್ಲಿ ಕೇವಲ ಐದು ಸಾವಿರದಷ್ಟು ವ್ಯತ್ಯಾಸವಿದೆ.

ಬಿಬಿಎಂಪಿ ಆಡಳಿತ ಪುನರ್‌ರಚನಾ ಸಮಿತಿ ಕಲೆಹಾಕಿರುವ ಮಾಹಿತಿಯಿಂದ ಯಾವ ವಾರ್ಡ್‌ಗೆ ಯಾವ ಸೌಲಭ್ಯದ ಅಗತ್ಯವಿದೆ, ಎಲ್ಲಿ ಒತ್ತಡ ಹೆಚ್ಚು ಬಿದ್ದಿದೆ, ಎಲ್ಲಿ ಅಭಿವೃದ್ಧಿಗೆ ಅವಕಾಶವಿದೆ ಎಂಬುದು ನಿಚ್ಚಳವಾಗಿ ಗೊತ್ತಾಗುತ್ತದೆ.

‘ಆಡಳಿತದ ಪುನರ್‌ರಚನೆ ಎಂದರೆ ಇದೇ ಅಲ್ಲವೆ? ಯಾವ ಪ್ರದೇಶಕ್ಕೆ ಏನು ಸೌಲಭ್ಯ ಬೇಕು ಎಂಬುದನ್ನು ನಿಖರವಾಗಿ ಕಂಡು ಹಿಡಿಯುವುದು ಮತ್ತು ಅಭಿವೃದ್ಧಿ ಚಟುವಟಿಕೆ ಸಮಾನವಾಗಿ ನಡೆಯುವಂತೆ ನೋಡಿಕೊಳ್ಳುವುದು. ನಮ್ಮ ಸಮಿತಿ ಮಾಡುವ ಶಿಫಾರಸುಗಳು ಇದೇ ಹಾದಿಯಲ್ಲಿವೆ’ ಎಂದು ಸಮಿತಿ ಸದಸ್ಯ ವಿ.ರವಿಚಂದರ್‌ ಹೇಳುತ್ತಾರೆ.

ಅಂಕಿಅಂಶ
* 122 ವಾರ್ಡ್‌ಗಳಲ್ಲಿ ಕೆರೆಗಳಿಲ್ಲ
* 84 ವಾರ್ಡ್‌ಗಳಲ್ಲಿ  ಠಾಣೆಗಳಿಲ್ಲ
* 47 ವಾರ್ಡ್‌ಗಳಲ್ಲಿ ಮೈದಾನಗಳಿಲ್ಲ
* 6 ವಾರ್ಡ್‌ಗಳಲ್ಲಿ ಉದ್ಯಾನಗಳಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT