ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿ ಬೋಲಿ! ಅರೆರೆ... ಬಾಲಿ!

Last Updated 23 ಮೇ 2015, 19:30 IST
ಅಕ್ಷರ ಗಾತ್ರ

‘‘ನಮ್ಮದು ಬಾಲಿವುಡ್ ಇಲ್ಲದ ಬಾಲಿ’’
ಹೀಗೆಂದು ಬಾಲಿ ದ್ವೀಪವನ್ನು ಬಣ್ಣಿಸಿದ ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿ ಸುಲೇಮಾನ್ ಅವರ ಮಾತುಗಳಲ್ಲಿ ಬಾಲಿವುಡ್ ಸಿನಿಮಾದ ಬಗೆಗಿನ ಪ್ರೀತಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಂತೆಯೇ, ಬಾಲಿವುಡ್ ಹೊರತಾಗಿ ಭಾರತದಲ್ಲಿರುವ ಮಿಕ್ಕೆಲ್ಲವೂ ನಮ್ಮಲ್ಲಿಯೂ ಇದೆ ಎನ್ನುವ ಇಂಗಿತವೂ ಅವರ ಮಾತಿನಲ್ಲಿ ಇದ್ದಂತಿತ್ತು.

ಸುಲೇಮಾನ್ ಅವರ ಮಾತು ನಿಜ. ಇಂಡೋನೇಷ್ಯಾದ ಈ ದ್ವೀಪಕ್ಕೂ ಭಾರತಕ್ಕೂ ಮೇಲ್ನೋಟಕ್ಕೆ ಎದ್ದುಕಾಣುವ ಸಾಮ್ಯತೆಗಳು ಸಾಕಷ್ಟಿವೆ. ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಕಣ್ಣಿಗೆ ಬೀಳುವ ವಿಮಾನಗಳ ಮೈಮೇಲಿನ ‘ಗರುಡ ಏರ್‌ಲೈನ್ಸ್‌’ ಹೆಸರೇ ಭಾರತೀಯರಿಗೆ ಆಪ್ತಭಾವ ಉಂಟು ಮಾಡುತ್ತದೆ. ನಮ್ಮಲ್ಲಿನ ರಾಮಾಯಣ – ಮಹಾಭಾರತದ ಕಥೆಗಳು ಬಾಲಿಯಲ್ಲೂ ಇವೆ. ದೇಗುಲಗಳ ವಿಷಯಕ್ಕೆ ಬಂದರಂತೂ ಬಾಲಿಯಲ್ಲಿ ಎಲ್ಲಿ ನೋಡಿದರೂ ಮಂದಿರಗಳೇ!

ನಾವು ಹೇಳುವ ವೈವಿಧ್ಯದಲ್ಲಿನ ಏಕತೆ ಮಂತ್ರವನ್ನು ಬಾಲಿಯನ್ನರೂ ಜಪಿಸುತ್ತಾರೆ. ಹೀಗೆ ಹೇಳುತ್ತಲೇ, ಎರಡೂ ದೇಶಗಳು ಚಾತುರ್ವರ್ಣ ಪದ್ಧತಿಯನ್ನು ಜೀವಂತವಾಗಿ ಉಳಿಸಿಕೊಂಡಿವೆ. ಹೀಗೆ, ಹಲವು ಹೋಲಿಕೆಗಳನ್ನು ಹೊಂದಿದ್ದೂ ಭಾರತಕ್ಕಿಂತ ಭಿನ್ನವಾಗಿ ಬಾಲಿ ಕಾಣಿಸುತ್ತದೆ. ಬಾಲಿಯ ಅನನ್ಯತೆಗೆ ಅಲ್ಲಿನ ಮಂದಿರ -ಮೂರ್ತಿಗಳಿಗಿಂತಲೂ ಒಳ್ಳೆಯ ಉದಾಹರಣೆ ಮತ್ತೊಂದು ಬೇಕಿಲ್ಲ.

ಬಾಲಿಯ ರಸ್ತೆಗಳು ನಮ್ಮ ಹಂಪಿಯನ್ನು ನೆನಪಿಸುತ್ತವೆ. ಹಂಪಿಯ ಬೀದಿಗಳಲ್ಲಿ ಪಾಳು ಬಿದ್ದಿರುವ ಮಂಟಪಗಳನ್ನು, ಭಗ್ನ ಮೂರ್ತಿಗಳನ್ನು ನೋಡುತ್ತ ಅಲ್ಲಿನ ಗತ ವೈಭವವನ್ನು ಊಹಿಸಿಕೊಳ್ಳಬಹುದು. ಬಾಲಿಯದೋ ಜೀವಂತ ವೈಭವ. ಶಿಲ್ಪ ವೈಭವದ ಜೊತೆಗೆ ಸಂಗೀತ, ನೃತ್ಯ, ಚಿತ್ರಕಲೆಯ ಅನಾವರಣಕ್ಕೂ ಬಾಲಿ ವೇದಿಕೆಯಾಗಿದೆ.

ಬಸ್ಸು-ರೈಲಿನಲ್ಲಿ ಪ್ರಯಾಣಿಸುವಾಗ, ದಾರಿಯಲ್ಲಿ ಕಾಣಿಸುವ ದೇಗುಲಗಳಿಗೆ ಕೈಮುಗಿಯುವ ಹಾಗೂ ದೇವರ ಮೂರ್ತಿಗಳತ್ತ ‘ಭಕ್ತಿಯ ಮುತ್ತು’ ತೂರುವ ಭಕ್ತರು ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಅಂಥವರಿಗೆ ಬಾಲಿ ಹೇಳಿ ಮಾಡಿಸಿದ ಸ್ಥಳವಲ್ಲ.

ಇಲ್ಲಿ ಹೆಜ್ಜೆಗೊಂದು ದೇವರ ಮೂರ್ತಿ. ಪ್ರತಿ ಮೂರ್ತಿಗೂ ನಮಿಸತೊಡಗಿದರೆ ಸೋತು ಕೈ ಚೆಲ್ಲಬೇಕೇ ಹೊರತು, ದೇವರ ಮೂರ್ತಿಗಳ ಸಾಲು ಮುಗಿಯುವುದಿಲ್ಲ. ಸ್ವಾರಸ್ಯ ನೋಡಿ, ಹೀಗೆ ಬಯಲಿನಲ್ಲಿ ದೇವರುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ಬಾಲಿಯನ್ನರು, ಸ್ವತಃ ತಾವು ಮಾತ್ರ ಮೂರ್ತಿ ಆರಾಧಕರಲ್ಲ. ಪೂಜಿಸುವುದಿಲ್ಲ. ನಮ್ಮಲ್ಲಿ ಬಯಲು ಆಲಯದೊಳಗಿದ್ದರೆ, ಬಾಲಿಯಲ್ಲಿ ಆಲಯ ಬಯಲೊಳಗೆ!

ನಿರಾಕಾರದಲ್ಲಿ ಆಕಾರ!
ಬಾಲಿಯ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ‘ತನಲಾಟ್’ ಮಂದಿರವನ್ನು ನೋಡಿ. ಇದು ವರುಣನ ಮಂದಿರ ಎಂದು ಅಲ್ಲಿಯ ಜನ ಬಣ್ಣಿಸುತ್ತಾರೆ. ಆದರೆ, ವರುಣ ಮೂರ್ತಿಯ ವಿಗ್ರಹದ ಪತ್ತೆಯೇ ಇಲ್ಲ. ‘ವರುಣ ದೇವರು ಎಲ್ಲಿ?’ ಎಂದು ವಿಳಾಸ ಕೇಳಿದರೆ, ಪ್ರವಾಸಿ ಮಾರ್ಗದರ್ಶಿ ಪ್ರವೀರ ಕೈ ತೋರಿದ್ದು ಹಿಂದೂ ಮಹಾಸಾಗರದತ್ತ. ಇಂಡಿಯನ್ ಓಷನ್‌ನ ಅಂಚಿನಲ್ಲಿ, ಕಡಲ ಅಲೆಗಳಿಂದ ಮೈತೊಳೆಸಿಕೊಳ್ಳುತ್ತ ತಲೆಯೆತ್ತಿ ನಿಂತಿದೆ ಈ ಮಂದಿರ.

ಈ ದೇಗುಲ ಹಾಗೂ ಅದನ್ನು ಸುತ್ತುವರಿದ ಸಾಗರ ಎಲ್ಲವನ್ನೂ ‘ವರುಣ’ನ ರೂಪದಲ್ಲಿ ಕಲ್ಪಿಸಿಕೊಳ್ಳಬೇಕು ಎನ್ನುವುದು ಪ್ರವೀರ ಅವರ ವಿವರಣೆ. ಅವರ ಮಾತಿನ ಅರ್ಥವನ್ನು ಮತ್ತೂ ಸರಳಗೊಳಿಸುವುದಾದರೆ– ಬಾಲಿಯನ್ನರು ಪ್ರಕೃತಿಯಲ್ಲಿ ದೇವರನ್ನು ಕಲ್ಪಿಸಿಕೊಳ್ಳುತ್ತಾರೆ. ಕಲ್ಲು, ಮಣ್ಣು, ಗಾಳಿಯಲ್ಲಿ ‘ಶಕ್ತಿ’ಯನ್ನು ಕಾಣುತ್ತಾರೆ. ಹಾಗೆಂದು ಮೂರ್ತಿ ಪೂಜೆ ಅಲ್ಲಿ ಇಲ್ಲವೇ ಇಲ್ಲ ಎಂದಲ್ಲ.

ಹಬ್ಬದ ದಿನಗಳಲ್ಲಿ ದೇವರ ಮೂರ್ತಿಗಳನ್ನು ದೇಗುಲಗಳಲ್ಲಿಟ್ಟು ಪೂಜಿಸಲಾಗುತ್ತದೆ. ‘ಸರಸ್ವತಿ ದಿನಾಚರಣೆ’ ಸಂದರ್ಭವನ್ನೇ ತೆಗೆದುಕೊಳ್ಳಿ. ಈ ಸಂದರ್ಭದಲ್ಲಿ ಶಾರದೆಯ ಮೂರ್ತಿಯನ್ನು ಮೂರು ದಿನಗಳ ಕಾಲ ಮಂದಿರಗಳಲ್ಲಿಟ್ಟು ಪೂಜಿಸಲಾಗುತ್ತದೆ. ಉಳಿದ ದಿನಗಳಲ್ಲಿ ಶಾರದಮ್ಮ ಊರ ಮುಖಂಡನ ಮನೆಯ ಪೆಟ್ಟಿಗೆಯಲ್ಲಿ ನೆಮ್ಮದಿಯಾಗಿ ಮಲಗುತ್ತಾಳೆ.

ತನಲಾಟ್ ಮಾತ್ರವಲ್ಲ, ಬಾಲಿಯ ಮತ್ತೊಂದು ಪ್ರಸಿದ್ಧ ದೇಗುಲ ಉಲುನ್ ದನು ಕೂಡ ನಿರಾಕಾರದಲ್ಲೇ ಆಕಾರವನ್ನು ಪ್ರತಿಪಾದಿಸುವಂತಿದೆ. ಬ್ರತನ್ ಎನ್ನುವ ವಿಶಾಲ ಕೆರೆಯಲ್ಲಿ ನೀರಿನ ನಡುವೆ ನಿಂತಿರುವ, ಹನ್ನೊಂದು ಅಂತಸ್ತುಗಳನ್ನು ಸಂಕೇತಿಸುವ ಈ ಮಂದಿರ ಮನಮೋಹಕ.

ಶಿವ, ತ್ರಿಮೂರ್ತಿ, ಪದ್ಮಲಿಂಗ ಇತ್ಯಾದಿಯಾಗಿ ದೇವರ ಹೆಸರುಗಳನ್ನು ಈ ದೇಗುಲದ ಹಿನ್ನೆಲೆಯಲ್ಲಿ ಹೇಳಲಾಗುತ್ತದೆ. ಆದರೆ, ಈ ಯಾವ ದೇವರು ಕೂಡ ನಮ್ಮ ಅನುಭವದ ಅಳತೆಯನ್ನು ಮೀರಲಾರರು!

ಅಂದಹಾಗೆ, ತನಲಾಟ್ ಆಗಲೀ ಉಲುನ್ ದನು ಆಗಲೀ, ಚೀನೀ ವಾಸ್ತುಶಿಲ್ಪದ ಪ್ರಭಾವ ಇರುವ ತಮನ್ ಅಯೂನ್ (ಮೆಂಘ್ವಿ) ದೇಗುಲವಾಗಲೀ– ಇವುಗಳ ಒಳಗೆ ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ಇಲ್ಲ. ಏನಿದ್ದರೂ ಹೊರ ಆವರಣದಲ್ಲಿ ನಿಂತು ಸೌಂದರ್ಯ ಸವಿಯಬೇಕು. ಇದ್ದುದರಲ್ಲಿ ತನಲಾಟ್ ಮಂದಿರವೇ ವಾಸಿ. ಸುತ್ತ ಕಡಲಿನ ಉಪ್ಪು ನೀರು ಹರಡಿಕೊಂಡಿದ್ದರೂ, ಮಂದಿರದ ಬುಡದಲ್ಲಿ ಸಿಹಿನೀರಿನ ಚಿಲುಮೆಯೊಂದಿದೆ.

‘ಪವಿತ್ರ ನೀರು’ ತೀರ್ಥದ ರೂಪದಲ್ಲಿ ವಿನಿಯೋಗವಾಗುತ್ತದೆ. ಸಮೀಪದಲ್ಲೇ ಇರುವ, ಮಂದಿರದ ರಕ್ಷಕ ಎಂದು ಭಾವಿಸಲಾದ ಜೀವಂತ ಹಾವನ್ನು ಮುಟ್ಟಿ ಪ್ರಾರ್ಥಿಸಲೂ ಅವಕಾಶವಿದೆ. ಇಷ್ಟಾದರೂ ಮಂದಿರದ ಒಳಗೆ ಮಾತ್ರ ಹೋಗುವಂತಿಲ್ಲ. ಇದಕ್ಕೆ ಕಾರಣ ಸ್ಪಷ್ಟ. ಜನಜಂಗುಳಿ ಇರುವಲ್ಲಿ ಗದ್ದಲ ಉಂಟಾಗುತ್ತದೆಯೇ ಹೊರತು ಭಕ್ತಿ ರೂಪುಗೊಳ್ಳುವುದಿಲ್ಲ ಎನ್ನುವುದು ಬಾಲಿಯನ್ನರ ನಂಬಿಕೆ.

ಬಾಲಿಯ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿದ್ದರೆ ಸುತ್ತಮುತ್ತಲಿನ ಕಟ್ಟಡಗಳು, ವ್ಯಾಪಾರಿ ಮಳಿಗೆಗಳು ತಮ್ಮ ಕಲಾತ್ಮಕ ಪ್ರಭಾವಳಿಯಿಂದ ಗಮನಸೆಳೆಯುತ್ತವೆ. ಆದರೆ, ಪ್ರವಾಸಿಗರಿಂದ ಕಿಕ್ಕಿರಿಯುವ ಕಡಲ ಕಿನಾರೆಗಳಲ್ಲಿನ ಪಂಚತಾರಾ ಹೋಟೆಲ್‌ಗಳನ್ನು ಹೊರತುಪಡಿಸಿದರೆ ನಗರದ ಉಳಿದೆಡೆಗಳಲ್ಲಿ ಗಗನಚುಂಬಿ ಕಟ್ಟಡಗಳು ಕಾಣಸಿಗುವುದಿಲ್ಲ. ಇದಕ್ಕೂ ದೇವರನ್ನೇ ಕಾರಣವನ್ನಾಗಿ ನೀಡಲಾಗುತ್ತದೆ. ದೈವದ ಸ್ವರೂಪವಾದ ತೆಂಗಿನ ಮರಕ್ಕಿಂತಲೂ ಕಟ್ಟಡಗಳ ಎತ್ತರ ಮೀರಬಾರದು ಎನ್ನುವ ನಂಬಿಕೆಯದು. ಹಾಗಾಗಿಯೇ ಬಹುತೇಕ ಕಟ್ಟಡಗಳು ನಾಲ್ಕೈದು ಅಂತಸ್ತುಗಳಿಗೆ ಕೊನೆಗೊಳ್ಳುತ್ತವೆ.

ಮನೆಗೊಂದು ಮಂದಿರ
‘ಸಾವಿರ ದೇಗುಲಗಳ ದ್ವೀಪ’ ಎನ್ನುವುದು ಬಾಲಿಯ ವಿಶೇಷಣಗಳಲ್ಲೊಂದು. ಹಾಗೆ ನೋಡಿದರೆ, ಸಾವಿರ ಎನ್ನುವುದು ಒಂದು ವಿಶೇಷಣವಷ್ಟೇ. ಇಲ್ಲಿ ಕುಟುಂಬಕ್ಕೊಂದು ಮಂದಿರ. ಪುಟ್ಟದೋ ದೊಡ್ಡದೋ- ಪ್ರತಿ ಮನೆಯೂ ಒಂದು ಮಂದಿರವನ್ನು ಒಳಗೊಂಡೇ ಇರುವುದು ಬಾಲಿಯಲ್ಲಿ ಸಾಮಾನ್ಯ.

ಹಳ್ಳಿಗಳಿಗೆ ಕೂಡ ನಿರ್ದಿಷ್ಟವಾದ ಮಂದಿರವೊಂದಿರುತ್ತದೆ. ಅಂಗಡಿ ಮುಂಗಟ್ಟುಗಳ ಮುಂದೆಯೂ ಕಿರು ದೇಗುಲಗಳು. ಅಷ್ಟೇಕೆ, ಬಸ್ ನಿಲ್ದಾಣ ಕೂಡ ಒಂದು ಮಂದಿರದಂತೆಯೇ ಕಾಣಿಸುತ್ತದೆ. ಹಾಗೆಂದು ಈ ಎಲ್ಲ ಮಂದಿರಗಳಲ್ಲಿ ನಿತ್ಯ ಪೂಜೆ ನಡೆಯುತ್ತದೆ ಎಂದರ್ಥವಲ್ಲ.

ಈ ಮಂದಿರಗಳು ಮನೆ ಮಂದಿಯೆಲ್ಲ ಒಂದೆಡೆ ಕಲೆಯುವ ಸ್ಥಳಗಳಷ್ಟೇ. ಮೂರ್ತಿ ಪೂಜೆಯ ಬಗ್ಗೆ ಅಷ್ಟೇನೂ ಒಲವಿಲ್ಲದ ಬಾಲಿಯನ್ನರು ತಮ್ಮ ಇಡೀ ನಗರವನ್ನು ಮೂರ್ತಿಗಳಿಂದ ತುಂಬಿರುವುದು ಕುತೂಹಲಕರ. ರಾಮ ಸೀತೆ, ಭೀಮ, ಘಟೋತ್ಕಚ, ಮುಂತಾದ ಪುರಾಣ ನಾಯಕರು ಬೃಹತ್ ಮೂರ್ತಿಗಳಾಗಿ ವೃತ್ತಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ.

ಬುದ್ಧನ ಮೂರ್ತಿಗಳಂತೂ ನಗರದುದ್ದಕ್ಕೂ ರಸ್ತೆಗಳ ಇಕ್ಕೆಲಗಳಲ್ಲಿ ಮಂದಹಾಸ ಚೆಲ್ಲುತ್ತಿವೆ. ಬಾಲಿಯನ್ನರ ಪಾಲಿಗೆ ಈ ಮೂರ್ತಿಗಳು ತಮ್ಮ ನಗರಕ್ಕೊಂದು ಸಾಂಸ್ಕೃತಿಕ ಆಯಾಮ ನೀಡುವಲ್ಲಿ ಒದಗಿಬಂದಿರುವ ಪರಿಕರಗಳು, ಅಲಂಕಾರಿಕ ಸಾಮಗ್ರಿಗಳು.

ರಸಿಕರ ಪಾಲಿಗೆ ಬಾಲಿ ಸವಿದಷ್ಟೂ ತೀರದ ಮಧುಪಾತ್ರೆಯಂಥ ನಗರ. ಅಲ್ಲಿನ ಸಾಗರದಲ್ಲಿ, ನದಿಪಾತ್ರಗಳಲ್ಲಿ ಸಾಹಸ ಕ್ರೀಡೆಗಳಿಗೆ ಅವಕಾಶಗಳಿವೆ. ಅಯೂನ್ ನದಿಯಲ್ಲಿ ರಾಫ್ಟಿಂಗ್ ಮಾಡುವುದೊಂದು ಅದ್ಭುತ ಅನುಭವ. ತಾಳೆ ಮರಗಳ ಸಾಲುಗಳಿಂದ ಶೋಭಿಸುವ ಕಡಲ ಕಿನಾರೆಗಳ ಬಿಳಿ ಮರಳಿನ ಮೇಲೆ ಕುಳಿತು, ಅಲೆಗಳ ಸಂಗೀತವನ್ನು ಕಿವಿ ತುಂಬಿಕೊಳ್ಳಬಹುದು.

ಬಾಲಿಯ ನೆತ್ತಿಯ ಮೇಲಿನ ಮೋಡಗಳಂತೂ ನೀಲಿಯನ್ನು ತುಳುಕಿಸುತ್ತಿರುವಂತೆ ಕಾಣಿಸುತ್ತವೆ. ಯಾವ ಕ್ಷಣದಲ್ಲಾದರೂ ನಗರವನ್ನು ಮುದ್ದಿಸುವಂತೆ ಕಾಣುವ ಈ ನೀಲ ಮೋಡಗಳು ಜೂಟಾಟ ಆಡುವುದನ್ನು ಕಣ್ತುಂಬಿಕೊಳ್ಳುವುದು ಬದುಕಿನ ರುಚಿಯನ್ನು ಹೆಚ್ಚಿಸಬಲ್ಲ ಒಂದು ಅಪೂರ್ವ ಅನುಭವ. ಭತ್ತದ ಗದ್ದೆಗಳು, ಹಸಿರು ಕ್ಯಾನ್ವಾಸ್‌ನ ಪರ್ವತ ಪಂಕ್ತಿ, ಗಂಭೀರವಾಗಿ ಹರಿಯುವ ನದಿಗಳು– ಹೀಗೆ, ಪ್ರಕೃತಿಯ ಚೆಲುವೆಲ್ಲವೂ ಬಾಲಿಯಲ್ಲಿ ಮೇಳೈಸಿದಂತಿದೆ.

ಕೂಡು ಬಾಳುವೆ
ಭಾರತೀಯ ಸಮಾಜದ ಹೆಚ್ಚುಗಾರಿಕೆಯನ್ನು ಬಣ್ಣಿಸುವಾಗ ಅವಿಭಕ್ತ ಕುಟುಂಬ ಪರಿಕಲ್ಪನೆಯನ್ನು ಉದಾಹರಿಸುತ್ತೇವೆ. ಈ ಪರಿಕಲ್ಪನೆ ಭಾರತಕ್ಕಿಂತಲೂ ಬಾಲಿಯಲ್ಲೇ ಹೆಚ್ಚು ಜೀವಂತ ಆಗಿರುವಂತಿದೆ.

ಇಲ್ಲಿನ ಗ್ರಾಮೀಣ ಪ್ರದೇಶಗಳ ಮಧ್ಯಮ ವರ್ಗದ ಮನೆಗಳಿಗೆ ಭೇಟಿ ಕೊಟ್ಟರೆ, ಅಲ್ಲಿ ಮೂರ್ನಾಲ್ಕು ಕುಟುಂಬಗಳು ಒಟ್ಟಿಗೆ ಬದುಕುತ್ತಿರುವ ಜೀವಂತ ‘ಗ್ರೂಪ್‌ ಫೋಟೊ’ ಎದುರಾಗುತ್ತದೆ. ಹಾಗೆಂದು ಎಲ್ಲರೂ ಒಂದೇ ಸೂರಿನಡಿ ವಾಸಿಸುತ್ತಾರೆ ಎಂದಲ್ಲ.

ಮನೆಯ ಹಿರೀಕರಿಗೊಂದು ಪ್ರತ್ಯೇಕ ಕೋಣೆ. ನವ ವಿವಾಹಿತರಿಗೆ ಇನ್ನೊಂದು ಕೋಣೆ– ಹೀಗೆ, ಅಂತರ ಉಳಿಸಿಕೊಂಡೂ ಅಂಟಿಕೊಂಡಿರುವ ಪುಟ್ಟ ಪುಟ್ಟ ಮನೆಗಳು ಒಂದು ಆವರಣದಲ್ಲಿ ವಾಸಿಸುತ್ತವೆ. ಈ ‘ಕೂಡು ಕುಟುಂಬ’ ತನ್ನ ಮನೆಯ ಆವರಣದಲ್ಲೇ ಮಂದಿರವೊಂದನ್ನು ರೂಪಿಸಿಕೊಂಡಿರುತ್ತದೆ. ಅಡುಗೆ ಮನೆಯೂ ಎಲ್ಲರಿಗೂ ಒಂದೇ! ಒಟ್ಟಾಗಿ ದುಡಿದು, ಒಟ್ಟಾಗಿ ಉಂಡು, ಪ್ರತ್ಯೇಕವಾಗಿ ಮಲಗುವ ರೀತಿ ಇಲ್ಲಿಯದು.

ಮನೆಯ ಆವರಣದಲ್ಲಿ ಹಂದಿ ಗೂಡಿಗೂ ಕೋಳಿ ಗೂಡುಗಳಿಗೂ ಅವಕಾಶ ಇರುತ್ತದೆ. ಮನೆಯ ಮಧ್ಯ ಭಾಗದಲ್ಲಿ, ಅಟ್ಟಣಿಗೆಯ ಮೇಲೆ ಇರುವ ಕೋಣೆ ಭತ್ತ–ಅಕ್ಕಿಯ ಸಂಗ್ರಹಕ್ಕೆ ಮೀಸಲು. ಅಕ್ಕಿ ಅನ್ನಪೂರ್ಣೆಯ ರೂಪವಲ್ಲವೇ? ದೈವ ಎತ್ತರದಲ್ಲಿ ಇರಬೇಕು ಎನ್ನುವ ಕಾರಣಕ್ಕಾಗಿ ಈ ಅಟ್ಟದ ಮನೆ. ಹಾಂ, ಪ್ರಾಣಿಗಳಿಗೆ ಅಕ್ಕಿ ಸಿಗಬಾರದು ಎನ್ನುವ ಕಾರಣವೂ ಈ ಎತ್ತರದ ಹಿನ್ನೆಲೆಯಲ್ಲಿದೆ. ಅಂದಹಾಗೆ, ನಮ್ಮ ಕಲ್ಪನೆಯ ಅನ್ನಪೂರ್ಣೆಯನ್ನು ಬಾಲಿಯನ್ನರು ‘ದೇವಿಶ್ರೀ’ ಎನ್ನುತ್ತಾರೆ. ಈ ದೇವಿಯ ಪಾಲಿಗೆ ಧಾನ್ಯಗಳೇ ಉಡುಗೆ ಮತ್ತು ಆಭರಣ.

ಭೋಗದ ಸಿರಿ ಥಳುಕಿನಲ್ಲಿ...
ಹಿಂದೂ ಮಹಾಸಾಗರ ಸೃಷ್ಟಿಸಿರುವ ಚಿತ್ತಾಕರ್ಷಕ ಕಡಲ ಕಿನಾರೆಗಳ ಆಕರ್ಷಣೆ ಹೇಳತೀರದು. ಕುಟಾ, ಸನು, ನುಸಡುವ ಬೀಚ್‌ ರೆಸಾರ್ಟ್‌ಗಳು ಉಳ್ಳವರಿಗೆ ಸುಖವನ್ನು ಮೊಗೆದು ಮೊಗೆದು ಕೊಡುವ ತಾಣಗಳಂತಿವೆ. ಸನು ಕಿನಾರೆಯಲ್ಲಿ ಹಿರಿಯ ನಾಗರಿಕರು ಹೆಚ್ಚು. ಕುಟಾ ಕಡಲ ಕಿನಾರೆಯಂತೂ ತನ್ನ ಸೌಂದರ್ಯದಷ್ಟೇ ಕುಖ್ಯಾತಿಗೂ ಪ್ರಸಿದ್ಧವಾಗಿದೆ.

ಅಲ್ಲಿನ ರಾತ್ರಿ ಜೀವನದ ಬಗ್ಗೆ ರಸಿಕರು ಬಾಯಿ ಚಪ್ಪರಿಸಿಕೊಂಡು ಕಥೆಗಳನ್ನು ಹೇಳುತ್ತಾರೆ. ಅಲ್ಲಿನ ಮಾರುಕಟ್ಟೆಯ ಬೀದಿಗಳಲ್ಲಿ ನಾಯಿಕೊಡೆಗಳಂತೆ ಕಾಣಿಸುವ ಮಸಾಜ್ ಸೆಂಟರ್‌ಗಳ ಎದುರು ಪ್ಲಾಸ್ಟಿಕ್ ಚಿಟ್ಟೆಗಳಂತೆ  ತರುಣಿಯರು ಕಾಣಿಸುತ್ತಾರೆ. ದೇಶದ ವಿವಿಧ ಭಾಗಗಳಿಂದ ಅನ್ನ ಹುಡುಕಿಕೊಂಡು ಇಲ್ಲಿಗೆ ಬಂದಿರುವ ಅವರುಗಳು, ತಮ್ಮ ಬದುಕನ್ನೇ ಬಿಕರಿಗಿಟ್ಟಂತೆ ಕಾಣಿಸುತ್ತದೆ, ಕೆಲವು ಪ್ರವಾಸಿಗರ ಪಾಲಿಗೆ ಈ ತರುಣಿಯರೇ ಬಾಲಿಯ ಪ್ರಮುಖ ಆಕರ್ಷಣೆ.

ಪ್ರವಾಸೋದ್ಯಮ ಸೃಷ್ಟಿಸಿರುವ ಕುಟಾ ಬೀಚ್‌ನಂತಹ ವೈಪರೀತ್ಯಗಳ ಹಿನ್ನೆಲೆಯಲ್ಲಿ ಸುಲೇಮಾನ್ ಸಾಹೇಬರು ಹೇಳಿದ ‘ಬಾಲಿವುಡ್’ ಹೇಳಿಕೆಯನ್ನು ನೆನಪಿಸಿಕೊಳ್ಳಬಹುದು. ಬಾಲಿವುಡ್ ಎನ್ನುವುದು ಬೆಡಗು ಬಿನ್ನಾಣಗಳ ಉತ್ತುಂಗದ ಸಾಕಾರರೂಪ. ಇದಕ್ಕೆ ತದ್ವಿರುದ್ಧ ರೂಪದಲ್ಲಿ ಬಾಲಿಯ ಸಹಜ ಪ್ರಕೃತಿಯ ಚೆಲುವನ್ನು ಕಾಣಬಹುದು.

ಆದರೆ, ಪ್ರವಾಸೋದ್ಯಮದ ನೆಪದಲ್ಲಿ ಜಗತ್ತಿಗೆ ತೆರೆದುಕೊಂಡಿರುವ ಬಾಲಿ ತನ್ನ ಪ್ರಾಕೃತಿಕ ಚೆಲುವಿಗೆ ನಾಟಕೀಯ ಅಂಶಗಳನ್ನೂ ರೂಢಿಸಿಕೊಳ್ಳುತ್ತಿದೆ. ಅಂದರೆ, ಇಡೀ ಬಾಲಿಯೇ ಬಾಲಿವುಡ್ ಆಗುವ ಪ್ರಯತ್ನದಲ್ಲಿ ಇರುವಂತಿದೆ. ಇದನ್ನು ಸರಿ ಎನ್ನುವುದೋ ತಪ್ಪೆಂದು ಗೆರೆ ಎಳೆಯುವುದೋ ಕಷ್ಟ. ಸರಿ-ತಪ್ಪುಗಳ ನಡುವಣ ವ್ಯತ್ಯಾಸ ಗೋಡೆಯ ಮೇಲಿನ ದೀಪದ ತೊಯ್ದಾಟದಂತೆ. ಒಮ್ಮೆ ಬೆಳಕು, ಇನ್ನೊಮ್ಮೆ ನೆಳಲು. ಎರಡೂ ಸತ್ಯ, ಎರಡೂ ಸುಳ್ಳು.

ಬಾಲಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಂತ ಕೆಟ್ಟದಾಗಿದೆ. ಆಟೊಗಳ ಪರಿಕಲ್ಪನೆ ಕೂಡ ಅಲ್ಲಿಲ್ಲ. ಹಾಗಾಗಿ, ಪ್ರವಾಸಿಗರು ಟ್ಯಾಕ್ಸಿಗಳಿಗೆ ಮೊರೆಹೋಗದೆ ವಿಧಿಯಿಲ್ಲ. ಬಹುತೇಕ ವಾಹನಗಳ ಮೇಲೆ, ‘ಪರಿವಿಸತಾ’ (PARIWISATA) ಎನ್ನುವ ಬರಹ. ‘ಪುನಃ ಬನ್ನಿ’ ಎಂದು ನಮ್ಮ ಬಸ್ಸುಗಳಲ್ಲಿ ಇರುವ ಬರಹವನ್ನು ನೆನಪಿಸುವ ಈ ಬರಹ, ‘ಮತ್ತೆ ಮತ್ತೆ ಪ್ರವಾಸ’ ಎನ್ನುವ ಅರ್ಥವನ್ನು ಧ್ವನಿಸುತ್ತದೆ.

‘ಮತ್ತೆ ಮತ್ತೆ’ ಎನ್ನುವ ಈ ಕರೆ ಬಾಲಿಯ ಪಾಲಿಗೆ ಕೇವಲ ಔಪಚಾರಿಕ ಆದುದಲ್ಲ; ತನ್ನ ಗುರುತ್ವಾಕರ್ಷಣೆಗೆ ಒಳಪಟ್ಟವರನ್ನು ನಿರಂತರವಾಗಿ ಸೆಳೆಯುವ ಚುಂಬಕ ಶಕ್ತಿ ಬಾಲಿಯದು. ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವಾಲಯ ಹಾಗೂ ಟೈಗರ್ಏರ್‌ ಆಹ್ವಾನದ ಮೇರೆಗೆ ಲೇಖಕರು ಬಾಲಿ ದ್ವೀಪಕ್ಕೆ ಭೇಟಿ ನೀಡಿದ್ದರು.

ಪ್ರವಾಸೋದ್ಯಮದ ಅಕ್ಷಯಪಾತ್ರೆ
ಬಾಲಿಯ ಶೇ 95ರಷ್ಟು ಆದಾಯ ಪ್ರವಾಸೋದ್ಯಮದಿಂದಲೇ ಬರುತ್ತದೆ. ಇಲ್ಲಿನ ಜನ ಪ್ರವಾಸೋದ್ಯಮದ ಮೂಲಕ ಉದ್ಯೋಗದ ಹಲವು ಅವಕಾಶಗಳನ್ನು ಕಂಡುಕೊಂಡಿದ್ದಾರೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಗೆಯಿಂದ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದಾರೆ. ಆ ಕಾರಣದಿಂದಲೇ ಇಲ್ಲಿ ಭಿಕ್ಷುಕರು ನೋಡಸಿಗುವುದಿಲ್ಲ.

ಆಸ್ಟ್ರೇಲಿಯನ್ನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಿಯಲ್ಲಿ ಕಾಣಸಿಗುತ್ತಾರೆ. ಉಳಿದಂತೆ ಜಪಾನೀಯರು, ಕೊರಿಯನ್ನರೂ ದೊಡ್ಡ ಪ್ರಮಾಣದಲ್ಲಿ ಬರುತ್ತಾರೆ. ಈಚಿನ ವರ್ಷಗಳಲ್ಲಿ ಚೀನಾ ಗಮನಾರ್ಹ ರೀತಿಯಲ್ಲಿ ಬಾಲಿಗೆ ತೆರೆದುಕೊಳ್ಳುತ್ತಿದೆ. ಭಾರತದ ಪ್ರವಾಸಿಗರನ್ನು ಸೆಳೆಯಲು ಕೂಡ ಬಾಲಿ ಪ್ರಯತ್ನಿಸುತ್ತಿದೆ. ಸದ್ಯದಲ್ಲೇ ಭಾರತ ಸೇರಿದಂತೆ ಐವತ್ತು ದೇಶಗಳ ಪ್ರವಾಸಿಗರಿಗೆ ಉಚಿತ ವೀಸಾ ದೊರೆಯಲಿದೆ. ವರ್ಷಕ್ಕೆ ಕನಿಷ್ಠ 50 ಲಕ್ಷ ಪ್ರವಾಸಿಗರು ಬಾಲಿಗೆ ಆಗಮಿಸುತ್ತಿದ್ದಾರೆ. ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಬಾಲಿ ತವಕಿಸುತ್ತಿದೆ.

ಬಾಲಿಯಲ್ಲಿ ದುಡ್ಡು ಮಾಡಲಿಕ್ಕೆ ಇರುವ ಜನಪ್ರಿಯ ದಾರಿಗಳು ಮೂರು. ಒಂದು, ಮನಿ ಎಕ್ಸ್‌ಚೇಂಜ್ ವ್ಯವಹಾರ, ಎರಡನೆಯದು ಮಸಾಜ್, ಮೂರನೆಯದು ಮಕಾನ್ (ಊಟ). ಈ ಮೂರು ‘ಎಂ’ಗಳು ಬಾಲಿಯ ಆರ್ಥಿಕತೆಯ ಆಧಾರಸ್ತಂಭಗಳು.

ಪ್ರವಾಸಿಗರ ಅನುಕೂಲಕ್ಕಾಗಿ ಬಾಲಿಯಲ್ಲಿ ವಿವಿಧ ದರ್ಜೆಯ ಸಾಲು ಸಾಲು ಹೋಟೆಲ್‌ಗಳಿವೆ. ಮಧ್ಯಮ ವರ್ಗದವರು, ವಿದ್ಯಾರ್ಥಿಗಳಿಗೆ ನಿಲುಕುವಂತಹ ವಸತಿಯಿಂದ ಹಿಡಿದು, ಪಂಚತಾರಾ ಹೋಟೆಲ್‌ಗಳು ಸಾಕಷ್ಟಿವೆ. ವಿಲ್ಲಾಗಳು, ರೆಸಾರ್ಟ್‌ಗಳು, ಸ್ಟೇ ಹೋಮ್‌ಗಳು, ಮಸಾಜ್ ಮತ್ತು ಸ್ಪಾ ಸೆಂಟರ್‌ಗಳು ನಗರದುದ್ದಕ್ಕೂ ಹರಡಿಕೊಂಡಿವೆ. ಭಾರತೀಯ ರೆಸ್ಟೋರೆಂಟ್‌ಗಳೂ ಸಾಕಷ್ಟಿವೆ.
*

ಬಾಲಿಯ ದಾರಿ
ಬೆಂಗಳೂರಿನಿಂದ ಬಾಲಿಗೆ ನೇರ ವಿಮಾನ ಇಲ್ಲ. ಸಿಂಗಪುರಕ್ಕೆ ಹೋಗಿ, ಅಲ್ಲಿಂದ ಬಾಲಿಗೆ ವಿಮಾನ ಬದಲಿಸಬೇಕು. ಬೆಂಗಳೂರಿನಿಂದ ಸಿಂಗಪುರಕ್ಕೆ ಸುಮಾರು ನಾಲ್ಕೂವರೆ ತಾಸಿನ ಪ್ರಯಾಣವಾದರೆ, ನಂತರದ ಹಾದಿ ಎರಡೂವರೆ ತಾಸಿನದು. ’ಟೈಗರ್‌ಏರ್’ ಸಂಸ್ಥೆಯಿಂದ ಸಿಂಗಪುರಕ್ಕೆ, ಬಾಲಿಗೆ ನಿಯಮಿತವಾಗಿ ವಿಮಾನಗಳಿವೆ.
ವಿವರಗಳಿಗೆ: tigerair.com

(ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವಾಲಯ ಹಾಗೂ ಟೈಗರ್ಏರ್‌ ಆಹ್ವಾನದ ಮೇರೆಗೆ ಲೇಖಕರು ಬಾಲಿ ದ್ವೀಪಕ್ಕೆ ಭೇಟಿ ನೀಡಿದ್ದರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT