ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವತೆಗೆ ಹೆಚ್ಚು ಹತ್ತಿರ ಎಚ್ಚರಿಕೆಯ ಆಶಾವಾದ

Last Updated 8 ಜೂನ್ 2016, 19:49 IST
ಅಕ್ಷರ ಗಾತ್ರ

ಮುಂಗಾರು ಮಳೆ ಮೂಡಿಸಿರುವ ಆಶಾವಾದವನ್ನಷ್ಟೇ ನೆಚ್ಚಿಕೊಂಡು ರಘುರಾಂ ರಾಜನ್‌ ಅವರು ಬಡ್ಡಿ ದರ ಕಡಿತಕ್ಕೆ ಅವಸರಿಸದೆ, ಯಥಾಸ್ಥಿತಿ ಉಳಿಸಿಕೊಂಡಿದ್ದಾರೆ.

ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲೇ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಾಪಾಡಿಕೊಂಡಿರುವುದರಲ್ಲಿ ಅಚ್ಚರಿ ಪಡುವಂತಹದ್ದು ಏನೂ ಇಲ್ಲ. ಆಹಾರ ಧಾನ್ಯಗಳ ಬೆಲೆ ಏರಿಕೆಯೂ ಸೇರಿದಂತೆ ಚಿಲ್ಲರೆ ಮತ್ತು ಸಗಟು ಹಣದುಬ್ಬರವು ಸುಸ್ಥಿರವಾಗಿ ಏರುಗತಿಯಲ್ಲಿಯೇ ಇವೆ. ಹಣದುಬ್ಬರ ಕುರಿತ ಈ ಅನಿಶ್ಚಿತತೆಯೇ ಬಡ್ಡಿ ದರ ಕಡಿಮೆ ಮಾಡದಂತೆ ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಅವರ ಕೈಕಟ್ಟಿಹಾಕಿದೆ. ರಾಜನ್ ಅವರು  2015ರ ಜನವರಿಯಿಂದ 2016ರ ಏಪ್ರಿಲ್‌ವರೆಗೆ ರೆಪೊ ದರವನ್ನು ಶೇ 1.50ರಷ್ಟು ಕಡಿಮೆ ಮಾಡಿದ್ದರು.

ಗೃಹ ನಿರ್ಮಾಣ, ವಾಹನ ಖರೀದಿ ಮತ್ತು ಕೈಗಾರಿಕಾ ವಲಯಕ್ಕೆ ಇನ್ನಷ್ಟು ಸುಲಭ ಬಡ್ಡಿ ದರದಲ್ಲಿ ಸಾಲ ಪಡೆಯುವ ಅವಕಾಶಕ್ಕಾಗಿ ಈಗ ಇನ್ನಷ್ಟು ತಿಂಗಳು ಕಾಯಬೇಕು. ಆಗ  ಪರಿಸ್ಥಿತಿ ಆಶಾದಾಯಕವಾಗಿರಬಹುದು ಎಂಬುದು ದೂರದ ನಿರೀಕ್ಷೆ. ಏಕೆಂದರೆ ಸತತ ಎರಡು ವರ್ಷಗಳ ಅನಾವೃಷ್ಟಿ ನಂತರ ಈ ಬಾರಿ ಸಮೃದ್ಧ ಮಳೆಯ ಭರವಸೆ ಮೂಡಿಸಿರುವ ಮುಂಗಾರು, ಹಣದುಬ್ಬರಕ್ಕೆ ಕಡಿವಾಣ ಹಾಕುವಲ್ಲಿ ಸಫಲವಾದರೆ ಬೆಲೆ ಏರಿಕೆ  ಪರಿಸ್ಥಿತಿ ಸುಧಾರಿಸಲಿದೆ. ಏಪ್ರಿಲ್‌ ತಿಂಗಳಲ್ಲಿ ತರಕಾರಿ, ಹಣ್ಣು, ಸಕ್ಕರೆ, ಮಾಂಸ, ಮೀನು, ಬೇಳೆಕಾಳು ಮತ್ತು ಖಾದ್ಯತೈಲದ ಬೆಲೆಗಳು ಏರಿಕೆ ದಾಖಲಿಸಿದ್ದವು.

ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಹೆಚ್ಚಳ ಮತ್ತು 7ನೇ ವೇತನ ಆಯೋಗದ ಜಾರಿ ಹಣದುಬ್ಬರ ಏರಿಕೆಗೆ ಇಂಬು ನೀಡುವ ನಿರೀಕ್ಷೆ ಇದೆ. ದರ ಇಳಿಕೆ ಬಗ್ಗೆ ರಾಜಕೀಯ ಒತ್ತಡಗಳಿದ್ದರೂ ರಾಜನ್ ಅವರು ಅದಕ್ಕೆ ಮಣಿದಿಲ್ಲ. ತಮ್ಮ ತಲೆದಂಡಕ್ಕೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಕೆಲವು ರಾಜಕೀಯ ನಾಯಕರು ಪಟ್ಟು ಹಿಡಿದಿದ್ದರೂ, ರಾಜನ್‌ ಅದಕ್ಕೆ ಕಿಂಚಿತ್ತೂ ಸೊಪ್ಪುಹಾಕಿಲ್ಲ. ದೇಶಿ ಆರ್ಥಿಕತೆಯ ಒಳಿತೇ ತಮ್ಮ ಮೊದಲ ಆದ್ಯತೆ ಎನ್ನುವುದಕ್ಕೆ ರಾಜನ್ ಅಂಟಿಕೊಂಡಿದ್ದಾರೆ. ಅವರು ತಳೆದಿರುವ ಈ ಧೋರಣೆಯಲ್ಲಿ ಎಚ್ಚರಿಕೆಯ ಆಶಾವಾದವೂ ಕಂಡು ಬರುತ್ತಿದೆ.

ತೃಪ್ತಿದಾಯಕ ಮಳೆಯ ಅಂದಾಜನ್ನು ಆಧಾರವಾಗಿಟ್ಟುಕೊಂಡು ಬಡ್ಡಿ ದರ ಇಳಿಸಲು ರಾಜನ್‌ ಅವಸರಿಸಿಲ್ಲ. ಸಮೃದ್ಧ ಬೆಳೆ ಬಂದು ಆಹಾರ ಹಣದುಬ್ಬರ ಕಡಿಮೆಯಾದರೆ ಮಾತ್ರ ಬಡ್ಡಿ ದರ ತಗ್ಗಿಸುವ ರಾಜನ್ ಅವರ ಚಿಂತನೆ ಸರಿಯಾಗಿಯೇ ಇದೆ. ತಮ್ಮೆದುರಿಗಿನ ಎಲ್ಲ ಆಯ್ಕೆಗಳನ್ನು ಬದಿಗಿರಿಸಿ, ಮುಂಬರುವ ದಿನಗಳಲ್ಲಿ ಜಾಗತಿಕ ಮತ್ತು ದೇಶಿ ವಿದ್ಯಮಾನಗಳು ಯಾವ ತಿರುವು ಪಡೆಯಲಿವೆ ಎನ್ನುವುದನ್ನು ಅಂದಾಜಿಸಿಯೇ ಹಣಕಾಸು ನೀತಿ ಪರಾಮರ್ಶಿಸಿದ್ದಾರೆ. ಜಪಾನ್‌ನಲ್ಲಿ ಹಣದಿಳಿತದ ಒತ್ತಡ ಹೆಚ್ಚುತ್ತಿದ್ದು  ಚೀನಾದ ಮಂದಗತಿಯ ಆರ್ಥಿಕತೆ ಬದಲಾಗುವ ಲಕ್ಷಣಗಳೇನೂ ಕಾಣುತ್ತಿಲ್ಲ.

ಹಾಗೆಯೇ ಯುರೋಪ್‌ ಒಕ್ಕೂಟದಿಂದ ಬ್ರಿಟನ್‌ ಹೊರ ನಡೆಯುವುದಕ್ಕೆ ಸಂಬಂಧಿಸಿದ ಅನಿಶ್ಚಿತತೆಯೂ ದೂರವಾಗಿಲ್ಲ. ಇವೆಲ್ಲ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಯಾವುದೇ ಸಂದರ್ಭದಲ್ಲಿ ತಲ್ಲಣ ಮೂಡಿಸಲಿವೆ. ಇದು ವಿದೇಶಿ ಬಂಡವಾಳದ ಹರಿವಿನ ಮೇಲೂ ಪರಿಣಾಮ ಬೀರಲಿದೆ. ಮೂಲ ದರ ಅಥವಾ ಕನಿಷ್ಠ ಸಾಲದ ದರ ಬದಲಿಗೆ ಜಾರಿಗೆ ತಂದಿರುವ ಹೆಚ್ಚುವರಿ ವೆಚ್ಚ ಆಧರಿಸಿದ ಸಾಲದ ಬಡ್ಡಿ ದರವು (ಎಂಸಿಎಲ್‌ಆರ್‌) ನಿರೀಕ್ಷಿಸಿದ ರೀತಿಯಲ್ಲಿ ಪ್ರಗತಿ ಸಾಧಿಸಿಲ್ಲ.

ಅರ್ಥ ವ್ಯವಸ್ಥೆಗೆ ತುಂಬ ಅಗತ್ಯವಾಗಿರುವ ಸಾಲದ ನೆರವು  ಹೆಚ್ಚಿಸಲು ಆರ್‌ಬಿಐ ಈ ಹೊಸ ವ್ಯವಸ್ಥೆಯನ್ನು ತುರ್ತಾಗಿ ಪರಾಮರ್ಶಿಸಬೇಕಾಗಿದೆ. ಆರ್‌ಬಿಐ ತಳೆದ ನಿಲುವಿಗೆ ಪೂರಕವಾಗಿ ಸರ್ಕಾರ ವಿತ್ತೀಯ ಶಿಸ್ತನ್ನೂ ಪಾಲಿಸಬೇಕಾಗಿದೆ. ಮುಂಗಾರು ಮಳೆ ಬೀರಬಹುದಾದ ಪರಿಣಾಮ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ನೀಡುವ ಹಣಕಾಸು ನೆರವು, ಕೇಂದ್ರೀಯ ಬ್ಯಾಂಕ್‌ನ ಬಡ್ಡಿ ದರ ಕಡಿತದ ಭವಿಷ್ಯ ನಿರ್ಧರಿಸಲಿವೆ. ರಾಜನ್‌ ತಳೆದಿರುವ ‘ಎಚ್ಚರಿಕೆಯ ಆಶಾವಾದ’ ಧೋರಣೆಯಲ್ಲಿಯೇ ಈಗ ಎಲ್ಲರೂ ನಂಬಿಕೆ ಇಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT