ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳ ಸಾಲು; ತಪ್ಪದ ಗೋಳು

ನಗರ ಸಂಚಾರ – ಸಿಗ್ನಲ್‌ ಲೈಟ್‌ಗಳೇ ಇಲ್ಲ: ಟ್ರಾಫಿಕ್‌ ಪೊಲೀಸರಿಗೆ ‘ಕೈ’ ತೋರುವುದು ತಪ್ಪಿಲ್ಲ
Last Updated 30 ಮೇ 2016, 6:26 IST
ಅಕ್ಷರ ಗಾತ್ರ

ಮಡಿಕೇರಿ: ಪ್ರವಾಸಿಗರ ನೆಚ್ಚಿನ ಊರಿನಲ್ಲಿ ಸಂಚಾರ ಸಮಸ್ಯೆ ಮಾತ್ರ ಸದ್ಯಕ್ಕೆ ತಪ್ಪುವಂತೆ ಕಾಣಿಸುತ್ತಿಲ್ಲ. ಕಾಫಿ ತೋಟ, ಬೆಟ್ಟಗುಡ್ಡಗಳ ಮಧ್ಯೆಯಿರುವ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸುತ್ತಿದಂತೆ ಸಂಚಾರ ಕಿರಿಕಿರಿ ಅನುಭವವಾಗುತ್ತಿದೆ.

ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊಡಗು ಜಿಲ್ಲೆಗೆ ಲಗ್ಗೆಯಿಡುವ ಪ್ರವಾಸಿಗರಿಗೂ ಈ ತಾಪತ್ರಯ ತಪ್ಪಿಲ್ಲ. ನಗರ ವಾಸಿಗಳೂ ಸಹ ಈ ಸಂಚಾರ ಸಮಸ್ಯೆಗೆ ಬಸವಳಿದು ಹೋಗಿದ್ದಾರೆ.

ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತದ ಸಮೀಪ ಮುಖ್ಯರಸ್ತೆಯ ಅಕ್ಕಪಕ್ಕ ಸಾಕಷ್ಟು ಪ್ರತಿಷ್ಠಿತ ಹೋಟೆಲ್‌ಗಳಿವೆ. ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಪಕ್ಕದಲ್ಲಿ ವಾಹನ ನಿಲುಗಡೆ ಮಾಡಿ, ಹೋಟೆಲ್‌ಗೆ ತೆರಳುತ್ತಾರೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌, ಸರಕು ಸಾಗಣೆ ಲಾರಿಗಳ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿದೆ. ಮಡಿಕೇರಿ ನಗರಾಭಿವೃದ್ಧಿ ಕಚೇರಿ ಎದುರು ವಾರಾಂತ್ಯದಲ್ಲಿ ಸ್ಥಳಾವಕಾಶವಿಲ್ಲದೇ ಸಾಲುಸಾಲು ವಾಹನಗಳು ನಿಂತಿರುತ್ತವೆ. ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ಎದುರು ಅದೇ ಗೋಳು.

ಜಿಲ್ಲಾ ಆಸ್ಪತ್ರೆ ಸಮೀಪ ಸಹ ವಾಹನಗಳ ಸಾಲು. ಆಂಬುಲೆನ್ಸ್‌ ಹಾಗೂ ಆಸ್ಪತ್ರೆ ಖಾಸಗಿ ವಾಹನಗಳ ಮೂಲಕ ಬರುವ ರೋಗಿಗಳು ಸಾಕಷ್ಟು ತೊಂದರೆ ಪಡಬೇಕಾಗಿದೆ.

ಅಲ್ಲಿಂದ ಮುಂದೆ ಜನರಲ್‌ ಕೆ.ಎಸ್‌. ತಿಮ್ಮಯ್ಯ ವೃತ್ತ ಎದುರುಗೊಳ್ಳುತ್ತದೆ. ವಿರಾಜಪೇಟೆ, ಮಂಗಳೂರು, ಸಂಪಾಜೆ, ಇರ್ಪು ಜಲಪಾತ, ಚೇಲಾವ ಜಲಪಾತ, ಭಾಗಮಂಡಲ– ತಲಕಾವೇರಿ, ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೆ ಹೋಗುವ ವಿವಿಧ ರಸ್ತೆಗಳು ಒಂದೇ ವೃತ್ತದಲ್ಲಿ ಕೂಡಿಕೊಂಡಿವೆ.
ಜತೆಗೆ, ವೃತ್ತದ ಸಮೀಪ ಚರ್ಚ್‌ ಸಹ ಇದೆ. ಎರಡು ಪೆಟ್ರೋಲ್‌ ಬಂಕ್‌ಗಳೂ ರಸ್ತೆಗೆ ಹೊಂದಿಕೊಂಡಂತಿವೆ. ಹೀಗಾಗಿ, ನಿತ್ಯ ಈ ವೃತ್ತದಲ್ಲಿ ವಾಹನ ದಟ್ಟಣೆ ಇರಲಿದ್ದು, ವಾರದ 7 ದಿನಗಳು ಸಂಚಾರ ಸಮಸ್ಯೆ ಕಂಡುಬರುತ್ತಿದೆ. ಈ ವೃತ್ತದಲ್ಲಿ ಪಾದಚಾರಿಗಳು, ಜಿಲ್ಲಾ ಆಸ್ಪತ್ರೆಗೆ ಬಸ್‌ ಇಳಿದು ಹೋಗುವವರೂ ತೊಂದರೆಗೆ ಒಳಗಾಗುತ್ತಿದ್ದಾರೆ. ಇಲ್ಲಿ ಸಿಗ್ನಲ್‌ಲೈಟ್‌ ಅಳವಡಿಸದೇ ಇರುವುದೇ ಪ್ರಮುಖ ಕಾರಣವಾಗಿದೆ.

ಜಿಲ್ಲಾಧಿಕಾರಿ ಕಚೇರಿ, ರಾಜಸೀಟ್‌, ಓಂಕಾರೇಶ್ವರ ದೇವಸ್ಥಾನ, ಕೋಟೆ, ರಾಜರ ಗುಡ್ಡಕ್ಕೆ ಕಾವೇರಿ ವೃತ್ತದ ಮೂಲಕ ಹಾದು ಹೋಗುವವರೂ ತೊಂದರೆಗೆ ಒಳಗಾಗುತ್ತಿದ್ದಾರೆ. ಇಲ್ಲಿಯೂ ಸಹ ವಾಹನಗಳ ಸಾಲು ಉದ್ದಕ್ಕೆ ಇರುತ್ತದೆ. ಇಲ್ಲಿಯೂ ಸಿಗ್ನಲ್‌ ಲೈಟ್‌ ವ್ಯವಸ್ಥೆಯೇ ಇರುವುದಿಲ್ಲ. ಈ ವೃತ್ತದಲ್ಲೂ ಪ್ರತಿನಿತ್ಯ ಹೋಂ ಗಾರ್ಡ್‌ ಹಾಗೂ ಟ್ರಾಫಿಕ್‌ ಕಾನ್‌ಸ್ಟೆಬಲ್‌ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಬೆಳಿಗ್ಗೆಯಿಂದ ಸಂಜೆಯ ತನಕ ಅವರಿಗೆ ‘ಕೈ’ ತೋರುವುದೇ ಕಾಯಕವಾಗಿದೆ. ನಿಯಮ ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟು ನಿತ್ಯ ಕೈತೋರುವುದರಲ್ಲಿಯೇ ದಿನ ಕಳೆಯುವಂತಾಗಿದೆ. ವೈಜ್ಞಾನಿಕವಾಗಿ ಇರುವ ವೃತ್ತಗಳಿಗಾದರೂ ಟ್ರಾಫಿಕ್‌ ಸಿಗ್ನಲ್‌ ಲೈಟ್‌ ಅಳವಡಿಕೆ ಮಾಡಬೇಕು ಎಂದು ಸ್ಥಳೀಯರ ಆಗ್ರಹ.

ನಗರ ಹಾಗೂ ಸಂಚಾರಿ ಪೊಲೀಸ್‌ ಠಾಣೆಯ ಎದುರಿನ ರಸ್ತೆಯಲ್ಲೂ ಅದೇ ಪರಿಸ್ಥಿತಿ ಇದೆ. ಇನ್ನು ಖಾಸಗಿ ಬಸ್‌ನಿಲ್ದಾಣದ ಬಳಿ ಬಸ್‌ಗಳು ತಮ್ಮ ಸ್ಥಾನಕ್ಕೆ ನಿಲುಗಡೆ ಆಗುವ ತನಕವೂ ವಾಹನಗಳಿಗೆ ಕಾಯುವುದೇ ಕಾಯಕ. ಖಾಸಗಿ ಬಸ್‌ನಿಲ್ದಾಣವನ್ನು ಆದಷ್ಟು ಬೇಗ ಸ್ಥಳಾಂತರ ಮಾಡಿದರೆ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ಸುಧಾರಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

‘ಅಗತ್ಯವಿರುವ ವೃತ್ತಗಳಿಗೆ ಸಿಗ್ನಲ್‌ ಲೈಟ್‌ ಅಳವಡಿಕೆ ಅನಿವಾರ್ಯವಾಗಿದೆ. ನಗರಸಭೆ ಆಡಳಿತ ಸಂಚಾರ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಟ್ರಾಫಿಕ್‌ ಸಮಸ್ಯೆ ತೀವ್ರವಾಗಿದೆ. ಶಾಶ್ವತ ಪರಿಹಾರ ಅಗತ್ಯ. ಜತೆಗೆ, ಪ್ರಮುಖ ರಸ್ತೆಯಲ್ಲಿ ರಾತ್ರಿ ವೇಳೆ ಅತ್ಯಾಧುನಿಕ ಬೀದಿದೀಪ ಅಳವಡಿಕೆಗೂ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಅಂಗಡಿ ಮಾಲೀಕ ವೆಂಕಪ್ಪ.

ಮುಖ್ಯಾಂಶಗಳು
* ಪ್ರವಾಸಿಗರಿಗೂ ಕಿರಿಕಿರಿ
* ತಿಮ್ಮಯ್ಯ ವೃತ್ತದಲ್ಲಿ ಅಪಾಯ ಹೆಚ್ಚು
*ಆಧುನಿಕ ಬೀದಿದೀಪ ಅಳವಡಿಕೆ ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT