ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹಿನಿಗಳನ್ನು ಹಿಂದಿಕ್ಕಿದ ‘ಚಾಣಕ್ಯ’

ಮತಗಟ್ಟೆ ಸಮೀಕ್ಷೆಗಳು ಹೇಳಿದ್ದೇನು, ಆಗಿದ್ದೇನು ?
Last Updated 16 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮೇ ೧೨ರ ಕೊನೆಯ ಹಂತದ ಮತದಾನದ ಮುಗಿಯುತ್ತಲೇ ಎಲ್ಲರ ದೃಷ್ಟಿ ಯಾರ ಸಮೀಕ್ಷೆ ಏನು ಹೇಳುತ್ತದೆ ಎನ್ನುವುದರ ಕಡೆಗಿತ್ತು. ಒಂದೊಂದು ಖಾಸಗಿ ವಾಹಿನಿ ಇಲ್ಲವೆ ಪತ್ರಿಕೆಯ ಭವಿಷ್ಯ ಒಂದೊಂದು ರೀತಿಯಲ್ಲಿತ್ತು. ಬಹುತೇಕ ಸಮೀಕ್ಷೆಗಳು ಹೇಳಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ 280ರ ಆಸುಪಾಸಿನಲ್ಲಿ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ ಎಂದು. ಆದರೆ, ಈ ಎಲ್ಲ ಸಮೀಕ್ಷೆಗಳಿಗೆ ಭಿನ್ನವಾಗಿ ‘ಟುಡೇಸ್‌ ಚಾಣಕ್ಯ’ ತನ್ನದೇ ಆದ ತೀರ್ಪು ನೀಡಿತ್ತು. ಮತದಾರನ ಮನದಲ್ಲಿ ಏನಿದೆ ಎನ್ನುವುದನ್ನು ತಿಳಿಯುವ ವಾಹಿನಿಗಳ ಸ್ಪರ್ಧೆಯಲ್ಲಿ ‘ಚಾಣಕ್ಯ ತಂತ್ರ’ ಬಹುತೇಕ ಮುನ್ನಡೆಯಲ್ಲಿದೆ.

ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಆರಂಭದಿಂದಲೂ ಪ್ರತಿ­ಪಾದಿಸಿಕೊಂಡು ಬಂದ ‘ಅಬ್‌ಕೀ ಬಾರ್‌ ಮೋದಿ ಸರ್ಕಾರ್‌’ ಎನ್ನುವ ಘೋಷಣೆಯನ್ನು ನಿಜಗೊಳಿಸಿವೆಯಾದರೂ ಕೆಲವು ರಾಜ್ಯಗಳಲ್ಲಿ ಇದು ಯಶಸ್ವಿಯಾಗಿಲ್ಲ. ಇನ್ನೂ ಕೆಲ ರಾಜ್ಯ­ಗಳಲ್ಲಿ ಹತ್ತಿರದ ಸ್ಥಾನಗಳು ಆಯಾ ಪಕ್ಷಗಳಿಗೆ ಬಂದಿವೆ.

ಹೌದು, ಮತಗಟ್ಟೆ ಸಮೀಕ್ಷೆ ನಡೆಸಿದ  ೧೦ ಟಿವಿ ವಾಹಿನಿಗಳ ಪೈಕಿ ೯ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಖಚಿತ, ಪ್ರಧಾನಿ ಪಟ್ಟದತ್ತ ಮೋದಿ ಎನ್ನುವ ಸಂದೇಶ ಇತ್ತು. ಈಗ ಆಗಿದ್ದು ಸಹ ಇದೇ. ಆದರೆ, ಚಾಣಕ್ಯ ಹಾಗೂ ಇಂಡಿಯಾ ನ್ಯೂಸ್‌ ಬಿಟ್ಟು ಯಾವುದೇ ವಾಹಿನಿಗಳು, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಸಾಧನೆ ೨೮೦ ರ ಗಡಿ ದಾಟದು. ಸರ್ಕಾರ ರಚನೆ ಬಿಜೆಪಿಗೆ ಕಷ್ಟವಾಗದು ಎಂದು ಪ್ರಕಟಿಸಿದ್ದವು.

ಚಾಣಕ್ಯ ಹೇಳಿದ್ದೇನು ?: ಎನ್‌ಡಿಎ ಗಳಿಸುವ ಒಟ್ಟು ಸ್ಥಾನಗಳು ೩೪೦. ಇದರಲ್ಲಿ ೧೪ ಸ್ಥಾನ ಹೆಚ್ಚಾಗ­ಬಹುದು ಇಲ್ಲವೆ ಕಡಿಮೆಯಾಗ­ಬಹುದು. ಬಿಜೆಪಿ ಪಕ್ಷವೊಂದೇ ೨೯೧ ಸ್ಥಾನ ಪಡೆಯಬಹುದು. ಯುಪಿಎ ಸಾಧನೆ ೭೦ ಸ್ಥಾನಗಳಿಗೆ ಬಂದು ನಿಲ್ಲುತ್ತಿದ್ದು ಇದರಲ್ಲಿ ೯ ಸ್ಥಾನ ಹೆಚ್ಚು ಇಲ್ಲವೆ ಕಡಿಮೆಯಾಗಬಹುದು. ಮಿತ್ರಪಕ್ಷಗಳ ಹೊರತಾಗಿ ಕಾಂಗ್ರೆಸ್‌ ಹೆಚ್ಚೆಂದರೆ ೫೭ ಸ್ಥಾನದಲ್ಲಿ ಜಯ ಗಳಿಸಬಹುದು. ಇದರಲ್ಲಿ ೯ ಸ್ಥಾನ ಹೆಚ್ಚು ಕಡಿಮೆಯಾಗಬಹುದು ಎಂಬುದು ಚಾಣಕ್ಯ ಮುಂದಿಟ್ಟ  ಲೆಕ್ಕಾಚಾರ ವಾಗಿತ್ತು. ಎನ್‌ಡಿಎ ಹಾಗೂ ಯುಪಿಎಗೆ ಈಗ ಬಂದಿರುವ ಸ್ಥಾನಗಳಿಗೆ ಹೋಲಿ­ಸಿ­ದರೆ ಚಾಣಕ್ಯ ನುಡಿದ ಭವಿಷ್ಯ ಬಹುತೇಕ ಸತ್ಯ ಎನ್ನುವಂತಾಗಿದೆ.

ಎಲ್ಲ ಕಾಲಕ್ಕೂ ನಿಜವಾಗಿಲ್ಲ: ಸಮೀಕ್ಷೆಗಳು ಎಲ್ಲ ಕಾಲಕ್ಕೂ ನಿಜ­ವಾಗಿಲ್ಲ. ೨೦೦೪ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಹುತೇಕ ಸಮೀಕ್ಷೆಗಳು ೨೪೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದ್ದವು. ಆದರೆ, ಸಮೀಕ್ಷೆಗಳಿಗೆ ವ್ಯತಿರಿಕ್ತ ಎನ್ನುವಂತೆ ಆಗ ಎನ್‌ಡಿಎಗೆ ಸಿಕ್ಕ ಸ್ಥಾನಗಳು ಕೇವಲ ೧೮೯.

ಕಾಂಗ್ರೆಸ್‌ ಗರಿಷ್ಠ ೧೯೭ ಸ್ಥಾನ ಗಳಿಸಬಹುದು ಎಂದು ಹೇಳಲಾಗಿತ್ತು. ಆದರೆ ಆ ಪಕ್ಷಕ್ಕೆ 145 ಸ್ಥಾನ ಸಿಕ್ಕಿದ್ದವು. ಕಳೆದ ಬಾರಿಯ ಲೋಕಸಭಾ ಚುನಾ­ವಣೆಯಲ್ಲೂ ವಾಹಿನಿಗಳ  ಲೆಕ್ಕಾಚಾರ ಏರುಪೇರಾಗಿತ್ತು. ಸಮೀಕ್ಷೆಗಳಿಗೆ ವ್ಯತಿರಿಕ್ತ­ವಾಗಿ ಯುಪಿಎ ಅಧಿಕಾರಕ್ಕೆ ಬಂದಿತ್ತು.

ಏನಿದು ಚಾಣಕ್ಯ ?
ವಿ.ಕೆ. ಬಜಾಜ್‌ ನೇತೃತ್ವದಲ್ಲಿ ೧೯೯೫ರಲ್ಲಿ ಆರಂಭ­ಗೊಂಡ ‘ಟುಡೇಸ್‌ ಚಾಣಕ್ಯ’ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಅದರಲ್ಲೂ ರಾಜಕೀಯ, ಆರ್ಥಿಕ ಕ್ಷೇತ್ರ­ಗಳಲ್ಲಿ ತೊಡಗಿಸಿಕೊಂಡ ಸಂಶೋಧನಾ ಸಂಸ್ಥೆ.

ಸಾಕಷ್ಟು ಸಮೀಕ್ಷೆಗಳನ್ನು ಚಾಣಕ್ಯ ಪ್ರಕಟಿಸಿದ್ದರೂ ಈ ಸಂಸ್ಥೆಯ ಜನಪ್ರಿ­ಯತೆ ಹೆಚ್ಚಿದ್ದು ೨೦೧೩ರಲ್ಲಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ. ಉಳಿದ ವಾಹಿನಿಗಳಿಗೆ ವ್ಯತಿರಿಕ್ತವಾಗಿ ಚಾಣಕ್ಯ ತನ್ನ ತೀರ್ಪು ನೀಡಿತ್ತು. ಈ ಸಂದರ್ಭದಲ್ಲಿ ಚಾಣಕ್ಯ ಪ್ರಕಟಿಸಿದ ಸಮೀಕ್ಷೆ ಬಹುತೇಕ ನಿಜವಾಗಿತ್ತು. ದೆಹಲಿ ವಿಧಾನಸಭೆ ಚುನಾವಣೆ­ಯಲ್ಲೂ ಚಾಣಕ್ಯ ನೀಡಿದ ಸಮೀಕ್ಷೆಯೂ ನಿಜವಾಗಿತ್ತು. ಹೀಗಾಗಿ ಈ ಸಂಸ್ಥೆ ‘ನಿಖರತೆಯಲ್ಲಿ ಸದಾ ನಾವೇ ಮೊದಲು’ ಎನ್ನುವ ಘೋಷಣೆಯನ್ನು  ತನ್ನೊಂದಿಗೆ ಸೇರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT