ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಟೇಜ್‌ ಕಾರುಗಳ ಅತಿರಥ

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರಿನವರೇ ಆದ ರವಿಪ್ರಕಾಶ್‌ ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಕಾರ್‌ ರೇಸ್‌ ಹಾಗೂರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಆಗ ಕೇವಲ ಬೈಕ್‌ ಹಾಗೂ ಸೈಕಲ್‌ ಸಂಗ್ರಹಣೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರಿಗೆ ಹಳೇ ಕಾರುಗಳಲ್ಲಿ ಆಸಕ್ತಿ ಮೂಡಲು ಪ್ರೇರಣೆ ನೀಡಿದ್ದು ವಿಲ್‌ನಲ್ಲಿ ಸಿಕ್ಕ ‘ಸನ್‌ಬೀಮ್‌ ಟಾಲ್‌ಬಾಟ್‌ 2 ಲೀಟರ್‌’ ಕಾರು.

ಆಗ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದ ರವಿಪ್ರಕಾಶ್‌ 1979ರಲ್ಲಿ ಚೆನ್ನೈನ ಶೋಲಾವರಂನಲ್ಲಿ ನಡೆದ ಅಂಬಾಸಿಡರ್‌ ಕಾರ್‌ ರೇಸ್‌ನಲ್ಲಿ ಭಾಗವಹಿಸಿದ್ದರು. ಈ ರೇಸ್‌ನಲ್ಲಿ ಜಯಗಳಿಸಿ ನಗರಕ್ಕೆ ಹಿಂತಿರುಗುವಾಗ ಚೆನ್ನೈನ ರಸ್ತೆಯಲ್ಲಿ ‘ಸನ್‌ಬೀಮ್‌ ಟಾಲ್‌ಬಾಟ್‌ 2 ಲೀಟರ್‌’ ಪ್ರಕಾಶ್‌ ಕಣ್ಣಿಗೆ ಬಿತ್ತು. ಅದನ್ನು ಕಂಡ ಕ್ಷಣವೇ ಅದನ್ನು ಕೊಳ್ಳಬೇಕೆಂದು ಪಕ್ಕದಲ್ಲೇ ಇದ್ದ ಸ್ನೇಹಿತರ ಬಳಿ ಹೇಳಿಕೊಂಡರು.

ಆಗ ಅದಕ್ಕೆ ಪ್ರತಿಕ್ರಿಯಿಸಿದ ಸ್ನೇಹಿತ, ‘ಈ ಕಾರು ಮಾರಾಟಕ್ಕಿದೆ. ಅದರ ವಿವರಗಳನ್ನು ಇತ್ತೀಚೆಗಷ್ಟೆ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು’ ಎಂದರು. ಕೂಡಲೇ ಆ ವಿವರಗಳನ್ನು ತೆಗೆದುಕೊಂಡು ಸೀದಾ ಕಾರಿನ ಮಾಲೀಕ ಮೇಜರ್‌ ಮಹಾದೇವನ್‌ ಅವರ ಮನೆಗೆ ಹೋಗಿ ಕಾರನ್ನು ಕೊಳ್ಳುವ ಕುರಿತು ಮಾತನಾಡಿದ್ದರು. ಮೇಜರ್‌ ಆಗಿನ ಕಾಲಕ್ಕೆ ಆ ಕಾರನ್ನು ₹40 ಸಾವಿರಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದರು. ಆದರೆ ರವಿ ಬಳಿ ಅಷ್ಟು ಹಣ ಇರಲಿಲ್ಲ. ಹೀಗಾಗಿ ಕಾರನ್ನು ಕೊಳ್ಳುವ ಯೋಚನೆ ಬಿಟ್ಟರು.

‘‘ಅಂದು ಕಾರು ಕೊಳ್ಳುವ ಕುರಿತು ಮಾತುಕತೆ ನಡೆಸುವ ವೇಳೆ ಇತರ ಕಾರುಗಳ ಬಗ್ಗೆ ಸಹ ಸಾಕಷ್ಟು ಚರ್ಚೆ ನಡೆದಿತ್ತು. ಇದರಿಂದಾಗಿ ನಾನು ಅವರಿಗೆ ತುಂಬಾ ಇಷ್ಟವಾಗಿದ್ದೆ. ಹೀಗಾಗಿಯೇ ಅಂದು ನನ್ನನ್ನು ಅವರ ಮನೆಯಲ್ಲಿ ಊಟಕ್ಕೆ ಕರೆದಿದ್ದರು. ನಂತರ ನಾನು ಊರಿಗೆ ಹಿಂತಿರುಗಿದೆ. ಆಮೇಲೆ ಧನ್ಯವಾದ ಹೇಳಲು  ಮೇಜರ್‌ ಅವರ ಮನೆಗೆ ಕರೆ ಮಾಡಿದೆ. ಆಗ ಅವರು ಮೆಟ್ಟಿಲಿನಿಂದ ಜಾರಿ ಬಿದ್ದು ಆಸ್ಪತ್ರೆ ಸೇರಿರುವ ವಿಷಯ ತಿಳಿಯಿತು.

ಇದಾದ ಕೆಲತಿಂಗಳ ನಂತರ ಅವರು ಸಾವನ್ನಪ್ಪಿದರು ಎಂದು ಅವರ ಪತ್ನಿ ನನಗೆ ಕರೆ ಮಾಡಿ ತಿಳಿಸಿದರು. ಅವರ ಅಂತ್ಯ ಸಂಸ್ಕಾರಕ್ಕೂ ನಾನು ಹೋಗಿದ್ದೆ. ಇದಾದ ಕೆಲವೇ ದಿನಗಳಲ್ಲಿ ಮೇಜರ್‌ ಪತ್ನಿ ಮತ್ತೆ ನನಗೆ ಕರೆ ಮಾಡಿ, ‘ನೀನು ಕೊಳ್ಳಲು ಬಯಸಿದ್ದ ಕಾರನ್ನು ಬಂದು ತೆಗೆದುಕೊಂಡು ಹೋಗು’ ಎಂದು ತಿಳಿಸಿದರು. ‘ಅದನ್ನು ನನ್ನ ಪತಿ ವಿಲ್‌ನಲ್ಲಿ ನಿನಗೆ ಬರೆದಿದ್ದಾರೆ’ ಎಂದೂ ಹೇಳಿದರು. ಅದೇ ನನ್ನ ಮೊದಲ ವಿಂಟೇಜ್‌ ಕಾರು. ಅಂದಿನಿಂದ ಪ್ರಾರಂಭವಾದ ಹವ್ಯಾಸ ಇಂದಿನವರೆಗೂ ನಿಂತಿಲ್ಲ’’ ಎಂದು ನೆಪಿಸಿಕೊಂಡರು ರವಿಪ್ರಕಾಶ್‌.

‘ಮೇಜರ್‌ ಅವರ ಪತ್ನಿ ನನಗೆ ಕರೆ ಮಾಡಿದಾಗ ಚೆನ್ನೈಗೆ ಹೋಗಲು ನನ್ನ ಬಳಿ ಹಣವಿರಲಿಲ್ಲ. ಸ್ನೇಹಿತರ ಬಳಿ ಸಾಲ ಮಾಡಿ ಅಲ್ಲಿಗೆ ಹೋಗಿದ್ದೆ. ಆ ಅದೃಷ್ಟದ ಕಾರು ಇವತ್ತಿಗೂ ನನ್ನ ಬಳಿಯೇ ಇದೆ. ವೈದ್ಯಕೀಯ ವೃತ್ತಿಯನ್ನು ಬಿಟ್ಟು ಸ್ವಂತ ಉದ್ಯಮ ಪ್ರಾರಂಭಿಸಿದೆ. ಅದರಿಂದ ಬಂದ ಹಣವನ್ನು ಹಾಗೂ ರೇಸ್‌ಗಳಿಂದ ಬರುತ್ತಿದ್ದ ಹಣವನ್ನು ವಿಂಟೇಜ್‌ ಕಾರುಗಳನ್ನು ಕೊಳ್ಳಲು ಬಳಸಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ಅವರು.

‘ಹಳೇ ಕಾರುಗಳ ನಿರ್ವಹಣೆ  ದುಬಾರಿ ಮತ್ತು ಕಷ್ಟ. ಈ ಕಾರುಗಳನ್ನು ಸುಸ್ಥಿತಿಯಲ್ಲಿಡಲು ಖರ್ಚು ಮಾಡುವ ಹಣದಲ್ಲಿ ಹೊಸ ಸೆಡಾನ್‌ ಕಾರನ್ನೇ ಖರೀದಿಸಬಹುದು. ನನ್ನ ಬಳಿ ಇರುವ ಕಾರುಗಳನ್ನು ಸಿನಿಮಾಗಳಿಗೆ ಬಾಡಿಗೆಗೆ ನೀಡುತ್ತೇನೆ. ನಟ ಕಮಲ್‌ ಹಸನ್‌ ಅಭಿನಯದ ‘ಹೇ ರಾಮ್‌’, ಮಲಯಾಳದ ‘ಬೆಂಗಳೂರು ಡೇಸ್‌’ ಚಿತ್ರಗಳಲ್ಲಿ ನನ್ನ ಕಾರುಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ರವಿ. 

ನಗರದ ಸೇಂಟ್‌ ಜಾನ್ಸ್‌ ವೈದ್ಯಕೀಯ ವಿದ್ಯಾಲಯದಲ್ಲಿ ಪದವಿ ಮುಗಿಸಿ ವೃತ್ತಿ ಆರಂಭಿಸಿದ್ದ ರವಿಪ್ರಕಾಶ್‌ ಅವರಿಗೆ ತಮ್ಮ ಹೋಂಡಾ ಟ್ವಿನ್‌ ಬೈಕ್‌ನ ಎಂಜಿನ್‌ ಹಾಗೂ ಗೇರ್‌ ಬಾಕ್ಸ್‌ ಬಿಚ್ಚಿ ಮತ್ತೆ ಅದನ್ನು ಬೈಕ್‌ಗೆ ಜೋಡಿಸುವುದೆಂದರೆ ತುಂಬಾ ಇಷ್ಟ.  ಇದರ ಜೊತೆಗೆ ತಂದೆ ಜತೆ ಸೇರಿಕೊಂಡು ಅವರ ಅಂಬಾಸಿಡರ್‌ ಕಾರನ್ನು ‘ಆಲ್ಟರ್‌’ ಮಾಡುತ್ತಿದ್ದರು. 1990ರ ದಶಕದಲ್ಲಿ ಕೋಲ್ಕತ್ತದ ಬೈರಕ್‌ಪುರ್ ಹಾಗೂ ಇತರೆ ಕಡೆಗಳಲ್ಲಿ ನಡೆದಿದ್ದ ಕಾರ್‌ ರೇಸ್‌ನಲ್ಲಿ ಭಾಗವಹಿಸಿ ಜಯಗಳಿಸಿದರು.

ಕೆಲಕಾಲ ವೈದ್ಯಕೀಯ ವೃತ್ತಿಯಲ್ಲಿ ಮುಂದುವರೆದಿದ್ದ ರವಿಪ್ರಕಾಶ್‌ ಈಗ ‘ರುಶಿ ಸೇಫ್‌ಟೆಕ್‌’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರ ಬಳಿ ‘ಆಸ್ಟಿನ್‌ ಹೆಲಿ’, ‘ಸನ್‌ಬೀಮ್‌‘, ‘ಪೊಜೊ’, ಒಂಬತ್ತು ‘ರೋಲ್ಸ್‌ರಾಯ್‌’ ಮಾಡೆಲ್‌ಗಳು, ಲಿಂಕನ್‌, ಫೋರ್ಡ್‌, ಆಲ್ಫಾ ರೊಮಿಯೋ, ಫಿಯೆಟ್‌, ವಿಲ್ಲಿಸ್‌ ನೈಟ್‌, ಮಿನಿ ಕೂಪರ್‌, ‘ಲ್ಯಾಂಕೆಸ್ಟರ್‌’,  ‘ಆಸ್ಟಿನ್ ಆಫ್‌ ಇಗ್ಲೆಂಡ್‌’, ‘ಪೊಂಟಿಯಾಕ್‌’, ತಮಿಳಿನ ನಟ ಎಂ.ಜಿ.ಆರ್‌ ಅವರು ಬಳಸಿದ್ದ ಕಾರು, ರಾಜ್‌ಕೋಟದ ಮಹಾರಾಜ ಬಳಸಿದ್ದ 1929ರ ನ್ಯೂ ಬರ್ಗ್‌, ಉತ್ತರ ಭಾರತದ ರಾಜಮನೆತನದವರು ಬಳಸಿದ್ದ ಕಾರುಗಳು ಹೀಗೆ 225 ಕಾರುಗಳಿವೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸೂಪರ್‌ ಬೈಕ್‌ ಅಥವಾ ಕಾರುಗಳು ಇವರ ಸಂಗ್ರಹದಲ್ಲಿಲ್ಲ.

1942 ರಿಂದ 1944ರ ವರೆಗಿನ 20 ಜೀಪ್‌ಗಳು, 60 ಮೋಟಾರ್‌ ಸೈಕಲ್‌ಗಳು, 1860ರ ‘ಬೋನ್‌ ಶೇಖರ್‌’ ಸೈಕಲ್, ಮೂರು ಗಾಲಿಯ ಸೈಕಲ್‌ ಸೇರಿದಂತೆ 50 ಸೈಕಲ್‌ಗಳು, ಹಿಂದೆ ರಾಜಮನೆತನದವರು ಹಾಗೂ ಮದುವೆಗಳಲ್ಲಿ ಬಳಸುತ್ತಿದ್ದ 40ಕ್ಕೂ ಹೆಚ್ಚು ಕುದುರೆ ಗಾಡಿ, ಪಲ್ಲಕ್ಕಿ, ರಥಗಳೂ ರವಿ ಪ್ರಕಾಶ್‌ ಅವರ ಸಂಗ್ರಹದಲ್ಲಿವೆ. ಇವುಗಳನ್ನು ನಗರದ ರಾಜರಾಜೇಶ್ವರಿನಗರದಲ್ಲಿರುವ ‘ಕಲಾ ಫಾರ್ಮ್ಸ್‌’ ತೋಟದ ಮನೆಯಲ್ಲಿ ಇಟ್ಟಿದ್ದಾರೆ.   

2000ದಲ್ಲಿ ವಿಂಟೇಜ್‌ ಕಾರುಗಳ ಸಂಗ್ರಹವನ್ನು ಪ್ರಾರಂಭಿಸಿದ ರವಿ ಬಳಿ ಆಗ ಕೇವಲ ಬ್ರಿಟಿಷ್‌ ಹಾಗೂ ಯುರೋಪಿಯನ್‌ ಕಾರುಗಳು ಮಾತ್ರ ಇದ್ದವು. ಸದ್ಯಕ್ಕೆ ಸಿಲ್ವರ್‌ ಘೋಷ್ಟ್‌ ಹಾಗೂ ಡಬ್ಯು.ಒ.ಬೆಂಟ್ಲಿ ಕಾರನ್ನು ಸಂಗ್ರಹಕ್ಕೆ ಸೇರಿಸುವ ಆಸೆ ಅವರಿಗಿದೆ.

***
ವಿಂಟೇಜ್‌ ಕಾರ್‌ ಮ್ಯೂಸಿಯಂ
ರಾಜರಾಜೇಶ್ವರಿನಗರದ ಬಳಿ 16 ಎಕರೆ ಖರೀದಿ ಮಾಡಿದ್ದು, ಅಲ್ಲಿ 3 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 450 ಕಾರುಗಳನ್ನು ಇಡುವ ವಿಂಟೇಜ್‌ ಕಾರುಗಳ ಸಂಗ್ರಹಾಲಯ ನಿರ್ಮಿಸುವ ಯೋಜನೆ ಇದೆ. ಅದಕ್ಕಾಗಿ ಪರವಾನಗಿ ಹಾಗೂ ಅನುಮತಿ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ವರ್ಷ ಈ ಸಂಗ್ರಹಾಲಯ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇನೆ. ಇಲ್ಲಿ ಪ್ರದರ್ಶಿಸಲಾಗುವ 450 ಕಾರುಗಳಲ್ಲಿ ಶೇಕಡ 75ರಷ್ಟು ಕಾರುಗಳು ನನ್ನ ಸ್ವಂತದ್ದಾಗಿರುತ್ತದೆ.

ಜೊತೆಗೆ ಎಲಿಕಾಫ್ಟ್‌ (ಏರ್‌ ಆಂಬ್ಯುಲೆನ್ಸ್‌) ನಿಲುಗಡೆಗೆ ಹೆಲಿಪ್ಯಾಡ್‌ ಸಹ ನಿರ್ಮಿಸುವ ಯೋಜನೆ ಇದೆ. ಈ ಸಂಗ್ರಹಾಲಯದಿಂದ ಬರುವ ಹಣವನ್ನು ಸಂಗ್ರಹಾಲಯದ ನಿರ್ವಹಣೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸಲು ಉದ್ದೇಶಿಲಾಗಿದೆ. ಈ ಕಾರ್ಯದಲ್ಲಿ ನನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನನ್ನೊಂದಿಗೆ ಕೈಜೋಡಿಸಿದ್ದಾರೆ.
– ಡಾ. ರವಿ ಪ್ರಕಾಶ್‌, ವಿಂಟೇಜ್‌ ಕಾರುಗಳ ಸಂಗ್ರಹಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT