ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಸವಾಲನ್ನು ಮೀರಿ ನಿಲ್ಲುತ್ತೇವೆ; ಕೋಹ್ಲಿ ವಿಶ್ವಾಸ

ಕ್ರಿಕೆಟ್‌: ಆರು ದಿನಗಳ ತರಬೇತಿ ಶಿಬಿರ ಅಂತ್ಯ, ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾದ ಭಾರತ ತಂಡ, 9ರಿಂದ ಸರಣಿ ಆರಂಭ
Last Updated 4 ಜುಲೈ 2016, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆತಿಥೇಯರ ಸವಾಲನ್ನು ಮೀರಿ ನಿಲ್ಲುತ್ತೇವೆ’ ಎಂದು ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ  ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ವಿರಾಟ್‌ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅದರ ವಿವರ ಇಲ್ಲಿದೆ.

*ಬೆಂಗಳೂರಿನಲ್ಲಿ ನಡೆದ ತರಬೇತಿ ಶಿಬಿರ ಹೇಗಿತ್ತು?
ಶಿಬಿರ ತುಂಬಾ ಪ್ರಯೋಜನಕಾರಿ ಯಾಗಿತ್ತು. ದಿನವೂ ನಾವೆಲ್ಲಾ ನೆಟ್ಸ್‌ನಲ್ಲಿ ಹೆಚ್ಚು ಅಭ್ಯಾಸ ನಡೆಸುತ್ತಿ ದ್ದೆವು. ಇಲ್ಲಿಗೆ ಬರುವ ಮುನ್ನ ಶಿಬಿರ ತುಂಬಾ ಕಷ್ಟಕರವಾಗಿರಬಹುದು ಎಂದುಕೊಂಡಿದ್ದೆವು. ಮೊದಲ ದಿನವೇ ನಮ್ಮ  ನಿರೀಕ್ಷೆ ಹುಸಿಯಾಯಿತು.

ಕೋಚ್‌ ಅನಿಲ್‌ ಕುಂಬ್ಳೆ ಅವರು ಶಿಬಿರದ ವೇಳೆ ಆಟಗಾರರ ಮೇಲಿನ ಒತ್ತಡ ನಿವಾರಿಸಲು ಸಹಕಾರಿಯಾಗುವ  ವಿಶಿಷ್ಟ ಚಟುವಟಿಕೆಗ ಳನ್ನು ಹಮ್ಮಿಕೊಂಡಿದ್ದರು. ಇದರಿಂದ ನಮ್ಮ ನಡುವೆ ಉತ್ತಮ ಹೊಂದಾಣಿಕೆ ಏರ್ಪಡಲು ಅನುಕೂಲವಾಯಿತು.

*ಈ ಹಿಂದೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ  ತಂಡ ದೊಡ್ಡ ಮೊತ್ತ ಗಳಿಸಲು ವಿಫಲವಾಗಿತ್ತು.   ಬ್ಯಾಟಿಂಗ್‌ನಲ್ಲಿ ತಂಡ ಎಡವಿತ್ತು. ಈ ವಿಭಾಗದಲ್ಲಿ ಏನಾದರೂ ಸುಧಾರಣೆ ಆಗಿದೆಯೇ? 
ಹೌದು ಈ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಬ್ಯಾಟ್ಸ್‌ಮನ್‌ ಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಚೆನ್ನಾಗಿ ಆಡಿರಲಿಲ್ಲ. ಜತೆಗೆ ನಮ್ಮಿಂದ ಉತ್ತಮ ಜತೆಯಾಟಗಳೂ ಮೂಡಿ ಬಂದಿರಲಿಲ್ಲ. ಹಿಂದಿನ ಈ ತಪ್ಪುಗಳಿಂದ  ಪಾಠ ಕಲಿತಿದ್ದೇವೆ. ಈ ಎರಡೂ ವಿಭಾಗಗಳನ್ನು ಗಮನದಲ್ಲಿಟ್ಟು ಕೊಂಡು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ. 

*ವಿಂಡೀಸ್‌ನಲ್ಲಿ ಭಾರತ ತಂಡ 4–0 ರಲ್ಲಿ ಸರಣಿ ಗೆದ್ದರೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತದೆ. ರ್‍ಯಾಂಕಿಂಗ್‌ನಲ್ಲಿ ಮೇಲೇರುವುದು ತಂಡದ ಗುರಿಯೇ?
ಈಗ ಅಗ್ರಸ್ಥಾನ ಹೊಂದಿರುವ ತಂಡ ನಾಳೆ 10ನೇ ಸ್ಥಾನಕ್ಕೆ ಕುಸಿಯಬಹುದು. ಹೀಗಾಗಿ  ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯುವ ಗುರಿ ಇಟ್ಟುಕೊಂಡು ನಾವು ಖಂಡಿತಾ ವೆಸ್ಟ್‌ ಇಂಡೀಸ್‌ಗೆ ಹೋಗುತ್ತಿಲ್ಲ. ಪ್ರತಿ ಪಂದ್ಯದಲ್ಲಿಯೂ ಛಲದಿಂದ ಹೋರಾಡಿ ಜಯ ಗಳಿಸುವುದಷ್ಟೇ ನಮ್ಮ ಉದ್ದೇಶ. 

ಎರಡು ಪಂದ್ಯ ಆಡಿ ನಂತರ ಆರು ತಿಂಗಳು ಯಾವುದೇ ಸರಣಿ ಆಡದಿದ್ದರೆ ಯಾವುದೇ ತಂಡವಾದರೂ  ಕ್ರಮಾಂಕ ಪಟ್ಟಿಯಲ್ಲಿ ಕುಸಿಯುತ್ತದೆ. ಹೀಗಿರುವಾಗ ರ್‍ಯಾಂಕಿಂಗ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಪ್ರಯೋಜನವಿಲ್ಲ.

*ಹಿಂದಿನ ಒಂದು ವರ್ಷದಲ್ಲಿ ಮಹಮ್ಮದ್‌ ಶಮಿ ಅವರು ಟೆಸ್ಟ್‌ ಆಡಿಲ್ಲ. ಹೀಗಿರುವಾಗ ವಿಂಡೀಸ್‌ ಸರಣಿಯಲ್ಲಿ  ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
ಶಮಿ ಪ್ರತಿಭಾನ್ವಿತ ಬೌಲರ್‌. ಇದರಲ್ಲಿ ಸಂದೇಹವೇ ಇಲ್ಲ.  ಉತ್ತಮ ಲೈನ್‌ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್‌ ಮಾಡುವುದರಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ  ಅವರ ಎಸೆತಗಳನ್ನು ಎದುರಿಸುವುದು ಕಷ್ಟ.

ಜತೆಗೆ ರಿವರ್ಸ್‌ ಸ್ವಿಂಗ್‌ ಎಸೆತಗಳ ಮೂಲಕವೂ ಅವರು   ಬ್ಯಾಟ್ಸ್‌ಮನ್‌ ಗಳನ್ನು ಕಂಗೆಡಿಸಬಲ್ಲರು. ಗಾಯದಿಂದ ಚೇತರಿಸಿಕೊಂಡ ಬಳಿಕ ಆಡಿದ  ಕೆಲ ಟೂರ್ನಿಗಳಲ್ಲಿ ಅವರಿಂದ ಉತ್ತಮ ಸಾಮರ್ಥ್ಯ ಮೂಡಿಬಂದಿದೆ.  ವಿಂಡೀಸ್‌ ಪಿಚ್‌ಗಳಲ್ಲಿ  ಶಮಿ ಚೆನ್ನಾಗಿ ಬೌಲಿಂಗ್‌ ಮಾಡಬಲ್ಲರು ಎಂಬ ವಿಶ್ವಾಸ ನನಗಿದೆ.

*ನೀವು ಪ್ರತಿ ಪಂದ್ಯದಲ್ಲಿಯೂ ಆಕ್ರಮಣಕಾರಿ ಮನೋಭಾವದಿಂದ ಆಡುತ್ತೀರಿ.  ಹಿಂದಿನ ಕೆಲ ಸರಣಿಗಳಲ್ಲಿ ನಿಮ್ಮಿಂದ ಮೂಡಿಬಂದಿರುವ ಆಟದಿಂದ ಇದು ತಿಳಿಯುತ್ತದೆ.  ಮುಂದೆಯೂ ಇದು ಮುಂದುವರಿಯುತ್ತಾ. ಅಥವಾ  ಏನಾದರೂ ಬದಲಾವಣೆ ಮಾಡಿಕೊಳ್ಳುತ್ತೀರಾ?
ಟೆಸ್ಟ್‌, ಏಕದಿನ, ಟ್ವೆಂಟಿ–20  ಹೀಗೆ ಯಾವುದೇ ಪಂದ್ಯವಾದರೂ ಗೆಲುವಿನ ಗುರಿ ಇಟ್ಟುಕೊಂಡೇ ನಾನು  ಕಣಕ್ಕಿಳಿ ಯುತ್ತೇನೆ. ತಂಡದ ಉದ್ದೇಶವೂ ಇದೇ ಆಗಿರುತ್ತದೆ.

ಹಿಂದೆ ನಾವು ಹಲವು ಪಂದ್ಯಗಳಲ್ಲಿ ಗೆದ್ದಿದ್ದೇವೆ, ಸೋಲು ಕೂಡಾ ಎದುರಾಗಿದೆ. ಸೋತಿರುವುದು ನಾವು ಮಾಡಿಕೊಂಡ ಎಡವಟ್ಟಿ ನಿಂದಾಗಿಯೇ ಹೊರತು, ಅದಕ್ಕೆ ಬೇರೇನೂ ಕಾರಣ ಇಲ್ಲ. ಪ್ರತಿ ತಪ್ಪೂ ಹೊಸತೊಂದನ್ನು ಕಲಿಯಲು ಪ್ರೇರಣೆ ಎಂಬುದು ನನ್ನ ಭಾವನೆ. ಸೋಲಿನ ಭಯ ಇದ್ದವರಿಗೆ ಗೆಲುವಿಗಾಗಿ ಹೋರಾಡಲು ಆಗುವುದಿಲ್ಲ.   ಕೇವಲ ಒಂದು ಪಂದ್ಯ ಗೆದ್ದು ಸಂತೃಪ್ತರಾಗದೆ, ತಂಡದ ಎಲ್ಲರೂ ಸರಣಿ ಗೆಲುವಿಗಾಗಿ  ಹೋರಾಡಬೇಕು.

*ಕೋಚ್‌ ಆಗಿ ಅನಿಲ್‌ ಕುಂಬ್ಳೆ ಅವರ ಮೊದಲ ತರಬೇತಿ ಶಿಬಿರ ಇದಾಗಿತ್ತು. ಈ ಹಿಂದಿನ ಶಿಬಿರಗಳಿಗಿಂತಲೂ ಇದು ಹೇಗೆ ಭಿನ್ನವಾಗಿತ್ತು?
ಕುಂಬ್ಳೆ ಅವರೊಂದಿಗೆ ನಮ್ಮದು  ಮೊದಲ ಶಿಬಿರ. ಹೀಗಾಗಿ ಹಿಂದಿನ  ಶಿಬಿರಗಳಿಗೂ  ಇದಕ್ಕೂ ತುಲನೆ ಮಾಡಲು  ಹೋಗುವುದಿಲ್ಲ. ಹೋಲಿಕೆ ಗಳನ್ನು ಕಲಿಸುವುದರಲ್ಲಿ ಕುಂಬ್ಳೆ ಅವರು ಇತರರಿಗಿಂತ ತುಂಬಾ ಭಿನ್ನ.

ತಂಡದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌, ಬೌಲರ್‌ ನೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಅವರ ಅಭಿಪ್ರಾಯಗಳನ್ನು ಕೇಳುತ್ತಾರೆ. ಟೆಸ್ಟ್‌ ಗೆಲ್ಲಲು ಯಾವ ಕೌಶಲಗಳು ಬೇಕು, ಆಟಗಾರರಾದ ನಾವು ಯಾವ ಬಗೆಯ ಮನಸ್ಥಿತಿ ಹೊಂದಿರಬೇಕು. ಹೀಗೆ ಹಲವು ವಿಚಾರ ಗಳನ್ನು  ಮನಮುಟ್ಟುವಂತೆ ತಿಳಿಸುತ್ತಾರೆ. ಅವರ ಈ ಗುಣ ನಮಗೆಲ್ಲರಿಗೂ ತುಂಬಾ ಹಿಡಿಸಿದೆ.

*ಭಾರತ ತಂಡಕ್ಕೆ ವಿದೇಶಿ ಕೋಚ್‌ಗಿಂತಲೂ ಸ್ವದೇಶಿ ಕೋಚ್‌ ಉತ್ತಮ ಎಂಬ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಈ ವಿಷಯದಲ್ಲಿ ನಿಮ್ಮ ನಿಲುವೇನು?
ನನ್ನ ಪ್ರಕಾರ ಕೋಚ್‌ ಯಾರು, ಯಾವ ದೇಶದವರು ಎಂಬುದು ಮುಖ್ಯವಲ್ಲ. ಅವರು ಆಟಗಾರರ ಜತೆ ಹೇಗೆ ನಡೆದುಕೊಳ್ಳುತ್ತಾರೆ. ಆಟಗಾರ ರನ್ನು ಹೇಗೆ ಹುರಿದುಂಬಿಸುತ್ತಾರೆ ಎಂಬುದು ಮುಖ್ಯ. ಕುಂಬ್ಳೆ ಅವರು ಈ ಹಿಂದೆ ಭಾರತ ಟೆಸ್ಟ್‌ ತಂಡದ ನಾಯಕರಾಗಿದ್ದವರು. ಅವರು ಆಟಗಾರರ ಜತೆ ಚೆನ್ನಾಗಿ ಬೆರೆಯುತ್ತಾರೆ. ಅದು ನಮಗೆ ಮುಖ್ಯ.

* ಕೆ.ಎಲ್‌.ರಾಹುಲ್‌ ಮತ್ತು ವೃದ್ಧಿ ಮಾನ್‌ ಸಹಾ ಇಬ್ಬರೂ ಬ್ಯಾಟಿಂಗ್‌ ಜತೆ  ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ನಿಭಾಯಿಸಬಲ್ಲರು.  ಕೀಪಿಂಗ್‌ನಲ್ಲಿ ಇವರಿಬ್ಬರ ಪೈಕಿ ನಿಮ್ಮ ಆಯ್ಕೆ ಯಾರು?
ವೃದ್ಧಿಮಾನ್‌ ಸಹ ಪರಿಣತ ವಿಕೆಟ್‌ ಕೀಪರ್‌. ಅವರೇ ನಮ್ಮ ಮೊದಲ ಆಯ್ಕೆ.  ದೋನಿ ನಿವೃತ್ತಿಯ ಬಳಿಕ ಸಹಾ  ಅವರು ಹಲವು ಸರಣಿಗಳಲ್ಲಿ  ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಿದ್ದಾರೆ.

ಕೆ.ಎಲ್‌. ರಾಹುಲ್‌ ಅವರು ಐಪಿಎಲ್‌ ಸೇರಿದಂತೆ  ಕೆಲ ಸರಣಿಗಳಲ್ಲಿ ಉತ್ತಮವಾಗಿ ವಿಕೆಟ್‌ ಕೀಪಿಂಗ್‌ ಮಾಡಿದ್ದಾರೆ. ಒಂದು ವೇಳೆ ಸಹಾ ಗಾಯಗೊಂಡರೆ  ಮಾತ್ರ ರಾಹುಲ್‌ಗೆ ಕೀಪಿಂಗ್‌ ಅವಕಾಶ ಸಿಗಬಹುದು.

‘ಕೊಹ್ಲಿ ಆಕ್ರಮಣಕಾರಿ ಗುಣ ಇಷ್ಟ’
‘ವಿಂಡೀಸ್ ನೆಲದಲ್ಲಿ ಸರಣಿ ಗೆಲ್ಲುವುದೆಂದರೆ ಅದು ಬಹುದೊಡ್ಡ ಸವಾಲೇ ಸರಿ. ಈಗಿರುವ ವಿಂಡೀಸ್‌ ತಂಡದಲ್ಲಿ ಯುವ ಮತ್ತು ಅನುಭವಿಆಟಗಾರರಿದ್ದಾರೆ.  ಸರಣಿಗೂ ಮುನ್ನ ನಾವು ಸೇಂಟ್‌ ಕೀಟ್ಸ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತೇವೆ.

ಈ ಪಂದ್ಯಗಳಲ್ಲಿ  ಎಲ್ಲರಿಗೂ ಅವಕಾಶ ನೀಡಲಿದ್ದು  ಆಟಗಾರ ರಿಂದ ಮೂಡಿಬರುವ ಸಾಮರ್ಥ್ಯದ ಆಧಾರದಲ್ಲಿ ಮೊದಲ ಟೆಸ್ಟ್‌ಗೆ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುತ್ತೇವೆ’ ಎಂದು ಕೋಚ್‌ ಅನಿಲ್‌ ಕುಂಬ್ಳೆ  ಹೇಳಿದರು.

‘ತಂಡದಲ್ಲಿರುವ ಕೆಲವೇ ಆಟಗಾರರು ವಿಂಡೀಸ್‌ ನೆಲದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇನ್ನೂ ಕೆಲವರು ಹೆಚ್ಚು  ಟೆಸ್ಟ್‌  ಪಂದ್ಯಗಳನ್ನೇ ಆಡಿಲ್ಲ. ಈ ಸರಣಿಯಲ್ಲಿ ಸೂಕ್ತ ರಣತಂತ್ರ ಹೆಣೆದು ಪ್ರತಿ ಪಂದ್ಯದಲ್ಲೂ ಗೆಲುವಿಗಾಗಿ ಹೋರಾಡುವುದು ನಮ್ಮ ಗುರಿ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಬ್ಯಾಟ್ಸ್‌ ಮನ್‌ಗಳ ಮನಸ್ಥಿತಿ ಸಾಕಷ್ಟು ಬದ ಲಾಗಿದೆ. ಪ್ರತಿಯೊಬ್ಬರೂ ಗೆಲುವಿಗಾಗಿ ಪ್ರಯತ್ನಿಸುತ್ತಾರೆ. ಹೀಗಾಗಿ   ಟೆಸ್ಟ್‌ ಪಂದ್ಯ ಗಳಲ್ಲೂ ಸ್ಪಷ್ಟ ಫಲಿತಾಂಶ ಹೊರ ಹೊಮ್ಮುತ್ತಿದೆ. ಪಂದ್ಯಗಳು ಡ್ರಾ ಆಗುವುದು ಕಡಿಮೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವಿರಾಟ್‌ ಅವರ ಆಕ್ರಮಣಕಾರಿ ಮನೋಭಾವವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನಾನು ಕೂಡಾ ಆಕ್ರಮಣಕಾರಿಯೇ. ಆದರೆ ನಾವು ಹಾಕಿಕೊಂಡಿರುವ ಪರಿದಿಯನ್ನು ಯಾರೂ ಮೀರಬಾರದು. ತಂಡದ ಪ್ರತಿಯೊಬ್ಬ ಆಟಗಾರರಲ್ಲೂ ಒಂದೊಂದು ವಿಶೇಷ ಗುಣ ಇರುತ್ತದೆ. ಅದನ್ನು ಗೌರವಿಸಬೇಕಿ ರುವುದು  ನನ್ನ ಕರ್ತವ್ಯ’ ಎಂದರು.

ಒಬ್ಬ ಕೋಚ್‌ ಆಗಿ ತಂಡ ಪ್ರತಿ ಪಂದ್ಯದಲ್ಲೂ ಗೆಲ್ಲಬೇಕು ಎಂದು ನಾನು ಬಯಸುತ್ತೇನೆ. ಆಟಗಾರರು ಎಂತಹುದೇ ಸಂದರ್ಭದಲ್ಲೂ ಎದೆಗುಂದದೆ ಗೆಲುವಿಗಾಗಿ ಹೋರಾಡಬೇಕು. ಆ  ಗುಣ ಅವರಲ್ಲಿ ಬೆಳೆಸಬೇಕು. ಮುಂದಿನ ಒಂದು ವರ್ಷ ನಾವು 17 ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ಪ್ರತಿ ಪಂದ್ಯದಲ್ಲಿಯೂ ಜಯ ಗಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ’ ಎಂದೂ ಅನಿಲ್‌ ನುಡಿದರು.

‘ಆರ್‌. ಅಶ್ವಿನ್‌  ಅವರಿಗೆ ಆಗಿರುವ ಗಾಯ ಗಂಭೀರವಾದು ದೇನಲ್ಲ. ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿ ದ್ದಾರೆ’ ಎಂದೂ ಅವರು ತಿಳಿಸಿದರು.

ಮುಖ್ಯಾಂಶಗಳು
* ವಿಂಡೀಸ್ ನೆಲದಲ್ಲಿ ಭಾರತ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ
* ಆಲೂರು ಕ್ರೀಡಾಂಗಣ ದಲ್ಲಿಯೂ ಅಭ್ಯಾಸ ಮಾಡಿದ್ದ ಆಟಗಾರರು
* ಅನಿಲ್‌ ಕುಂಬ್ಳೆ ಹೋದ ವಾರ ಭಾರತ ತಂಡದ ಕೋಚ್‌ ಆಯ್ಕೆಯಾಗಿದ್ದರು.

*
ಒಬ್ಬ ಕೋಚ್‌ ಆಗಿ ತಂಡ ಪ್ರತಿ ಪಂದ್ಯದಲ್ಲೂ ಗೆಲ್ಲಬೇಕು ಎಂದು ನಾನು ಬಯಸುತ್ತೇನೆ. ಆಟಗಾರರು ಎಂತಹುದೇ ಸಂದರ್ಭದಲ್ಲೂ ಎದೆಗುಂದದೆ ಗೆಲುವಿಗಾಗಿ ಹೋರಾಡಬೇಕು.
–ಅನಿಲ್‌ ಕುಂಬ್ಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT