ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್‌ ಡ್ರಾ ಪ್ರಕಟ: ಸೆಮಿಯಲ್ಲಿ ನೊವಾಕ್‌–ಫೆಡರರ್‌ ಪೈಪೋಟಿ ?

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ): ಈ ಬಾರಿಯ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಡ್ರಾ ಪ್ರಕಟವಾಗಿದ್ದು ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಮತ್ತು ಏಳು ಬಾರಿ ಟ್ರೋಫಿ ಎತ್ತಿಹಿಡಿದಿರುವ ರೋಜರ್‌ ಫೆಡರರ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಎದುರಾಗುವ ನಿರೀಕ್ಷೆ ಇದೆ.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ನಡೆದಿದ್ದ ಹಿಂದಿನ ಎರಡು ಟೂರ್ನಿಗಳ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಫೆಡರರ್ ಮುಖಾಮುಖಿಯಾಗಿದ್ದರು. ಈ ಎರಡೂ ಹೋರಾಟಗಳಲ್ಲಿ ಜೊಕೊವಿಚ್‌ ಗೆಲುವು ಕಂಡಿದ್ದರು. ಜೊಕೊವಿಚ್‌ ಅವರು ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಫೆಡರರ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಈ ಬಾರಿಯ ಟೂರ್ನಿಯಲ್ಲಿ ಮೊದಲ ಮತ್ತು ಮೂರನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ನೊವಾಕ್‌ ಅವರು ಟೂರ್ನಿಗೆ ವೈಲ್ಡ್‌ ಕಾರ್ಡ್‌ ಅರ್ಹತೆ ಗಳಿಸಿರುವ ಆಟಗಾರ ಬ್ರಿಟನ್‌ನ ಜೇಮ್ಸ್‌ ವಾರ್ಡ್‌  ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.  ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯಾದ ಆಟಗಾರ, ಕೆನಡಾದ ಮಿಲೊಸ್‌ ರಾವೊನಿಕ್‌ ವಿರುದ್ಧ ಸೆಣಸುವ ಸಾಧ್ಯತೆ ಇದೆ. ಫೆಡರರ್‌ ಅವರು ಮೊದಲ ಸುತ್ತಿನಲ್ಲಿ ಅರ್ಜೆಂಟೀನಾದ ಆಟಗಾರ ವಿಶ್ವ ಕ್ರಮಾಂಕಪಟ್ಟಿಯಲ್ಲಿ 51ನೇ ಸ್ಥಾನ ಹೊಂದಿರುವ ಗುಯೆಡೊ ಪೆಲ್ಲಾ ವಿರುದ್ಧ ಆಡಲಿದ್ದಾರೆ.

ಎಂಟರ ಘಟ್ಟದಲ್ಲಿ 17 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ 34 ವರ್ಷದ ಫೆಡರರ್‌ ಅವರು ಜಪಾನ್‌ನ ಕಿ ನಿಶಿಕೋರಿ ಸವಾಲು ಎದುರಿಸುವ ನಿರೀಕ್ಷೆ ಇದೆ. ಮರ್ರೆ– ವಾವ್ರಿಂಕ ಮುಖಾಮುಖಿ: ಬ್ರಿಟನ್‌ನ ಆಟಗಾರ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿ ರುವ ಆ್ಯಂಡಿ ಮರ್ರೆ ಮತ್ತು ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ ಅವರು ಒಂದೊಮ್ಮೆ ನಾಲ್ಕರ ಘಟ್ಟ ಪ್ರವೇಶಿಸಿದರೆ, ಪರಸ್ಪರ ಎದುರಾಗಲಿದ್ದಾರೆ.

ಮರ್ರೆ ಅವರು ಮೊದಲ ಸುತ್ತಿನಲ್ಲಿ ಲಿಯಾಮ್‌ ಬ್ರಾಡಿ ವಿರುದ್ಧ ಆಡಲಿದ್ದರೆ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ  ನಿಕ್‌ ಕಿರ್ಗಿಯೊಸ್‌ ಸವಾಲು ಎದುರಿಸಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಅವರಿಗೆ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕ್ವೆಟ್‌ ಎದುರಾಗುವ ಸಾಧ್ಯತೆ ಇದೆ. ಸೆರೆನಾ– ಅಗ್ನಿಸ್ಕಾ ಪೈಪೋಟಿ: ಮಹಿಳೆ ಯರ ಸಿಂಗಲ್ಸ್‌ ವಿಭಾಗದಲ್ಲಿ  ಅಮೆರಿಕದ ಸೆರೆನಾ ವಿಲಿಯಮ್ಸ್‌ ಮತ್ತು ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರು ಸೆಮಿಫೈನಲ್‌ನಲ್ಲಿ ಮುಖಾಮುಖಿ ಯಾಗುವ ಸಾಧ್ಯತೆ ಇದೆ.

22ನೇ ಗ್ರ್ಯಾಂಡ್‌ಸ್ಲಾಮ್‌ ಟ್ರೋಫಿ ಗೆದ್ದು  ಸ್ಟೆಫಿಗ್ರಾಫ್‌ ಅವರ ಹೆಸರಿನಲ್ಲಿರುವ  ದಾಖಲೆಯನ್ನು ಸರಿಗಟ್ಟುವ ವಿಶ್ವಾಸ ದಲ್ಲಿರುವ ಸೆರೆನಾ, ಆರಂಭಿಕ ಸುತ್ತಿನಲ್ಲಿ ಅರ್ಹತಾ ಟೂರ್ನಿಯಲ್ಲಿ ಆಡಿ ಗೆದ್ದ ಆಟಗಾರ್ತಿಯೊಂದಿಗೆ ಸೆಣಸಲಿದ್ದಾರೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೆರೆನಾ ಅವರಿಗೆ ಎರಡನೇ ಸುತ್ತಿನಲ್ಲಿ ತಮ್ಮದೆ ರಾಷ್ಟ್ರದ ಕ್ರಿಸ್ಟಿನಾ ಮೆಕ್‌ಹಾಲೆ ಅಥವಾ ಸ್ಲೊವೇಕಿಯಾದ ಡೇನಿಯಲ್‌ ಹಂಟುಚೋವಾ ಅವರ ಸವಾಲು ಎದುರಾಗಬಹುದಾಗಿದೆ.

2012ರ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ರಾಡ್ವಾಂಸ್ಕಾ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲಿಂದಾ ಬೆನ್‌ಕಿಕ್‌ ಅವರನ್ನು ಎದುರಿಸುವರು.
ಫ್ರೆಂಚ್‌ ಓಪನ್‌ ಚಾಂಪಿಯನ್‌ ಗಾರ್ಬೈನ್‌ ಮುಗುರುಜಾ ಅವರು ಒಂದೊಮ್ಮೆ  ನಾಲ್ಕರ ಘಟ ಪ್ರವೇಶಿಸಿದ್ದೇ ಆದರೆ ಈ   ಹೋರಾಟದಲ್ಲಿ  ಏಂಜಲಿಕ್‌ ಕೆರ್ಬರ್‌ ಅವರ ಸವಾಲಿಗೆ ಎದೆಯೊಡ್ಡ ಬೇಕಾಗಬಹುದು.

ಮುಗುರುಜಾ ಅವರು ಇಟಲಿಯ ಕ್ಯಾಮಿಲ ಜಿಯೊರ್ಜಿ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಎರಡು ಬಾರಿಯ ಚಾಂಪಿಯನ್‌ ಪೆಟ್ರಾ ಕ್ವಿಟೋವಾ ಅವರು ಮೊದಲ ಸುತ್ತಿನಲ್ಲಿ ರುಮೇನಿಯಾದ ಸೊರಾನ ಕರ್ಸ್ಟಿ ವಿರುದ್ಧ ಆಡುವರು.
ಬ್ರಿಟನ್‌ನ ಅಗ್ರ ರ್‍ಯಾಂಕ್‌ನ ಆಟಗಾರ್ತಿ ಜೊಹಾನ್ನ ಕೊಂಥಾ ಅವರಿಗೆ ಆರಂಭಿಕ ಸುತ್ತಿನಲ್ಲಿ ಮೊನಿಕಾ ಪುಯಿಗ್‌ ಸವಾಲು ಎದುರಾಗಲಿದೆ.
36 ವರ್ಷದ ವೀನಸ್‌ ವಿಲಿಯಮ್ಸ್‌ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಮುಗುರುಜಾ ವಿರುದ್ಧ ಸೆಣಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT