ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಪಿ ಸಂಸ್ಕೃತಿಗೆ ತೆರೆ ಬೀಳಲಿ

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಗಣ್ಯರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ತನ್ನ ವಿಮಾನಗಳ ಹಾರಾಟವನ್ನೇ  ತಡ ಮಾಡುವ ಚಾಳಿಯನ್ನು ಸರ್ಕಾರಿ ಒಡೆತನದ ಏರ್ ಇಂಡಿಯಾ ಇನ್ನೂ ಬಿಟ್ಟಿಲ್ಲ. ಜನಸಾಮಾನ್ಯರಿಗಿಂತ ತಾವು ಮೇಲು ಎಂಬ ಅಹಂ ಅಧಿಕಾರಸ್ಥರ ಮನಸ್ಸಿನಿಂದ ಹೋದಂತಿಲ್ಲ. ಈಚೆಗೆ ನಡೆದ ಎರಡು ವಿದ್ಯಮಾನಗಳು ಇದಕ್ಕೆ ಇಂಬುಕೊಡುವಂತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಟೀಕೆ ಬಂದ ನಂತರ ಪ್ರಧಾನಿ ಕಚೇರಿ ಎಚ್ಚೆತ್ತುಕೊಂಡಿದೆ. ನಾಗರಿಕ ವಿಮಾನಯಾನ ಸಚಿವಾಲಯದಿಂದ ವರದಿ ಕೇಳಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಕ್ಷಮೆ ಯಾಚಿಸಿದ್ದಾರೆ. ಈ ಪೈಕಿ ಒಂದು  ಪ್ರಕರಣದಲ್ಲಿ, ವಿವಾದಕ್ಕೆ ಗ್ರಾಸವಾಗಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ವಿಷಾದ ವ್ಯಕ್ತಪಡಿಸಿದ್ದಾರೆ.  ತಮಗೆ   ಹಾಗೂ ಜಮ್ಮು ಮತ್ತು ಕಾಶ್ಮೀರ  ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರಿಗೆ ವಿಮಾನದಲ್ಲಿ ಸ್ಥಳಾವಕಾಶ ಕಲ್ಪಿಸಲು ಮೂವರು ಪ್ರಯಾಣಿಕರನ್ನು ಇಳಿಸಲಾಯಿತು ಎಂಬ ಸಂಗತಿ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ನಡೆದ ಇಂಥದೇ ಇನ್ನೊಂದು ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಹೆಸರು ಕೇಳಿ ಬಂದಿದೆ. ಅಧಿಕಾರಿಗಳ ತಂಡದೊಂದಿಗೆ ಅಮೆರಿಕಕ್ಕೆ ಅವರು ತೆರಳಬೇಕಿದ್ದ ಪ್ರಯಾಣಿಕ ವಿಮಾನವನ್ನು ಒಂದು ತಾಸು ತಡ ಮಾಡಲಾಗಿತ್ತು. ‘ಅದಕ್ಕೆ ನಾನು ಕಾರಣನಲ್ಲ’ ಎಂದು ಫಡಣವೀಸ್ ಅಮೆರಿಕದಿಂದಲೇ ಸಮಜಾಯಿಷಿ ಕೊಟ್ಟಿದ್ದಾರೆ.  ಇದೇನೇ ಇದ್ದರೂ ಅವರಿದ್ದ ವಿಮಾನ ವಿಳಂಬವಾಗಿ ಹೊರಟಿದ್ದಂತೂ ನಿಜ. ಅದಕ್ಕೆ ಅವರು ಎಷ್ಟರ ಮಟ್ಟಿಗೆ ಕಾರಣ ಅಥವಾ ಗಣ್ಯರನ್ನು, ಮಂತ್ರಿ ಮಹೋದಯರನ್ನು ಓಲೈಸುವ ಅಧಿಕಾರಿಗಳ ಭಟ್ಟಂಗಿತನ ಕಾರಣವೇ ಎಂಬುದು ಬಯಲಾಗಬೇಕು.

ಸಚಿವ ರಿಜಿಜು ಮತ್ತು ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರಿಗಾಗಿ ಲೇಹ್‌ನಲ್ಲಿ ವಿಮಾನ ಹೊರಡುವುದನ್ನು ತಡ ಮಾಡಲಾಯಿತು, ಮೂವರು ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಎಂಬ ದೂರು ನಿಜವೇ ಆಗಿದ್ದರೆ ಅದು ಗಂಭೀರ ಸಂಗತಿ. ಆದರೆ, ‘ಮಾಧ್ಯಮಗಳು ಸತ್ಯ ತಿರುಚಿವೆ, ಈ ರಾದ್ಧಾಂತಕ್ಕೆ ಏರ್ ಇಂಡಿಯಾ ಪೈಲಟ್ ಗಳೇ ಕಾರಣ’ ಎಂದು ಸಿಂಗ್ ಪ್ರತ್ಯಾರೋಪ ಮಾಡಿದ್ದಾರೆ. ‘ವಿಮಾನದ ವೇಳಾಪಟ್ಟಿಯಲ್ಲಿ ನಮೂದಿಸಿದ ಸಮಯಕ್ಕಿಂತ ಮೊದಲೇ ನಾನು ಅಲ್ಲಿದ್ದೆ’ ಎನ್ನುವುದು ಅವರ ವಿವರಣೆ. ಸಚಿವರಿಗೋಸ್ಕರ ಯಾವುದೇ ಪ್ರಯಾಣಿಕರನ್ನು ಇಳಿಸಿರಲಿಲ್ಲ, ವಾಸ್ತವವಾಗಿ ಮೂವರು ಪ್ರಯಾಣಿಕರು ನಿಗದಿತ ಸಮಯಕ್ಕಿಂತ ತಡವಾಗಿ ನಿಲ್ದಾಣಕ್ಕೆ ಬಂದಿದ್ದರು ಎಂದು ಲೇಹ್ ನಿಲ್ದಾಣದ ನಿರ್ವಹಣೆ ಹೊತ್ತ ವಾಯುಪಡೆ ತಿಳಿಸಿದೆ.
ಇವೆಲ್ಲದರ ಬಗ್ಗೆ ವಸ್ತುನಿಷ್ಠ ತನಿಖೆ ನಡೆದು ಸತ್ಯ ಹೊರ ಬರಬೇಕು.

ತಮ್ಮನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಏರಿಸಿದ ಪ್ರಜೆಗಳಿಗಿಂತ ತಾವು ದೊಡ್ಡವರು, ಸಕಲ ಸೌಲಭ್ಯಗಳಿಗೂ ಅರ್ಹರು ಎಂಬ ಧೋರಣೆ ನಮ್ಮ ಬಹುತೇಕ ಜನಪ್ರತಿನಿಧಿಗಳಲ್ಲಿ ಮನೆ ಮಾಡಿದೆ. ಇವರು   ಏನೇ ಮಾಡಿದರೂ ಜನ ಸಹಿಸಿಕೊಳ್ಳುವ ಕಾಲ ಈಗಿಲ್ಲ. ಮಾಧ್ಯಮಗಳು ಸಹ ಬಹಳಷ್ಟು ಕ್ರಿಯಾಶೀಲವಾಗಿವೆ. ಇದನ್ನೆಲ್ಲ ಅಧಿಕಾರಸ್ಥರು ಅರ್ಥ ಮಾಡಿಕೊಂಡರೆ ಸಮಸ್ಯೆ ಇರುವುದಿಲ್ಲ, ಸಾರ್ವಜನಿಕವಾಗಿ ಮುಜುಗರ ಎದುರಿಸುವ ಪ್ರಸಂಗವೂ ಬರುವುದಿಲ್ಲ.  ಎಲ್ಲಕ್ಕಿಂತ ಮುಖ್ಯವಾಗಿ ಈ ತರಹದ ವಿವಾದಗಳು ಪ್ರಜಾಪ್ರಭುತ್ವದ ಅಣಕ. ಜನಸಾಮಾನ್ಯರಿಗೆ  ಅನನುಕೂಲ ಉಂಟುಮಾಡುವ  ವಿಐಪಿ ಸಂಸ್ಕೃತಿಗೆ ತಡೆ ಹಾಕಬೇಕೆಂದು ನ್ಯಾಯಾಂಗವೂ ನಿರ್ದೇಶನ ನೀಡಿದೆ. ವಾಹನಗಳಲ್ಲಿ ಕೆಂಪುದೀಪದ  ಬಳಕೆಯನ್ನು ಸೀಮಿತಗೊಳಿಸಿ  ವಿ ಐ ಪಿ ಸಂಸ್ಕೃತಿ ಯನ್ನು ನಿಯಂತ್ರಿಸಬೇಕು ಎಂದು ಸುಪ್ರೀಂ ಕೋರ್ಟ್ ಸಹ 2013ರಲ್ಲಿ ನಿರ್ದೇಶನ ನೀಡಿದ್ದುದನ್ನು ಸ್ಮರಿಸಬಹುದು. ಖಾಸಗಿ ವಿಮಾನಯಾನ ಸಂಸ್ಥೆಗಳ ಸ್ಪರ್ಧೆ ಎದುರಿಸಲು ಹೆಣಗುತ್ತಿರುವ ಏರ್‌ ಇಂಡಿಯಾ ವೃತ್ತಿಪರತೆ ಪ್ರದರ್ಶಿಸಬೇಕು. ಹಣ ಕೊಟ್ಟು ಪ್ರಯಾಣಿಸುವವರ ವಿಶ್ವಾಸ ಉಳಿಸಿಕೊಳ್ಳುವುದು, ಸಮಯಪಾಲನೆ, ಸೇವೆ ನೀಡುವ ತನ್ನ ಕರ್ತವ್ಯ ಪಾಲಿಸಬೇಕು. ಅಧಿಕಾರಸ್ಥರ ಮರ್ಜಿ ಕಾಯುವುದು ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT