ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕರಣಕ್ಕೆ ವೈದ್ಯರ ಸವಾಲು

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದ ಮುಷ್ಕರ ನಿರತ ಸರ್ಕಾರಿ ವೈದ್ಯರ ಒಂದು ಪ್ರಮುಖ ಬೇಡಿಕೆ ಗ್ರಾಮೀಣ ವೈದ್ಯರ ವೇತನವನ್ನು ಜಿಲ್ಲಾ ಪಂಚಾಯಿತಿ ಮೂಲಕ ನೀಡುವುದರ ಬದಲಾಗಿ ಸರ್ಕಾರವೇ ನೇರವಾಗಿ ನೀಡಬೇಕು ಎನ್ನುವುದು. ಈಗ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳ ವೈದ್ಯರ ಮತ್ತು ಸಿಬ್ಬಂದಿ ವೇತನ ಹಾಗೂ ಅನ್ಯ ಆರ್ಥಿಕ ಸೌಲಭ್ಯಗಳನ್ನು ರಾಜ್ಯ ಸರ್ಕಾರ ನೇರವಾಗಿ ಪಾವತಿಸುತ್ತಿದ್ದರೆ, ಗ್ರಾಮೀಣ ಪ್ರದೇಶದ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ಮತ್ತು ಸಿಬ್ಬಂದಿಗಳ ವೇತನವನ್ನು ಸರ್ಕಾರವು ಜಿಲ್ಲಾ ಪಂಚಾಯಿತಿ ಮೂಲಕ ನೀಡುತ್ತಿದೆ.

ಇದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ ಎನ್ನುವುದು ಮುಷ್ಕರ ನಿರತರು ತಮ್ಮ ಆಗ್ರಹಕ್ಕೆ ನೀಡುತ್ತಿರುವ ಕಾರಣ. ಅದಷ್ಟೇ ಕಾರಣವಾಗಿದ್ದರೆ ಅವರು ವೇತನ ಪಾವತಿ ವಿಳಂಬದ ವಿರುದ್ಧ ಧ್ವನಿ ಎತ್ತ­ಬೇಕಾಗಿತ್ತು ಮತ್ತು ಆ ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸ­ಬೇಕಾಗಿತ್ತು. ಹಾಗೆ ಮಾಡದೆ ನೇರ ವೇತನ ಪಾವತಿಗೆ ಒತ್ತಾಯಿಸುತ್ತಿರು­ವುದರ ಹಿಂದೆ  ಸ್ಥಳೀಯ ಸರ್ಕಾರ­ಗಳ ಅಧೀನದಲ್ಲಿ ಕೆಲಸಮಾಡಲು ನೌಕರರಲ್ಲಿ ಪರಂಪರಾಗತ­ವಾಗಿರುವ ವಿಕೇಂದ್ರೀಕರಣ ನಿರಾಕರಣ ಮನೋ­ಧರ್ಮ ಕೆಲಸ ಮಾಡುತ್ತಿದೆ ಎಂದು ಭಾವಿಸಲು  ಸಾಕಷ್ಟು ಕಾರಣಗಳಿವೆ.

ಸಂವಿಧಾನಾತ್ಮಕ ಬೆಂಬಲ ಗಳಿಸಿದ ಬಳಿಕ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಇದೀಗ ಎರಡು ದಶಕಗಳನ್ನು ಪೂರೈಸುತ್ತಿದೆ. ಅದರ ದ್ವಿತೀಯ ತಲೆಮಾರಿನ ಸುಧಾರಣೆಗೆ ಕಾಲ ಪಕ್ವವಾಗಿದೆ ಎಂದು ಸಂಬಂಧಿತ ವಲಯಗಳಲ್ಲಿ ಭಾವಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಹೆಚ್ಚು ಅರ್ಥಪೂರ್ಣವಾದ ಮತ್ತು ಪರಿಣಾಮಕಾರಿಯಾದ ಸುಧಾರಿತ ಆವೃತ್ತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ದೃಢವೆನಿಸುವ ಪ್ರಯತ್ನ ಇಲ್ಲೀಗ ನಡೆಯುತ್ತಿದೆ. ಈ ಹಂತದಲ್ಲಿ ವೈದ್ಯ ಸಂಘಟನೆ ಮುಂದಿರಿಸಿದ ಬೇಡಿಕೆಯನ್ನು ತೀವ್ರ ವಿಮರ್ಶೆಗೆ ಗುರಿಪಡಿಸಬೇಕಾಗಿದೆ.

‘ಯಾವ ಕೆಲಸ ಎಲ್ಲಿ ನಡೆಯುತ್ತದೋ ಅದರ ನಿರ್ವಹಣೆ ಅಲ್ಲಿನ ವ್ಯವಸ್ಥೆಯ ಅಧೀನ ಇರಬೇಕು’ ಎನ್ನುವುದು ವಿಕೇಂದ್ರೀಕರಣದ ಸರಳ ಸೂತ್ರ. ಸಂವಿಧಾನವು ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯ ಚೌಕಟ್ಟ­ನ್ನು ನಿರೂಪಿಸಿ, ಅದನ್ನು ಅನುಸರಿಸಿ ಮೂರೂ ಸ್ತರಗಳು ಸ್ಥಳೀಯ ಸ್ವಯಮಾಡಳಿತ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅಧಿಕಾರ ಮತ್ತು ಹೊಣೆ ನೀಡುವುದನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ರಾಜ್ಯ ಸರ್ಕಾರಗಳು ತಮ್ಮ ಪ್ರಾದೇಶಿಕ ಅಗತ್ಯಗಳಿಗನುಗುಣವಾಗಿ ರಚಿಸಿಕೊಂಡ  ಶಾಸನಗಳ ಮೂಲಕ   ಈಗ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವದಲ್ಲಿದೆ.

ಕರ್ನಾಟಕದ ಕಾಯಿದೆ ಸಂವಿಧಾನ ನಿಗದಿಗೊಳಿಸಿದ ಎಲ್ಲ ಅಧಿಕಾರಗಳನ್ನು ಮೇಲೆ ಹೇಳಿದ ವಿಕೇಂದ್ರೀಕರಣ ಸೂತ್ರಕ್ಕನುಸಾರವಾಗಿ ಮೂರು ಸ್ತರಗಳ ನಡುವೆ ಹಂಚಿಕೆಮಾಡಿದೆ. ಹೀಗೆ ಮಾಡಿರುವ ಹಂಚಿಕೆಗೆ ಅರ್ಥ ಬರುವುದು ಆಯಾ ಹೊಣೆಗಳ ಪೂರ್ಣ ಅಧಿಕಾರ, ಅವುಗಳಿಗೆ ಅಗತ್ಯವಿರುವ ಹಣ ಮತ್ತು ಅವುಗಳನ್ನು ನಿರ್ವಹಿಸಬೇಕಾದ ಸಿಬ್ಬಂದಿ ಆಯಾ ಸ್ತರಗಳ ಅಧೀನಕ್ಕೆ ಬಂದಾಗ ಮಾತ್ರ. ಅಧೀನಕ್ಕೆ ಬರುವುದೆಂದರೆ ಅಧೀನದಲ್ಲಿ ಕೆಲಸ­ಮಾಡುವುದು ಮಾತ್ರವಲ್ಲ.

ಬದಲಾಗಿ ವೇತನ ಪಾವತಿ ಒಳಗೊಂಡ ನಿಯಂತ್ರಣವೂ ಸೇರಬೇಕಾಗುತ್ತದೆ. ಕರ್ನಾಟಕದಲ್ಲಿ ಇದು ಅರೆಬರೆಯಾಗಿ ನಡೆದಿದೆ ಎನ್ನುವುದು ಈ ವ್ಯವಸ್ಥೆಯ ವಾಸ್ತವ ಅಂಶ. ಮುಷ್ಕರ ನಿರತ ವೈದ್ಯರ ವೇತನ ಪಾವತಿ ಕುರಿತಾದ ಒತ್ತಾಯಕ್ಕೆ ಮನ್ನಣೆ ಸಿಕ್ಕರೆ ಈ ಅರೆಬರೆಯೂ ಇಲ್ಲವಾಗುತ್ತದೆ ಎಂಬದು ವಿಕೇಂದ್ರೀಕರಣ­ಪರರ ಆತಂಕ. 

ಪಂಚಾಯತ್ ರಾಜ್ ವ್ಯವಸ್ಥೆಯ ನಿಯಂತ್ರಣದಲ್ಲಿ ಕೆಲಸ ಮಾಡಲು ಸರ್ಕಾರಿ ನೌಕರರಲ್ಲಿ ರೂಢಿಗತ ನಿರಾಕರಣೆಯ ಮನೋಧರ್ಮ­ವಿದೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ನೂತನ ಪಂಚಾಯತ್ ರಾಜ್ ಕಾಯಿದೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸರ್ಕಾರ ಮತ್ತು ಸಿಬ್ಬಂದಿ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಬಂದಿದೆ. ಸಿಬ್ಬಂದಿ ನಿಯಂತ್ರಣ ಸೇರಿದಂತೆ ವಿಕೇಂದ್ರೀಕರಣದತ್ತ ದೃಢ ಹೆಜ್ಜೆ ಇರಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಮತ್ತು ಪೌರ ಸ್ಥಳೀಯಾಡಳಿತದ ಸದಸ್ಯರು ಹಾಗೂ ಕರ್ನಾಟಕ ಸರ್ಕಾರ ಸಂಯುಕ್ತವಾಗಿ 23 ಜನವರಿ 2004ರಂದು ಹೊರಡಿಸಿದ ’ಬೇಲೂರು ಘೋಷಣೆ’ ಒಂದು ಮಹತ್ವದ ಮೈಲಿಗಲ್ಲಾಗಬೇಕಿತ್ತು.

ಈ ಮಹತ್ವಾಕಾಂಕ್ಷೆಯ ಘೋಷಣೆಯಲ್ಲಿ ವಿಕೇಂದ್ರೀಕರಣದ ಮೂಲ ಆಶಯವನ್ನು ಅನುಷ್ಠಾನಿಸುವ ಬದ್ಧತೆಯ ಜತೆಗೆ ಪ್ರಾಥಮಿಕ ಶಾಲೆ, ಅಕ್ಷರ ದಾಸೋಹ, ಗ್ರಾಮೀಣ ಗ್ರಂಥಾಲಯ, ವಯಸ್ಕರ ಶಿಕ್ಷಣ ಕೇಂದ್ರ, ಅಂಗನವಾಡಿ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಕಂದಾಯ ಇಲಾಖಾ ಚಟುವಟಿಕೆಗಳನ್ನು ಗ್ರಾಮ ಪಂಚಾಯಿತಿ ಮತ್ತು ಪೌರಾಡಳಿತದ ಅಧೀನ ತರುವ ಆಶಯವನ್ನು ಅದು ಸಾರಿತ್ತು. ಆದರೆ ಘೋಷಣೆಯ ಧ್ವನಿ ಅಡಗುವ ಮುನ್ನವೇ ಅದಕ್ಕೆ ಎದುರಾದುದು ಸಿಬ್ಬಂದಿ ವಿಭಾಗದ ವಿರೋಧ.

ಅಂಗನವಾಡಿ ನೌಕರರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಇಲಾಖೆ ಹೊರಡಿಸಿದ್ದ ಅಂಗನವಾಡಿ ಕೇಂದ್ರಗಳ ವರ್ಗಾವಣೆಯ ಆದೇಶ ಜಾರಿಯಾಗುವುದನ್ನು ತಡೆದರು. ಪ್ರಾಥಮಿಕ ಶಾಲೆಯ ಶಿಕ್ಷಕರು ಮುಷ್ಕರದ ಬೆದರಿಕೆ ಒಡ್ಡಿದರು. ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಂಡ ಗ್ರಾಮ ಗ್ರಂಥಾಲಯ ಇಲಾಖೆಗೆ ಮರಳಿತು. ಹೊರಗಿನವುಗಳ ವಿರೋಧ ಬಿಡಿ, ಗ್ರಾಮ ಪಂಚಾಯಿತಿ­ಯಲ್ಲೇ ಕೆಲಸ ಮಾಡುತ್ತಿದ್ದ ಕಾರ್ಯದರ್ಶಿಗಳ ವೇತನವನ್ನು ಗ್ರಾಮ ಪಂಚಾಯಿತಿಯೇ ಪಾವತಿಸಲು ಸಾಧ್ಯವಾದದ್ದು ಕೇವಲ ಮೂರು ತಿಂಗಳು ಮಾತ್ರ!

ಸರ್ಕಾರದ ಇಲಾಖೆಗಳೇನೂ ನೌಕರರ ಪಾಲಿನ ಸ್ವರ್ಗಗಳಲ್ಲ. ಅವುಗಳಿಂದ ವೇತನ ಮತ್ತು ಅನ್ಯ ಆರ್ಥಿಕ ಸೌಲಭ್ಯ, ವರ್ಗಾವಣೆ, ಬಡ್ತಿ ತಂತಾನೆ ಬರದು. ಅಲ್ಲಿಯೂ ಮೇಲಧಿಕಾರಿಯಿಂದ ಕೆಳ ಹಂತದ ಅಧಿಕಾರಿಗಳು ಸಾಕಷ್ಟು ಹಿಂಸೆ ಅನುಭವಿಸುತ್ತಾರೆ. ಆದರೆ ಅದರ ನಡುವೆ ಸ್ಥಳೀಯಾಡಳಿತಗಳ ನಿಯಂತ್ರಣಕ್ಕೆ ಒಳಪಡುವುದರಿಂದ ತಮಗೆ ಅದಕ್ಕಿಂತ ಹೆಚ್ಚಿನ ವಿಪತ್ತು ಸಂಭವಿಸುತ್ತದೆ ಎಂದು ಅವರು ಭಾವಿಸು­ತ್ತಾರೆ. ಇದರ ಹಿಂದೆ ಸ್ಥಳೀಯ ರಾಜಕೀಯದ ಬಲಿಪಶು­ವಾಗುವ ಸಾಧ್ಯತೆಗಳ ಜತೆಗೆ ಸ್ಥಳೀಯಾಡಳಿತಗಳ ಚುನಾಯಿತ ಸದಸ್ಯರು ತಮಗೆ ಸಾಟಿಯಲ್ಲ, ಅವರ ಅಧೀನದಲ್ಲಿರುವುದು ಅವಮಾನ ಎಂಬ ನಿಲುವೂ ಸಾಕಷ್ಟು ಕೆಲಸಮಾಡುತ್ತದೆ.

ಅದಕ್ಕಿಂತ ಹೆಚ್ಚಾಗಿ ತಮ್ಮ ಕರ್ತವ್ಯ ನಿರ್ವಹಣೆ­ಯನ್ನು ತಮ್ಮ ಕೆಲಸದ ಸ್ಥಳದಲ್ಲೇ ನಿರಂತರ ನಿರೀಕ್ಷಿಸುವ, ವಿಮರ್ಶಿಸುವ, ಎಚ್ಚರಿಸುವ ವ್ಯವಸ್ಥೆಯನ್ನು ಮೆಚ್ಚದಿರುವ ಮನೋ­ಧರ್ಮವೂ ಇದಕ್ಕೆ ಒಂದು ಪ್ರಬಲ ಕಾರಣ. ಅಧೀನತೆಯನ್ನು ಪೂರ್ತಿ­ಯಾಗಿ ವಿರೋಧಿಸುವುದು ಅಸಾಧ್ಯವಾದುದರಿಂದ ವೇತನವಾದರೂ  ಹೊಗಿನವರಿಂದ ಬರಲಿ ಎಂದು ಅವರೆಲ್ಲ ಆಶಿಸುತ್ತಾರೆ. ವೈದ್ಯರ ವೇತನ ಪಾವತಿ ಕುರಿತಾದ ಆಗ್ರಹದ ಹಿಂದೆ ಈ ಮನೋಧರ್ಮವಿದೆ ಎಂಬ ಶಂಕೆ ಮೂಡುತ್ತದೆ.

ನೌಕರರು ಸಂಘಟಿತರಾಗಿರುವುದರಿಂದ ಇಂತಹ ವಿಚಾರದಲ್ಲಿ ಸರ್ಕಾರ ಗೆಲವು ಸಾಧಿಸುವುದು ಕಷ್ಟಕರ. ಆದುದರಿಂದ ಪಂಚಾಯತ್ ರಾಜ್ ವ್ಯವಸ್ಥೆ ಈಗಿರುವ ಚೌಕಟ್ಟಿನಲ್ಲಿ ಸಿಬ್ಬಂದಿಗಳಲ್ಲಿ ಭರವಸೆ ಮೂಡಿಸುವಂತೆ ಕೆಲಸಮಾಡಬೇಕು. ಅವುಗಳ ಅಧೀನ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು, ಅವರು ಮತ್ತು ಜನಪ್ರತಿನಿಧಿ ನಡುವೆ ಉದ್ಭವಿಸುವ ಎಲ್ಲ ವಿಧದ ಅಂತರವನ್ನು ದೂರಮಾಡಲು ಜಿಲ್ಲಾ ಮಟ್ಟದಲ್ಲಿ ಉಭಯರ ಪ್ರತಿನಿಧಿ ಮತ್ತು ಪರಿಣತರಿಂದ ಕೂಡಿದ ’ಸಮನ್ವಯ ವ್ಯವಸ್ಥೆ’ಯನ್ನು ಅಸ್ತಿತ್ವಕ್ಕೆ ತರಬಹುದು. ಆಗ ವಿಕೇಂದ್ರೀಕರಣ ಅವರಿಗೆ ಸ್ವೀಕಾರಾರ್ಹ­ವಾಗ­ಬಹುದು. ಅದರ ವಿರುದ್ಧ ಎಸೆಯಲಾಗುವ ಸವಾಲುಗಳು ಇಲ್ಲವಾಗಬಹುದು.

ಕೇರಳ ಮಾದರಿ
ವಿಕೇಂದ್ರೀಕರಣಕ್ಕೆ ಮಾದರಿ ಎನಿಸಿದ ಕೇರಳ ರಾಜ್ಯದಲ್ಲಿ ಕರ್ನಾಟಕಕ್ಕಿಂತ ಭಿನ್ನವಾದ ಸ್ಥಿತಿ ಇದೆ. ಅಲ್ಲಿನ ಪಂಚಾಯತ್ ರಾಜ್ ಕಾಯಿದೆ ವಿಕೇಂದ್ರೀ­ಕರಣದ ಆಶಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಿಸಿದೆ. ಮೂರೂ ಸ್ತರಗಳ ನಡುವೆ ಸ್ಪಷ್ಟವಾದ ಅಧಿಕಾರ ಮತ್ತು ಹೊಣೆಗಳ ಹಂಚಿಕೆ ಇದೆ. ಸಂವಿ­ಧಾನದ 11ನೆಯ ಪರಿಚ್ಛೇದದಲ್ಲಿ ಅವುಗಳಿಗೆ ವರ್ಗಾ­ಯಿಸ­ಬಹುದು ಎಂದು ಹೇಳಿದ ಬಹುತೇಕ ವಿಷಯಗಳು ಅವುಗಳು ಅನುಷ್ಠಾನಗೊಳ್ಳುವ ಸ್ತರಕ್ಕೆ ನೀಡಲಾಗಿದೆ.

ಆ ವಿಷಯಗಳಿಗೆ ಸಂಬಂಧಿಸಿದ ಹಣಕಾಸು ಮತ್ತು ಮಾನವ ಸಂಪನ್ಮೂಲವನ್ನು ಅವುಗಳ ಅಧೀನಕ್ಕೆ ತರಲಾಗಿದೆ. ಅತ್ಯಂತ ಕೆಳಸ್ತರವಾದ ಗ್ರಾಮ ಪಂಚಾಯಿತಿಯನ್ನು ಉದಾ­ಹರಿಸುವುದಾದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಇಲಾಖೆಗಳು ಅದರ ಅಧೀನಕ್ಕೆ ಬರು­ತ್ತವೆ. ಅವುಗಳ ವಾರ್ಷಿಕ ಯೋಜನೆ ಸಿದ್ಧಪಡಿಸುವ, ಆರ್ಥಿಕ ಗುರಿ ನಿಗದಿಪಡಿಸುವ, ಮತ್ತು ಅನುಷ್ಠಾನಿಸುವ ಹೊಣೆಗಾರಿಕೆ ಅವುಗಳಿಗೆ ಸೇರಿದೆ. 

ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ, ಕೃಷಿ ಕೇಂದ್ರ ಇತ್ಯಾದಿಯ ನಿರ್ವಹಣೆ ಗ್ರಾಮ ಪಂಚಾ­ಯಿತಿ ಮಾಡುತ್ತದೆ. ವೈದ್ಯರೂ ಸೇರಿದಂತೆ ಅವುಗಳ ಅಧಿ­ಕಾರಿಗಳು ಗ್ರಾಮ ಪಂಚಾಯಿತಿಯ ಅಧೀನದಲ್ಲಿ ಕೆಲಸ-­ಮಾಡುತ್ತಾರೆ. ಅವರ ವೇತನವನ್ನೂ ಗ್ರಾಮ ಪಂಚಾಯಿತಿಯೇ ವಿತರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT