ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಗೋಷ್ಠಿಗೆ ಜನರ ಕೊರತೆ, ಉಪಾಹಾರದ ಗೊಂದಲ

ದಿಢೀರ್ ಬದಲಾದರೆ, ಶಿಕ್ಷಣ ಇಲಾಖೆಯವರು ಏನ್ಮಾಡ್ತಾರೆ?
Last Updated 26 ಜನವರಿ 2015, 10:01 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದುರ್ಗೋತ್ಸವ’ದ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಪ್ರೇಕ್ಷಕರ ಕೊರತೆಯ ಜೊತೆಗೆ, ಭಾಗವಹಿಸಿದ್ದ ಪ್ರೇಕ್ಷಕರಿಗೆ ಮಧ್ಯಾಹ್ನದ ಉಪಹಾರ ವಿತರಣೆಯಲ್ಲಿ ಕೆಲ ಕಾಲ ಎಡವಟ್ಟಾಯಿತು.

ಆಹ್ವಾನ ಪತ್ರಿಕೆಯಲ್ಲಿ ವಿಚಾರ ಗೋಷ್ಠಿಯ ಸಮಯ ಮುದ್ರಿಸದ ಪರಿಣಾಮ, ಗೋಷ್ಠಿಯಲ್ಲಿ ವಿಷಯ ಮಂಡಿಸುವ ವಿದ್ವಾಂಸರೂ, ಎಷ್ಟು ಹೊತ್ತಿಗೆ ಕಾರ್ಯಕ್ರಮ ಶುರುವಾಗುತ್ತದೆ ಎಂಬ ಗೊಂದಲಕ್ಕೆ ಬಿದ್ದರು. ಅಲ್ಲಿಂದ ಆರಂಭವಾದ ‘ಗೋಷ್ಠಿ ಗೊಂದಲ’, ಮಧ್ಯಾಹ್ನ ಉಪಹಾರ ಹಾಗೂ ಮಧ್ಯಾಹ್ನದ ಗೋಷ್ಠಿಯವರೆಗೂ ಮುಂದುವರಿಯಿತು !

ಆರಂಭದಿಂದಲೂ...
ಬೆಳಿಗ್ಗೆ 10.30ಗೆ ಗೋಷ್ಠಿ ಆರಂಭವಾಗುತ್ತದೆಂದು ಕೋಟೆ ಆವರಣಕ್ಕೆ ಬಂದ ವಿಷಯ ಮಂಡನಾಕಾರರಿಗೆ ಖಾಲಿ ಕುರ್ಚಿಗಳನ್ನು ಕಂಡು ದಿಗಿಲಾಯಿತು. ಅವರು ಕ್ಷಣಕಾಲ ಆವರಣದಲ್ಲೇ ವಿಹರಿಸಿದ ನಂತರ ಒಬ್ಬೊಬ್ಬರಾಗಿ ಪ್ರೇಕ್ಷಕರು ಸಭಾಂಗಣ ಪ್ರವೇಶಿಸಿದರು. ಅಂತೂ ಇಂತೂ 11.30ಗೆ ಮೊದಲ ಗೋಷ್ಠಿ ಆರಂಭವಾಯಿತು.

ಪ್ರಾಜೆಕ್ಟ್ ಸರ್ಟಿಫಿಕೇಟ್ ನೀಡುವ ಭರವಸೆಯೊಂದಿಗೆ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿತ್ತು. ವಿದ್ಯಾರ್ಥಿ ಪ್ರೇಕ್ಷಕರನ್ನು ಹೊರತುಪಡಿಸಿದರೆ, ಉಳಿದವರು ಶಿಕ್ಷಣ ಇಲಾಖೆಯ ಆಯೋಜಕರು ಮಾತ್ರ. ಹಾಗೂ ಹೀಗೂ ಮಾಡಿ, ಕಾರ್ಯಕ್ರಮಕ್ಕೆ ಪ್ರೇಕ್ಷಕರನ್ನು ಸೇರಿಸಿ, ಸಭಾಂಗಣ ಭರ್ತಿ ಮಾಡಲಾಯಿತು. ಪ್ರಥಮ ಗೋಷ್ಠಿಯಲ್ಲಿ ಭೂ ಸ್ವಾಧೀನ ಸುಗ್ರೀವಾಜ್ಞೆ ಕುರಿತು ರೈತ ನಾಯಕ ಮಾರುತಿ ಮಾನ್ಪಡೆ ಮಾತನಾಡಬೇಕಿತ್ತು. ಅವರು ಗೈರಾಗಿದ್ದ ಕಾರಣ ಉದ್ಘಾಟಕ ಬಂಜಗೆರೆ ಜಯಪ್ರಕಾಶ್ ಅವರೇ, ತಮ್ಮ ಭಾಷಣದಲ್ಲಿ ವಿಷಯವನ್ನು ಸೇರಿಸಿ ಮಾತನಾಡಿದರು. ನಂತರ ಮೂವರು ವಿದ್ವಾಂಸರು ವಿಷಯಗಳನ್ನು ಮಂಡಿಸಿದರು. ಗೋಷ್ಠಿ ಯಶಸ್ವಿಯಾಯಿತು.

ದಿಢೀರನೆ ಊಟದ ವ್ಯವಸ್ಥೆ :  ಮುಂದಿನ ಗೋಷ್ಠಿಗೆ ಪ್ರೇಕ್ಷಕರು ಖಾಲಿಯಾಗುತ್ತಾರೆಂಬ ಆತಂಕದಿಂದ, ದಿಢೀರನೆ ಗೋಷ್ಠಿ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ, ತಕ್ಷಣ ಉಪಹಾರದ ವ್ಯವಸ್ಥೆ ಮಾಡಿದರು. ‘ಇಲ್ಲೇ ಉಪಹಾರ ಸೇವಿಸಿ, ಮುಂದಿನ ಗೋಷ್ಠಿಗೆ ಹಾಜರಾಗುವಂತೆ’ ಮನವಿ ಮಾಡಿದರು.

ಆದರೆ, ಮೊದಲ ಗೋಷ್ಠಿ ಮುಗಿದು, ಮುಕ್ಕಾಲುಗಂಟೆಯಾದರೂ ಊಟ ಬಾರಲಿಲ್ಲ. ನಂತರ ಊಟ ಬಂದರೂ, ಪ್ಲೇಟ್ ಸಂಖ್ಯೆ ಕೊರತೆ. ಕುಡಿಯುವ ನೀರಿಗೆ ಪರದಾಟ.. ಒಟ್ಟಾರೆ, ಸಾಲುಗಟ್ಟಿ ಊಟಕ್ಕೆ ನಿಂತಿದ್ದ ಪ್ರೇಕ್ಷಕ ವಿದ್ಯಾರ್ಥಿಗಳು, ಪ್ಲೇಟ್ ಬರುವವರೆಗೆ ಕಾದು ಕಾದು ಹಂತ ಹಂತವಾಗಿ ಊಟ ಸ್ವೀಕರಿಸುವಂತಾಯಿತು !‘ಊಟದ ವ್ಯವಸ್ಥೆ ಈ ಕಾರ್ಯಕ್ರಮದ ಪಟ್ಟಿಯಲ್ಲಿರಲಿಲ್ಲ. ಇದು ‘ಮೇಲಿನಿಂದ’ ಬಂದ ದಿಢೀರ್ ಆದೇಶ. ಹಾಗಾಗಿ ತಕ್ಷಣ ವ್ಯವಸ್ಥೆ ಮಾಡುವುದು ಕಷ್ಟವಾಯಿತು’ ಎಂದು ಆಯೋಜನೆಯಲ್ಲಾದ ವ್ಯತ್ಯಾಸದ ಬಗ್ಗೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.‘ಈ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ₨ 29 ಸಾವಿರ ನೀಡಿದೆ. ಕಾರ್ಯಕ್ರಮಕ್ಕೆ ₨ 1 ಲಕ್ಷ ಖರ್ಚಾಗುತ್ತದೆ. ಇನ್ನು ಊಟದ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚುವರಿ ಖರ್ಚಾಗಿದೆ. ಇದನ್ನು ಹೇಗೆ ಸರಿತೂಗಿಸಬೇಕೆಂದು ಯೋಚಿಸುತ್ತಿದ್ದೇವೆ’ ಎಂದು ಮತ್ತೊಬ್ಬ ಅಧಿಕಾರಿ ಚಿಂತಿಸುತ್ತಿದ್ದರು.

ಮೊದಲಾರ್ಧದಲ್ಲಿ ಸಭಾಂಗಣ ತುಂಬಿತ್ತು. ಆದರೆ ಮಧ್ಯಾಹ್ನದ ಗೋಷ್ಠಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗೋಷ್ಠಿಯ ವೇದಿಕೆಗೆ ಆಗಮಿಸಿದ ಕೂಡಲೇ ಮತ್ತೆ ಜನ ಬಂದರು.  ಉದ್ಘಾಟನೆ ಮುಗಿಸಿ, ಸಚಿವರು ನಿರ್ಗಮಿಸುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಲ್ಲಲ್ಲೇ ಸಭಿಕರು ಮಾತ್ರ ಕಾಣಿಸಿಕೊಂಡರು. ಈ ಎಲ್ಲ ಅವ್ಯವಸ್ಥೆ, ಗೊಂದಲಗಳ ನಡುವೆಯೂ ವಿಷಯ ಮಂಡನೆಯಲ್ಲಿ ಮಾತ್ರ ಯಾವ ವಿದ್ವಾಂಸರೂ ಸೋಲಲ್ಲಿ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT