ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ಕಾಣದ ಕೈದಿಗಳ ಬಿಡುಗಡೆಗೆ ಸುಪ್ರೀಂ ಆದೇಶ

Last Updated 5 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಮೇಲಿನ ಆರೋಪಗಳಿಗೆ ನಿಗದಿಯಾಗಿರುವ ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ‘ವಿಚಾರಣೆ ಇಲ್ಲದೆ ಜೈಲುಗಳಲ್ಲಿಯೇ  ಸವೆಸಿದ’ ಎಲ್ಲಾ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ನೇತೃತ್ವದ ನ್ಯಾಯಪೀಠ ನೀಡಿರುವ ಈ ಐತಿಹಾಸಿಕ ನಿರ್ದೇಶನವು ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಮಾತ್ರ  ಅನ್ವಯಿಸುವುದಿಲ್ಲ. ಕುರಿಯನ್ ಜೋಸೆಫ್‌ ಹಾಗೂ ರೊಹಿಂಟನ್ ಎಫ್‌. ನಾರಿಮನ್‌ ಅವರು ಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಮೂರ್ತಿಗಳು. ಸದ್ಯ ದೇಶದ  ಜೈಲುಗಳಲ್ಲಿ 3.81 ಲಕ್ಷ ಕೈದಿ­ಗಳಿದ್ದು ಆ ಪೈಕಿ ವಿಚಾರಣಾಧೀನ ಕೈದಿಗಳ ಸಂಖ್ಯೆ 2.54 ಲಕ್ಷದಷ್ಟಿದೆ. ಅವರಲ್ಲಿ ಬಹು­ತೇಕರು ತಮ್ಮ ಮೇಲಿನ ಆರೋಪ ಸಾಬೀತಾ­ದರೆ ಅನುಭವಿಸ­ಬೇಕಾದ  ಗರಿಷ್ಠ ಶಿಕ್ಷೆ ಅವಧಿ­ಗಿಂತ  ಹೆಚ್ಚಿನ ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದಾರೆ.

ದೇಶದ ಜೈಲುಗಳಲ್ಲಿನ ಶೇ 60ಕ್ಕೂ ಹೆಚ್ಚು ಕೈದಿಗಳು ವಿಚಾರಣಾಧೀನ ಕೈದಿಗಳು ಎಂಬುದನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು. 

ತಾಕೀತು: ‘ಈ ಕೈದಿಗಳ ಬಿಡುಗಡೆಗಾಗಿ ಅಕ್ಟೋಬರ್‌ 1ರಿಂದ ಎರಡು ತಿಂಗಳು ವಾರಕ್ಕೊಮ್ಮೆ ಜೈಲಿಗೆ ಭೇಟಿ ನೀಡಿ ಅಲ್ಲಿಯೇ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಬಿಡುಗಡೆಗೆ ಅರ್ಹರಾದ ಕೈದಿಗಳಿಂದ ಜಾಮೀನು ಕೇಳಬಾರದು. ಸ್ವಂತ ಬಾಂಡ್‌ ಸಾಕು’ ಎಂದು ಅದು ಎಲ್ಲಾ ಜುಡಿಷಿ­ಯಲ್‌ ಮ್ಯಾಜಿಸ್ಟ್ರೇಟ್‌ಗಳು, ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ಗಳು (ಸಿಜೆಎಂಗಳು) ಮತ್ತು ಸೆಷನ್ಸ್‌ ನ್ಯಾಯಾಧೀಶರುಗಳಿಗೆ ತಾಕೀತು ಮಾಡಿತು.

ಗರಿಷ್ಠ ಶಿಕ್ಷೆಯ ಅರ್ಧ ಅವಧಿ ಪೂರ್ಣಗೊಳಿಸಿ­ದ್ದರೂ ಇನ್ನೂ ವಿಚಾರಣೆಯನ್ನೇ ಕಾಣದಿರುವ ಕೈದಿಗಳನ್ನು ಗುರುತಿಸುವಂತೆ ಜೈಲುಗಳ ಅಧೀಕ್ಷಕರಿಗೆ ನ್ಯಾಯಪೀಠ ಸೂಚಿಸಿತು. ಈ ಮಾಹಿತಿಯನ್ನು ಆಯಾ ಹೈಕೋರ್ಟ್‌ಗಳಿಗೆ ನೀಡುವಂತೆ  ಜೈಲು ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿಸಿತು.

ಕಾಯ್ದೆಯಲ್ಲಿ ಏನಿದೆ?: ನ್ಯಾಯಪೀಠವು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 436 ಎ ಸೆಕ್ಷನ್‌ನ ಆಧಾರದಲ್ಲಿ ಈ ಆದೇಶ ಹೊರಡಿಸಿದೆ. ಯಾವುದೇ ವಿಚಾರಣಾಧೀನ ಕೈದಿ ತನ್ನ ಮೇಲಿನ ಆರೋಪಗಳಿಗೆ ನಿಗದಿಯಾಗಿರುವ ಗರಿಷ್ಠ ಶಿಕ್ಷೆ ಅವಧಿಯ ಅರ್ಧದಷ್ಟು ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದರೆ ಅಂತಹ ವ್ಯಕ್ತಿಯನ್ನು ಜಾಮೀನಿನ ಅಗತ್ಯವಿಲ್ಲದೆ ವೈಯಕ್ತಿಕ ಬಾಂಡ್‌ ಆಧಾರದ ಮೇಲೆಯೇ ಬಿಡುಗಡೆ ಮಾಡಬೇಕು ಎಂದು ಈ ನಿಯಮ ಹೇಳುತ್ತದೆ.

ಸ್ಥಳದಲ್ಲಿಯೇ ಆದೇಶ: ಪರಿಶೀಲನೆಗಾಗಿ ಜೈಲುಗಳಿಗೆ ತೆರಳುವ ನ್ಯಾಯಾಧೀಶರು ಅಪರಾಧ ದಂಡಸಂಹಿತೆ (ಸಿಆರ್‌ಪಿಸಿ) 436ಎ ಅಡಿ ಇಂತಹ ಕೈದಿಗಳ ಬಿಡುಗಡೆಗೆ ಸ್ಥಳದಲ್ಲಿಯೇ  ಆದೇಶ ಹೊರಡಿಸಬಹು­ದಾಗಿದೆ.  ಅವರನ್ನು ನ್ಯಾಯಾಲಯಗಳಿಗೆ ಕರೆ ತಂದು ವಿಚಾರಣೆ ನಡೆಸುವ ಅಗತ್ಯ ಇಲ್ಲ. ಈ ಸಂದರ್ಭದಲ್ಲಿ  ವಕೀಲರ ಹಾಜರಾತಿಯೂ ಕಡ್ಡಾಯವಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿತು.

ಈ ಕಾರ್ಯ ಪೂರ್ಣ­ವಾದ ಬಳಿಕ ನ್ಯಾಯಾ­ಧೀಶರು ಆಯಾ ರಾಜ್ಯಗಳ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ವರದಿ ಸಲ್ಲಿಸಬೇಕು. ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌­ಗಳು ಈ ವರದಿಗಳನ್ನು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ಗೆ ಹಸ್ತಾಂತರಿಸಬೇಕು ಎಂದು ಸೂಚಿಸಿತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಈ ಕಾರ್ಯದಲ್ಲಿ ಮುತುವರ್ಜಿ ವಹಿಸಬೇಕು ಎಂದೂ ಪೀಠ ಸಲಹೆ ನೀಡಿ ವಿಚಾರಣೆಯನ್ನು  ಡಿಸೆಂಬರ್‌ 8ಕ್ಕೆ ಮುಂದೂಡಿತು.

ಕೆಲವರಿಗಷ್ಟೆ ಅನುಕೂಲ
ಬೆಂಗಳೂರು: ಸುಪ್ರೀಂಕೋರ್ಟ್‌ ನಿರ್ದೇಶನ­ದಿಂದ ರಾಜ್ಯದಲ್ಲಿ ಕೆಲವೇ ಕೈದಿಗಳಿಗೆ ಅನುಕೂಲ ಆಗಬ­ಹುದು ಎಂದು ಬಂದಿಖಾನೆ ಇಲಾಖೆ ಮೂಲ ಗಳು ಹೇಳುತ್ತವೆ. ರಾಜ್ಯದ 102 ಕಾರಾಗೃಹ­ಗಳಲ್ಲಿ ಸುಮಾರು 9,500 ವಿಚಾರಣಾಧೀನ ಕೈದಿಗಳಿದ್ದಾರೆ. ಈ ಪೈಕಿ ಒಂದಕ್ಕಿಂತ ಹೆಚ್ಚು ಪ್ರಕರಣಗಳನ್ನು ಎದು­ರಿ­ಸು­­ತ್ತಿರುವ ಬಂದಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇ­ಶನದ ಲಾಭ ದೊರೆಯಲಿಕ್ಕಿಲ್ಲ  ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT