ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಟು ಮೈಸೂರ್‌ ಸರ್ಕಲ್ ವಯಾ ಗೋರಿಪಾಳ್ಯ

ಶಾರ್ಟ್‌ಕಟ್‌ 24
Last Updated 25 ಮೇ 2015, 19:30 IST
ಅಕ್ಷರ ಗಾತ್ರ

ನಗರದ ವಿಜಯನಗರ ಮತ್ತು ಆಸುಪಾಸಿನ ಬಡಾವಣೆಗಳಿಂದ ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ಬಸವನಗುಡಿ ಕಡೆಗೆ ಹೋಗಬೇಕೆಂದರೆ ಮೈಸೂರು ರಸ್ತೆಗೆ ಹೋಗುವುದು ಅನಿವಾರ್ಯ.

ವಿಜಯನಗರದಿಂದ ಹೊರಟು ಅತ್ತಿಗುಪ್ಪೆ, ಗಾಳಿ ಆಂಜನೇಯಸ್ವಾಮಿ ದೇವಾಲಯ, ಬಾಪೂಜಿನಗರ, ಹಳೇಗುಡ್ಡದಹಳ್ಳಿ ಮಾರ್ಗವಾಗಿ ಮೈಸೂರು ರಸ್ತೆ ಮೇಲ್ಸೇತುವೆ, ಮೈಸೂರು ಸರ್ಕಲ್  ತಲುಪಬೇಕು. ನಂತರ ನಾವು ಹೋಗಬೇಕಾದ ಕಡೆಗೆ ಗಾಡಿ ತಿರುಗಿಸಬೇಕು.

ವಿಜಯನಗರದಿಂದ ಗಾಳಿ ಆಂಜನೇಯ ಸ್ವಾಮಿ ದೇವಾಲಯ ತಲುಪುವಷ್ಟರಲ್ಲೇ ಮೂರು ಸಿಗ್ನಲ್, ಮತ್ತೆರಡು ಜಂಕ್ಷನ್ ದಾಟಬೇಕು. ನಂತರ ದೇವಾಲಯ ಜಂಕ್ಷನ್‌ನಲ್ಲಿರುವ ದಟ್ಟಣೆಯಲ್ಲಿ ನುಸುಳಿ, ಬಾಪೂಜಿನಗರ ಸಿಗ್ನಲ್ ದಾಟಬೇಕು. ಆಮೇಲೆ ಹಳೇಗುಡ್ಡದಹಳ್ಳಿ ಸಿಗ್ನಲ್, ಷೆಲ್ ಪೆಟ್ರೋಲ್ ಬಂಕ್ ಸಿಗ್ನಲ್‌ ದಾಟಿ.

ಮುಂದೆ ಸಿಗುವ ಹಳೇಗುಡ್ಡದಹಳ್ಳಿ ರಸ್ತೆ, ಮೈಸೂರು ರಸ್ತೆ ಜಂಕ್ಷನ್‌ನಲ್ಲಿ ಮೂರು ನಿಮಿಷದ ಸಿಗ್ನಲ್ ಕಳೆದು ಮೇಲ್ಸೇತುವೆ ಏರಬೇಕು ಇಲ್ಲವೇ ಮೈಸೂರು ಸರ್ಕಲ್‌ನತ್ತ ಹೋಗಬೇಕು.

ಈ ಮಾರ್ಗದಲ್ಲಿ ವಿಜಯನಗರದಿಂದ ಮೈಸೂರು ಸರ್ಕಲ್ ತಲುಪುವಷ್ಟರಲ್ಲಿ ಕಡಿಮೆ ಎಂದರೂ 25 ನಿಮಿಷ ಕಳೆದಿರುತ್ತದೆ.
ಮೈಸೂರು ಸರ್ಕಲ್ ತಲುಪಲು ವಿಜಯನಗರದಿಂದ ಗೋರಿಪಾಳ್ಯ, ಜಗಜೀವನರಾಂ ನಗರ, ಬಿನ್ನಿ ಮಿಲ್ ರಸ್ತೆ ಮಾರ್ಗದ ಶಾರ್ಟ್‌ಕಟ್ ಇದೆ. ಆದರೆ ಈ ಶಾರ್ಟ್‌ಕಟ್ ಬಳಸಿದರೆ ಮೈಸೂರು ರಸ್ತೆ ಮೇಲ್ಸೇತುವೆ ಏರಲು ಸಾಧ್ಯವಿಲ್ಲ. ವಿಜಯನಗರದಿಂದ ಮೈಸೂರು ರಸ್ತೆ ಮೇಲ್ಸೇತುವೆ ಹೆಬ್ಬಾಗಿಲು ತಲುಪಲು ಗೋರಿಪಾಳ್ಯದ ಮೂಲಕವೇ ಮತ್ತೊಂದು ಶಾರ್ಟ್‌ಕಟ್ ಇದೆ.

ವಿಜಯನಗರ ಪೈಪ್‌ಲೈನ್ ರಸ್ತೆ ಮೂಲಕ ಗೋರಿಪಾಳ್ಯ ಮುಖ್ಯರಸ್ತೆ ತಲುಪಬೇಕು. ಈ ರಸ್ತೆಯಲ್ಲಿ ನೇರವಾಗಿ ಸಾಗಿ ಗೋರಿಪಾಳ್ಯ ಸರ್ಕಲ್ ತಲುಪಬೇಕು. ಸರ್ಕಲ್‌ನ ಬಲಭಾಗದಲ್ಲಿ ಇರುವ ದೇವಾಲಯದ ಹಿಂದಿರುವ ರಸ್ತೆಗೆ ತಿರುಗಬೇಕು. ಇಕ್ಕಟ್ಟಾದ ಇದೇ ರಸ್ತೆಯಲ್ಲಿ ಒಂದೆರಡು ನಿಮಿಷ ನಿಮ್ಮ ಗಾಡಿ ಓಡಿಸಿದರೆ ಹೊಸ ಗುಡ್ಡದಹಳ್ಳಿ ಮುಖ್ಯರಸ್ತೆ ಸಿಗುತ್ತದೆ.

ಅಲ್ಲಿ ಎಡಕ್ಕೆ ಹೊರಳಿ ಒಂದೂವರೆ ಕಿ.ಮೀ. ಕ್ರಮಿಸಿದರೆ ಮೈಸೂರು ರಸ್ತೆ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಹೊರಳಿ ಮೈಸೂರು ರಸ್ತೆ ಮೇಲ್ಸೇತುವೆ ಕಡೆಗೆ ಅಥವಾ ಮೈಸೂರು ಸರ್ಕಲ್‌ನತ್ತ ಹೋಗಬಹುದು.

ಗಿರಿನಗರ, ಶ್ರೀನಿವಾಸನಗರ, ರಾಮಚಂದ್ರಪ್ಪ ಅಗ್ರಹಾರದತ್ತ ಹೋಗಬೇಕಿದ್ದರೆ ಜಂಕ್ಷನ್‌ನಲ್ಲಿ ಬಲಕ್ಕೆ ಹೊರಳಿದರಾಯಿತು.
ಗೋರಿಪಾಳ್ಯ ಸರ್ಕಲ್‌ನಿಂದ ಹಳೇಗುಡ್ಡದಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿಜಕ್ಕೂ ತೀರಾ ಇಕ್ಕಟ್ಟಾದ ರಸ್ತೆ. ಇಲ್ಲಿ ಹೋಗುವುದು ಕಿರಿಕಿರಿ ಎನಿಸಿದರೆ ಮತ್ತೊಂದು ರಸ್ತೆ ಇದೆ. ಗೋರಿಪಾಳ್ಯ ಸರ್ಕಲ್‌ನಲ್ಲಿ ಬಲಕ್ಕೆ ತಿರುಗದೆ ನೇರವಾಗಿ ಸಾಗಬೇಕು.

ಸರ್ಕಲ್‌ನಿಂದ ಆರಂಭವಾಗಿ ನಾಲ್ಕನೇ ಅಡ್ಡರಸ್ತೆಯಲ್ಲಿ ಬಲಕ್ಕೆ ಹೊರಳಬೇಕು. ಅಲ್ಲಿಂದ ನೇರವಾಗಿ ಸಾಗಿದರೆ ಹಳೇಗುಡ್ಡದಹಳ್ಳಿ ಮುಖ್ಯರಸ್ತೆ ಸಿಗುತ್ತದೆ. ಅಲ್ಲಿ ಎಡಕ್ಕೆ ಹೊರಳಿ ಒಂದು ಕಿ.ಮೀ ಕ್ರಮಿಸಿದರೆ ಮೈಸೂರು ರಸ್ತೆ ಹಳೇಗುಡ್ಡದಹಳ್ಳಿ ರಸ್ತೆ ಜಂಕ್ಷನ್ ಸಿಗುತ್ತದೆ.

ಈ ಶಾರ್ಟ್‌ಕಟ್‌ನಲ್ಲೂ ಒಮ್ಮೊಮ್ಮೆ ದಟ್ಟಣೆ ಇರುತ್ತದೆ. ಆದರೂ ಮುಖ್ಯರಸ್ತೆಯಲ್ಲಿ ಸಾಗಲು ಅಗತ್ಯವಿರುವ ಸಮಯಕ್ಕಿಂತ ಬೇಗ ಮೈಸೂರು ರಸ್ತೆ ಮೇಲ್ಸೇತುವೆ ಮತ್ತು ಮೈಸೂರು ಸರ್ಕಲ್ ತಲುಪಬಹುದು. ದಟ್ಟಣೆಯ ಅವಧಿಯಲ್ಲೂ ಈ ಶಾರ್ಟ್‌ಕಟ್ ಮೂಲಕ 15ರಿಂದ 20 ನಿಮಿಷದಲ್ಲಿ ವಿಜಯನಗರದಿಂದ ಮೈಸೂರು ಸರ್ಕಲ್ ತಲುಪಬಹುದು. ದಟ್ಟಣೆ ಇಲ್ಲದ ಅವಧಿಯಲ್ಲಿ ಕೇವಲ ಹತ್ತು ನಿಮಿಷದಲ್ಲಿ ಈ ಗುರಿ ತಲುಪಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT