ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯವಾಡ ಬಳಿ ಆಂಧ್ರದ ಹೊಸ ರಾಜಧಾನಿ

Last Updated 4 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ವಿಭಜಿತ ಆಂಧ್ರ ಪ್ರದೇ­ಶದ ಹೊಸ ರಾಜಧಾನಿ­ಯನ್ನು ‘ವಿಜಯ­ವಾಡ’ದ ಸುತ್ತಮುತ್ತ ಗುರುತಿಸಿ, ಅಭಿವೃದ್ಧಿಪಡಿಸಲಾಗುತ್ತದೆ ಎಂದು ರಾಜ್ಯದ  ಮುಖ್ಯ­ಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಗುರುವಾರ ವಿಧಾನಸಭೆ­ಯಲ್ಲಿ ಪ್ರಕಟಿಸಿದರು.
ಪ್ರತಿಪಕ್ಷ ವೈಎಸ್‌ಆರ್ ಕಾಂಗ್ರೆಸ್‌ ಸದ­ಸ್ಯರು ಚರ್ಚೆಗೆ ಆಗ್ರಹಿಸಿದ್ದರಿಂದ ಉಂಟಾದ ಕೋಲಾ­ಹಲ ಮಧ್ಯೆ ಅವರು ಈ ನಿರ್ಧಾರ ತಿಳಿಸುವ ಮೂಲಕ ಬಹು­ದಿನಗಳ ಕುತೂಹ­ಲಕ್ಕೆ ತೆರೆ ಎಳೆದರು.

ರಾಜ್ಯ ಸಚಿವ ಸಂಪುಟವು ಸೆಪ್ಟೆಂಬರ್‌ 1ರಂದು ಸಭೆ ಸೇರಿ, ರಾಜ್ಯದ ಕೇಂದ್ರ ಸ್ಥಳವಾದ ವಿಜಯವಾಡದ ಸುತ್ತಮುತ್ತ ರಾಜ­ಧಾನಿ ಗುರುತಿಸಲು ನಿರ್ಣಯ ಕೈಗೊಂ­ಡಿದೆ. ಮೂರು ಬೃಹತ್‌ ನಗರ­ಗಳು ಮತ್ತು 14 ಸುಂದರ ನಗರಗಳ ನಿರ್ಮಾಣದೊಂದಿಗೆ ರಾಜ್ಯವನ್ನು ಅಭಿವೃದ್ಧಿಪಡಿಸಲು ತೀರ್ಮಾ­ನಿಸಲಾಗಿದೆ. ಈ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ಕಾರ್ಯನಿರ್ವ­ಹಿಸಲಿದೆ ಎಂದು ಅವರು ಹೇಳಿದರು.

ವಿಜಯವಾಡ–ಗುಂಟೂರು ಪ್ರದೇಶ­ವನ್ನು ರಾಜಧಾನಿ ಮಾಡ­ಬೇಕೆಂದು ಬಹು­­­ಜನರು ಕೇಂದ್ರ ಸರ್ಕಾರ ರಚಿಸಿದ ಶಿವರಾಮ­ಕೃಷ್ಣನ್‌ ಸಮಿತಿಯ ಮುಂದೆ ಹೇಳಿದ್ದು, ಇದರಿಂದ ರಾಜ್ಯದ ಎಲ್ಲ ಭಾಗ­­­ಗಳ ಜನರಿಗೂ ಸಮಾನ ಅವಕಾಶ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ಚರ್ಚೆಗೆ ಆಗ್ರಹ: ವಿಧಾನಸಭೆಯಲ್ಲಿ ಮೊದಲು ಶಿವ­ರಾಮ­ಕೃಷ್ಣನ್‌ ಸಮಿತಿಯ ವರದಿ­ಯನ್ನು ಮಂಡಿಸಿ, ಚರ್ಚಿಸಬೇಕೆಂದು       ವೈಎಸ್‌­ಆರ್‌ ಕಾಂಗ್ರೆಸ್‌ ಶಾಸಕರು ಒತ್ತಾ­ಯಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದ­ರಿಂದ ಕೆಲ­ಕಾಲ ಗದ್ದಲದ ವಾತಾವರಣ ನಿರ್ಮಾಣ­ವಾಗಿತ್ತು. ಈ ಸಂಬಂಧ ಅವರು ಸ್ಪೀಕರ್‌ ಪೀಠದ ಮುಂದೆ ತೆರಳಿ, ಫಲಕಗಳನ್ನು ಹಿಡಿದು ಪ್ರತಿಭಟಿಸಿದರು. ಚರ್ಚೆಗಾಗಿ ಘೋಷಣೆಗಳನ್ನು ಕೂಗಿದ್ದ­ರಿಂದ ಎರಡು ಬಾರಿ ಸಭೆಯನ್ನು ಮುಂದೂ­ಡಲಾಗಿತ್ತು.

ವೈಎಸ್‌ಆರ್‌ ಸ್ವಾಗತ: ಈ ಮಧ್ಯೆ, ವಿಜ­ಯ­ವಾಡದ ಸುತ್ತ­ಮುತ್ತಲ ಪ್ರದೇಶವನ್ನು ರಾಜ­ಧಾನಿ­ಯಾಗಿ ಅಭಿವೃದ್ಧಿಪಡಿಸುವ ಆಂಧ್ರ ಸರ್ಕಾ­­ರದ ನಿರ್ಧಾರವನ್ನು ವೈಎಸ್‌ಆರ್‌ ಕಾಂಗ್ರೆಸ್‌ ಸ್ವಾಗತಿಸಿದೆ. ಆದರೆ ಶಿವ­ರಾಮಕೃಷ್ಣನ್‌ ಸಮಿತಿಯ ವರದಿ ಬಗ್ಗೆ ಯಾವುದೇ ಚರ್ಚೆ ನಡೆಸದೆ ಈ ತೀರ್ಮಾನ ಕೈಗೊಂಡ ಬಗೆಯನ್ನು ಪಕ್ಷ ಖಂಡಿಸಿದೆ.

‘ಸರ್ಕಾರದ ನಿರ್ಧಾರಕ್ಕೆ ತಮ್ಮ ಪಕ್ಷದ ವಿರೋಧವಿಲ್ಲ. ಆದರೆ ಪ್ರಜಾಪ್ರಭುತ್ವ ಮಾದ­ರಿ­ಯಲ್ಲಿ ತೀರ್ಮಾನ ಕೈಗೊಳ್ಳ­ಬೇಕೆಂದು ನಾವು ಬಯಸಿದ್ದೆವು’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ     ವೈ.­ಎಸ್‌. ಜಗನ್‌­ಮೋಹನ್‌ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಐತಿಹಾಸಿಕ ವಿಜಯವಾಡ ವೈಭವ ಮತ್ತೆ ಆರಂಭ
ವಿಜಯ­ವಾಡ­ವನ್ನು ಆಂಧ್ರ ಪ್ರದೇ­ಶದ ಹೊಸ ರಾಜಧಾನಿಯಾಗಿ ಘೋಷಿಸಿರುವುದ­ರಿಂದ, ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾದ ಈ ಪ್ರಾಂತ್ಯ ಮತ್ತೆ ತನ್ನ ವೈಭವ ಮತ್ತು ಸರ್ವೋತ್ಕೃಷ್ಟತೆಯನ್ನು ಮೆರೆಯಲಿದೆ. ಕರಾವಳಿ ಆಂಧ್ರದ ಕೃಷ್ಣಾ ಜಿಲ್ಲೆ-­ಯಲ್ಲಿ­­ರುವ ವಿಜಯವಾಡವು ತೆಲುಗು ಇತಿ­ಹಾ­ಸ­ದಲ್ಲಿ ಸಾಂಪ್ರದಾಯಿಕವಾದ ಸರ್ವ­­­ಶ್ರೇಷ್ಠತೆಯ ಸ್ಥಾನ ಹೊಂದಿದೆ. ದೇಶದ ಮೂರನೇ ಅತಿದೊಡ್ಡ ನದಿ­ ಕೃಷ್ಣಾದಿಂದಾಗಿ ಕೃಷ್ಣಾ ಜಿಲ್ಲೆ ಎಂಬ ಹೆಸರು ಬಂದಿದೆ. ಈ ಪವಿತ್ರ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದ ಬಳಿ ಹುಟ್ಟಿ, ಜಿಲ್ಲೆಯ ಹಮ್ಸಲದೇವಿ ಗ್ರಾಮದ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತಿದೆ.

ಕೃಷ್ಣಾವನ್ನು ‘ತೆಲುಗು ಸಂಸ್ಕೃತಿಯ ಹೃದಯ’ ಎಂದು ಪರಿಗಣಿಸ­ಲಾ­ಗಿದ್ದು,  ಕೃಷ್ಣಾ ಪ್ರಾಂತ್ಯದಲ್ಲಿ ಮಾತ­ನಾಡುವ ತೆಲುಗು ಆಡುಭಾಷೆಯೇ ನೈಜ ಗುಣ­­ಮಟ್ಟದ ತೆಲುಗು ಭಾಷಾ ಉಚ್ಛಾರ ಎಂದು ಗುರುತಿಸಲಾಗಿದೆ. ವಾಣಿಜ್ಯ ಕೇಂದ್ರವೂ ಆದ ವಿಜಯ­­ವಾಡ ಪ್ರಾಂತ್ಯವು, ಸಾಕಷ್ಟು ಸ್ವಾತಂತ್ರ್ಯ ಹೋರಾ­ಟ­ಗಾರರನ್ನು ಕೊಡುಗೆಯಾಗಿ ನೀಡಿದ್ದು, ಉದ್ಯ­ಮ­ಶೀಲತಾ ಪ್ರವೃತ್ತಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದೆ.

ರಾಜವಂಶಸ್ಥರ ತಾಣ: ವಿಜಯವಾಡದ ನೆರೆಯಲ್ಲಿ­ರುವ ಗುಂಟೂರು ಜಿಲ್ಲೆಯ ‘ಧರಣಿಕೋಟಾ’ ಕ್ರಿ.ಪೂ. 3ನೇ ಶತಮಾನದ ಶಾತ­ವಾಹನ ರಾಜವಂಶ ಸಂಸ್ಥಾಪಕ ಸಿಮುಖ ಅರಸನ ಪ್ರಥಮ ರಾಜಧಾನಿ­ಯಾಗಿತ್ತು. ಅದೇ ರೀತಿ, ಇದೇ ಜಿಲ್ಲೆಯ ‘ನಾಗಾರ್ಜುನಕೊಂಡ’ವು ‘ಶ್ರೀಪರ್ವತ ಮತ್ತು ವಿಜಯಪುರಿ’ ಹೆಸರುಗಳಲ್ಲಿ ಇಕ್ಷ್ವಾಕು ಅರಸರ ರಾಜಧಾನಿ ಆಗಿತ್ತು. ಈ ರಾಜಮನೆತನದ ನಂತರ ಕೃಷ್ಣಾ ನದಿ ಉತ್ತರಕ್ಕಿರುವ ಆಂಧ್ರ ಪ್ರಾಂತ್ಯವನ್ನು ‘ಬೃಹತ್‌ಫಾಲಾಯನ ಗೋತ್ರಾ’ದ ಜಯ­ವರ್ವ ಆಳಿದ್ದ.

ಪೂರ್ವ ಕರಾವಳಿಯನ್ನು ಆಳಿದ ಸಾಳಂಕಯನಾಸ್‌ ಅರಸರು ವಿಜಯ­ವಾಡ­ದಿಂದ 60 ಕಿ.ಮೀ. ದೂರ­ದಲ್ಲಿ­ರುವ ಎಲೂರು ಬಳಿಯ ವೆಂಗಿಯನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದರು. ಇವರ ನಂತರ ಆಳಿದ ವಿಷ್ಣುಕುಂಡಿನ್ಸ್‌ ಅರಸರು ಕೃಷ್ಣಾ ಮತ್ತು ಗೋದಾವರಿ ನಡುವಿನ ಭೂಪ್ರದೇಶವನ್ನು ವಶಪಡಿಸಿ­ಕೊಂಡು, ಶಿಲ್ಪಕಲೆ ಮತ್ತು ವಾಸ್ತು­ಶಿಲ್ಪಕ್ಕೆ ಪ್ರೋತ್ಸಾಹವನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT