ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಾ ಬ್ಯಾಂಕ್‌ ಲಾಭ ರೂ37 ಕೋಟಿ

3ನೇ ತ್ರೈಮಾಸಿಕ ಲಾಭ ಎರಡೂಕಾಲು ಪಟ್ಟು ಅಧಿಕ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್‌, ಡಿಸೆಂಬರ್‌ 31ಕ್ಕೆ ಕೊನೆಗೊಂಡ 2014; 15ನೇ ಹಣ­ಕಾಸು ವರ್ಷದ 3ನೇ ತ್ರೈಮಾಸಿಕ­ದಲ್ಲಿ ರೂ37.40 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಅಕ್ಟೋಬರ್‌ ಡಿಸೆಂಬರ್‌ ಅವಧಿಯ ರೂ11.39 ಕೋಟಿಗೆ ಹೋಲಿಸಿದರೆ ಈ ಬಾರಿಯ ನಿವ್ವಳ ಲಾಭ ಎರಡೂಕಾಲು ಪಟ್ಟು ಅಧಿಕವಾಗಿದೆ.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಸಾನ್ಸಿ, 3ನೇ ತ್ರೈಮಾಸಿಕದಲ್ಲಿ ಸಾಲಗಳ ಮೇಲಿನ ಬಡ್ಡಿ ಗಳಿಕೆ ರೂ2140 ಕೋಟಿ ಸೇರಿದಂತೆ ಒಟ್ಟು ಬಡ್ಡಿಗಳ ಮೂಲದ ವರಮಾನ ರೂ3033.61 ಕೋಟಿಗೆ (ಶೇ 10.49) ಹೆಚ್ಚಿದೆ. ಹೂಡಿಕೆಗಳಿಂದ ಬಂದ ವರಮಾನ ಶೇ 24.47ರ ವೃದ್ಧಿಯೊಂದಿಗೆ ರೂ824 ಕೋಟಿಗೇರಿದೆ.
ನಿರ್ವಹಣಾ ಲಾಭವೂ ರೂ167.72 ಕೋಟಿಯಿಂದ ರೂ350.53 ಕೋಟಿಗೆ (ಶೇ 109) ಹೆಚ್ಚಳವಾಗಿದೆ. ಇದೆಲ್ಲದರಿಂದಾಗಿ ನಿವ್ವಳ ಲಾಭ ಗಳಿಕೆಯಲ್ಲಿ ಅಧಿಕ ಪ್ರಗತಿ ಸಾಧ್ಯವಾಗಿದೆ ಎಂದು ವಿವರಿಸಿದರು.

ವಸೂಲಾಗದ ಸಾಲ ಪ್ರಮಾಣವನ್ನು (ಎನ್‌ಪಿಎ) ಸರಿದೂಗಿಸುವ ಸಲುವಾಗಿ ಬ್ಯಾಂಕ್‌ ರೂ328 ಕೋಟಿ (ಶೇ 295.18 ಅಧಿಕ) ಮೀಸಲಿಟ್ಟಿದ್ದರೂ, ನಿವ್ವಳ ಎನ್‌ಪಿಎ ಶೇ 1.89ಕ್ಕೇರಿದೆ. ಹಿಂದಿನ ಹಣಕಾಸು ವರ್ಷದ 3ನೇ ತ್ರೈಮಾಸಿ­ಕದಲ್ಲಿ ಇದು ಶೇ 1.57ರಷ್ಟಿತ್ತು.

ಬಡ್ಡಿದರ ಈಗಲೇ ಇಳಿಕೆ ಇಲ್ಲ

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಜ. 15­ರಂದು ಬಡ್ಡಿದರದಲ್ಲಿ ಶೇ 0.25ರಷ್ಟು ಕಡಿತ ಪ್ರಕಟಿಸಿದೆ. ವಿಜಯ ಬ್ಯಾಂಕ್‌ ಬಡ್ಡಿದರವನ್ನು ಯಾವಾಗ ತಗ್ಗಿಸಲಿದೆ? ಎಂಬ ಪ್ರಶ್ನೆಗೆ, ‘ನಿವ್ವಳ ಬಡ್ಡಿಯಿಂದ ಬ್ಯಾಂಕ್‌ಗೆ ಬರುತ್ತಿರುವ ಲಾಭದ (ಎನ್‌ಐಎಂ) ಪ್ರಮಾಣ ಸದ್ಯ ಕಡಿಮೆ ಇದೆ. ಹಾಗಾಗಿ ಬಡ್ಡಿದರ ಇಳಿಸುವುದು ಇನ್ನೂ ತಡವಾಗಲಿದೆ. ಈ ಕುರಿತು ಆರ್‌ಬಿಐ ಮಾರ್ಗಸೂಚಿ­ಗಾಗಿಯೂ ಕಾಯುತ್ತಿದ್ದೇವೆ’ ಎಂದು ಕಿಶೋರ್‌ ಸಾನ್ಸಿ ಉತ್ತರಿಸಿದರು.

ಠೇವಣಿ, ಸಾಲ ವಿತರಣೆ ವೃದ್ಧಿ
ಡಿ. 31ರ ವೇಳೆಗೆ ಠೇವಣಿ ಪ್ರಮಾಣ  ಶೇ 8.03ರ ವೃದ್ಧಿಯೊಂದಿಗೆ ರೂ1,24,051 ಕೋಟಿಗೆ ಮುಟ್ಟಿದೆ. ಕೃಷಿಗೆ ರೂ10,917 ಕೋಟಿ (ಶೇ 58.15 ಅಧಿಕ), ಶಿಕ್ಷಣಕ್ಕೆ ರೂ874 ಕೋಟಿ (ಶೇ 17.79 ಹೆಚ್ಚು) ಸಾಲ ಸೇರಿದಂತೆ ಒಟ್ಟಾರೆ ಸಾಲ ವಿತರಣೆ ರೂ79,136 ಕೋಟಿಗೆ (ಶೇ 8.26) ಹೆಚ್ಚಳವಾಗಿದೆ. ಬ್ಯಾಂಕ್‌ನ ಒಟ್ಟು  ವಹಿವಾಟು ರೂ2,03,187 ಕೋಟಿಗೇರಿದೆ ಎಂದು ವಿವರಿಸಿದರು.

ಆದರೆ, ಎಂಎಸ್‌ಎಂಇ ವಿಭಾಗದ ಸಾಲ ವಿತರಣೆ ಪ್ರಮಾಣ ರೂ12,737 ಕೋಟಿಗೆ (ಮೈನಸ್‌ ಶೇ 1.67) ಇಳಿಕೆಯಾಗಿದೆ ಎಂದು ವಿವರಿಸಿದರು.

1ನೇ ಶ್ರೇಣಿ ಬಾಂಡ್‌ ಮೂಲಕ ಮತ್ತೆ ರೂ400 ಕೋಟಿ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆ ನಡೆದಿದೆ. 2ನೇ ಶ್ರೇಣಿ ಬಾಂಡ್‌ಗಳಿಂದ ಮಾರ್ಚ್‌ 31ಕ್ಕೂ ಮುನ್ನ ರೂ500 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು, ಬ್ಯಾಂಕ್‌ನ ವಹಿವಾಟು ಬಂಡವಾಳವನ್ನು ಹೆಚ್ಚಿಸಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT