ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಪಥ ಹೊಸ ರಥ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹಲವು ದಿನಗಳಿಂದ ನಟ ವಿಜಯ ರಾಘವೇಂದ್ರ ಕಟ್ಟಿಕೊಂಡಿದ್ದ ಕನಸಿಗೆ ಈಗ ರೆಕ್ಕೆಪುಕ್ಕ ಬಂದಿವೆ. ‘ಕಿಸ್ಮತ್’ ಚಿತ್ರದ ಮೂಲದ ನಿರ್ದೇಶಕನಾಗುವ ಕನಸು ಕೆಲವು ದಿನಗಳಲ್ಲಿ ನನಸಾಗಲಿದೆ. ಈ ಚಿತ್ರದ ಬಿಡುವಿಲ್ಲದ ಕೆಲಸಗಳ ಮಧ್ಯೆಯೇ ಒಂದಷ್ಟು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಇತ್ತೀಚಿನ ತಮ್ಮ ಸಿನಿಮಾ ಚಟುವಟಿಕೆಗಳ ಬಗ್ಗೆ ಅವರು ‘ಸಿನಿಮಾ ರಂಜನೆ’ ಜತೆ ಮಾತಾಡಿದ್ದಾರೆ.

*ನಿಮ್ಮ ನಿರ್ದೇಶನದ ಮೊದಲ ಚಿತ್ರ ‘ಕಿಸ್ಮತ್‌’ ಎಲ್ಲಿಯವರೆಗೆ ಬಂದಿದೆ..? ಏನದರ ವಿಶೇಷ?
ಜೀವನದಲ್ಲಿ ಎಲ್ಲವೂ ಸರಿಯಾಗಿ ಸಾಗುತ್ತಿದೆ ಎನ್ನುವ ಸಂದರ್ಭದಲ್ಲೇ ಯಾವುದೋ ಸಂಕಷ್ಟ ಎದುರಾಗುತ್ತದೆ. ಸೋಲಿನ ವಿರುದ್ಧ ಸೆಣೆಸಲು ಆಗದೇ ಮನುಷ್ಯ ಸುಸ್ತಾಗುತ್ತಾನೆ. ಬೇರೆ ಹಾದಿ ಹುಡುಕುವ ಸಮಯದಲ್ಲಿ ದೇವರು ಉತ್ತರ ನೀಡುತ್ತಾನೆ ಅಥವಾ ಕೆಲವು ಸಲ ನೀಡುವುದಿಲ್ಲ. ಅದನ್ನೇ ನಾವು ಹಣೆಬರಹ ಅನ್ನುತ್ತೇವೆ. ‘ಕಿಸ್ಮತ್‌’ ಅಂಥದೊಂದು ಸಂದೇಶದ ಕಥೆ. ಇದು ತಮಿಳಿನ ‘ನೇರಂ’ ಸಿನಿಮಾದ ರಿಮೇಕ್‌. ಆದರೆ ಅದನ್ನು ತುಂಬ ಫ್ರೆಶ್‌ ಆಗಿ ಮಾಡಿದ್ದೇನೆ. ಇದೊಂದು ಅಮೇಝಿಂಗ್‌ ಸಿನಿಮಾ ಅನಿಸಲಿದೆ. ಎಲ್ಲ ಸಿದ್ಧವಾದ ಬಳಿಕ ಪ್ರಚಾರ ಕಾರ್ಯ ಕೈಗೊಳ್ಳುವ ನಿರ್ಧಾರ ನನ್ನದು. ಅಲ್ಲಿಯವರೆಗೆ ತರಾತುರಿಯಲ್ಲಿ ಏನನ್ನೂ ಮಾಡುವುದು ನನಗಿಷ್ಟವಿಲ್ಲ.

*ಈಗಾಗಲೇ ಬಂದುಹೋದ ಚಿತ್ರಗಳಿಗಿಂತ ‘ವಂಶೋದ್ಧಾರಕ’ ಸಿನಿಮಾ ಹೇಗೆ ವಿಭಿನ್ನ?
ಈ ಸಿನಿಮಾದಲ್ಲಿ ರೈತರಿಗೆ ಒಂದು ಸಂದೇಶ ಕೊಡಲಿದ್ದೇವೆ. ಅದು ಕಥೆಯ ಮೂಲಕ ಬರುತ್ತದೆ. ಕುಟುಂಬದಲ್ಲಿನ ಸಂಬಂಧಗಳೇ ಇದರ ಗಟ್ಟಿ ತಳಪಾಯ. ನಮ್ಮ ಹಳ್ಳಿಗಳಲ್ಲಿ ಯಾವ ಯಾವ ತರಹದ ಜನರು ಇರುತ್ತಾರೆ? ಏನೇನು ಕಷ್ಟಗಳು ಎದುರಾಗಬಹುದು? ಈ ಹಿನ್ನೆಲೆಯಲ್ಲಿ ಸಿನಿಮಾ ತಯಾರಾಗಲಿದೆ. ಹಳ್ಳಿ, ಹಸಿರು ವಾಸ್ತವದ ನೆಲೆಗಟ್ಟಿನಲ್ಲಿ ತೆರೆ ಮೇಲೆ ಬರಲಿದೆ. ಚಿತ್ರದಲ್ಲಿ ಯುವಕನೊಬ್ಬ ಹಳ್ಳಿಗೆ ಬರುತ್ತಾನೆ. ಆತ ಸಾವಯವ ಕೃಷಿ ವಿಧಾನ ಅನುಸರಿಸುತ್ತಾನೆ. ಆ ಕೃಷಿ ವಿಧಾನ ಒಳ್ಳೆಯದು ಎಂಬುದು ನಿರ್ದೇಶಕರ ಬಲವಾದ ನಂಬಿಕೆ. ಅದನ್ನು ಕಥೆಯ ಮೂಲಕ ಹೇಳಲು ಹೊರಟಿದ್ದಾರೆ. ಅದು ಸಮಾಜದ ಮೇಲೆ ಯಾವ ತರಹದ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ ಎಂಬ ನಂಬಿಕೆ ಅವರದು. ನಾವು ಮಾಡುತ್ತಿರುವ ಮನರಂಜನೆಯ ಚಿತ್ರದಲ್ಲಿ ಆ ಒಳ್ಳೆಯ ಅಂಶ ಒಂದು ಸಲ ಬಂದು ಹೋಗುತ್ತದೆ. ಅದರಿಂದ ಜನರು ಪ್ರಯೋಜನ ಪಡೆದರೆ ಒಳ್ಳೆಯದು. ಆದರೆ ಅದನ್ನೊಂದೇ ಇಟ್ಟುಕೊಂಡು ಸಿನಿಮಾ ಮಾಡಹೊರಟರೆ ಅದು ಸಾಕ್ಯ್ಷಚಿತ್ರ ಆಗಿಬಿಡುತ್ತದೆ. ಹೀಗಾಗಿ ಭಾವುಕತೆ, ರೊಮ್ಯಾನ್ಸ್‌, ಕಾಮಿಡಿ ಎಲ್ಲವನ್ನೂ ಅಳವಡಿಸಿ ಎಲ್ಲೋ ಒಂದು ಕಡೆ ಬ್ಯಾಲೆನ್ಸ್ ಮಾಡಿದ್ದೇವೆ.

*ರಾಧಿಕಾ ಜತೆ ಅಭಿನಯಿಸಲಿರುವ ‘ನಮಗಾಗಿ’ ಸಿನಿಮಾ ‘ನಿನಗಾಗಿ’ ಮುಂದುವರಿಕೆಯೇ?
ಇದಕ್ಕೆ ಉತ್ತರ: ಒಂದರ್ಥದಲ್ಲಿ ಹೌದು ಹಾಗೂ ಅಲ್ಲ! ಈ ಚಿತ್ರ ‘ನಿನಗಾಗಿ’ ಸಿನಿಮಾದ ಪಾತ್ರಗಳ ವಿಸ್ತರಣೆಯೇ ಹೊರತೂ ಕಥೆಯ ವಿಸ್ತರಣೆ ಅಲ್ಲ. ಪ್ರೀತಿಸಿ, ಮದುವೆಯಾಗಿ ಸಂಸಾರ ಶುರು ಮಾಡಿದ ಮೇಲೆ ಪ್ರೀತಿ ಹೇಗಿರುತ್ತದೆ? ಸಂಬಂಧಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು? ಇದು ಚಿತ್ರಕಥೆ. ನಂಬಿಕೆ, ವಿಶ್ವಾಸ ಹಾಗೂ ಸಹನೆ– ಈ ಮೂರು ಅಂಶಗಳು ಇತ್ತೀಚಿನ ಸಂಸಾರಗಳಲ್ಲಿ ‘ಮಿಸ್‌’ ಆಗುತ್ತಿವೆ. ಇವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಇದರಲ್ಲಿದೆ. ಮೊನ್ನೆಯಷ್ಟೇ ಈ ಚಿತ್ರದ ಫೋಟೋ ಸೆಶನ್‌ ನಡೆಯಿತು. ನನ್ನ ಹಾಗೂ ರಾಧಿಕಾ ಜೋಡಿ ಮೊದಲಿನಷ್ಟೇ ಫ್ರೆಶ್ ಆಗಿದೆ ಎಂದು ಹಲವರು ಹೇಳಿದರು.

*‘ಶಿವಯೋಗಿ ಪುಟ್ಟಯ್ಯಜ್ಜ’ ಚಿತ್ರದಲ್ಲಿ ಗವಾಯಿಗಳ ಪಾತ್ರ ಮಾಡುವಾಗ ಏನನ್ನಿಸಿತು?
ಓಹ್! ಅಷ್ಟು ಅಳುಕು, ಆತಂಕ ಮತ್ತೆಂದೂ ನನ್ನನ್ನು ಕಾಡಿರಲಿಲ್ಲ. ಅದು ನನ್ನ ವೃತ್ತಿ ಜೀವನದಲ್ಲಿ ಸಿಕ್ಕ ಒಳ್ಳೆಯ ಅವಕಾಶ. ಈ ಮೊದಲು ‘ಪಂಚಾಕ್ಷರಿ ಗವಾಯಿ’ ಸಿನಿಮಾದಲ್ಲಿ ಅಭಿನಯಿಸಿದ್ದೇ ನನ್ನ ಅದೃಷ್ಟ. ಈಗ ಪುಟ್ಟರಾಜ ಗವಾಯಿಗಳ ಕುರಿತಾದ ಸಿನಿಮಾದಲ್ಲಿ..! ಆ ಅದೃಷ್ಟ ಇಮ್ಮಡಿಯಾಗಿದೆ. ನನಗಂತೂ ಸಾಕಷ್ಟು ಭಯ ಇತ್ತು. ಪ್ರತಿ ದೃಶ್ಯದ ಚಿತ್ರೀಕರಣಕ್ಕೆ ಮುನ್ನ ಪುಟ್ಟರಾಜ ಗವಾಯಿಗಳ ಫೋಟೋ ನೋಡುತ್ತಿದ್ದೆ. ಆ ಬಳಿಕ ಚಿತ್ರೀಕರಣ ಆರಂಭವಾಗುತ್ತಿತ್ತು. ಅವರ ಆಶ್ರಮದಲ್ಲಿರುವ ಶಿಷ್ಯರು ‘ಅಜ್ಜಾವ್ರು ಹೀಗೆಯೇ ಮಾಡ್ತಿದ್ರು’ ಅಂತಿದ್ದರು. ಇದೂ ಪ್ರೋತ್ಸಾಹ ಕೊಟ್ಟಂತಾಯಿತು. ಅಷ್ಟಕ್ಕೂ ನಾನು ನಿರ್ದೇಶಕರಿಗೆ, ‘ನನಗೆ ಇರೋ ವಿಶ್ವಾಸದಲ್ಲಿ ಈ ಸಿನಿಮಾ ಮಾಡ್ತಿಲ್ಲ. ನನ್ನ ಮೇಲೆ ನಿಮಗಿರೋ ವಿಶ್ವಾಸದ ಮೇಲೆ ಮಾಡ್ತೀನಿ’ ಅಂತ ಹೇಳಿದ್ದೆ. ಜಗ್ಗೇಶ್‌ ಅವರು ಈಚೆಗೆ ಹಾಡು ನೋಡಿದ ಕೂಡಲೇ ಫೋನ್‌ ಮಾಡಿ, ‘ಏನಯ್ಯ... ತುಂಬ ಚೆನ್ನಾಗಿ ಆ್ಯಕ್ಟ್‌ ಮಾಡಿದ್ದೀಯಾ’ ಅಂದರು. ಖುಷಿಯಾಯ್ತು.

*‘ಬಿಗ್‌ ಬಾಸ್‌’ ಯಶಸ್ಸನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ನೀವು ಬಯಸಲಿಲ್ಲವೇ?
ಅದು ಹಾಗಲ್ಲ... ರಿಯಾಲಿಟಿ ಷೋದಲ್ಲಿ ಗೆದ್ದು ಬಂದರೆ ಸೂಪರ್‌ ಸ್ಟಾರ್‌ ಆಗಬಹುದು ಎಂಬ ಭ್ರಮೆ ಜನರಲ್ಲಿದೆ. ಅದು ಸುಳ್ಳು ಅಂತ ನಾನು ಹೇಳುವುದಿಲ್ಲ. ‘ಬಿಗ್‌ ಬಾಸ್‌’ನಿಂದ ನಾನು ಜನರಿಗೆ ಇನ್ನೂ ಹತ್ತಿರ ಆಗಿದ್ದೇನೆ. ಗೆಲ್ಲದೇ ಹೋಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಗೆದ್ದ ಬಳಿಕ ನನ್ನ ಅಸ್ತಿತ್ವದ ದಿನಗಳು ಹೆಚ್ಚಾಗಿವೆ. ಎಕ್ಸ್‌ಟ್ರಾ ಮೈಲೇಜ್‌ ಸಿಕ್ಕಿದ್ದಂತೂ ನಿಜ. ಅದನ್ನೇ ಹಿಡಿದುಕೊಂಡು ‘ಕಿಸ್ಮತ್’ ಮಾಡಿದ್ದೇನೆ. ಮುಂದಿನ ವರ್ಷ ಕೂಡ ಒಂದು ಸಿನಿಮಾ ನಿರ್ದೇಶನ ಮಾಡುವ ಆಸೆಯಿದೆ. ಕಥೆ ಹುಡುಕುತ್ತ ಇದ್ದೇನೆ. ಆದರೆ ಆ ಸಿನಿಮಾದಲ್ಲಿ ನಾನು ಅಭಿನಯಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT