ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ ಜಿಲ್ಲೆಯಲ್ಲಿ ಮತದಾನ ಶಾಂತಿಯುತ

Last Updated 18 ಏಪ್ರಿಲ್ 2014, 7:01 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಕೆಲವೆಡೆ ಮತದಾರರ ಪಟ್ಟಿಯಲ್ಲಿ ಗೊಂದಲ, ಮತಯಂತ್ರದಲ್ಲಿ ದೋಷದಿಂದ ಸ್ವಲ್ಪ ವಿಳಂಬ, ಅಲ್ಲಲ್ಲಿ ಚಿಕ್ಕಪುಟ್ಟ ವಾಗ್ವಾದ ಹೊರತು ಪಡಿಸಿದರೆ ಯಾವುದೇ ತೊಂದರೆಯಾಗಲಿಲ್ಲ.

ವಿಜಾಪುರ ಕ್ಷೇತ್ರದಲ್ಲಿ ಪ್ರಾಥಮಿಕ ವರದಿಯಂತೆ ಶೇ 55ರಷ್ಟು ಮತದಾನವಾಗಿದೆ. ಮತದಾನದ ನಿಖರ ಮಾಹಿತಿ ಶುಕ್ರವಾರ ಬೆಳಿಗ್ಗೆ ದೊರೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದರು. ಕಳೆದ ಅಂದರೆ 2009ರಲ್ಲಿ ಜಿಲ್ಲೆಯಲ್ಲಿ ಶೇ 47.27ರಷ್ಟು ಮತದಾನವಾಗಿತ್ತು.

ವಿಜಾಪುರ ಜಲನಗರದ ಮತಗಟ್ಟೆ ಸಂಖ್ಯೆ 206ರಲ್ಲಿ ಮತ ಯಂತ್ರದ ದೋಷದಿಂದ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡರೆ, ದರ್ಗಾದ ಮತಗಟ್ಟೆ ಸಂಖ್ಯೆ 27ರಲ್ಲಿ ಮತಯಂತ್ರದ ಬ್ಯಾಟರಿ ಚಾರ್ಜ್‌ ಮುಗಿದಿದ್ದರಿಂದ ಅರ್ಧಗಂಟೆ ಮತದಾನ ಸ್ಥಗಿತಗೊಂಡಿತ್ತು. ಮತ್ತೊಂದು ಮತಯಂತ್ರ ಅಳವಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ವಿಜಾಪುರ ವಿವೇಕನಗರದ ಮತಗಟ್ಟೆ 245ರಲ್ಲಿ ಕಾಂಗ್ರೆಸ್ಸಿಗರು ನಕಲಿ ಮತದಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯವರು ತಕರಾರು ತೆಗೆದರು. ಉಭಯ ಪಕ್ಷಗಳವರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರು ಪರಿಸ್ಥಿತಿ ನಿಭಾಯಿಸಿದರು. ಹುಡ್ಕೊ ಮತಗಟ್ಟೆಯಲ್ಲಿ ಆಮ್‌ ಆದ್ಮಿ ಪಕ್ಷದವರು ತಮ್ಮ ಪಕ್ಷದ ಚಿಹ್ನೆ ಇರುವ ಟೊಪ್ಪಿಗೆ ಧರಿಸಿ ಮತಗಟ್ಟೆಯಲ್ಲಿ ಸಂಚರಿಸಿದರು ಎಂದು ಕೆಲ ಸಾರ್ವಜನಿಕರು ಆಕ್ಷೇಪಿಸಿದರು.

ಮತದಾನಕ್ಕೆ ನಗರ ಪ್ರದೇಶದಲ್ಲಿ ನಿರುತ್ಸಾಹ ಕಂಡು ಬಂದರೆ, ಗ್ರಾಮೀಣ ಪ್ರದೇಶದಲ್ಲಿ ಜನ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ವಿಜಾಪುರದ ಐಟಿಐ ಕಾಲೇಜಿನ ಮತಗಟ್ಟೆ ಸಂಖ್ಯೆ 14 ಮತ್ತು 15ಕ್ಕೆ ಬೆಳಿಗ್ಗೆ 9 ಗಂಟೆಗೆ ಹೋದರೆ ಅಲ್ಲಿ ಬೆರಳೆಣಿಕೆಯಷ್ಟು ಮತದಾರರು ಆಗಮಿಸಿದ್ದರು.

‘ಪ್ರತಿ ಚುನಾವಣೆಯಲ್ಲಿಯೂ ಈ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇರುತ್ತಿದ್ದರು. ಈ ಬಾರಿ ಮತಗಟ್ಟೆಗೆ ಆಗಮಿಸುವ ಮತದಾರರ ಪ್ರಮಾಣ ಕಡಿಮೆ’ ಎಂದು ಮಹಿಳಾ ಮತದಾರರೊಬ್ಬರು ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆ ಸ್ವಲ್ಪ ಹೆಚ್ಚಿನ ಜನ ಕಂಡು ಬಂದರು. ಇಲ್ಲಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆ 9ಕ್ಕೆ 977ರಲ್ಲಿ 107 ಜನ, 743ರಲ್ಲಿ 76, 1250ರಲ್ಲಿ 170 ಜನ ಮತದಾರರು ಮತ ಚಲಾಯಿಸಿದ್ದರು.

ಬೆಳಿಗ್ಗೆ 10.45ರ ಸುಮಾರಿಗೆ ದರ್ಗಾ ಮತಗಟ್ಟೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬಬಲೇಶ್ವರ ಮತಕ್ಷೇತ್ರದ ಇಟ್ಟಂಗಿ ಹಾಳ , ಇಟ್ಟಂಗಿಹಾಳ ತಾಂಡಾ ನಂ.1, ಲೋಹಗಾಂವ, ದಂಧರಗಿ, ತಿಕೋಟಾ ಗ್ರಾಮಗಳಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಮಹಿಳೆಯರು–ಪುರುಷರೆಲ್ಲ ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT