ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ,ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯಾಗಲಿ

ಯಲಹಂಕ ಕ್ಷೇತ್ರದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾ.ಸೋಮಶೇಖರ್‌
Last Updated 5 ಅಕ್ಟೋಬರ್ 2015, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಭಾಷೆಯನ್ನು ಆಡಳಿತ, ವಾಣಿಜ್ಯ ಹಾಗೂ ವಿಜ್ಞಾನ–ತಂತ್ರಜ್ಞಾನದ ಭಾಷೆಯನ್ನಾಗಿ ಮಾಡಬೇಕು’ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾ.ಸೋಮಶೇಖರ್‌ ಹೇಳಿದರು. ಯಲಹಂಕ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

‘ಜಗತ್ತಿನಲ್ಲಿ ದೊರೆಯುವ ಎಲ್ಲ ಸಾಹಿತ್ಯ ಪ್ರಕಾರಗಳು ಕನ್ನಡದಲ್ಲಿ ಲಭ್ಯ ವಾಗಬೇಕು. ಹಾಗೆಯೇ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳು ವಿಶ್ವದ ಇತರ ಭಾಷೆಗಳಿಗೆ ಅನುವಾದವಾಗಬೇಕು’ ಎಂದು ತಿಳಿಸಿದರು.

‘ಕಂಪ್ಯೂಟರ್‌ಗಳಲ್ಲಿ ‘ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ’ ಬಳಸಲಾಗುತ್ತಿದ್ದು, ಅದನ್ನು ಲಿನಿಕ್ಸ್ ಗೆ ಬದಲಾಯಿಸಿಕೊಳ್ಳಬೇಕು. ಅದು ಉಚಿತ ತಂತ್ರಾಂಶವಾಗಿದ್ದು, ಇದರಿಂದ ಸರ್ಕಾರಕ್ಕೆ ಅಪಾರ ಹಣ ಉಳಿತಾಯವಾಗುವುದರ ಜೊತೆಗೇ ಲಿನಿಕ್ಸ್ ವ್ಯವಸ್ಥೆಯಲ್ಲಿ ನಡೆಯುವ ಎಲ್ಲ ಸಂಶೋಧನೆ ಹಾಗೂ ಅಭಿವೃದ್ಧಿಗಳು ಉಚಿತವಾಗಿ ದೊರೆಯುತ್ತವೆ’ ಎಂದು ತಿಳಿಸಿದರು.

‘ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಸುಳ್ಳನ್ನು ಶಾಲಾ ಪಠ್ಯಪುಸ್ತಕಗಳಿಂದ ಆರಂಭಿಸಿ, ಎಲ್ಲ ಸಾರ್ವಜನಿಕ ರಂಗಗಳಲ್ಲಿ ಬಿಂಬಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಹಿಂದಿಯನ್ನು ಒತ್ತಾಯಪೂರ್ವಕವಾಗಿ ನಾನಾ ರೀತಿಯಲ್ಲಿ ಹೇರುವ ಪ್ರಯತ್ನ ಸರಿಯಲ್ಲ’ ಎಂದರು.

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಮಾತನಾಡಿ, ‘ಮಂಗಳಯಾನ, ಚಂದ್ರಯಾನ ಹಾಗೂ ಇತ್ತೀಚಿನ ಆಸ್ಟ್ರೊಸ್ಯಾಟ್‌ ಉಪಗ್ರಹ ಉಡಾವಣೆಯಿಂದಾಗಿ ಸಂವಹನ ಕ್ಷೇತ್ರ ಹಾಗೂ ನಕ್ಷತ್ರಲೋಕದ ಅಧ್ಯಯನಕ್ಕೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಯಲಹಂಕದ ಸಂತೆ ವೃತ್ತದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯಿಂದ ಪ್ರಮುಖ ಮಾರ್ಗಗಳ ಮೂಲಕ ಸಮ್ಮೇಳನದ ಸ್ಥಳದವರೆಗೆ  ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ‘ಅಮ್ಮ ಫೌಂಡೇಶನ್‌ ಹೆಲ್ಪ್‌ ಅಂಡ್‌ ಗ್ರೋ’ ಸಂಸ್ಥೆಯ ಕಾರ್ಯಕರ್ತರು 333 ಅಡಿ ಉದ್ದದ ಕನ್ನಡ ಧ್ವಜ ಹಾಗೂ 100 ಅಡಿ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ  ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT