ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳ ಮಾತನ್ನು ರಾಜಕಾರಣಿಗಳು ಕೇಳಲ್ಲ

ವಾರದ ಸಂದರ್ಶನ: ಪ್ರೊ. ಕೆ.ಎಸ್‌.ರಂಗಪ್ಪ ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ
Last Updated 26 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

13 ವರ್ಷಗಳ ನಂತರ ಭಾರತೀಯ ವಿಜ್ಞಾನ ಸಮಾವೇಶ ನಡೆಸುವ ಭಾಗ್ಯ ಕರ್ನಾಟಕಕ್ಕೆ ಲಭಿಸಿದೆ.  ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 103ನೇ ಭಾರತೀಯ ವಿಜ್ಞಾನ ಸಮಾವೇಶ  2016ರ ಜನವರಿ 3ರಿಂದ 7ರವರೆಗೆ ನಡೆಯಲಿದೆ. ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಕುಲಪತಿ ಪ್ರೊ. ಕೆ.ಎಸ್‌.ರಂಗಪ್ಪ ಸಾಕಷ್ಟು ಶ್ರಮವಹಿಸಿ ಈ ಸಮಾವೇಶವನ್ನು ಮತ್ತೊಮ್ಮೆ  ಕರ್ನಾಟಕಕ್ಕೆ ತಂದಿದ್ದಾರೆ. ರಸಾಯನಶಾಸ್ತ್ರ ವಿಜ್ಞಾನಿಯೂ ಆಗಿರುವ ಪ್ರೊ. ರಂಗಪ್ಪ ಸಮಾವೇಶದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

* ಭಾರತೀಯ ವಿಜ್ಞಾನ ಸಮಾವೇಶದ ಮಹತ್ವವೇನು?
ಭಾರತದಲ್ಲಿರುವ ಬಹುತೇಕ ಎಲ್ಲ ವಿಜ್ಞಾನಿಗಳ ಸಮುದಾಯವು ಇಲ್ಲಿ ಸೇರುತ್ತದೆ. ದೇಶದ ವಿಜ್ಞಾನ ಕ್ಷೇತ್ರದಲ್ಲಿನ ಗಣನೀಯ ಬೆಳವಣಿಗೆಗಳ ಬಗ್ಗೆ ಇಲ್ಲಿ ಚರ್ಚೆಯಾಗುತ್ತದೆ. ಭಾರತದ ಆಚೆ ನಡೆಯುತ್ತಿರುವ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ವಿದೇಶಿ ವಿಜ್ಞಾನಿಗಳ ಜತೆ ಚರ್ಚಿಸಲಾಗುತ್ತದೆ. ಇಲ್ಲಿ 15 ಸಾವಿರ ವಿಜ್ಞಾನಿಗಳು ಭಾಗವಹಿಸುತ್ತಾರೆ. ‘ನೊಬೆಲ್‌ ಪ್ರಶಸ್ತಿ’ ಪುರಸ್ಕೃತ ವಿಜ್ಞಾನಿಗಳು ಬರುತ್ತಾರೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತರಿಗೆ ಸಮಾನವಾದ ಇತರ ವಿಜ್ಞಾನಿಗಳೂ ಇರುತ್ತಾರೆ. ಅವರವರ ದೇಶದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ನಮಗೆ ತಿಳಿಸುತ್ತಾರೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಪರಿಸರವಿಜ್ಞಾನ ಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.

ವಿಜ್ಞಾನದಲ್ಲಿ ಡಿಬಿಟಿ, ಸಿಎಸ್‌ಐಆರ್‌, ಡಿಆರ್‌ಡಿಒ ಸಂಸ್ಥೆಗಳ ಪಾತ್ರವೇನು ಎಂಬ ಚರ್ಚೆ ಇಲ್ಲಾಗುತ್ತದೆ. ಭಾರತಕ್ಕೆ ಈ ಸಂಸ್ಥೆಗಳ ಕಾಣಿಕೆ ಹೇಗಿರಬೇಕು ಎಂಬ ಬಗ್ಗೆಯೂ ಚರ್ಚೆಯಾಗುತ್ತದೆ. ಒಟ್ಟಾರೆಯಾಗಿ ಈ ಸಮಾವೇಶದಿಂದ ಭಾರತೀಯ ವಿಜ್ಞಾನಿಗಳ ಸಮುದಾಯಕ್ಕೆ ಮತ್ತು ದೇಶಕ್ಕೆ ಅನುಕೂಲವಾಗುತ್ತದೆ. ‘ವಿಜ್ಞಾನ ಮತ್ತು ತಂತ್ರಜ್ಞಾನದಿಂದ ದೇಸೀಯ ಅಭಿವೃದ್ಧಿ’ ಎಂಬುದು ಈ ಸಮಾವೇಶದ ಘೋಷವಾಕ್ಯ. ಇಲ್ಲಿ ಸಮಾವೇಶ ನಡೆಯುತ್ತಿರುವುದರಿಂದ ಮೈಸೂರು ವಿಶ್ವವಿದ್ಯಾಲಯದ ಘನತೆ ನೂರುಪಟ್ಟಾಗುತ್ತದೆ.

* ಭಾರತೀಯ ವಿಜ್ಞಾನ ಸಮಾವೇಶದ ಜವಾಬ್ದಾರಿ ನಿಮಗೆ ಸಿಕ್ಕಿದ್ದು ಹೇಗೆ?
ಈ ಸಮಾವೇಶ ನಡೆಸಲು ಪಟ್ಟಿರುವ ಶ್ರಮ ದೊಡ್ಡದು. ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸದಸ್ಯನೂ ಆಗಿರುವ ನಾನು,  ಮೈಸೂರು ವಿಶ್ವವಿದ್ಯಾನಿಲಯದ  ಶತಮಾನೋತ್ಸವ ಆಚರಣೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಬೇಕೆಂದು, 2014ರಲ್ಲೇ ಪ್ರಸ್ತಾವವನ್ನು ಸಂಘದ ಮುಂದಿಟ್ಟಿದ್ದೆ. ಎರಡು ವರ್ಷದ ನಂತರ ಇದು ನನಸಾಗಿದೆ.

* ಇದರಲ್ಲಿ ನಿಮ್ಮ ಪ್ರತಿಷ್ಠೆಯ ಪ್ರಶ್ನೆಯೂ ಇತ್ತಲ್ಲವೇ?
ಈ ಸಮಾವೇಶ ಮಾಡುತ್ತಿರುವುದು ಪ್ರತಿಷ್ಠೆಗಾಗಿ ಅಲ್ಲ. ವಿದ್ಯಾರ್ಥಿ ಸಮುದಾಯಕ್ಕೆ ಈ ಸಮಾವೇಶದ ಪ್ರಯೋಜನಆಗಬೇಕು, ಅವರಿಗೆ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಜ್ಞಾನ ಸಿಗಬೇಕು ಎಂಬುದು ನನ್ನ ಬಯಕೆ. ಇದೇ ಸಂದರ್ಭದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ, ಮಹಿಳಾ ವಿಜ್ಞಾನ ಸಮಾವೇಶ, ವಿಜ್ಞಾನ ಸಂವಹನಕಾರರ ಸಭೆಗಳು ನಡೆಯುತ್ತವೆ. ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ವಿಜ್ಞಾನದಲ್ಲಿ ಮಕ್ಕಳ ಚಟುವಟಿಕೆಯ ಸ್ವರೂಪದ ಬಗ್ಗೆ ಚರ್ಚೆಯಾಗುತ್ತದೆ. ಈ ಸಮಾವೇಶವನ್ನು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಜಾನ್‌ ಬಿ. ಗಾರ್ಡನ್‌ ಉದ್ಘಾಟಿಸುತ್ತಾರೆ. ಮಹಿಳಾ ವಿಜ್ಞಾನಿಗಳ ಚಟುವಟಿಕೆಗಳ ಬಗ್ಗೆ ನಡೆಯುವ ಮಹಿಳಾ ವಿಜ್ಞಾನ ಸಮಾವೇಶವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸುತ್ತಾರೆ. ವಿಜ್ಞಾನ ಸಂವಹನಕಾರರ ಸಭೆಯನ್ನು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಡ್ಯಾನ್ ಸ್ಕೆಟ್‌ಮನ್‌ ಉದ್ಘಾಟಿಸುತ್ತಾರೆ.

* ವಿಶ್ವವಿದ್ಯಾನಿಲಯ ಶತಮಾನೋತ್ಸವ ಆಚರಣೆ ಕೇವಲ ಈ ರೀತಿಯ ಕಾರ್ಯಕ್ರಮಗಳ ಆಯೋಜನೆಯೇ ಅಥವಾ ವಿಶ್ವವಿದ್ಯಾನಿಲಯವನ್ನು ಕಟ್ಟುವ ಕಾರ್ಯಕ್ರಮಗಳೂ ಇವೆಯೇ?
ಈ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಕಣ್ಣಿಗೆ ರಾಚುವಂತೆ ಇತ್ತು. ಎಲ್ಲ ವಿಭಾಗಗಳ ಕಟ್ಟಡಗಳೂ ಹಳೆಯವಾಗಿ ಸೂರು ಸೋರುತ್ತಿತ್ತು. ಓದುವ ವಾತಾವರಣವೇ ಇರಲಿಲ್ಲ. ಶತಮಾನೋತ್ಸವ ಆಚರಣೆ ಅಂಗವಾಗಿ ಅಭಿವೃದ್ಧಿಕಾರ್ಯ ನಡೆದು, ಎಲ್ಲ ಅಧ್ಯಯನ ವಿಭಾಗಗಳಲ್ಲಿ ಹೊಸತನ ಬಂದಿದೆ. ಅಧ್ಯಯನ ಚಟುವಟಿಕೆ ಚುರುಕಾಗಿದೆ. ಈಗ ಶೈಕ್ಷಣಿಕ ಪರಿಶೀಲನೆ ನಡೆಯುತ್ತಿದೆ. ಶಿಕ್ಷಕರು ಕಳ್ಳಾಟ ಆಡುವಂತೆಯೇ ಇಲ್ಲ.

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಅವರು ಮುತುವರ್ಜಿ ವಹಿಸಿ, ಪ್ರತಿನಿತ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಚಟುವಟಿಕೆ ದಾಖಲಾಗುವಂತೆ ಮಾಡಿದ್ದಾರೆ. ಸರಿಯಾಗಿ ಪಾಠ ಮಾಡದಿದ್ದರೆ ಶಿಕ್ಷಕರಿಗೆ ಸಂಬಳ ಸಿಗುವುದಿಲ್ಲ. ಈ ಹಿಂದೆ ವಿದ್ಯಾರ್ಥಿನಿಲಯಗಳಲ್ಲಿ ಅಸಹ್ಯಕರ ವಾತಾವರಣವಿತ್ತು. ಈಗ ಸ್ವರ್ಗದಂತಾಗಿದೆ. ಇವೆಲ್ಲಾ ಆಗಿರುವುದು ಶತಮಾನೋತ್ಸವ ಆಚರಣೆಯ ಅಂಗವಾಗಿ. ವಿಶ್ವವಿದ್ಯಾನಿಲಯದಲ್ಲಿ ಈಗ ವಾಸ್ತುಶಿಲ್ಪ ಮತ್ತು ಯೋಜನಾ ಶಾಲೆ ಹಾಗೂ ಮೌಲ್ಯಭವನಗಳನ್ನು ತಲಾ ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದಾವುದಕ್ಕೂ ಸರ್ಕಾರದಿಂದ ಹಣ ಪಡೆದಿಲ್ಲ. ಅನೇಕ ಸಂಘ ಸಂಸ್ಥೆಗಳು ದೇಣಿಗೆ ನೀಡಿವೆ.

* ಭಾರತೀಯ ವಿಜ್ಞಾನ ಸಮಾವೇಶ ಸಂಘವು ಆರಂಭಗೊಂಡ ಉದ್ದೇಶ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಚುರುಕುಗೊಳಿಸುವುದಾಗಿತ್ತು. ಈ ಉದ್ದೇಶ ನಮ್ಮ ದೇಶದಲ್ಲಿ ಈಡೇರಿದೆ ಎಂದು ನಿಮಗನ್ನಿಸುತ್ತದೆಯೇ?
ಖಂಡಿತವಾಗಿಯೂ ವೈಜ್ಞಾನಿಕ ಚಟುವಟಿಕೆಗಳು ಚುರುಕಾ ಗಿವೆ. ಆದರೆ, ವೈಜ್ಞಾನಿಕ ಮನೋಭಾವ ರಾತ್ರಿ ಬೆಳಗಾಗುವು ದರಲ್ಲಿ ಬರುವುದಿಲ್ಲ. ಒಬ್ಬ ವಿಜ್ಞಾನಿ ಒಂದೇ ದಿನದಲ್ಲಿ ಸಂಶೋಧನೆ ಮಾಡಿ ಮುಗಿಸುವುದಿಲ್ಲ. ಅದಕ್ಕೆ  ವರ್ಷಗಳೇ ಬೇಕು. ಸ್ವಾತಂತ್ರ್‍ಯ ಬಂದ ದಿನದಿಂದ ಭಾರತದ ವಿಜ್ಞಾನಿಗಳು ತಮ್ಮದೇ ಜಾಗತಿಕ ವ್ಯಕ್ತಿತ್ವವನ್ನು ರೂಪಿಸಿ ಕೊಂಡಿದ್ದಾರೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇರುವಂತೆ, ವೈಜ್ಞಾನಿಕ ಚಟುವಟಿಕೆ ಗಳಿಗೆ ಪ್ರೋತ್ಸಾಹ ಹಾಗೂ ಸೌಲಭ್ಯ ಭಾರತದಲ್ಲಿ ಇನ್ನೂ ಸಿಕ್ಕಿಲ್ಲ.

* ವಿಜ್ಞಾನಿಗಳಿಗೆ ರಾಜಕೀಯ ಶಕ್ತಿಯೂ ಇರಬೇಕು ಎಂದು ನಿಮಗನ್ನಿಸುವುದೇ?
ವಿಜ್ಞಾನಿಗಳು ರಾಜಕೀಯಕ್ಕೆ ಇಳಿಯಲಾಗದು. ಆದರೆ, ನ್ಯಾಯ ಕೇಳುವ ಶಕ್ತಿ ಅವರಿಗೆ ಇರಬೇಕು. ನಮ್ಮ ರಾಜಕಾರಣಿಗಳೇ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ನಮ್ಮಿಂದ ಹೇಳಿಸಿಕೊಳ್ಳಬಾರದು. ಸಂಶೋಧನೆಗಳು ಆಗದೇ ಇದ್ದರೆ ಈ ದೇಶಕ್ಕೆ ಉಳಿಗಾಲವೇ ಇಲ್ಲ. ಈ ರೀತಿಯ ಸಮ್ಮೇಳನಗಳಲ್ಲಿ ಈ ಬಗ್ಗೆ ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸುತ್ತೇವೆ. ಆದರೆ, ಆಗಲೂ ಸರ್ಕಾರ ಅದನ್ನು ಅನುಷ್ಠಾನ ಮಾಡದೇ ಇದ್ದರೆ ಏನೂ ಮಾಡಲು ಆಗುವುದಿಲ್ಲ. ಒಬ್ಬ ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹೇಳುವ ಮಾತನ್ನು ಅಮೆರಿಕದ ಅಧ್ಯಕ್ಷರು ಗೌರವಿಸುತ್ತಾರೆ. ಸಲಹೆಗಳನ್ನು ಜಾರಿಗೊಳಿಸುತ್ತಾರೆ. ಆದರೆ, ಈ ದೇಶದಲ್ಲಿ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಕಿವಿಗಳೇ ಇಲ್ಲ. ಇದೇ ಈ ದೇಶದ ದುರಂತ.

* ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿಜ್ಞಾನ ಕ್ಷೇತ್ರದ ಸಂಶೋಧನೆಗಳಿಗೆ ಅನುಕೂಲವಾಗುತ್ತಿದೆಯೇ?
ಬಜೆಟ್‌ನಲ್ಲಿ ಹಣವೇ ಇಲ್ಲ ಎಂದ ಮೇಲೆ ಸಹಾಯಧನ, ಪ್ರಶಸ್ತಿ ಕೊಡುವುದು ಹೇಗೆ? ಹಾಗಾಗಿ, ಕಡಿಮೆಯೇ ಕೊಡ ಬೇಕು. ಹತ್ತು ವಿದ್ಯಾರ್ಥಿವೇತನ ಕೊಡುವ ಜಾಗದಲ್ಲಿ ಒಂದೇ ವಿದ್ಯಾರ್ಥಿವೇತನ ಕೊಡ ಬೇಕಾಗುತ್ತದೆ. ಸರ್ಕಾರವೇ ಇದನ್ನು ಅರಿತುಕೊಂಡು ಬಜೆಟ್‌ ಗಾತ್ರ ವನ್ನು ಹೆಚ್ಚಿಸಬೇಕು. 15 ವರ್ಷಗಳಿಂದ ಭಾರತದಲ್ಲಿ ಮೂಲವಿಜ್ಞಾನ ಶಿಕ್ಷಣಕ್ಕೆ ವಿದ್ಯಾರ್ಥಿಗಳೇ ಸೇರುತ್ತಿಲ್ಲ. ಇದಕ್ಕೆ ಕಾರಣ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಿಲ್ಲ, ವಿದ್ಯಾರ್ಥಿವೇತನ ವಿಲ್ಲ.

ಉದ್ಯೋಗಗಳೂ ಸಿಗುತ್ತಿಲ್ಲ. ಸಿಕ್ಕರೂ ಕಡಿಮೆ ವೇತನ. ಆದರೆ, ಐಟಿ-ಬಿಟಿ ಉದ್ಯೋಗಗಳನ್ನು ಪಡೆದರೆ ಕೈತುಂಬಾ ವೇತನ ಸಿಗುತ್ತದೆ. ಹೀಗಿರುವಾಗ ಮೂಲವಿಜ್ಞಾನ ಯಾರಿಗೆ ಬೇಕು? ಸಂಬಳ ಹೆಚ್ಚಿರುವಲ್ಲಿ ಬುದ್ಧಿವಂತರು ಹೋಗುವುದನ್ನು ತಪ್ಪು ಅನ್ನಲಾಗುತ್ತದೆಯೇ? ಪ್ರತಿಭೆಯ ಆಧಾರದಲ್ಲಿ ವಿಜ್ಞಾನದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕೊಡಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿ ಬುದ್ಧಿವಂತ ಎಂದು ತಿಳಿದರೆ ಸಾಕು, ಅವನ ಶಿಕ್ಷಣದ ಎಲ್ಲ ಜವಾಬ್ದಾರಿಯನ್ನು ಸರ್ಕಾರವೇ ಭರಿಸಿಬಿಡುತ್ತದೆ. ಇಲ್ಲಿ ಬಡವರು, ಬುದ್ಧಿವಂತರು ಓದುವುದೇ ಕಷ್ಟವಾಗಿದೆ.

* ನಮ್ಮಲ್ಲಿ ವೈಜ್ಞಾನಿಕ ಸಂಶೋಧನೆಗಳು ಪ್ರಯೋಗಾಲಯವನ್ನು ದಾಟಿ, ಜನಸಾಮಾನ್ಯರಿಗೆ ತಲುಪುತ್ತಿವೆಯೇ? ವೈಜ್ಞಾನಿಕ ಸಂಶೋಧನೆಗಳು ಜನರಿಗೆ ತಲುಪುವಂತೆ ಮಾಡಲು ಈ ರೀತಿಯ ಸಮಾವೇಶಗಳು ಸಹಕಾರಿಯೇ?
ಕೆಲವು ಸಂಶೋಧನೆಗಳು ತಲುಪುತ್ತವೆ; ಕೆಲವು ಪ್ರನಾಳದಲ್ಲೇ ಉಳಿಯುತ್ತವೆ. ಸರ್ಕಾರ ಅವನ್ನು ಜನರಿಗೆ ತಲುಪಿಸಬೇಕು. ವಿಜ್ಞಾನಿಗಳ ಕೆಲಸ ಸಂಶೋಧನೆ ಮಾತ್ರ. ಅದನ್ನು ಅನುಷ್ಠಾನ ಮಾಡುವುದು ನಾವೇನು? ನಾವು ಅನುಷ್ಠಾನಕ್ಕೆ ಸಲಹೆ ಮಾಡುತ್ತೇವೆ. ಸರ್ಕಾರ ನಿಷ್ಕ್ರಿಯವಾಗಿದ್ದರೆ ನಾವೇನೂ ಮಾಡಲಾಗುವುದಿಲ್ಲ. ಜನಸಾಮಾನ್ಯರಿಗೆ ಮುಟ್ಟಿಸಿ ಎಂದು ಸಂಸತ್ ಭವನದ ಎದುರು ವಿಜ್ಞಾನಿಗಳು ಪ್ರತಿಭಟನೆ ಮಾಡಲಾಗುವುದಿಲ್ಲ. ಪ್ರಧಾನಮಂತ್ರಿ, ಶಿಕ್ಷಣ ಮಂತ್ರಿಗೆ ಕಾಗದ ಬರೆಯುತ್ತೇವೆ. ಆದರೂ ನಮಗೆ ಪ್ರೋತ್ಸಾಹ ಸಿಗದೇ ಹೋದರೆ ನಾವು ಹುಮ್ಮಸ್ಸು ಕಳೆದುಕೊಂಡು ನಿಷ್ಕ್ರಿಯರಾಗುತ್ತೇವೆ. ಈ ರೀತಿಯ ಸಮಾವೇಶಗಳು ಈ ಕುರಿತು ಖಂಡಿತಾ ಸರ್ಕಾರದ ಗಮನಸೆಳೆಯುತ್ತವೆ.

* ಸ್ವತಂತ್ರ ಭಾರತದಲ್ಲಿ ಆಧುನಿಕ ಶಿಕ್ಷಣದಿಂದ ಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗುವ ಜತೆಗೆ, ವೈಜ್ಞಾನಿಕ ಮನೋಭಾವ ಜನರಲ್ಲಿ ಹೆಚ್ಚಬೇಕಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಅಜ್ಞಾನ, ಮೂಢನಂಬಿಕೆ ಹೆಚ್ಚಾಗುತ್ತಿದೆ. ಇದನ್ನು ವಿಜ್ಞಾನಿಗಳು ತಪ್ಪಿಸಬಲ್ಲರೇ?
ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಪ್ರಯತ್ನ ಸಾಕಾಗುತ್ತಿಲ್ಲ. ಇದು ನಿರಂತರವಾಗಿ ನಡೆಯುತ್ತಲೇ ಇರಬೇಕು. ಚೀನಾದಲ್ಲಿ ನಮಗಿಂತ ಹೆಚ್ಚು ಜನಸಂಖ್ಯೆ ಇದೆ. ಆದರೂ, ಕಳೆದ 10 ವರ್ಷಗಳಲ್ಲಿ ಅವರು ಮುಂದುವರಿಯಲು ಕಾರಣ ಅವರ ವೈಜ್ಞಾನಿಕ ಮನೋಭಾವ. ಅಮೆರಿಕವನ್ನೂ ಅವರು ಮೀರಿಸುತ್ತಿದ್ದಾರೆ. ಇದು ನಮ್ಮ ಕೈಯಲ್ಲಿ ಏಕಾಗುವುದಿಲ್ಲ? ಚೀನಾದವರಿಗಿಂತಲೂ ಹೆಚ್ಚಿನ ಬುದ್ಧಿವಂತರು ನಮ್ಮಲ್ಲಿದ್ದಾರೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಆದರೆ, ಮೂವತ್ತು ವರ್ಷ ಹಿಂದಿನ ಕಾಲಕ್ಕೆ ಹೋಲಿಸಿದರೆ ಮೌಢ್ಯ, ಕಂದಾಚಾರ ಕಡಿಮೆಯಾಗಿದೆ. ನಾವು ವೈಜ್ಞಾನಿಕವಾಗಿ ಬೆಳೆದಿದ್ದೇವೆ. ಅದನ್ನು ತಳ್ಳಿಹಾಕಲಾಗದು.

* ಭಾರತದಲ್ಲಿ ಹೊಸ ಸಂಶೋಧನೆಗಳು ಆಗುತ್ತಿಲ್ಲ. ಬಹುತೇಕ ಸಂಶೋಧನೆಗಳು ಈಗಾಗಲೇ ಆಗಿರುವ ಸಂಶೋಧನೆಗಳ ಪ್ರತಿಫಲನ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ವೆಂಕಟರಾಮನ್‌ ರಾಮಕೃಷ್ಣನ್‌ ಇತ್ತೀಚೆಗೆ ಹೇಳಿದ್ದಾರೆ. ಇದು ನಿಜವೇ?
ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಇದು ನಿಜ ಅನ್ನಿಸುತ್ತದೆ. ಹೊಸ ಸಂಶೋಧನೆಗಳು ಆಗುತ್ತಿಲ್ಲ. ಇದಕ್ಕೆ ಕಾರಣ, ಸಂಶೋಧನೆಗಳಿಗೆ ಪ್ರೋತ್ಸಾಹವೇ ಇಲ್ಲವಾಗಿರುವುದು. ವೈಜ್ಞಾನಿಕ ಸಂಶೋಧನೆಗಳಿಗೆ ಅಪಾರವಾದ ಹಣ ಖರ್ಚಾಗುತ್ತದೆ. ವಿಜ್ಞಾನಿಯೊಬ್ಬ ತನ್ನ ಸ್ವಂತ ಹಣದಿಂದ ಸಂಶೋಧನೆ ಮಾಡುವ ಕಾಲ ಈಗ ಉಳಿದಿಲ್ಲ. ಸರ್ಕಾರವು ವಿಜ್ಞಾನ ಪರವಾದ ನಿಲುವು ತಾಳದೇ ಇದ್ದರೆ, ಹೊಸ ಸಂಶೋಧನೆಗಳು ಆಗುವುದು ಕಷ್ಟವಿದೆ. ಅಂತೆಯೇ, ವಿಜ್ಞಾನಿಗಳು ಸ್ವತಂತ್ರ ಚಿಂತನೆಯನ್ನು ರೂಢಿಸಿಕೊಂಡರೆ, ಹೊಸ ಸಂಶೋಧನೆಗಳು ಆಗುವುದು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT