ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪಸರಿಸುವ ‘ಇಜ್ಞಾನ’

Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಅಂತರ್ಜಾಲ ಇಂದು ನಮ್ಮ ದಿನಚರಿಯ ಭಾಗವೇ ಆಗಿಹೋಗಿದೆ. ಅದು ಇಷ್ಟು ವ್ಯಾಪಕವಾಗಿ ನಮ್ಮ ಬದುಕು ಆವರಿಸಿಕೊಂಡಿದ್ದರೂ ಪ್ರಾದೇಶಿಕ ಭಾಷೆಗಳಲ್ಲಿ ಸಾಕಷ್ಟು ಮಾಹಿತಿ ಸಿಗುತ್ತಿಲ್ಲ. ಕನ್ನಡದಲ್ಲಿ ವಿಜ್ಞಾನ- ತಂತ್ರಜ್ಞಾನದ ಬಗ್ಗೆ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯ ಪ್ರಮಾಣ ತೃಪ್ತಿದಾಯಕವಾಗಿಲ್ಲ.

ಆದರೆ ಕೆಲವು ಸಂಸ್ಥೆ–ಜಾಲತಾಣಗಳು ಅಂತರ್ಜಾಲದಲ್ಲಿ ಕನ್ನಡದ ಮಾಹಿತಿಯನ್ನು ಒದಗಿಸಲು ಶ್ರಮಿಸುತ್ತಿವೆ. ಇಜ್ಞಾನ.ಕಾಂ (www.ejnana.com) ಕೂಡ ಅಂಥ ವಿರಳ ಜಾಲತಾಣಗಳಲ್ಲಿ ಒಂದು.

2007ರಲ್ಲಿ ಟಿ.ಜಿ. ಶ್ರೀನಿಧಿ ಅವರು ಆರಂಭಿಸಿದ ಜಾಲತಾಣ ಇಜ್ಞಾನ.ಕಾಂ. ವಿಜ್ಞಾನ– ತಂತ್ರಜ್ಞಾನ ವಿಷಯಗಳ ಸಂವಹನಕ್ಕಾಗಿ ಮೀಸಲಾಗಿರುವ ಈ ಜಾಲತಾಣವು ಕಾರ್ಯಾರಂಭ ಮಾಡಿದ ದಿನಗಳಲ್ಲಿ ಕನ್ನಡ ಯೂನಿಕೋಡ್‌ ತಂತ್ರಜ್ಞಾನ ಮುಂಚೂಣಿಗೆ ಬಂದಿರಲಿಲ್ಲ.

ಆದ್ದರಿಂದ ಪತ್ರಿಕೆಗಳಲ್ಲಿ ವಿಜ್ಞಾನ ತಂತ್ರಜ್ಞಾದ ಕುರಿತಾಗಿ ಪ್ರಕಟವಾದ ಲೇಖನಗಳ ಪಿಡಿಎಫ್‌ ಪುಟಗಳನ್ನು ಪ್ರಕಟಿಸಲಾಗುತ್ತಿತ್ತು. ಮೈಸೂರಿನಲ್ಲಿ ಶ್ರೀನಿಧಿ ಅವರು ವಿಜ್ಞಾನ ಲೇಖಕ ಕೊಳ್ಳೆಗಾಲ ಶರ್ಮ ಅವರೊಂದಿಗೆ ಮಾತನಾಡುತ್ತಿದ್ದಾಗ ಜಾಲತಾಣವೊಂದನ್ನು ಪ್ರಾರಂಭಿಸುವ ಯೋಜನೆ ರೂಪುಗೊಂಡಿತು. ಇನ್ನೋರ್ವ ಸ್ನೇಹಿತ ನಂದಕಿಶೋರ್‌ ‘ಇಜ್ಞಾನ.ಕಾಂ’ ಎಂಬ ಹೆಸರು ನೀಡಿದರು.

‘ಏನೋ ಸಾಧನೆ ಮಾಡಿಬಿಡ್ತೀವಿ ಎಂಬ ಮಹದುದ್ದೇಶ ಇಟ್ಟುಕೊಂಡು ಈ ಜಾಲತಾಣ ಆರಂಭಿಸಲಿಲ್ಲ. ವಿಜ್ಞಾನದ ಮಾಹಿತಿ ಕನ್ನಡದಲ್ಲಿ ಅಷ್ಟು ಸುಲಭಕ್ಕೆ ಸಿಗುತ್ತಿಲ್ಲ. ಆ ಕೊರತೆಯನ್ನು ಸಾಧ್ಯವಾದಷ್ಟೂ ನೀಗಿಸುವ ಪ್ರಯತ್ನ ನಮ್ಮದಾಗಿತ್ತು’ ಎನ್ನುತ್ತಾರೆ  ಶ್ರೀನಿಧಿ.

ಜಾಲತಾಣವು ಇದೀಗ ಒಂಬತ್ತು ವರ್ಷ ಪೂರೈಸಿ ಹತ್ತನೇ ವರ್ಷಕ್ಕೆ ಕಾಲಿರಿಸುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 500ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದೆ.

ಪಿ.ಎಸ್‌. ಶಂಕರ್‌, ನಾಗೇಶ ಹೆಗಡೆ, ಟಿ.ಆರ್‌. ಅನಂತರಾಮು, ಯು.ಬಿ. ಪವನಜ, ಶ್ರೀವತ್ಸ ಜೋಶಿ, ಬೇಳೂರು ಸುದರ್ಶನ, ಕೊಳ್ಳೆಗಾಲ ಶರ್ಮ, ಟಿ.ಎಸ್‌. ಗೋಪಾಲ್‌ ಸೇರಿದಂತೆ ಕನ್ನಡದ ಅನೇಕ ಪ್ರಮುಖ ವಿಜ್ಞಾನ ಲೇಖಕರು ‘ಇಜ್ಞಾನ’ಕ್ಕಾಗಿ ಬರೆದಿದ್ದಾರೆ.

ಇಜ್ಞಾನದ ಜತೆಗಿನ ಕಳೆದ ಒಂಬತ್ತು ವರ್ಷಗಳ ಪ್ರಯಾಣದ ಕುರಿತು ಶ್ರೀನಿಧಿ ಪ್ರತಿಕ್ರಿಯಿಸುವುದು ಹೀಗೆ.

‘ನಮ್ಮ ಪ್ರಯತ್ನಕ್ಕೆ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಕನ್ನಡದ ಓದುಗರು ಚೆನ್ನಾಗಿದೆ–ಚೆನ್ನಾಗಿಲ್ಲ ಮಾದರಿಯ ಪ್ರತಿಕ್ರಿಯೆಗಳನ್ನು ನೀಡುವುದರಲ್ಲಿ, ಸ್ಪಂದಿಸುವ ವಿಷಯದಲ್ಲಿ ಸಂಕೋಚ ಸ್ವಭಾವದವರು’ ಎನ್ನುತ್ತಾ ಶ್ರೀನಿಧಿ.

‘ಇದನ್ನು ಯಾರಾದರೂ ಓದುತ್ತಿದ್ದಾರಾ? ಅಥವಾ ಸುಮ್ಮನೇ ವ್ಯರ್ಥವಾಗಿ ಮಾಡುತ್ತಿದ್ದೇನಾ? ಎಂಬ ಅನುಮಾನವೂ ಕೆಲವೊಮ್ಮೆ ನನ್ನನ್ನು ಕಾಡಿದ್ದಿದೆ. ವೆಬ್‌ಸೈಟ್‌ನ ದತ್ತಾಂಶ ಗಮನಿಸಿದಾಗ ರಾಜ್ಯ– ದೇಶ ಅಷ್ಟೇಕೆ ವಿಶ್ವದ ಅನೇಕ ಭಾಗಗಳ ಜನರು ನಮ್ಮ ವೆಬ್‌ಸೈಟ್‌ ಗಮನಿಸುತ್ತಿರುವ ಅಂಶ ತಿಳಿದು ಬಂತು’ ಎನ್ನುತ್ತಾರೆ.

‘ಅಂತರ್ಜಾಲದಲ್ಲಿ ಹಲವು ವೇದಿಕೆಗಳಿವೆ. ಉದಾಹರಣೆಗೆ ವಿಜ್ಞಾನ ಶಿಕ್ಷಕರು ವೇದಿಕೆ ಮಾಡಿಕೊಂಡಿದ್ದಾರೆ. ಅವರೂ ಸಹ ನಮ್ಮ ಜಾಲತಾಣದಲ್ಲಿನ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಅನೇಕ ವೇದಿಕೆಗಳಿಗೆ ನಮ್ಮ ಜಾಲತಾಣ ಮಾಹಿತಿ ಮೂಲವಾಗಿದೆ. ಹೀಗೆ ಮಾಹಿತಿ ಪ್ರಸಾರವಾಗುತ್ತಿದೆ ಎಂಬುದೇ ಸಂತೋಷದ ಸುದ್ದಿ’ ಎಂದು ಶ್ರೀನಿಧಿ ವಿವರಿಸುತ್ತಾರೆ.

‘ಜಾಲತಾಣ ಆರಂಭವಾದ ದಿನಗಳಲ್ಲಿ ಅಂತರ್ಜಾಲದಲ್ಲಿ ಕನ್ನಡ ಎಂಬುದೇ ಒಂದು ಅಚ್ಚರಿಯ ಸಂಗತಿಯಾಗಿತ್ತು. ಆದರೆ ಇಂದು ಅಂತರ್ಜಾಲದಲ್ಲಿ ಕನ್ನಡ ಎಂದರೆ ಮಾಮೂಲಿ ಸಂಗತಿ’ ಎನ್ನುತ್ತಾರೆ ಅವರು.

2011ರಲ್ಲಿ ಇಜ್ಞಾನ ಎಂಬ ಹೆಸರಿನಲ್ಲಿಯೇ  ಒಂದು ಅಂತರ್ಜಾಲ ಪತ್ರಿಕೆಯನ್ನೂ ಆರಂಭಿಸಿ ಪರಿಸರ, ರಸಾಯನ ವಿಜ್ಞಾನ, ವಿಜ್ಞಾನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಹೀಗೆ ನಾಲ್ಕು ವಿಷಯಗಳ ಕುರಿತು ಪ್ರಾಯೋಗಿಕ ಸಂಚಿಕೆಗಳನ್ನು ರೂಪಿಸಲಾಗಿತ್ತು. ಜನರ ಸ್ಪಂದನೆ ಚೆನ್ನಾಗಿದ್ದರೂ ಅದಕ್ಕೆ ಅವಶ್ಯವಿರುವ ಸಂಪನ್ಮೂಲ ಮತ್ತು ಸಮಯದ ಅಭಾವದಿಂದ ನಿಲ್ಲಿಸಲಾಯಿತು.

ಸಂಸ್ಥೆಯ ರೂಪಕ್ಕೆ...
ಹತ್ತನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇಜ್ಞಾನ.ಕಾಮ್‌ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶ ಶ್ರೀನಿಧಿ ಅವರಿಗಿದೆ. ಅದರ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದು ತಮ್ಮೊಬ್ಬರಿಂದಲೇ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದಕ್ಕೊಂದು ಸಾಂಸ್ಥಿಕ ರೂಪ ಕೊಡುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದಾರೆ. ಇನ್ನು ಮುಂದೆ ಇಜ್ಞಾನ ಒಂದು ಸರ್ಕಾರೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

‘ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುದು, ಪುಸ್ತಕ ಪ್ರಕಟಣೆ, ವಿಜ್ಞಾನ ಕಾರ್ಯಕ್ರಮ ಆಯೋಜನೆಗೂ ಸಂಸ್ಥೆ ಶ್ರಮಿಸಲಿದೆ’ ಎಂದು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಶ್ರೀನಿಧಿ ವಿವರಿಸುತ್ತಾರೆ.

ಡೇಲಿಹಂಟ್‌ ಆ್ಯಪ್‌ ಸಹಯೋಗದಲ್ಲಿ ಮೊಬೈಲ್‌ ಮೂಲಕವೂ ಓದುಗರನ್ನು ತಲುಪಲು ‘ಇಜ್ಞಾನ’ ಸಜ್ಜಾಗಿದೆ. ‘ಕಂಪ್ಯೂಟರ್‌, ಅಂತರ್ಜಾಲ ಬಂದು ಪುಸ್ತಕ ಓದುವ ಹವ್ಯಾಸ ನಶಿಸಿ ಹೋಯಿತು’ ಎಂಬ ಅಭಿಪ್ರಾಯವನ್ನೇ ಶ್ರೀನಿಧಿ ಒಪ್ಪುವುದಿಲ್ಲ. ‘ಪುಸ್ತಕ ಓದಿನ ಸ್ವರೂಪ ಬದಲಾಗಿದೆ. ಅಂತರ್ಜಾಲ ಈ ಹವ್ಯಾಸಕ್ಕೆ ಪೂರಕವಾಗಿ ಬೆಳೆಯುತ್ತಿದೆ’ ಎಂಬುದು ಅವರ ಅಭಿಮತ.

ಹೊಸ ಓದಿನ ಸ್ವರೂಪಕ್ಕೆ ಪೂರಕವಾಗಿ ಇಜ್ಞಾನವು ಐವತ್ತು ಇ–ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದೆ. ವಿಜ್ಞಾನ– ತಂತ್ರಜ್ಞಾನದ ಮಾಹಿತಿ ಹೊತ್ತ ಈ ಕಿರುಹೊತ್ತಿಗೆಗಳು ಎರಡು ಮೂರು ರೂಪಾಯಿಗಳ ಬೆಲೆಗೆ ಲಭ್ಯವಾಗಲಿವೆ. ಮುಂದೆ ಒಂದು ಆನ್‌ಲೈನ್‌ ಪತ್ರಿಕೆಯನ್ನು ಆರಂಭಿಸುವ ಯೋಚನೆಯೂ ಅವರಿಗಿದೆ.

ಹತ್ತನೇ ವರ್ಷದ ಸಂಭ್ರಮ
ಹತ್ತನೆ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡು ಇನ್ನೊಂದಿಷ್ಟು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಇಜ್ಞಾನ.ಕಾಂ ‘ಇಜ್ಞಾನ ದಿನ’ ಎಂಬ ಕಾರ್ಯಕ್ರಮವನ್ನು ಯೋಜಿಸಿದೆ. ಇದೇ ಭಾನುವಾರ (ಮೇ 8)ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಟಿ.ಜಿ. ಶ್ರೀನಿಧಿ ಅವರ ತಂತ್ರಜ್ಞಾನಗಳ ಕುರಿತ ಬರಹಗಳ ‘ಟೆಕ್ಸ್ಟ್‌ ಬುಕ್‌ ಅಲ್ಲ, ಇದು ಟೆಕ್‌ ಬುಕ್‌!’ ಎಂಬ ಪುಸ್ತಕವೂ ಬಿಡುಗಡೆಯಾಗಲಿದೆ. ಜತೆಗೆ ಇಜ್ಞಾನದೊಡನೆ ಲೋಕಾಭಿರಾಮ, ಸ್ಮರಣ ಸಂಚಿಕೆ ಬಿಡುಗಡೆ, ಮೊಬೈಲಿನಲ್ಲಿ ಇಜ್ಞಾನಲೋಕ, ಪ್ರಶ್ನೋತ್ತರ ಮತ್ತು ಮಾತುಕತೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.  ಟಿ.ಎಸ್‌. ನಾಗಾಭರಣ, ತೇಜಸ್ವಿನಿ ಅನಂತಕುಮಾರ್‌, ಕೆ.ಎ. ದಯಾನಂದ ಪಾಲ್ಗೊಳ್ಳಲಿದ್ದಾರೆ.

ವಿಳಾಸ: ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜ ಪೇಟೆ. ಭಾನುವಾರ ಬೆಳಿಗ್ಗೆ 9.30

ಇಜ್ಞಾನದಲ್ಲಿ ಏನೇನುಂಟು
ಬ್ರೌಸರ್‌ನಲ್ಲಿ www.ejnana.com ಟೈಪಿಸಿದರೆ ತೆರೆದುಕೊಳ್ಳುವ ಜಾಲತಾಣದಲ್ಲಿ ಹಲವು ಉಪಯುಕ್ತ ಲಿಂಕ್‌ಗಳಿವೆ. ಪ್ರೋಗ್ರಾಮಿಂಗ್, ಸೋಷಿಯಲ್ ನೆಟ್‌ವರ್ಕ್‌, ಡಿಜಿಟಲ್ ಛಾಯಾಗ್ರಾಹಣ, ಮಕ್ಕಳ ಇಜ್ಞಾನ ಸೇರಿದಂತೆ ಹಲವು ಉಪಯುಕ್ತ ಲಿಂಕ್‌ಗಳನ್ನು ಜನರು ಮೆಚ್ಚಿದ್ದಾರೆ. ಕನ್ನಡ ಇ ಪುಸ್ತಕ ಮಾರುವ ಪ್ರಯತ್ನವನ್ನೂ ಇಜ್ಞಾನ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT