ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಸಾಕ್ಷರತೆಗೆ ಸಂವಹನದ್ದೇ ಕೊರತೆ

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ವಿಜ್ಞಾನ ಜನವಿಜ್ಞಾನವಾಗಬೇಕಾದರೆ ವಿಜ್ಞಾನಿಗಳು  ದಂತಗೋಪುರದಿಂದ ಕೆಳಗಿಳಿದು ವಿಜ್ಞಾನ ಸಾಕ್ಷರತೆ ಹೆಚ್ಚಿಸುವ ಕೈಂಕರ್ಯದಲ್ಲಿ  ತೊಡಗಬೇಕು

‘ದೇವರಿಗೂ ದೇವಕಣಕ್ಕೂ ಸಂಬಂಧವಿಲ್ಲ’ (ಪ್ರ.ವಾ., ಜುಲೈ 21) ವರದಿ ಗಮನಿಸಿದೆ. ‘ಹಿಗ್ಸ್ ಬೋಸಾನ್’ ಕಂಡುಹಿಡಿದು ನಾಲ್ಕು ವರ್ಷಗಳು ಸಂದರೂ ವಿಜ್ಞಾನ ಶಿಕ್ಷಕರಿಗೆ ಬಿ.ಎಸ್. ಶೈಲಜಾ ಈ ಸ್ಪಷ್ಟೀಕರಣ ನೀಡಬೇಕಾದುದೇ ವಿಪರ್ಯಾಸ. ಸ್ವತಃ ಹಿಗ್ಸ್ ಕೂಡ ‘ದೇವಕಣ’ ಎಂಬ ನಾಮಕರಣ ಅಗಮ್ಯ, ಬೇಡ ಎಂದಿದ್ದರು.

  ‘ಹಿಗ್ಸ್ ಬೋಸಾನ್’ ಭೌತದ್ರವ್ಯವನ್ನು ಒಟ್ಟುಗೂಡಿಸುವ ‘ಮರವಜ್ರ’! ವಿಶ್ವದ ರಚನೆಯ ಅತಿ ಪ್ರಮುಖ ಮೂಲಭೂತ ಕಣಗಳಲ್ಲಿ ಒಂದು.
ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳು, ಆವಿಷ್ಕಾರಗಳು ನಿರಂತರ. ಆಗಿಂದಾಗಿನ ಬೌದ್ಧಿಕ ಸಾಧನೆಗಳು ಮತ್ತು ಆ ಬಗೆಗಿನ ವರದಿ,

ಮಾಹಿತಿಗಳು ಇಂಗ್ಲಿಷ್ ಭಾಷೆಯ ಮೂಲಕವೇ ನಮಗೆ ಪೂರೈಕೆ ಆಗಬೇಕಾದ ಅನಿವಾರ್ಯ ತಿಳಿದಿದ್ದೆ. ಪಠ್ಯದಲ್ಲಿ ‘ದೇವಕಣ’ ಎಂಬ ಉಲ್ಲೇಖ ಕಂಡುಹಿಡಿಯಲಾಗಿರುವ ಕಣ ನಿಜಕ್ಕೂ  ದೇವರಿಗೆ ಸಂಬಂಧಿಸಿದ್ದೇ ಎಂದು ಪ್ರಶ್ನಿಸುವ ಮಟ್ಟಿಗೆ ಗೊಂದಲ ಸೃಷ್ಟಿಸಿದೆ.

ಯಾವುದೇ ವಿಷಯವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವಾಗ ‘ಪದಕ್ಕೆ ಪದ’ ಎನ್ನುವಂತೆ ಯಾಂತ್ರಿಕತೆಗೆ ಸೀಮಿತಗೊಂಡರೆ ಎಡವಟ್ಟಾಗುತ್ತದೆ. ‘ನನ್ನ ಹೊಟ್ಟೆ ಉರಿಸಬೇಡ’ ಎನ್ನುವುದು ‘ಡೋಂಟ್ ಮೇಕ್ ಮೈ ಸ್ಟೊಮಕ್ ಬರ್ನ್’ ಎನ್ನುವಂತಾದರೆ?!

ಇಂಗ್ಲಿಷಿನಲ್ಲೇ ಬೋಧಿಸುವ ಹಂಬಲಕ್ಕೆ ಬಿದ್ದ ವಿಜ್ಞಾನ ಶಿಕ್ಷಕರೊಬ್ಬರು ಪ್ರಯೋಗಾಲಯದಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ನೀರನ್ನು ಸ್ವಲ್ಪ ಕಾಯಿಸಿ, ಹೆಚ್ಚು ಕಾಯಿಸಿ ಎನ್ನಲು ಹೀಟ್ ಇಟ್, ಹೀಟ್ ಇಟ್ ಎಂದರಂತೆ!  ವಿಜ್ಞಾನ ಸಾಹಿತಿ ಪ್ರೊ.ಜೆ.ಆರ್.ಲಕ್ಷ್ಮಣ ರಾವ್ ‘ಬರವಣಿಗೆಯ ವ್ಯಾಧಿ’ ಪುಸ್ತಕದಲ್ಲಿ ಭಾಷಾಂತರದಲ್ಲಿ ಆಗಬಹುದಾದ ನ್ಯೂನತೆಗಳನ್ನು ಸ್ವಾರಸ್ಯಕರವಾಗಿ ಉದಾಹರಿಸಿದ್ದಾರೆ.

ಮಕ್ಕಳು ಕೇಳುವ ಪ್ರಶ್ನೆಗಳು ಶಿಕ್ಷಕರ ಕಲಿಕಾಸಕ್ತಿಯನ್ನು ಕೂಡ ಹೆಚ್ಚಿಸುವಂತಿರುತ್ತವೆ. ಸಿಹಿ ನೀರಿನ ಅಷ್ಟೊಂದು ನದಿಗಳು ಬಂದು ಸೇರಿದರೂ ಸಾಗರದ ನೀರೇಕೆ ಉಪ್ಪು? ಬಿಸಿ ನೀರು ಸಿಂಪಡಿಸಿದರೂ ಬೆಂಕಿ ಶಮನವಾದೀತು ಹೇಗೆ? ಮುಳುಗುವ ಸೂರ್ಯ ರಶ್ಮಿಗಳು ಕಣ್ಣು ಕುಕ್ಕವೇಕೆ?-ಹೀಗೆ ಒಂದೇ? ಎರಡೇ? ಶಿಕ್ಷಕರು ಅವರ ಜ್ಞಾನತೃಷೆ ತಣಿಸುವಷ್ಟು ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿರಬೇಕು.

ನಾವು ನಮ್ಮ ಸಂದರ್ಭಕ್ಕನುಗುಣವಾಗಿ ವಿಷಯ ಕರಗತವಾಗಿಸಿಕೊಳ್ಳುವುದು ಮೊದಲ ಹಂತ. ಎರಡನೆಯದು ಸಂವಹನ ಕ್ರಿಯೆ. ಅಂದರೆ
ಜನಸಾಮಾನ್ಯರಿಗೂ ನಿಲುಕುವಂತೆ ಸಾಹಿತ್ಯ ರಚನೆ.  ಕನ್ನಡದಲ್ಲೇ ಆಲೋಚಿಸಿ ಕನ್ನಡದಲ್ಲಿ ಬರೆದರೆ ಯಾವುದೇ ತಬ್ಬಿಬ್ಬುಗಳಿಗೆ ಆಸ್ಪದವಿರದು. 

ಅರ್ಥವಾಗುವಂತೆ ಬರೆಯಲಾರೆ ಅಂತ ಯಾರಾದರೂ ಉದ್ಗರಿಸಿದರೆ ತನಗೇನೆ ಅರ್ಥವಾಗಿಲ್ಲ ಎಂದೇ ಆದೀತು! ಎಂಥದ್ದೆ ಜಟಿಲವೂ ತಾಂತ್ರಿಕವೂ ಆದ ಅಂಶಗಳನ್ನು ಕನ್ನಡದಲ್ಲಿ ನಿವೇದಿಸಲು ಸಾಧ್ಯ. ಮುಖ್ಯವಾಗಿ ಬೇಕಿರುವುದು ಆಸ್ಥೆ.

ಅದರಲ್ಲೂ ವಿಜ್ಞಾನ ಪ್ರಸರಣ ಅಭಿಯಾನದಲ್ಲಂತೂ ತಿಳಿಸುವ ಹಾಗೂ ತಿಳಿಯುವವರ ಆಸಕ್ತಿ, ಕುತೂಹಲವೇ ನಿರ್ಣಾಯಕ.  ಆಕರ್ಷಕ ಬರವಣಿಗೆಯ ಶೈಲಿ, ಸರಳದಿಂದ ಸಂಕೀರ್ಣಕ್ಕೆ ಅರಿವಿನ ಯಾನ ಅತ್ಯಂತ ಫಲಪ್ರದ.

ಇಂಗ್ಲಿಷಿನಲ್ಲಿ ‘ಗಾಡ್ ಓನ್ಲಿ ನೋಸ್’, ‘ಗಾಡ್ ಇಸ್ ಗ್ರೇಟ್’ , ‘ಲಿವ್ ಇಟ್ ಟು ಗಾಡ್’ ಪದೋಕ್ತಿಗಳುಂಟು. ಅವಕ್ಕೆ ಅನುಕ್ರಮವಾಗಿ ‘ಯಾರಿಗೂ ಗೊತ್ತಿಲ್ಲ’, ‘ಯಾರೂ ದೊಡ್ಡವರಲ್ಲ’, ‘ಅದರಷ್ಟಕ್ಕೆ ಬಿಡು’ ಎಂದರ್ಥವೆ ಹೊರತು ಅವು ‘ದೇವರ’ನ್ನು ಕುರಿತದ್ದಲ್ಲ. ‘ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್’- ವಿಜ್ಞಾನವನ್ನು ಬ್ರಹ್ಮನೆಂದು ಭಾವಿಸು ಎಂದೂ ಹೇಳುವುದಿದೆ. ಬ್ರಹ್ಮ ಸೃಷ್ಟಿಕರ್ತ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಈ ಉಕ್ತಿ.

1960ರಲ್ಲಿ ಪೀಟರ್ ಹಿಗ್ಸ್ ಅವರಿಗೆ ಅಂಥದ್ದೊಂದು ಗುಮಾನಿಯಿತ್ತು. ಕ್ವಾರ್ಕ್, ಎಲೆಕ್ಟ್ರಾನ್‌ಗಳಂಥ ಕಣಗಳಿಗೆ ದ್ರವ್ಯರಾಶಿಯುಂಟು. ಆದರೆ ಬೆಳಕು ಹೊತ್ತು ಸಾಗುವ ಪ್ರೋಟಾನುಗಳಿಗೇಕಿಲ್ಲ ಎಂದು. ವಿಶ್ವ ಅಥವಾ ಬ್ರಹ್ಮಾಂಡ ಕಾಂತಕ್ಷೇತ್ರದಂತೆ ಅಗೋಚರ ಕ್ಷೇತ್ರದಲ್ಲಿ ಮಿಂದಿದೆ.

ಎಲ್ಲ ಕಣಗಳಿಗೂ ‘ಹಿಗ್ಸ್ ಕ್ಷೇತ್ರ’ ಎಂಬ ಈ ಕ್ಷೇತ್ರದ ಅನುಭವ ಕೊಂಚಮಟ್ಟಿಗೆ ಆಗುತ್ತದೆ. ಒಂದು ಕಣ ‘ಹಿಗ್ಸ್ ಕ್ಷೇತ್ರ’ದ ಮೂಲಕ ಸಾಗುವಾಗ ಗಮನಾರ್ಹವಾಗಿ ಪ್ರಭಾವಕ್ಕೊಳಗಾದರೆ ಅದು ದ್ರವ್ಯರಾಶಿ ಹೊಂದಿರಲೇಬೇಕು. ವಾಸ್ತವವಾಗಿ 1924ರಲ್ಲೇ ಭಾರತದ ಭೌತಶಾಸ್ತ್ರಜ್ಞ ಸತ್ಯೇಂದ್ರನಾಥ್ ಬೋಸ್, ಐನ್‌ಸ್ಟೀನ್‌ರ ಜೊತೆಗೂಡಿ ನಡೆಸಿದ ಈ ನಿಟ್ಟಿನ ಸಂಶೋಧನೆಗಳದ್ದು ಇದೇ ಷರಾ.

ಅಂತೂ  2012ರ ಜುಲೈ 4ರಂದು ಬೃಹತ್ ಪ್ರಯೋಗದಿಂದ ಬೃಹತ್ ಫಲ. ಜಗತ್ತಿನ ನಾನಾ ದೇಶದ ವಿಜ್ಞಾನಿಗಳು ಕೈ ಜೋಡಿಸಿದ್ದ ಸ್ವಿಸ್-ಫ್ರೆಂಚ್ ಗಡಿ ಪ್ರದೇಶದಲ್ಲಿ ನಿರ್ಮಿಸಿದ ಸುರಂಗದಲ್ಲಿ ಬೆಳಕಿನದರ  ಸಮೀಪದ ವೇಗದಲ್ಲಿ ಪರಮಾಣುಗಳನ್ನು ಪರಸ್ಪರ ತಾಡಿಸಿದ ಮಹಾಯಜ್ಞ. ಅಲ್ಲಿ ವಿಶ್ವಸೃಷ್ಟಿಯ ಆರಂಭದ ಕ್ಷಣಗಳನ್ನೇ ಸೃಜಿಸಲಾಗಿತ್ತೆನ್ನಿ.

ದ್ರವಗಳಿಗೆ ಮೇಲ್ಮುಖ ಒತ್ತಡ ಇರುವುದರಿಂದ ಅವು ಅವಕ್ಕೂ ಕಡಿಮೆ ಸಾಂದ್ರತೆಯುಳ್ಳ ವಸ್ತುಗಳನ್ನು ತೇಲಿಸುತ್ತವೆ. ಈ ವಾಸ್ತವ ಗ್ರಹಿಸದ್ದರ ಫಲಶ್ರುತಿಯೇ ಮೂರ್ತಿ ಹಾಲು ಕುಡಿಯುವುದು ಎನ್ನುವ ಭ್ರಮೆ! ತೆಂಗಿನ ಮರದ ಬುಡಕ್ಕೆ ಸುರಿದ ನೀರು ಮೇಲೇರಿ ಎಳನೀರಾಗಿದ್ದು ಅಥವಾ ದೀಪದ ಎಣ್ಣೆ ಬತ್ತಿಯ ತುದಿಗೇರಿ  ಉರಿದಿದ್ದು ಪವಾಡವೆನ್ನಿಸುತ್ತದೆ.

ನಿಸರ್ಗದ ಯಾವುದೇ ವಿದ್ಯಮಾನ ಪವಾಡವಲ್ಲ. ಪ್ರತಿಯೊಂದಕ್ಕೂ ಸಮಜಾಯಿಷಿ ಲಭ್ಯ. ಮುಖ್ಯ ಗ್ರಹಿಸಬೇಕಷ್ಟೆ. ನಮ್ಮ ಚಿಕ್ಕಪ್ಪ  ಸುಲಭವಾಗಿ ಹತ್ತಿ ಉರಿಯುವ ಮಿಥೇನ್‌ನಂಥ ಜೌಗು ಅನಿಲ (ಮಾರ್ಶ್ ಅನಿಲ) ನೋಡಿ ‘ಕೊಳ್ಳಿ ದೆವ್ವ’ ಎಂದು ಜನ ಬೆದರುತ್ತಾರೆ ಎಂದು ವಿವರಿಸುತ್ತಿದ್ದುದು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ. ಕಬ್ಬಿಣದ ಕಡಲೆ, ತಲೆ ಬೇನೆ ಎಂದೆಲ್ಲ ಕರೆಯಿಸಿಕೊಳ್ಳುವ ಗಣಿತಕ್ಕೆ ವಿಜ್ಞಾನಗಳ ರಾಜ ಎಂಬ ಹೆಸರಿದೆ.

ವಿಜ್ಞಾನದ ಬೆನ್ನೆಲುಬೇ ಆದ ಗಣಿತ ಮೊಗೆದಂತೆ ರಮಣೀಯವೆ ಹೌದು. ಕನ್ನಡದ ಸಂದರ್ಭದಲ್ಲಿ ‘ವೃತ್ತವೆಂದರೆ ಸ್ಥಿರ ಬಿಂದುವಿನಿಂದ ನೀನು ಎಲ್ಲದಾರೂ ಇರು, ಎಂತಾದರೂ ಇರು. ಒಂದೇ ದೂರದಲ್ಲಿರು ಎಂಬ ಚಲಿಸುವ ಬಿಂದುವಿಗೆ ನಿರ್ಬಂಧ’ ಅಂತ ವ್ಯಾಖ್ಯಾನಿಸಿದರೆ ಸೊಗಸು ತಾನೆ!

ರಾಹು, ಕೇತು ಗ್ರಹಣ ಕಾಲದಲ್ಲಿ ಸೂರ್ಯ, ಚಂದ್ರ ಅಪಹರಿಸುವ ರಕ್ಕಸರಲ್ಲ! ಅನುಕ್ರಮವಾಗಿ ಸೂರ್ಯ, ಚಂದ್ರ ನಮ್ಮ ಸುತ್ತ ಪರಿಭ್ರಮಿಸುವಂತೆ ಭಾಸವಾಗುವ ಕಾಂತಿ ವೃತ್ತ ಹಾಗೂ ಚಾಂದ್ರ ಕಕ್ಷೆ ಸಂಧಿಸುವ ಕಾಲ್ಪನಿಕ ಬಿಂದುಗಳಷ್ಟೆ.

ವಿಜ್ಞಾನ ಜನ ವಿಜ್ಞಾನವಾಗಬೇಕಾದರೆ ವಿಜ್ಞಾನಿಗಳೂ ಒಂದು ದೃಢ ಹೆಜ್ಜೆಯನ್ನಿಡಬೇಕು. ದಂತಗೋಪುರದಿಂದ ಕೆಳಗಿಳಿದು ವಿಜ್ಞಾನ ಸಾಕ್ಷರತೆ ಹೆಚ್ಚಿಸುವ ಕೈಂಕರ್ಯದಲ್ಲಿ ಯಥಾಶಕ್ತಿ ತೊಡಗಬೇಕು. ಶ್ರೀಸಾಮಾನ್ಯನ ಕೈ ಹಿಡಿದುಕೊಂಡೇ ಅವರು ಮುಂದೆ ಹೋಗಬೇಕು.

ಮೇರಿ ಕ್ಯೂರಿ ಅವರ ‘ಈ ಜಗತ್ತಿನಲ್ಲಿ ನಾವು ಭಯಪಡಬೇಕಾದ್ದು ಯಾವುದೂ ಇಲ್ಲ. ತಿಳಿಯಬೇಕಾದ್ದಿವೆ ಅಷ್ಟೆ. ಹೆಚ್ಚು ತಿಳಿದಂತೆ ಕಡಿಮೆ ಭಯ’ ಎಂಬ ನುಡಿ ವಿಜ್ಞಾನ ಮತ್ತು ಅಧ್ಯಾತ್ಮವನ್ನು ಬೆಸೆದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT