ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಠಲೇನಹಳ್ಳಿ ಗೋಲಿಬಾರ್‌ ಪ್ರಕರಣ: ಇಂದಿಗೆ 15 ವರ್ಷಗಳು

ನೀರಾ ಚಳವಳಿಗೆ ಇದುವರೆಗೂ ಸ್ಪಂದಿಸದ ರಾಜ್ಯ ಸರ್ಕಾರ: ಇನ್ನೂ ಜಾರಿಯಾಗದ ನೀರಾ ನೀತಿ, ರೈತರ ಅಸಮಾಧಾನ
Last Updated 9 ಅಕ್ಟೋಬರ್ 2015, 11:10 IST
ಅಕ್ಷರ ಗಾತ್ರ

ರಾಮನಗರ: ನೀರಾ ಚಳವಳಿ ಸಂದರ್ಭದಲ್ಲಿ ಗೋಲಿಬಾರ್ ನಡೆದು ಅಕ್ಟೋಬರ್ 9ಕ್ಕೆ 15ವರ್ಷವಾಗಿದೆ. ಆದರೆ ರಾಜ್ಯದಲ್ಲಿ ಇನ್ನೂ ನೀರಾ ನೀತಿ ಜಾರಿಯಾಗಿಲ್ಲ ಎಂಬುದು ರೈತರ ಅಳಲು ಮತ್ತು ಆತಂಕವಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ವಿಠಲೇನಹಳ್ಳಿಯಲ್ಲಿ ನೀರಾ ಚಳವಳಿ ನಡೆಯುತ್ತಿದ್ದಾಗ 2001ರ ಅಕ್ಟೋಬರ್ 9 ರಂದು ಪೊಲೀಸರು ಲಾಠಿ ಪ್ರಹಾರ ಮತ್ತು ಗೋಲಿಬಾರ್‌ ನಡೆಸಿದ್ದರು. ಈ ದುರ್ಘಟನೆಯಲ್ಲಿ ಇಬ್ಬರು ಅಮಾಯಕ ರೈತರು ಬಲಿಯಾಗಿದ್ದರು !

ನುಸಿ ರೋಗ– ನೀರಾ ಚಳವಳಿ: 1999ರಲ್ಲಿ ನುಸಿ ಪೀಡೆಯೂ ರಾಜ್ಯದ ಬಹುತೇಕ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಆವರಿಸಿ, ತೆಂಗಿನ ಬೆಳೆಯನ್ನು ನಾಶಪಡಿಸಲಾರಂಭಿಸಿತ್ತು. ಈ ನುಸಿ ಪೀಡೆಯಿಂದ ತೆಂಗಿನ ಮರಗಳನ್ನು ರಕ್ಷಿಸುವ ಹಾಗೂ ತೆಂಗು ಬೆಳೆಗಾರರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಇಡೀ ರಾಜ್ಯದಲ್ಲಿ ನೀರಾ ಇಳಿಸಲು ಒತ್ತಾಯಿಸಿ ರೈತ ಸಂಘ ಚಳವಳಿಗೆ ಕರೆ ನೀಡಿತ್ತು.

ಅದರಂತೆ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ನೀರಾ ಇಳಿಸುವ ಪ್ರಕ್ರಿಯೆಗೆ ರೈತರು ಚಾಲನೆ ನೀಡಿದ್ದರು. ಆದರೆ ನೀರಾ ಇಳಿಸುವವರನ್ನು ಮತ್ತು ಚಳವಳಿಯನ್ನು ವಿವಿಧ ರೀತಿಯಲ್ಲಿ ಹತ್ತಿಕ್ಕುವ ಕೆಲಸವನ್ನು ಆಗಿನ ರಾಜ್ಯ ಸರ್ಕಾರ ಮಾಡಿತ್ತು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ. ರಾಮು ಸ್ಮರಿಸಿದರು.

‘ಇದಕ್ಕೆ ಉತ್ತಮ ನಿದರ್ಶನವೇ ವಿಠಲೇನಹಳ್ಳಿಯಲ್ಲಿ ನಡೆದ ಗೋಲಿಬಾರ್‌. ಈ ದುರ್ಘಟನೆಯಲ್ಲಿ ರೈತರಾದ ಪುಟ್ಟನಂಜಯ್ಯ ಮತ್ತು ತಮ್ಮಯ್ಯ ಪೊಲೀಸರ ಗುಂಡುಗಳಿಗೆ ಬಲಿಯಾದರು. ನಂತರ ನೀರಾ ಚಳವಳಿಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಶಾಸಕ ಸಿ.ಪಿ.ಯೋಗೇಶ್ವರ್‌, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಸೇರಿದಂತೆ ಕೆಲ ರಾಜಕಾರಣಿಗಳು ಆಳುವ ಸರ್ಕಾರದ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು, ತಾವು ಬೆಳೆದರು. ಆದರೆ ಈ ಚಳವಳಿಗೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಮಾತ್ರ ಅವರೆಲ್ಲ ವಿಫಲರಾಗಿದ್ದಾರೆ’ ಎಂದರು.

16 ಜಿಲ್ಲೆಗಳಲ್ಲಿ ನುಸಿ ಪೀಡೆ: ಚಳವಳಿಯಲ್ಲಿ ಭಾಗವಹಿಸಿದ್ದ ರೈತ ಮುಖಂಡ ಸಿ.ಪುಟ್ಟಸ್ವಾಮಿ ಅವರು, ‘ಕರ್ನಾಟಕ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ.  ಇಲ್ಲಿ 1999–-2000ದಲ್ಲಿ ತೆಂಗಿನ ಮರಗಳಲ್ಲಿ ನುಸಿಪೀಡೆ ಕಾಣಿಸಿಕೊಂಡಿತು.  2001ರ ವೇಳೆಗೆ ಅದು ರಾಜ್ಯದ 16 ಜಿಲ್ಲೆಗಳ ತೆಂಗಿನ ಮರಗಳಿಗೆ ವ್ಯಾಪಿಸಿತ್ತು. ಇದು ತೆಂಗಿನ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಇದರ ಜತೆಗೆ ಕಪ್ಪುತಲೆ ಹುಳುಗಳು ಮರದ ಗರಿಗಳ ರಸ ಹೀರಿ ಮರವನ್ನು ನಾಶ ಮಾಡಲಾರಂಭಿಸಿದವು’ ಎಂದು ನೆನಪು ಮಾಡಿಕೊಂಡರು.

ನುಸಿ ರೋಗ ಮತ್ತು ಕಪ್ಪುತಲೆ ಹುಳುಗಳ ಕಾಟ ನಿಯಂತ್ರಿಸುವಲ್ಲಿ ತೋಟಗಾರಿಕಾ ಇಲಾಖೆ, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರ ವಿಫಲವಾದವು.  ಇದರಿಂದ ರೈತರಿಗೆ ಶೇ 65ಕ್ಕೂ ಹೆಚ್ಚು ನಷ್ಟ ಎದುರಾಗಿತ್ತು. ಆಗ ರೈತ ಸಂಘದ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ರೈತ ಸಂಘ ನೀರಾ ಇಳಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು ಎಂದರು.

ದಿನ ಕಳೆದಂತೆ ನೀರಾ ಕುಡಿಯುವವರ ಸಂಖ್ಯೆ ಹೆಚ್ಚಾಗತೊಡಗಿತು. ಮದ್ಯಯ ಪ್ರಿಯರು ಸಹ ನೀರಾ ಕುಡಿಯುವತ್ತಾ ದಾಪುಗಾಲು ಹಾಕಿದರು. ನಗರ- ಪಟ್ಟಣಗಳತ್ತ ಸಹ ನೀರಾ ಹರಿಯಿತು. ಆದರೂ ಶೇ 3ರಿಂದ 4ರಷ್ಟು ರೈತರು ಮಾತ್ರ ನೀರಾ ಇಳಿಸುತ್ತಿದ್ದರು. ಸೂರ್ಯ ಕಿರಣಗಳ ಸಂಪರ್ಕದಿಂದ ನೀರಾ ಮಜ್ಜಿಗೆ ರೂಪತಾಳಿತು. ಅದು ತಂತಾನೆ ಹುಳಿಯಾಯಿತು. ಹುಳಿ ನೀರಾ ಕೂಡ ಹೆಚ್ಚೆಚ್ಚು ಬಳಕೆಗೆ ಬಂದಿತು ಎಂದು ಪುಟ್ಟಸ್ವಾಮಿ ಅವರು ಹಿಂದಿನ ದಿನಗಳನ್ನು ಸ್ಮರಿಸಿದರು.

ದಿನೇ ದಿನೇ ಸಾರಾಯಿ, ಮದ್ಯ ಮಾರಾಟ- ವಹಿವಾಟು ಕಡಿಮೆಯಾಯ್ತು. ಇದರಿಂದ ಮದ್ಯದ ಲಾಬಿ ಕೂಡ ಆರಂಭವಾಯಿತು. ಈ ನಡುವೆ ಅಬಕಾರಿ ಇಲಾಖೆ ರೈತರ ಮೇಲೆ ಕೆಂಗಣ್ಣು ಬಿಟ್ಟಿತು. ಪೊಲೀಸರು ವಿವಿಧ ರೀತಿಯಲ್ಲಿ ಕಿರುಕುಳ ನೀಡಿ ನೂರಾರು ಮೊಕದ್ದಮೆಗಳನ್ನು ರೈತರ ಹೂಡಿದರು ಎಂದು ಬೇಸರದಿಂದ ಹೇಳಿದರು.

ನೀರಾ ನಮ್ಮ ಹಕ್ಕು: ‘ನೀರಾ ಇಳಿಸಿ ಮಾರಾಟ ಮಾಡುವುದು ನಮ್ಮ ಹಕ್ಕು’ ಎಂದು ರೈತ ಸಂಘ ಕರೆ ನೀಡಿತು. ಪ್ರತಿಭಟನೆ ಜೋರಾಯಿತು. ರೈತರು ಸ್ವ ಪ್ರೇರಣೆಯಿಂದ ದಸ್ತಗೀರಾಗಲು ಮುಂದೆ ಬಂದರು. ಆದರೂ ಸಹ ಆಗಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀರಾ ಉತ್ಪಾದನೆಗೆ ದೈರ್ಯ ಮಾಡಲಿಲ್ಲ. ಬದಲಿಗೆ ಅಕ್ಟೋಬರ್ 8, 2001ರಂದು ಲಾಠಿ ಚಾರ್ಜ್, ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ನಂತರ ಅಕ್ಟೋಬರ್ 9, 2001ರಂದು ಮುಂಜಾನೆ ವಿಠಲೇನಹಳ್ಳಿಯಲ್ಲಿ ಗೋಲಿಬಾರ್ ನಡೆಯಿತು. ಅದಕ್ಕೆ ಇಬ್ಬರು ರೈತರು ಬಲಿಯಾದರು’ ಎಂದು ಅವರು ಘಟನೆ ವಿವರಿಸಿದರು.

‘ವಿಠಲೇನಹಳ್ಳಿ ಗೋಲಿಬಾರ್ ಘಟನೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕೆರಳಿಸಿತು. ವಿಠಲೇನಹಳ್ಳಿಗೆ ಭೇಟಿ ನೀಡಿದ್ದ ದೇವೇಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸುಮಾರು 108 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಮುಖ್ಯಮಂತ್ರಿ ಕೃಷ್ಣ ಅವರು ಸುಮ್ಮನಿದ್ದಾರೆ, ನರಗುಂದ ಹಾಗೂ ನವಲಗುಂದದಲ್ಲಿ ನಡೆದ ರೈತರ ಗೋಲಿಬಾರ್‌ ಪ್ರಕರಣ ಅಂದಿನ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಕಾರಣವಾದಂತೆ, ವಿಠಲೇನಹಳ್ಳಿ ಪ್ರಕರಣದಿಂದ ಕೃಷ್ಣ ಸರ್ಕಾರ ಪತನವಾಗಲಿದೆ ಎಂದು ಗೌಡರು ಗುಡುಗಿದ್ದರು’ ಎಂದು ಅವರ ಆ ದಿನಗಳನ್ನು ನೆನೆಸಿಕೊಂಡರು.

‘ಈ ಘಟನೆ ಖಂಡಿಸಿ ದೇವೇಗೌಡರು ವಿಠಲೇನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ತೆ ಕೈಗೊಂಡರು. ಇದುೆ ದೇವೇಗೌಡರ ರಾಜಕೀಯ ಮರು ಹುಟ್ಟಿಗೆ ಕಾರಣವಾಯಿತು. ನಂತರ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದಲ್ಲಿ ನೀರಾ ಇಳಿಸಲು ಮತ್ತು ಮಾರಲು ರೈತರಿಗೆ ಅನುಮತಿ ನೀಡುವುದಾಗಿ ಘೋಷಿಸಿದರು’ ಎಂದರು.

15 ವರ್ಷವಾದರೂ ಆಗದ ನೀತಿ: ಆದರೆ 15 ವರ್ಷವಾದರೂ ಈ ಸಂಬಂಧ ಸೂಕ್ತವಾದ ನೀರಾ ನೀತಿ ಜಾರಿಗೆ ಬರಲಿಲ್ಲ. ರೈತರ ಹೋರಾಟಕ್ಕೆ, ಹುತಾತ್ಮರಾದ ರೈತರಿಗೆ ನ್ಯಾಯವೂ ಸಿಕ್ಕಿಲ್ಲ. ಕೇರಳ, ತಮಿಳುನಾಡು, ಪಾಂಡಿಚೆರಿ, ಲಕ್ಷದ್ವೀಪದಲ್ಲಿ ನೀರಾ ಇಳಿಸಲು ಅನುಮತಿ ಇದೆ. ಕೇರಳದಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅಲ್ಲಿ ಆದದ್ದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಪುಟ್ಟಸ್ವಾಮಿ ಅವರ ಪ್ರಶ್ನೆಯಾಗಿದೆ.

1995ರಲ್ಲಿಯೇ ಫಿಲಿಪೈನ್ಸ್‌ ದೇಶ ನೀರಾ ಇಳಿಸಿ, ಜಗತ್ತಿಗೆ ಅದನ್ನು ಪರಿಚಯಿಸಿತು. ಅದರಿಂದಲೇ ಆದಾಯಗಳಿಸುತ್ತಿದೆ. ಶ್ರೀಲಂಕಾ ದೇಶದ ನೀರಾ ಫ್ರಾನ್ಸ್‌, ಇಂಗ್ಲೆಂಡ್‌ ಸೇರಿದಂತೆ ಯುರೋಪಿನ ದೇಶಗಳಲ್ಲಿ ಲಭ್ಯವಿದೆ. ಆದರೆ ಕರ್ನಾಟಕ ಸರ್ಕಾರ ನೀರಾ ವಿಷಯದಲ್ಲಿ ಏಕೆ ಇಂತಹ ಕಠಿಣ ಧೋರಣೆ ತಾಳುತ್ತಿದೆ ಎಂದು  ಅವರು ಕಿಡಿಕಾರಿದರು. ವೈನ್‌ ನೀತಿ ಮಾದರಿಯಲ್ಲಿ ನೀರಾ ನೀತಿ ರೂಪಿಸಿದ್ದರೆ ತೆಂಗು ಬೆಳೆಗಾರರ ಹಿತ ರಕ್ಷಿಸಲು ಸಾಧ್ಯವಾಗುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನನೆಗುದಿಗೆ ಬಿದ್ದ ಕಾಯ್ದೆ ತಿದ್ದುಪಡಿ
‘ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಇಳಿಸಲು ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಅದಿನ್ನೂ ಕನಸಾಗಿಯೇ ಉಳಿದಿದೆ. ಪಾಂಡವರ 14 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸದಂತೆ ತೆಂಗು ಬೆಳೆಗಾರರು 15 ವರ್ಷದಿಂದ ನೀರಾ ನೀತಿಗಾಗಿ ಕಾಯುತ್ತಿದ್ದಾರೆ. ಅದಕ್ಕೆ ಇನ್ನು ಎಷ್ಟು ವರ್ಷ ಬೇಕು’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಪ್ರಶ್ನಿಸಿದರು.

***
ಕೇರಳದ ನೀರಾ ನೀತಿ ಮತ್ತು ಅದರ ಅನುಷ್ಠಾನದ ಕುರಿತು ಅಧ್ಯಯನ ನಡೆಸಲಾಗಿದೆ.  ಉನ್ನತ ಹಂತದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.
-ರೂಪಶ್ರೀ,
ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT