ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತರಕರನ್ನು ಕೂಡಿ ಹಾಕಿ ಪ್ರತಿಭಟನೆ!

ಸಮಯಕ್ಕೆ ಸರಿಯಾಗಿ ದೊರಕದ ಆಹಾರ ಧಾನ್ಯ
Last Updated 20 ಸೆಪ್ಟೆಂಬರ್ 2014, 5:37 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸರಿಯಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಆರೋಪಿಸಿ ಸಮೀಪದ ಶಿಗ್ಲಿ ಗ್ರಾಮಸ್ಥರು ಶುಕ್ರವಾರ ಪಡಿತರ ವಿತರಕರನ್ನು ವಿತರಣಾ ಕೇಂದ್ರದಲ್ಲಿಯೇ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು. ವಿತರಕರು ತಿಂಗಳಲ್ಲಿ ಕೇವಲ 3–4 ದಿನ ಮಾತ್ರ ಪಡಿತರ ಹಂಚುತ್ತಾರೆ. ಆದರೆ ಶಿಗ್ಲಿ ಹಾಗೂ ಒಡೆಯರ­ಮಲ್ಲಾಪುರ ಸೇರಿ ಗ್ರಾಮದಲ್ಲಿ ಒಂದೇ ಪಡಿತರ ವಿತರಣಾ ಕೇಂದ್ರ ಇದ್ದು ಎಲ್ಲರಿಗೂ ಈ ಅವಧಿಯಲ್ಲಿ ಪಡಿತರ ತೆಗೆದುಕೊಂಡು ಹೋಗಲು ಬಹಳ ಕಷ್ಟ ಆಗುತ್ತದೆ. ಹೀಗಾಗಿ ಬಹಳಷ್ಟು ಜನರಿಗೆ ಪಡಿತರ ದೊರೆಯುತ್ತಿಲ್ಲ ಎಂದು ದೂರಿದರಲ್ಲದೆ ಈ ಹಿಂದಿನ ವಿತರಕರು ಎಲ್ಲ ಕಾರ್ಡ್‌ದಾರರಿಗೂ ದೊರೆಯುವಂತೆ ಪಡಿತರ ವಿತರಿಸುತ್ತಿದ್ದರು. ಆದರೆ ಈಗಿನವರು ಹಾಗೆ ಮಾಡದೆ ಪಡಿತರಕ್ಕಾಗಿ ಜನರನ್ನು ಸತಾ­ಯಿಸು­ತ್ತಿದ್ದಾರೆ ಎಂದು ನೂರಾರು ಸಂಖ್ಯೆಯಲ್ಲಿ ಜಮಾ­ಯಿಸಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ರೇಶನ್‌ ತರಾಕ ಬಂದ್ರ ಒಂದ ಆಳ ಇಲ್ಲ...ಅಂಗಡೀಗೆ ಬರಾಕತ್ತ ಎರಡ ದಿನಾ ಆಗೇತ್ರಿ. ಆದ್ರ ಇನ್ನ ರೇಶನ್ನ... ಕೊಡವಲ್ರು. ನಾವು ಬಡವರು. ಒಂದಿನಾ ದುಡ್ಯಾಕ ಹೋಗದಿದ್ರ ನಮ್ಮ ಮನಿ ಒಲೀ ಉರಿಯಾಂಗಿಲ್ರೀ’ ಎಂದು ಪಡಿತರಕ್ಕಾಗಿ ಬಂದಿದ್ದ ಸರಸ್ವತೆವ್ವ ಹಾದಿಮನಿ, ನೀಲವ್ವ ಹೆಸರೂರ, ಮಂಜುಳಾ ಗೌಳೇರ, ನೀಲವ್ವ ಹೊನ್ನಿಕೊಪ್ಪ, ತಿಪ್ಪವ್ವ ಅಸುಂಡಿ ಸೇರಿದಂತೆ ಮತ್ತಿತರ ಹತ್ತಾರು ಮಹಿಳೆಯರು ತಮ್ಮ ಗೋಳು ತೋಡಿಕೊಂಡರು.

‘ಶಿಗ್ಲ್ಯಾಗ ಬಾಳಷ್ಟು ಮಂದಿ ಬಡವರ ಅದೇವ್ರೀ. ಅಕ್ಕಿ, ಗೋಧಿ ಇಲ್ಲಾಂದ್ರ ನಮ್ಮ ಜೀವನ ಸಾಗಂಗಿಲ್ಲ. ಆದರ 4–5 ತಿಂಗಳಾತ್ರಿ ಸರಿಯಾಗಿ ರೇಷನ್‌ ಕೊಡ­ವಲ್ರು.. ಅದೂ ಅಲ್ಲದ ಗದ್ದಲ ಕಡಿಮೆ ಆದಾಗ ರೇಷನ್‌ ಕೊಡ್ತೀನಿ ಅಂತಾ ಹೇಳಿ ವಿತರಕರು ಚೀಟಿ ಬರದ ಕೊಡ್ತಾರ್ರೀ. ಆದರ ಆಮ್ಯಾಲ ಬಂದ ಕೇಳಿದ್ರ ರೇಷನ್‌ ಮುಗದೈತಿ. ಮುಂದಿನ ತಿಂಗಳ ಕೊಡ್ತೇವಿ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮ­ದ ಬಸವರಾಜ ಎರಿ, ಪ್ರಭಣ್ಣ ಗುಡಗೇರಿ, ಶಂಕ್ರಪ್ಪ ಹುಕ್ಕೇರಿ, ಎಂ.ಎಸ್‌. ಬಿದರಳ್ಳಿ, ಸಿದ್ದಯ್ಯ ಶಿರಹಟ್ಟಿಮಠ, ನಿಂಗಪ್ಪ ಪಶುಪತಿಹಾಳ ತಮ್ಮ ಅಳಲು ತೋಡಿ­ಕೊಂಡರು.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪಿಎಸ್‌ಐ ವಿಕಾಸ ಲಮಾಣಿ ಪ್ರತಿಭಟನೆಕಾರರ ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ತಹಶೀಲ್ದಾರರು ಬರು­ವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಕೊನೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ವೈ. ಹುನಗುಂದ ಹಾಗೂ ಸದಸ್ಯ ಬಸಣ್ಣ ಕಳಸದ ಅವರು ಸ್ಥಳಕ್ಕೆ ಬಂದು ಕಡಿಮೆ ಆಗುವ ಪಡಿತರವನ್ನು ತಕ್ಷಣ ತರಿಸಿ ಎಲ್ಲ ಕಾರ್ಡ್‌ದಾರರಿಗೂ ಅಕ್ಕಿ, ಗೋಧಿ ಹಂಚಲೇಬೇಕು ಎಂದು ವಿತರಿಕರಿಗೆ ತಾಕೀತು ಮಾಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿದರು.

ಪದಾಧಿಕಾರಿಗಳ ಆಯ್ಕೆ
ಗದಗ: ಬೆಟಗೇರಿಯ ಅಂಬಾಭವಾನಿ ದೇವಸ್ಥಾನದಲ್ಲಿ ಈಚೆಗೆ ನಡೆದ ಎಸ್ಎಸ್‌ಕೆ ತರುಣ ಸಂಘದ ಸಭೆಯಲ್ಲಿ ದಸರಾ ಉತ್ಸವ ಸಮಿತಿ 2014ರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಟಿ. ಎನ್. ಭಾಂಡಗೆ, ಉಪಾಧ್ಯಕ್ಷರಾಗಿ ದೀಪಕ್ ಜಿ. ಲದ್ವಾ, ಗೌರವ ಕಾರ್ಯದರ್ಶಿಯಾಗಿ ನಾಗರಾಜ ಎ. ಬಸವಾ, ಸಹ ಕಾರ್ಯದರ್ಶಿಯಾಗಿ ಕಾಶಿನಾಥಸಾ ವಿ. ಕಬಾಡಿ, ಖಜಾಂಚಿಯಾಗಿ ವಿಷ್ಣು ಸಾ ಅರವಟಗಿ, ಲೆಕ್ಕತಪಾಸಣೆಕಾರರಾಗಿ ರಾಜು ಜಿ. ಬಸವಾ ಸೇರಿದಂತೆ 50 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ದಸರಾ ಉತ್ಸವದ ಉತ್ಸವದಲ್ಲಿ ಐತಿಹಾಸಿಕ ಅಂಬಾರಿ ಮೆರವಣಿಗೆ ಆಚರಿಸಲು ನಿರ್ಧ­ರಿಸಲಾಯಿತು. ಒಂಬತ್ತು ದಿನಗಳ ಕಾಲ ನಿರಂತ­ರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದು­ಕೊಳ್ಳಲಾಯಿತು.

ಸಭೆಯಲ್ಲಿ ಲೋಬೋಸಾ ಕಬಾಡಿ, ಡಿ. ಡಿ. ಮೇರವಾಡೆ, ಬಲರಾಮ ಅರಸಿದ್ದಿ, ಸತ್ಯನಾರಾಯಣ ಕಬಾಡಿ, ಪಾಂಡುರಂಗ ಕಬಾಡಿ, ಸುರೇಶ ಮೇರ­ವಾಡೆ, ಶಂಕರ ಜಿತೂರಿ, ರಾಜು ಮೇರವಾಡೆ, ಶಂಕರ ಮೇರವಾಡೆ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT