ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದಾಯಕ್ಕೆ ಮೊದಲು...

ಅಂಕುರ –83
Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಶಿಶ್ನದ ಬೆಳವಣಿಗೆ ಯಾವಾಗ ಆಗುತ್ತದೆ?
ಪ್ರೌಢಾವಸ್ಥೆಗೆ ತಲುಪುವ ಹಂತದಲ್ಲಿ ಶಿಶ್ನದ ಬೆಳವಣಿಗೆ ಆಗುತ್ತದೆ. ಈ ಹಂತದಲ್ಲಿ ಹುಡುಗನ ದೇಹದಲ್ಲಿ ವಿಪರೀತದ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಬದಲಾವಣೆಗಳಿಂದಾಗಿ ನಿಮ್ಮ ಮಗ ಮಗುವಿನಂತೆ ಕಾಣದೆ ಯುವಕನಂತೆ ಕಾಣತೊಡಗುತ್ತಾನೆ. ಬಹುತೇಕ ಹುಡುಗರು 10ರಿಂದ 14ವರ್ಷಗಳ ವಯಸ್ಸಿನಲ್ಲಿ ತಮ್ಮ ಪ್ರೌಢ ಹಂತಕ್ಕೆ ತಲುಪುತ್ತಾರೆ. ಇದು ಪ್ರತಿಯೊಬ್ಬರಿಗೂ ವಿವಿಧ ವಯಸ್ಸಿನಲ್ಲಿ ಕಾಣಬಹುದಾದ ಹಂತವಾಗಿದೆ. ಪ್ರೌಢಿಮೆಯ ಲಕ್ಷಣಗಳು ತಡವಾದರೆ ಅಥವಾ ಬೇಗನೇ ಕಂಡುಬಂದರೂ ಗಾಬರಿ ಪಡಬೇಕಿಲ್ಲ.

ಶಿಶ್ನ ಬೆಳೆಯುವುದು ಯಾವಾಗ ಪೂರ್ಣಗೊಳ್ಳುತ್ತದೆ?
ನೀವು ಪ್ರೌಢಾವಸ್ಥೆಯ ಹಂತ ಪೂರ್ಣಗೊಳಿಸಿದಾಗ ನಿಮ್ಮ ಶಿಶ್ನದ ಬೆಳವಣಿಗೆಯೂ ಪೂರ್ಣಗೊಳ್ಳುತ್ತದೆ. ಇದೇ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಪ್ರತಿಯೊಬ್ಬರಲ್ಲಿಯೂ ಕಿಶೋರಾವಸ್ಥೆ ಮುಗಿದು ಪ್ರೌಢ ಹಂತಕ್ಕೆ ತಲುಪುವ ವಯಸ್ಸೇ ಬೇರೆಯಾಗಿರುತ್ತದೆ. ಪ್ರೌಢ ಹಂತ ಮುಗಿದು ಯೌವ್ವನಾವಸ್ಥೆಗೆ ಕಾಲಿಡುವುದು ಪ್ರತಿ ಹುಡುಗರಿಗೂ ಬೇರೆಬೇರೆ ಅವಧಿಯದ್ದಾಗಿರುತ್ತದೆ. ಅತಿಬೇಗ ಎಂದರೆ 13ರ ಹರೆಯದಲ್ಲಿಯೇ ಪೂರ್ಣಗೊಳ್ಳಬಹುದು. ತಡವಾಗಿ ಎಂದರೆ 18ರ ಆಸುಪಾಸಿನಲ್ಲಿಯೂ ಪೂರ್ಣಗೊಳ್ಳಬಹುದು. 16ರಿಂದ 18ರವಳಗೆ ನಿಮ್ಮಲ್ಲಿ ಪೂರ್ಣ ಬೆಳವಣಿಗೆ ಆಗಿರುವ ಸಾಧ್ಯತೆಗಳೇ ಹೆಚ್ಚು.

ನನ್ನ ಶಿಶ್ನದ ಗಾತ್ರ ಸಾಮಾನ್ಯವಾಗಿದೆಯೇ?
ಶಿಶ್ನದ ಗಾತ್ರವು ನಿಮ್ಮ ವಂಶವಾಹಿಯನ್ನು ಅವಲಂಬಿಸಿರುತ್ತದೆ.  ಪಾದ, ಅಂಗೈಗಳಂತೆಯೇ ಇದೂ ಭಿನ್ನವಾಗಿರುತ್ತದೆ. ಒಂದಂಶ ಮರೆಯದಿರಿ ನಿಮ್ಮ ಶಿಶ್ನದ ಗಾತ್ರಕ್ಕೂ ನಿಮ್ಮ ಪೌರುಷತ್ವಕ್ಕೂ, ಲೈಂಗಿಕ ಸಾಮರ್ಥ್ಯಕ್ಕೂ ಯಾವುದೇ ಸಂಬಂಧ ಇಲ್ಲವೇ ಇಲ್ಲ.

ಶಿಶ್ನದ ಗಾತ್ರವನ್ನು ಬದಲಿಸಬಹುದೇ?
ಇದು ಅಸಾಧ್ಯವಾಗಿದೆ. ಯಾವುದೇ ಜಾಹೀರಾತುಗಳನ್ನು ನಂಬಲೇಬೇಡಿ. ಶಿಶ್ನದ ಗಾತ್ರಕ್ಕೂ ಲೈಂಗಿಕ ಸುಖಕ್ಕೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ ಯಾವುದೇ ಔಷಧಿ, ವ್ಯಾಯಾಮ ಹಾಗೂ ಸಾಧನಗಳು ಶಿಶ್ನದ ಗಾತ್ರವನ್ನು ಬದಲಿಸಲಾರವು. ಕೇವಲ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯಿಂದ ಮಾತ್ರ ಇದು ಸಾಧ್ಯವಾಗಿದೆ.

ಬೆಳಗಿನ ಉದ್ರೇಕವೆಂದರೇನು?
ಸಾಮಾನ್ಯವಾಗಿ ಶಿಶ್ನಕ್ಕೆ ರಕ್ತ ಸರಬರಾಜು ಹೆಚ್ಚಾಗಿ, ಗಡಸಾಗುವುದಕ್ಕೆ ಉದ್ರೇಕವೆಂದು ಕರೆಯಲಾಗುತ್ತದೆ. ಬೆಳಗಿನ ಉದ್ರೇಕವೆಂದರೆ ನೀವು ನಿದ್ದೆಯಿಂದ ಎಚ್ಚೆತ್ತಾಗ ಕಂಡು ಬರುವ ಸಾಮಾನ್ಯ ಉದ್ರೇಕವಾಗಿದೆ. ಸಾಮಾನ್ಯವಾಗಿ ಪುರುಷರು ನಿದ್ರಿಸುವಾಗ 3ರಿಂದ 5 ಉದ್ರೇಕಗಳನ್ನು ಅನುಭವಿಸಿರುತ್ತಾರೆ. 

ಸ್ವಪ್ನ ಸ್ಖಲನವೆಂದರೇನು?
ನಿದ್ರಾವಸ್ಥೆಯಲ್ಲಿರುವಾಗಲೇ ಸ್ಖಲಿಸುವುದಕ್ಕೆ ಸ್ವಪ್ನ ಸ್ಖಲನವೆಂದು ಕರೆಯಲಾಗುತ್ತದೆ. ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಕನಸುಗಳಿಂದಲೂ ಹೀಗೆ ಆಗಬಹುದು. ಕೆಲವೊಮ್ಮೆ ಯೌವ್ವನಾವಸ್ಥೆಗೆ ತಲುಪುವಾಗ ಆಗಾಗ ಸ್ವಪ್ನಸ್ಖಲನಗಳು ಆಗುತ್ತವೆ. ಆದರೆ ಬೆಳೆಯುತ್ತ ಹೋದಂತೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಜೀವನದ ಒಂದು ಅಂಗವಾಗಿದೆಯೆಂದು ಹೇಳಬಹುದಾಗಿದೆ.

***
ಈ ಕೆಲವು ವಾರಗಳಿಂದ ಸಾಮಾನ್ಯವಾಗಿ ಕಾಡುವ ಆತಂಕಗಳನ್ನು ಚರ್ಚಿಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಈ ಎಲ್ಲ ಪ್ರಶ್ನೆಗಳನ್ನೂ ವಿಸ್ತೃತವಾಗಿ ‘ಅಂಕುರ’ಅಂಕಣದಲ್ಲಿ ವಿವರಿಸಲಾಗಿದೆ. ಈ ಅಂಕಣ ಆರಂಭವಾಗುವ ಮುನ್ನ ಸಂತಾನೋತ್ಪತ್ತಿಯಲ್ಲಿ ಪುರುಷರ ಪಾತ್ರದ ಬಗ್ಗೆ ಬಲು ಕಡಿಮೆ ಜ್ಞಾನವಿತ್ತು. ಪುರುಷರಿಗೆ ಕಾಡಬಹುದಾದ ಸಮಸ್ಯೆಗಳನ್ನು ಓದುಗರ ಪ್ರಶ್ನೆಗಳಿಂದಲೇ ಪ್ರತಿ ಅಂಕಣವನ್ನೂ ರೂಪಿಸಲಾಗಿತ್ತು. ಸದ್ಯಕ್ಕೆ ಬಂಜೆತನದಲ್ಲಿ ಪುರುಷರ ಪಾತ್ರದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಈ ಅಂಕಣದ ಮೂಲಕ ನೀಡಲಾಗಿದೆ.  ಬಂಜೆತನಕ್ಕೆ ಪುರುಷರಷ್ಟೇ ಹೆಣ್ಣುಮಕ್ಕಳಿಗೂ ದೈಹಿಕ ಕಾರಣಗಳಿರುತ್ತವೆ.

ದೇಹ ರಚನೆ, ಕ್ರಿಯೆ, ಚಿಕಿತ್ಸೆ ಸಮಸ್ಯೆ, ಪರಿಹಾರ ಇವುಗಳನ್ನೂ ಚರ್ಚಿಸಲು ಇದು ಸಕಾಲವಾಗಿದೆ. ಡಾ. ಬೀನಾ ವಾಸನ್‌ ಮುಂದಿನ ವಾರದಿಂದ ಹೆಣ್ಣುಮಕ್ಕಳ ಸಂತಾನೋತ್ಪತ್ತಿಯ ವ್ಯವಸ್ಥೆ ಹಾಗೂ ಬಂಜೆತನದ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ. ಓದುಗರು ತಮ್ಮ ಪ್ರತಿಕ್ರಿಯೆಯನ್ನು ‘ಭೂಮಿಕಾ’ ಆರೋಗ್ಯ ಪುರವಣಿಗೆ ಕಳುಹಿಸ­ಬಹುದಾಗಿದೆ. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಎಂದಿನಂತೆ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ.
ಒಂದೂವರೆ ವರ್ಷ ಓದುಗರೊಂದಿಗೆ ನಡೆದ ಈ ಪಯಣ ತೃಪ್ತಿದಾಯಕವಾಗಿತ್ತು. ಓದುಗರ ಉತ್ಸಾಹದ ಸ್ವಾಗತ ಡಾ. ಬೀನಾ ವಾಸನ್‌ ಅವರಿಗೂ ದೊರೆಯುತ್ತದೆ ಎಂಬ ಆಶಯದೊಂದಿಗೆ...

ಮಾಹಿತಿಗೆ ಸಂಪರ್ಕಿಸಿ: 18002084444  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT