ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ನಾಣ್ಯ, ನೋಟುಗಳ ಸರದಾರ

Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹಾವೇರಿಯ ತಿಪ್ಪೇಶಿ ಪವಾರ್, ದೇಶ–ವಿದೇಶವನ್ನು ಪೂರ್ಣವಾಗಿ ಸುತ್ತಿ ಬಂದಿಲ್ಲ.  ಆದರೆ ಅಲ್ಲಿಯ ಹಣದ ಬಗ್ಗೆ ಪಟಪಟನೆ ಉತ್ತರಿಸುತ್ತಾರೆ. ನಾಣ್ಯ, ನೋಟು ಎಲ್ಲವುಗಳ ಬಗ್ಗೆಯೂ ಅಪಾರ ಜ್ಞಾನ ಇವರಲ್ಲಿದೆ. ಅಷ್ಟೇ ಅಲ್ಲದೇ ಇವರ ಮನೆಯಲ್ಲಿ ಅನೇಕ ದೇಶಗಳ ನಾಣ್ಯ-ನೋಟುಗಳ ಖಜಾನೆಯಿದೆ.

30 ವರ್ಷಗಳಿಂದ 300ಕ್ಕೂ ಹೆಚ್ಚು ವಿವಿಧ ದೇಶ– ವಿದೇಶದ ನಾಣ್ಯ, ನೋಟುಗಳನ್ನು ಇವರು ಸಂಗ್ರಹಿಸುತ್ತಿದ್ದಾರೆ. ಪ್ರೌಢಶಾಲೆಯವರೆಗೆ ಮಾತ್ರ ಅಧ್ಯಯನ ಮಾಡಿದ್ದರೂ, ವಿದೇಶಗಳ ಹಣದ ಬಗ್ಗೆ ಮಾತ್ರ ಇವರ ಬುದ್ಧಿವಂತಿಕೆ ಅಗಾಧ. ‘ಹರಿಹರದಲ್ಲಿ ತಂದೆ ಜೊತೆ ಪಾತ್ರೆ ಅಂಗಡಿಯಲ್ಲಿ ಕೆಲಸ ಆರಂಭಿಸಿದೆ. ಆದರೆ, 7ನೇ ತರಗತಿಯಿಂದಲೇ ನಾಣ್ಯ  ಸಂಗ್ರಹಿಸುವ ಹವ್ಯಾಸ ಇತ್ತು. ಒಂದು ದಿನ ಹರಿಹರದ ದೇವಾಲಯ ನೋಡಲು ಬಂದ ವಿದೇಶಿಯರನ್ನು ಮಾತನಾಡಿಸಿದೆ. ಅವರು ಡೆನ್ಮಾರ್ಕ್‌ನ ಡಾಲರ್‌ ನೀಡಿದರು. ಅದುವೇ ನನ್ನ ನಾಣ್ಯ ಸಂಗ್ರಹಕ್ಕೆ ಪ್ರೇರಣೆಯಾಯಿತು’ ಎನ್ನುತ್ತಾರೆ ತಿಪ್ಪೇಶಿ.

ಶಾತವಾಹನರು, ಬಾದಾಮಿ, ಚಾಲುಕ್ಯ, ಹೊಯ್ಸಳ, ಮೌರ್ಯ, ರಜಪೂತ್‌, ಚಂದ್ರಗುಪ್ತ ಮೌರ್ಯ, ಕೌಟಿಲ್ಯ, ಅಶೋಕ ಚಕ್ರವರ್ತಿ, ಶಿವಾಜಿ, ರಾಷ್ಟ್ರಕೂಟರು, ಡಚ್ಚರು, ಗಂಗರು, ಚೋಳ, ಬನವಾಸಿ ಕದಂಬರು, ಉಜ್ಜಯಿನಿ, ಮಹ್ಮಮದ್‌ ಬಿನ್‌ ತುಘಲಕ್‌, ಮಹ್ಮದ್‌ ಘಜನಿ, ಕಿತ್ತೂರು ರಾಣಿ ಚೆನ್ನಮ್ಮ, ವಿಜಯಪುರದ ಆದಿಲ್‌ಶಾಹಿ, ವಿಜಯನಗರ ಸಾಮ್ರಾಜ್ಯ, ಹೈದರಾಬಾದ್‌ ನಿಜಾಮ, ಟಿಪ್ಪು ಸುಲ್ತಾನ್‌, ಮೈಸೂರು ರಾಜರು, ಬ್ರಿಟೀಷರು ಹಾಗೂ ವಿವಿಧ ರಾಜ ಮಹಾರಾಜರು, ಹುತಾತ್ಮರು, ವೀರ ಯೋಧರ ಚಿತ್ರವುಳ್ಳ ನಾಣ್ಯ-ನೋಟುಗಳು ಇವರ ಬಳಿ ಇವೆ.

ಅಣಿ, ಬಿಲ್ಲಿ, ಕ್ವಾಂಟರ್‌ ಬಿಲ್ಲಿ, ಒಂದು, ಎರಡು, ಐದು, ಹತ್ತು, ಇಪ್ಪತ್ತು, ಐವತ್ತು ಪೈಸೆಯಿಂದ ಸಾವಿರ ರೂಪಾಯಿ ನೋಟಿನ ತನಕ ಪಂಚ ಲೋಹ, ಸೀಸ, ಬೆಳ್ಳಿ, ಬಂಗಾರ, ತಾಮ್ರ, ಹಿತ್ತಾಳೆ, ಕಬ್ಬಿಣ, ಚರ್ಮ ಹಾಗೂ ವಿವಿಧ ರೀತಿಯಲ್ಲಿ ನಾಣ್ಯ, ನೋಟುಗಳು ಇವರ ಸಂಗ್ರಹದಲ್ಲಿವೆ.

ಅಮೆರಿಕ, ಕೆನಡಾ, ಸೌದಿ ಅರೇಬಿಯಾ, ಅಫ್ಘಾನಿಸ್ತಾನ್‌, ಆಫ್ರಿಕಾ, ರಷ್ಯಾ, ಕಿನ್ಯಾ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌, ಭೂತಾನ್‌, ಇಂಡೋನೇಷ್ಯಾ, ಥೈಲ್ಯಾಂಡ್‌, ಉತ್ತರ ಕೋರಿಯಾ, ಇಟಲಿ, ಜರ್ಮನಿ, ಜಪಾನ್‌, ಪಾಕಿಸ್ತಾನ, ಬಲೂಚಿಸ್ತಾನ,  ಶ್ರೀಲಂಕಾ, ಸಿಂಗಪುರ, ಮಲೇಷಿಯಾ, ಹಾಂಗ್‌ಕಾಂಗ್‌, ಬ್ರೆಜಿಲ್‌, ಬ್ಯಾಂಕಾಕ್‌ ಸೇರಿದಂತೆ 20ಕ್ಕೂ ಅಧಿಕ ದೇಶಗಳ ನಾಣ್ಯಗಳಿವೆ. 

ತಿಪ್ಪೇಶಿ ಅವರು ಜೀವನೋಪಾಯಕ್ಕಾಗಿ ಹಾವೇರಿ ನಗರದ ಮಾರುಕಟ್ಟೆಯಲ್ಲಿ ತಂಪು ಪಾನೀಯದ ಅಂಗಡಿ ನಡೆಸುತ್ತಿದ್ದಾರೆ. ಹಾಗೇ ಅಂಗಡಿಗೆ ಬಂದ ಗ್ರಾಹಕರಿಗೂ ‘ಹಳೇ, ವಿದೇಶಿ ನಾಣ್ಯಗಳಿದ್ದರೆ ಕೊಡಿ. ಹೆಚ್ಚಿನ ಹಣ ನೀಡುತ್ತೇನೆ’ ಎನ್ನುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ‘ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಉತ್ತಮ ಕೆಲಸ ಮಾಡಬೇಕು ಎಂಬ ಹಿರಿಯರ ನುಡಿಯನ್ನು ಅನುಸರಿಸುತ್ತಿದ್ದೇನೆ ಅಷ್ಟೇ. ಇದು ಯಾವುದೇ ಪ್ರಶಸ್ತಿ, ಪುರಸ್ಕಾರ, ಸನ್ಮಾನದ ಆಸೆಯಿಂದ ಮಾಡುತ್ತಿರುವ ಕಾರ್ಯವಲ್ಲ. ಇದು ನನ್ನ ಹವ್ಯಾಸ ಹಾಗೂ ಇದು ನನಗೆ ಸಂತೋಷ ನೀಡಿದೆ’ ಎಂದು ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT