ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಯುವಕನಿಗೆ ‘ಯಾಂತ್ರಿಕ ಹೃದಯ’

ಭಾರತದಲ್ಲಿ ಮೂರನೇ ಪ್ರಕರಣ
Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಗುಡಗಾಂವ್‌ (ಪಿಟಿಐ): ಹೃದಯದ ಭಾಗವೊಂದರಲ್ಲಿ ಸಮಸ್ಯೆಯಿದ್ದ ವಿದೇಶಿ ಯುವಕನೊಬ್ಬನಿಗೆ ‘ಯಾಂತ್ರಿಕ ಹೃದಯ’ವನ್ನು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

‘‘ಉತ್ತರ ಭಾರತದಲ್ಲಿ ಇಂತಹ ಹೃದಯ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲ ಸಲ. ‘ಹಾರ್ಟ್‌ ಮೇಟ್‌  II’ ಎಂಬ ಸಾಧನವನ್ನು ಅಳವಡಿಸುವ ಮೂಲಕ ಇದನ್ನು ನಡೆಸಲಾಯಿತು’’ ಎಂದು ಶಸ್ತ್ರ­ಚಿಕಿತ್ಸೆ ನಡೆಸಿದ ಇಲ್ಲಿನ ಫೋರ್ಟಿಸ್‌ ಮೆಮೋರಿಯಲ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನ ವೈದ್ಯರು ಹೇಳಿದ್ದಾರೆ.
‘ಭಾರತದಲ್ಲಿ ಇಂತಹ ಶಸ್ತ್ರಚಿಕಿತ್ಸೆ ಈ ಮುನ್ನ ಎರಡು ಸಲ ನಡೆದಿದೆ. ಈ ಎರಡೂ ಶಸ್ತ್ರಚಿಕಿತ್ಸೆಗಳು ಚೆನ್ನೈನ ಫೋರ್ಟಿಸ್‌ ಮಲರ್‌ನಲ್ಲಿ ನಡೆದಿವೆ’ ಎಂದೂ ಅವರು ಹೇಳಿದ್ದಾರೆ.

ಇರಾಕ್‌ನ 29 ವರ್ಷದ ಯುವಕ ರಬೀಆ ಮಜ್ಹೂಲ್‌ಗೆ ಕೆಲವು ತಿಂಗಳುಗಳ ಹಿಂದೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತು. ಸಾಮಾನ್ಯ ಸೋಂಕಿನ ಸಮಸ್ಯೆಯಾಗಿದ್ದರೆ ಇದು ಕೆಲವೇ ದಿನಗಳಲ್ಲಿ ನಿವಾರಣೆ­ಯಾಗಿತ್ತು. ಆದರೆ ಮಜ್ಹೂಲ್‌ನ ವಿಷಯದಲ್ಲಿ ಹಾಗಾಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ವಿವಾಹ­ವಾಗಬೇಕಿದ್ದ ಮಜ್ಹೂಲ್‌ಗೆ ಸೋಂಕು ತೀವ್ರಗೊಂಡಿತು.

‘ಶ್ವಾಸಕೋಶದಲ್ಲಿ ಆರಂಭವಾದ ಸೋಂಕು ಹೃದಯದವರೆಗೂ ಹಬ್ಬಿತು. ಹೃದಯದ ಕೆಳಭಾಗದ ಎಡಗೂಡು ನಿಷ್ಕ್ರಿಯಾವಸ್ಥೆ ತಲುಪಿತ್ತು. ಆಗ ಇರಾಕ್‌ನ ವೈದ್ಯರು ಹೃದಯ ಕಸಿ ಮಾಡುವ ಬೇರ್‍್ಯಾವ ಮಾರ್ಗೋ­ಪಾಯವೂ ಇಲ್ಲ ಎಂದಿದ್ದರು. ಆದರೆ ಜಾಗತಿಕ ಮಟ್ಟದಲ್ಲಿ ಅಂಗಾಂಗ ದಾನದ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಮಜ್ಹೂಲ್‌ ಅಷ್ಟು ದೀರ್ಘ ಕಾಲದವರೆಗೆ ಕಾಯುವ ಸ್ಥಿತಿ ಇರಲಿಲ್ಲ’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಅಶೋಕ್‌ ಸೇಠ್‌ ವಿವರಿಸಿದ್ದಾರೆ.

ಭಾರತದಲ್ಲಿರುವ ಕಾನೂನಿನ ಪ್ರಕಾರ, ಅಂಗಾಂಗ ದಾನ ಕೋರಿ ಹೆಸರು ನೋಂದಾಯಿಸಿದವರ ಪಟ್ಟಿಯಲ್ಲಿರುವ ನಮ್ಮ ದೇಶದ ಪ್ರಜೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಇಲ್ಲಿನ ಪ್ರಜೆಗಳೆಲ್ಲರಿಗೆ ಅಂಗಾಂಗ ದಾನ ಪೂರೈಸಿದ್ದರೆ ನಂತರ ವಿದೇಶದ ಪ್ರಜೆಗೆ ಅಂಗಾಂಗ ದಾನ ಮಾಡಬಹುದಾಗಿದೆ.

‘ಹಾರ್ಟ್‌ ಮೇಟ್‌ II ಸಾಧನವು ಹೃದಯದ ಕೆಳಭಾಗದ ಎಡ ಗೂಡಿನಂತೆ ಕೆಲಸ ಮಾಡುತ್ತಿದೆ. ಹೃದಯ ದುರ್ಬಲವಾದಾಗ ಸ್ವಯಂಚಾಲಿತವಾಗಿ ರಕ್ತ­ವನ್ನು ದೂಡುತ್ತದೆ’ ಎಂದು ಕಾರ್ಡಿಯೊ ಥೊರಾಸಿಕ್‌ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸಂದೀಪ್‌ ಅತ್ತಾವರ್‌ ಹೇಳಿದ್ದಾರೆ.

ಈ ವೈದ್ಯಕೀಯ ತಂತ್ರಜ್ಞಾನವು ಹೃದಯ ಕಸಿಗೆ ಕಾದಿರುವ ಭಾರತೀಯ ರೋಗಿಗಳು ಮತ್ತು ಅಂತರ­ರಾಷ್ಟ್ರೀಯ ರೋಗಿಗಳಿಗೆ ಹೊಸ ಮಾರ್ಗೋಪಾಯ ತೋರಿಸಿದೆ. ಇದು ಅಂಗಾಂಗ ದಾನಿಗಳು ಹಾಗೂ ಅಂಗಾಂಗ ದಾನದ ನಿರೀಕ್ಷೆಯಲ್ಲಿರುವವರ ಬೇಡಿಕೆ­ಯನ್ನು ತಗ್ಗಿಸುತ್ತದೆ ಎಂದು ಡಾ.ಸೇಠ್‌ ಹೇಳಿದ್ದಾರೆ.

‘ಯಾರಿಗೆ ಅಂಗಾಂಗ ದಾನದಿಂದ ಹೃದಯ ಪಡೆಯಲು ಅಸಾಧ್ಯವಾಗುತ್ತದೋ ಅಥವಾ ಯಾರಿಗೆ ಹೃದಯ ಕಸಿ ಮಾಡುವುದು ಸಾಧ್ಯವಿಲ್ಲವೂ ಅಂತಹ ಸಂದರ್ಭಗಳಲ್ಲಿಕೂಡ ಈ ತಂತ್ರಜ್ಞಾನ ವರದಾನವಾಗುತ್ತದೆ. ಈ ಶಸ್ತ್ರಚಿಕಿತ್ಸೆಯ ಮಾಡಿಸಿಕೊಂಡ ಶೇ 90ರಷ್ಟು ರೋಗಿಗಳ ಜೀವಿತಾವಧಿ 10 ವರ್ಷದಷ್ಟು ಅಧಿಕವಾಗುವ ಸಾಧ್ಯತೆ ಇದೆ. ಹೃದಯ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಜೀವಿತಾವಧಿ ಸಾಮಾನ್ಯವಾಗಿ 5 ವರ್ಷ ಹೆಚ್ಚಾಗುತ್ತದೆ’ ಎಂದು ವೈದ್ಯರು ಹೇಳಿದ್ದಾರೆ.

‘ಹೃದಯ ಕಸಿಗೆ ಒಳಗಾದವರು ಹಲವಾರು ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಈ ಸಾಧನ ಅಳವಡಿಸಿಕೊಂಡವರು ರಕ್ತ ತೆಳುಗೊಳಿಸುವ ಔಷಧಿಯೊಂದನ್ನು ತೆಗೆದುಕೊಂಡರೆ ಸಾಕು. ಒಂದೊಮ್ಮೆ ಸಮಸ್ಯೆ ಇರುವ ಎಡಗೂಡಿನ ಆರೋಗ್ಯ ಸುಧಾರಣೆಯಾದರೆ ಇದನ್ನು ತೆಗೆಯಲು ಕೂಡ ಅವಕಾಶವಿದೆ. ಅಲ್ಲದೇ ಎಲ್ಲ ರೀತಿಯ ರಕ್ತದ ಗುಂಪಿನವರಿಗೂ ಇದನ್ನು ಬಳಸಬಹುದು’ ಎಂದೂ ತಜ್ಞರು ವಿವರಿಸಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ನೀಡಿರುವ ಪ್ರಮಾಣಪತ್ರದ ಪ್ರಕಾರ, ಈ ಯಂತ್ರ 60 ವರ್ಷಗಳವರೆಗೆ ಬಾಳಿಕೆ ಬರುತ್ತದೆ.

ಹೃದಯದ ಹೆಚ್ಚುವರಿ ಗೂಡಿಗೆ ಶಸ್ತ್ರಚಿಕಿತ್ಸೆ
ಜೋಧಪುರ (ಪಿಟಿಐ): ಹೃದಯದಲ್ಲಿ ನಾಲ್ಕು ಗೂಡುಗಳ ಬದಲಿಗೆ ಹುಟ್ಟಿನಿಂದಲೇ ಐದು ಗೂಡುಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರಿಗೆ ದೇಶದಲ್ಲೇ ಇದೇ ಮೊದಲ ಬಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇಡೀ ಜಗತ್ತಿನಲ್ಲೇ ಇದು ಇಂತಹ ಮೂರನೇ ಶಸ್ತ್ರಚಿಕಿತ್ಸೆ ಎಂದು ಹೇಳಲಾಗಿದೆ.

ಪಾಳಿ ದೇವರಮ್‌ (42) ಎಂಬುವವರು ಶಸ್ತ್ರಚಿಕಿತ್ಸೆಗೆ ಒಳಗಾದವರು. ಉಸಿರಾಟದ ತೊಂದರೆ, ಎಡೆ­ಬಿಡದ ಕೆಮ್ಮು ಮತ್ತು ಹೃದಯ ನೋವಿನಿಂದ ಬಳಲುತ್ತಿದ್ದ ಅವರು ಇಲ್ಲಿನ ಮೆಡಿಪಲ್‌್ಸ ಹಾಸ್ಪಿಟಲ್‌ಗೆ ಬಂದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹೃದಯದಲ್ಲಿ ಒಂದು ಗೂಡ ಹೆಚ್ಚಾಗಿ ಇರುವುದು ಕಂಡುಬಂತು.

‘ನಂತರ ಅಂತಿಮ ಪರೀಕ್ಷೆಗೆ ಒಳಪಡಿಸಿದ ವೈದ್ಯರ ತಂಡವು ದೇವರಮ್‌ ಅವರನ್ನು ಬುಧವಾರ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಡಿಸಿತು. ಒಂದು ಗೂಡು ಹೆಚ್ಚಾಗಿರಲು ಕಾರಣವಾಗಿದ್ದ ಪೊರೆಯನ್ನು ಕತ್ತರಿಸಿ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಜಗತ್ತಿನಲ್ಲಿ ಇಂತಹ ಶಸ್ತ್ರಚಿಕಿತ್ಸೆ ಈ ಮೊದಲು ಎರಡು ಸಲ ನಡೆದಿದೆ. ಒಂದು ಶಸ್ತ್ರಚಿಕಿತ್ಸೆ ಚೀನಾದಲ್ಲಿ ನಡೆದಿದ್ದರೆ ಮತ್ತೊಂದು ಶಸ್ತ್ರಚಿಕಿತ್ಸೆ ಜರ್ಮನಿಯಲ್ಲಿ ನಡೆದಿದೆ ಎಂದು ಆಸ್ಪತ್ರೆಯ ನಿರ್ದೇಶಕ ನವನೀತ್‌ ಅಗರ್‌ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT