ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ವಿಜ್ಞಾನ ‘ಮಾದರಿ’

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇದು ಗಡಿಯಲ್ಲಿ ಗುಂಡಿನ ಸದ್ದು ಮೊರೆಯುತ್ತಿರುವ ಸಮಯ. ಎರಡೂ ಕಡೆಗಳಿಂದ ಕ್ಷಿಪಣಿಗಳ ಉಡಾವಣೆ ಸಾಮಾನ್ಯ. ಈ ಸಂದರ್ಭ ಎದುರಾಳಿಗಳ ದಾಳಿಗೆ ಸಿಕ್ಕು ಸೈನಿಕರು ಸಾವನ್ನಪ್ಪುವುದನ್ನು ತಪ್ಪಿಸಲೆಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬಿಸಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ವೈ–ಫೈ ಕ್ಷಿಪಣಿ ಉಡಾವಣೆ ಯಂತ್ರದ ಮಾದರಿ ಸಿದ್ಧಪಡಿಸಿದ್ದಾರೆ.

ರಿಮೋಟ್‌ ಮೂಲಕ ಈ ಯಂತ್ರವನ್ನು ನಿರ್ವಹಿಸಬಹುದಾಗಿದ್ದು, ದೂರದಿಂದಲೇ ಕ್ಷಿಪಣಿ ಉಡಾಯಿಸುವ ವ್ಯವಸ್ಥೆ ಇರುವುದು ಈ ಮಾದರಿಯ ವಿಶೇಷ. ಈ ಯಂತ್ರವನ್ನು ಬೇಕೆಂದಲ್ಲಿ ಕೊಂಡೊಯ್ಯಬಹುದು. ಮಾತ್ರವಲ್ಲ. ಕ್ಷಿಪಣಿಯನ್ನು 360 ಡಿಗ್ರಿ ಕೋನದಲ್ಲಿ ತಿರುಗಿಸಬಹುದು. ಹೀಗಾಗಿ ರಿಮೋಟ್‌ ಮೂಲಕವೇ ಗುರಿ ನಿಗದಿಪಡಿಸಿ ಆ ದಿಕ್ಕಿನಲ್ಲಿಯೇ ಉಡಾವಣೆ ಮಾಡಬಹುದು.

‘ಯುದ್ಧ ಆದಾಗ ಎಷ್ಟೊಂದು ಮಂದಿ ಸಾಯುತ್ತಾರಲ್ಲ. ಅದನ್ನು ತಪ್ಪಿಸಬಹುದಾ ಎಂದು ಯೋಚಿಸಿ ಈ ಮಾದರಿ ಸಿದ್ಧಪಡಿಸಿದೆವು. ವಾರಗಳ ಕಾಲ ಶ್ರಮಿಸಿ ಗುರುಗಳಾದ ಸದಾನಂದ ಅವರ ಮಾರ್ಗದರ್ಶನದಲ್ಲಿ ಈ ವಿನ್ಯಾಸ ರೂಪಿಸಿದೆವು. ಹಳೆಯ ಕಾರ್‌ ರಿಮೋಟ್‌ ಜೊತೆಗೆ ನಿರುಪಯೋಗಿ ವಸ್ತುಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದೇವೆ. 

ಟ್ರ್ಯಾಕ್ಟರ್‌ ಮಾದರಿ ವಾಹನದಲ್ಲಿ ಈ ಕ್ಷಿಪಣಿಯನ್ನು ಒಯ್ಯಬಹುದಾಗಿದ್ದು, ರಿಮೋಟ್‌ ಸಂಜ್ಞೆಯಂತೆ ಅದರ ಬಳಿ ಕಿಡಿ ಹೊತ್ತಿ ಕ್ಷಿಪಣಿ ಉಡಾವಣೆಗೊಳ್ಳುವಂತೆ ವಿನ್ಯಾಸ ಮಾಡಿದ್ದೇವೆ’ ಎಂದು ವಿವರಿಸುತ್ತಾರೆ ಈ ಮಾದರಿಯ ರುವಾರಿಗಳಾದ ಸಮರ್ಥ ಹೆಗಡೆ. ಜಿ.ಎನ್. ಸುದರ್ಶನ. 

ನಿರುಪಯೋಗಿ ವಸ್ತುಗಳಿಂದ ಹೆಲಿಕಾಪ್ಟರ್‌: ಮನೆಯಲ್ಲಿನ ನಿರುಪಯೋಗಿ ವಸ್ತುಗಳು, ಸಣ್ಣ ಸಾಧನಗಳನ್ನು ಬಳಸಿಕೊಂಡು ಲಘು ಹೆಲಿಕಾಪ್ಟರ್‌ ವಿನ್ಯಾಸ ಮಾಡಿದ್ದಾರೆ ಬೆಳಗಾವಿಯ ಭರತೇಶ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಂಕಿತ್‌ ದೇಸಾಯಿ ಹಾಗೂ ರತ್ನಾಕರ ಜಕ್ಕಣ್ಣವರ.

ರಿಮೋಟ್‌ ಉಪಯೋಗಿಸಿ ಈ ಕಾಪ್ಟರ್‌ನ ಚಲನವಲನಗಳನ್ನು ನಿಯಂತ್ರಿಸಬಹುದಾಗಿದೆ. ಒಟ್ಟು ಐದು ಡಿ.ಸಿ. ಮೋಟಾರುಗಳನ್ನು ಇದಕ್ಕಾಗಿ ಬಳಸಲಾಗಿದೆ. ಯಂತ್ರದ ಚಾಲನೆ, ವೇಗ ಹಾಗೂ ಕಾಪ್ಟರ್‌ನ ರೆಕ್ಕೆ ತಿರುಗಲು ಈ ಶಕ್ತಿ ವಿನಿಯೋಗವಾಗಲಿದೆ. ರಿಮೋಟ್‌ ನಿಯಂತ್ರಿತ ಸರ್ಕಿಟ್‌ ಬೋರ್ಡ್‌ನ ಸೆನ್ಸರ್‌ನಿಂದ ಹೊರಹೊಮ್ಮುವ ಕಿರಣಗಳ ಆಧಾರದ ಮೇಲೆ ಈ ಯಂತ್ರ ಎಡ–ಬಲ, ಇಲ್ಲವೇ ಮೇಲೆ ಕೆಳಗೆ ಚಲಿಸುತ್ತದೆ.

ರಿಮೋಟ್‌  ಕಾರ್ಯನಿರ್ವಹಣೆಗೆ 3.5 ವೋಲ್ಟ್‌ ಸಾಮರ್ಥ್ಯದ ಬ್ಯಾಟರಿ, ಮೂರು ಸಣ್ಣ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಆದಷ್ಟು ನಿರುಪಯುಕ್ತ ವಸ್ತುಗಳನ್ನೇ ಬಳಸಿಕೊಳ್ಳಲಾಗಿದ್ದು, ಮೋಟಾರ್‌ ಮೊದಲಾದ ಅಗತ್ಯ ವಸ್ತು ಖರೀದಿಗಾಗಿ ವಿದ್ಯಾರ್ಥಿಗಳು ವಿನಿಯೋಗಿಸಿದ ವೆಚ್ಚ ಬರೀ ಸಾವಿರ ರೂಪಾಯಿ. 

ಬಹುಪಯೋಗಿ ಕಾರ್‌ ಪಾರ್ಕಿಂಗ್‌: ವಾಹನಗಳ ನಿಲುಗಡೆ ಇಂದಿನ ಪ್ರಮುಖ ಸಮಸ್ಯೆಗಳಲ್ಲಿ ಒಂದು.  ಅದರಲ್ಲೂ ಬೆಂಗಳೂರಿನಂಥ ನಗರದಲ್ಲಿ ಕಾರುಗಳ ನಿಲುಗಡೆಗೆ ಜಾಗ ಹುಡುಕುವುದೇ ಒಂದು ಸವಾಲು. ಇದನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ವಿನ್ಯಾಸ ರೂಪಿಸಿದ್ದಾರೆ ಹುಬ್ಬಳ್ಳಿಯ ನವನಗರ ರೋಟರಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಸುದರ್ಶನಗೌಡ ಪಾಟೀಲ ಹಾಗೂ ಎಸ್‌.ಟಿ. ವೀರೇಶ್ವರ.

ಎರಡು ಕಾರುಗಳ ನಿಲುಗಡೆಯ ಜಾಗದಲ್ಲಿ ಹನ್ನೆರಡು ಕಾರುಗಳನ್ನು ನಿಲ್ಲಿಸಬಹುದು. ಪಾರ್ಕಿಂಗ್‌ಗೆ ಅನುಕೂಲವಾಗುವಂತೆ ಲಂಬಮುಖ ವಿನ್ಯಾಸವನ್ನು ಮಾಡಲಾಗಿದ್ದು, ಅದರ ತಳಭಾಗದ ಒಂದು ಬದಿಯಲ್ಲಿ ಕಾರ್‌ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಚಾಲಕ ತನ್ನ ಕಾರನ್ನು ಈ ಜಾಗದಲ್ಲಿ ನಿಲ್ಲಿಸಿದ ಬಳಿಕ ಯಂತ್ರವು ವಾಹನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ರೊಟೇಶನ್‌ ಮೂಲಕ ಮೇಲಿನ ಜಾಗಕ್ಕೆ ಕಳುಹಿಸುತ್ತದೆ. ಕೆಳಗಿನ ಜಾಗವು ಮತ್ತೊಂದು ವಾಹನ ನಿಲುಗಡೆಗೆ ತೆರೆದುಕೊಳ್ಳುತ್ತದೆ.

ವಾಹನಗಳ ಮಾಲೀಕರು ಕಾರ್‌ ಬೇಕೆಂದಾಗ ತಮ್ಮ ಐ–ಕಾರ್ಡ್‌ ಬಳಸಿ ಕೆಳಗೆ ಇರುವ ಗುಂಡಿಯನ್ನು ಒತ್ತಿದರೆ ಸಾಕು. ಕಾರ್‌ ‘ಸುರಕ್ಷತಾ ವಲಯ’ದ ಹೊರಗೆ ಬಂದು ನಿಲ್ಲುತ್ತದೆ. ಕಟ್ಟಡದ ಸಮೀಪ ಸೌರಶಕ್ತಿ ಕೋಶಗಳನ್ನು ಅಳವಡಿಸಿ, ಅದರಿಂದ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಇದರ ನಿರ್ವಹಣೆಗೆ ಬಳಸಿಕೊಳ್ಳಬಹುದಾಗಿದೆ. ‘ವಿದೇಶಗಳಲ್ಲಿ ಈಗಾಗಲೇ ಇಂತಹ ಹಲವು ಮಾದರಿಗಳು ಬಳಕೆಯಲ್ಲಿವೆ. ನಮ್ಮಲ್ಲೂ ಇಂತಹ ವಿನ್ಯಾಸಗಳು ಕಾರ್ಯರೂಪಕ್ಕೆ ಬರಬೇಕಿದೆ’ ಎನ್ನುವುದು ವಿದ್ಯಾರ್ಥಿಗಳ ಅನಿಸಿಕೆ. 

ಸೇತುವೆ ಮೇಲೆ ವಿದ್ಯುತ್‌ ಉತ್ಪಾದನೆ: ನಗರಗಳು ಬೆಳೆದಂತೆಲ್ಲ ರಸ್ತೆ, ಸೇತುವೆಗಳ ನಿರ್ಮಾಣ ಹೆಚ್ಚುತ್ತಾ ಹೋಗುತ್ತದೆ. ಆದರೆ ಇಂತಹ ನಿರ್ಮಾಣಗಳು ಓಡಾಟದ ಜೊತೆಜೊತೆಗೆ ವಿದ್ಯುತ್‌ ಉತ್ಪಾದನೆಗೂ ಸಹಕಾರಿಯಾದರೆ ಚೆನ್ನ ಅಲ್ಲವೇ?
ಇದೇ ಪರಿಕಲ್ಪನೆಯನ್ನು ಇಟ್ಟುಕೊಂಡು ಬೀದರ್‌ನ ವಿಸ್ಡಮ್‌ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಾದ  ಮೊಹಮ್ಮದ್‌ ಸೊಹೆಲ್‌ ಮತ್ತು ಮೊಹಮ್ಮದ್‌ ಅಜೀಜ್‌ ಅವರು ಸೇತುವೆಯ ಬಳಕೆಯಿಂದ ವಿದ್ಯುತ್‌ ಉತ್ಪಾದಿಸುವ ಮಾದರಿಯನ್ನು ರೂಪಿಸಿದ್ದಾರೆ.

ಸೇತುವೆಗಳು ಹೇಗಿದ್ದರೂ ತಳಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ಇರುತ್ತವೆ. ಆ ಎತ್ತರಕ್ಕೆ ಅನುಗುಣವಾಗಿ ಪವನ ವಿದ್ಯುತ್‌ ಉತ್ಪಾದನಾ ಯಂತ್ರಗಳನ್ನು ಅಳವಡಿಸುವುದರಿಂದ ಕಡಿಮೆ ಖರ್ಚಿನಲ್ಲಿ ಶಕ್ತಿ ಉತ್ಪಾದನೆ ಸಾಧ್ಯ. ಸೇತುವೆಯು ಹೆಚ್ಚು ವಿಸ್ತಾರವಾಗಿದ್ದಲ್ಲಿ ಈ ಪವನ ವಿದ್ಯುತ್‌ ಯಂತ್ರಗಳನ್ನು ರಸ್ತೆ ವಿಭಜಕದಂತೆಯೂ ಅಳವಡಿಸಬಹುದಾಗಿದೆ.  ರಸ್ತೆಯ ತಳದಲ್ಲಿ ‘ರೋಟರ್‌’ ಅಳವಡಿಸುವುದರಿಂದ ವಾಹನಗಳ ಓಡಾಟದಿಂದಲೇ ವಿದ್ಯುತ್‌ ಉತ್ಪಾದನೆ ಸಾಧ್ಯವಿದೆ.

ವಾಹನಗಳ ಗಾಲಿಗಳು ಈ ರೋಟರ್‌ಗಳ ಮೇಲೆ ಚಲಿಸಿದಂತೆಲ್ಲ ಅವು ತಿರುಗಿ ಆ ಶಕ್ತಿ ವಿದ್ಯುತ್‌ ಆಗಿ ಪರಿವರ್ತನೆಯಾಗುತ್ತದೆ. ಖಾಲಿ ಇರುವ ಕಡೆ ಸೌರಶಕ್ತಿ ಫಲಕಗಳನ್ನು ಅಳವಡಿಸಲು ಸಾಧ್ಯವಿದೆ. ಈ ಎಲ್ಲ ಕೋಶಗಳಿಂದ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಸೇತುವೆಯ ತಳಭಾಗದಲ್ಲಿ ಸಂಗ್ರಹಿಸಿ ಸರಬರಾಜು ಮಾಡಬಹುದು.

ಮಾತ್ರವಲ್ಲ, ಹೆಚ್ಚಿನ ತಂತ್ರಜ್ಞಾನ ಬಳಸಿಕೊಂಡರೆ ವಾಹನಗಳಿಂದ ಹೊರಹೊಮ್ಮುವ ಹೊಗೆಯನ್ನೇ ‘ಹಬೆ’ಯಾಗಿ ಮಾರ್ಪಡಿಸಿ ಅದರಿಂದಲೂ ವಿದ್ಯುತ್‌ ಉತ್ಪಾದನೆ ಸಾಧ್ಯವಿದೆ ಎನ್ನುವುದು ವಿದ್ಯಾರ್ಥಿಗಳ ವಿವರಣೆ. ಇಂತಹ ಹಲವು ವಿಜ್ಞಾನ ಮಾದರಿಗಳು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಈಚೆಗೆ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ‘ಜಿಜ್ಞಾಸಾ’ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT