ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ವಿನ್ಯಾಸದ ಖುಷಿ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಲ್ಲಿ ಫ್ಯಾಷನ್‌ ಕುಟುಂಬಗಳ ಸಮ್ಮಿಲನ. ತಮ್ಮವರ ಹೊಸ ಕಲ್ಪನೆಗಳ ಉಡುಗೆಗೆ ಚಪ್ಪಾಳೆಯ ಮಳೆ ಸುರಿಸುವ ಸಡಗರ. ಬಣ್ಣಬಣ್ಣದ ವಿನ್ಯಾಸಗಳನ್ನು ಕಣ್ತುಂಬಿಕೊಳ್ಳುವ ಮನಸ್ಸುಗಳು. ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ ದಿರಿಸೇ ಆದರೂ ಅಂದದ ರೂಪು ನೀಡಿದ್ದನ್ನು ಮೆಚ್ಚಿ ಕೇಕೆ ಹಾಕುತ್ತಿದ್ದುದು ಮಾತ್ರ ನೆರೆದವರು...

ಈ ಎಲ್ಲಾ ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ ಕಾಲೇಜು ಪ್ರತಿವರ್ಷದಂತೆ ಈ ವರ್ಷವೂ ‘ಫ್ಯಾಷನೈಟ್‌’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತನ್ನ ವಿವಿಧ ಶಾಖೆಗಳಲ್ಲಿ ಫ್ಯಾಷನ್‌ ಡಿಸೈನಿಂಗ್‌ ತರಬೇತಿ ಪಡೆಯುತ್ತಿರುವ ಅಂತಿಮ ವರ್ಷದಲ್ಲಿರುವ 96 ವಿದ್ಯಾರ್ಥಿಗಳು ತಾವೇ ತಯಾರಿಸಿದ ದಿರಿಸುಗಳನ್ನು ಇಲ್ಲಿ ಪ್ರದರ್ಶಿಸಿದರು.

ಈಗಾಗಲೇ ಫ್ಯಾಷನ್‌ ಲೋಕದಲ್ಲಿ ಮಿಂಚುತ್ತಿರುವ ಅನೇಕ ವಿನ್ಯಾಸಕರಿಗಿಂತ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ವಿನ್ಯಾಸಗೊಳಿಸಲಾಗಿದ್ದ ದಿರಿಸುಗಳಿಗೆ ಚಪ್ಪಾಳೆಯ ಮೆಚ್ಚುಗೆ ದಕ್ಕಿತು. ಬಗೆಬಗೆಯ ವಿಷಯಗಳ ಆಧಾರದ ಮೇಲೆ ದಿರಿಸುಗಳನ್ನು ತಯಾರಿಸಿದ್ದ ವಿದ್ಯಾರ್ಥಿಗಳ ಸೃಜನಶೀಲತೆ ಮೆಚ್ಚುವಂತಿತ್ತು. ಅಂದದ ಉಡುಗೆಗೆ ಚೆಂದ ನೀಡಿದ್ದು ರೂಪದರ್ಶಿಯರಾದ ಹರ್ಷಾ ಗೌಡ, ಮೊನಿಶಾ ರಮೇಶ್‌, ರೂಪಾ ಸರ್ವೇಶ್‌, ಸುಮಿನ್‌ ರೋಸ್‌, ಸಾನಿಯಾ ಹಸೀಬ್‌, ದೀಪಿಕಾ ಸುಬ್ರಹ್ಮಣ್ಯ, ಶ್ರುತಿ ಜಾಲಿ, ಆರ್ವ ಹುಸೇನ್‌, ಕಮಲ್‌ ಸಿಂಗ್‌, ನವ್ಯತಾ ಸಾಗರ್‌, ರಾಧಿಕಾ ಬೋಪಯ್ಯ, ರಿಂಕಿ ಆಶ್ವತಿ.

ಮೆಲೊಡಿ ಆಫ್ ಮ್ಯೂಸಿಕ್‌, ಗಿಟಾರ್‌, ಮಧುಬನಿ ಪೇಂಟಿಂಗ್‌, ಓಶಿಯನ್‌ ಆಫ್‌ ಪರ್ಲ್ಸ್‌, ಜ್ವಾಲಾಮುಖಿ, ಜಪಾನ್‌ ಸಂಸ್ಕೃತಿ, ಬೆಲ್ಲಿ,

ಟ್ರೆಶರ್‌ ಆಫ್‌ ಪ್ಯಾಶನ್‌, ಪೆಪ್ಲೋಸ್‌ ಹ್ಯಾಕ್ಡ್‌, ಎಥ್ನಿಕ್‌ ಎಲಿಗೆನ್ಸ್‌, ವ್ರಾಪ್ಡ್ ಇನ್‌ ಕಿಮೊನೊ, ಟಚ್‌ ಆಫ್‌ ಗ್ರೀನ್‌, ಇಂಡಿಯನ್‌ ಪಾಟ್‌ಪೌರಿ, ಚೈನೀಸ್‌ ಉಡುಗೆ, ಮುಸ್ಲಿಂ ಮದುವೆ ದಿರಿಸು, ಇಂಡಿಯನ್‌ ಮೆಲೊಡಿ, ಪಾತರಗಿತ್ತಿ, ಅಸ್ತಿತ್ವ, ಸಂವಹನ, ಬ್ಲಾಕ್‌ ಬ್ಯೂಟಿ.... ಹೀಗೆ ವಿದ್ಯಾರ್ಥಿಗಳ ಮನದಲ್ಲಿ ಹೊಳೆದ ವಿಭಿನ್ನ ವಿಷಯಗಳು ಬಟ್ಟೆ ವಿನ್ಯಾಸದಲ್ಲಿ ವ್ಯಕ್ತಗೊಂಡವು.

ಆಯಾ ವಿದ್ಯಾರ್ಥಿ ವಿನ್ಯಾಸಕರ ದಿರಿಸು ತೊಟ್ಟು ಒಂದು ಸುತ್ತು ಬೆಕ್ಕಿನ ಹೆಜ್ಜೆ ಇಟ್ಟ ರೂಪದರ್ಶಿಗಳಿಗೆ ಮತ್ತೊಂದು ಸುತ್ತಿಗೆ ವಿನ್ಯಾಸಕರೇ ಜೊತೆಯಾಗುತ್ತಿದ್ದರು. ಬೆಳಕಿನ ಝಗದಲ್ಲಿ ರೂಪದರ್ಶಿಗಳೊಂದಿಗೆ ಹೆಜ್ಜೆಹಾಕುವ ಯುವ ವಿನ್ಯಾಸಕರಲ್ಲೂ ಉತ್ಸಾಹ ಎದ್ದು ಕಾಣುತ್ತಿತ್ತು. ಕಷ್ಟಪಟ್ಟು ವಿನ್ಯಾಸಗೊಳಿಸಿದ ಉಡುಪುಗಳಿಗೆ ಮೆಚ್ಚುಗೆ ಸಿಗುತ್ತಿದ್ದಂತೆ ಅವರ ಮೊಗದಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತಿತ್ತು.

ಮಧ್ಯಮ ವಯಸ್ಸಿನ ಕೆಲವು ವಿದ್ಯಾರ್ಥಿ ವಿನ್ಯಾಸಕರೂ ಇದ್ದುದು ವಿಶೇಷವಾಗಿತ್ತು. ಸಮಕಾಲೀನ ಮನಸ್ಥಿತಿಗೆ ಹೊಂದುವಂಥ ವಿನ್ಯಾಸಗಳು ಅವರಿಂದ ರಚಿತವಾಗಿದ್ದವು. ಪ್ರತಿ ವಿನ್ಯಾಸದಲ್ಲೂ ವೈವಿಧ್ಯ ಹಾಗೂ ಬಣ್ಣಗಳ ಸಂಯೋಜನೆ ಮನಮುಟ್ಟುವಂತಿತ್ತು. ಅದೂ ಅಲ್ಲದೆ ಹೆಚ್ಚಿನ ದಿರಿಸುಗಳ ಬೆನ್ನು ಪಾರದರ್ಶಕವಾಗಿ ಹೊಸತನದಲ್ಲಿ ರೂಪುತಳೆದಿತ್ತು. ಇನ್ನು ಕೆಲವು ವಿನ್ಯಾಸಕರು ಬರಿದಾಗಿದ್ದ ಬೆನ್ನಿಗೆ ಮಣಿಗಳನ್ನು ಇಳಿಬಿಟ್ಟು ಸೈ ಎನಿಸಿಕೊಂಡರು. ಫ್ಯಾಷನ್‌ ಕ್ಷೇತ್ರಕ್ಕೆ ಹೊಸ ವಿನ್ಯಾಸ, ವಿನ್ಯಾಸಕರ ಆಗಮನದ ವಿಶ್ವಾಸ ಹೊತ್ತು ಚೌಡಯ್ಯ ಸ್ಮಾರಕ ಭವನ ಆ ಸಂಜೆ ಕಳೆಗಟ್ಟಿತ್ತು.

ಬೆಳಕಿನ ನರ್ತನ, ರ್‍ಯಾಂಪ್‌ನ ಅಂದ–ಚೆಂದದ ಫ್ಯಾಷನೈಟ್‌ ಕಾರ್ಯಕ್ರಮದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮೀನಾ ರಾಜೀವ್‌ ಚಂದಾವರ್ಕರ್‌ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ವಿವಿ ರಿಜಿಸ್ಟ್ರಾರ್‌ ಪ್ರೊ.ಎಸ್‌.ಎ. ಕಾಜಿ, ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್‌ ಪ್ರೊ. ಶ್ರೀನಾಥ್‌ ರಾವ್‌, ಪ್ರೊ. ಶಿವಕುಮಾರ್‌ ಬಿ. ಮಾಡಿಗಿ, ಐಐಎಫ್‌ಟಿ ಪ್ರಾಂಶುಪಾಲರಾದ ವಿಜಿ ಮುಂತಾದವರು ಉಪಸ್ಥಿತಿತರಿದ್ದರು. 

ಬಿ.ಎಸ್‌ಸಿ. ವಿಭಾಗದ ಉತ್ತಮ ವಿನ್ಯಾಸಕಿ ಪ್ರಶಸ್ತಿಯನ್ನು ‘ಎಥ್ನಿಕ್‌ ಎಲಿಗೆನ್ಸ್‌’ ಉಡುಪು ವಿನ್ಯಾಸಗೊಳಿಸಿದ ಗಾನಾ ಎಚ್‌. ಪಡೆದುಕೊಂಡರು. ಡಿಪ್ಲೊಮಾ ವಿಭಾಗದಲ್ಲಿ ‘ಫ್ಯಾಷನ್‌ ಆಫ್‌ ಲೈಫ್‌’ ವಿನ್ಯಾಸಗೊಳಿಸಿದ ವಾಸು ಆರ್‌. ಪ್ರಶಸ್ತಿ ಗಿಟ್ಟಿಸಿಕೊಂಡು ಬೀಗಿದರು. ಹೀಗೆ ಹತ್ತು ಹಲವು ಬಗೆಯ ಪ್ರಶಸ್ತಿಗಳನ್ನು ಬಾಚಿದ ವಿದ್ಯಾರ್ಥಿಗಳಲ್ಲಿ ಖುಷಿ ಮನೆಮಾಡಿತ್ತು.    

ಪೋಷಕರಿಗೆ ಮಕ್ಕಳಲ್ಲಿ ಸೃಜನಶೀಲತೆ ಮೂಡಿಸಿದ ಸಾರ್ಥಕ್ಯ. ಕಾಲೇಜು ಸೇರುವಾಗ ಫ್ಯಾಷನ್‌ ಲೋಕದ ಬಗ್ಗೆ ಏನನ್ನೂ ತಿಳಿಯದೇ ಇದ್ದ ತಮ್ಮ ಮಕ್ಕಳು ಇದೀಗ ಅಂದಚೆಂದದ ಉಡುಗೆ ಹೆಣೆದು ಬೀಗುತ್ತಿರುವುದನ್ನು ಆ ಹೃದಯಗಳು ಕಣ್ತುಂಬಿಕೊಳ್ಳುತ್ತಿದ್ದವು. ‘ಈ ಕಾಲೇಜಿನಲ್ಲಿ ಶುಲ್ಕ ದುಬಾರಿ ನಿಜ. ಆದರೆ ಕೇವಲ ಮೂರು ವರ್ಷಗಳಲ್ಲಿ ನಮ್ಮ ಮಗಳಲ್ಲಿ ಆದ ಬದಲಾವಣೆ ಖುಷಿ ನೀಡಿದೆ. ವಿನ್ಯಾಸದ ಬಗ್ಗೆ ಆಕೆಯಲ್ಲಿ ವಿಶೇಷ ಕಲ್ಪನೆಗಳು ಬೆಳೆದಿವೆ. ಕಂಪ್ಯೂಟರ್‌ನಲ್ಲಿ ಚೆಂದದ ವಿನ್ಯಾಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾಳೆ.

ಅವಳು ವಿನ್ಯಾಸಗೊಳಿಸಿದ ದಿರಿಸೂ ಚೆನ್ನಾಗಿದೆ. ಮುಂದೆ ಅವಳು ಉತ್ತಮ ಕೆಲಸ ಗಿಟ್ಟಿಸಿಕೊಳ್ಳುತ್ತಾಳೆ, ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಅವಳದ್ದಾಗುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಬಿ.ಎಸ್‌ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ರಂಜಿತಾ ತಂದೆ ಗೋಪಾಲ್‌ ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT