ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಸ್ನೇಹಿ ಜಾಬ್‌ ಪೋರ್ಟಲ್‌

Last Updated 12 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸರ್ಕಾರಿ ರಜೆ, ವಾರಾಂತ್ಯ ಹಾಗೂ ಬಿಡುವಿನ ವೇಳೆಯಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡಲು ಬಯಸುವವರು  ಹಾಗೂ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸದ ಅನುಭವಕ್ಕಾಗಿ ಇಂಟರ್ನ್‌ಶಿಪ್‌ ಮಾಡಲು ಕಾಯುತ್ತಿರುವವರಿಗಾಗಿ ಇಲ್ಲಿದೆ ನೂತನ ಜಾಬ್‌ ಪೋರ್ಟಲ್‌. ಇಲ್ಲಿ ಪುರುಷ, ಮಹಿಳೆ ಸೇರಿದಂತೆ ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಫುಲ್‌ ಟೈಮ್‌ ಕೆಲಸ ಮಾಡುವವರಿಗೆ ಅವಕಾಶ ಕಲ್ಪಿಸಲು ನಾನಾ ರೀತಿಯ ಜಾಬ್‌ ವೆಬ್‌ಸೈಟ್‌ಗಳಿವೆ. ಆದರೆ ಪಾರ್ಟ್‌ ಟೈಮ್‌ ಹಾಗೂ ಇಂಟರ್ನ್‌ಶಿಪ್‌ ಮಾಡಲು ಅವಕಾಶ ಕಲ್ಪಿಸುವ ಯಾವುದೇ ಜಾಬ್‌ ಪೋರ್ಟಲ್‌ಗಳಿಲ್ಲ. ಹೀಗಾಗಿಯೇ ಕಾಲೇಜು ಮುಗಿಸಿದ ವಿದ್ಯಾರ್ಥಿಗಳು ಇಂರ್ಟನ್‌ಶಿಪ್‌ಗಾಗಿ ಹಾಗೂ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಬಯಸುವವರು ಅವಕಾಶಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳು ಹಾಗೂ ಪಾರ್ಟ್‌ಟೈಮ್‌ ಕೆಲಸಗಳಿಗೆ ಹುಡುಕಾಟ ನಡೆಸುವವರ ಸಮಸ್ಯೆ ಪರಿಹರಿಸುವ ಸಲುವಾಗಿ ‘ವ್ಯಾಲ್ಯೂ ವಿಂಗ್ಸ್‌ ಎಂಟರ್‌ಪ್ರೈಸಸ್‌ ಪ್ರೈ. ಲಿಮಿಟೆಡ್‌’ ಈಗ ನೂತನವಾಗಿ www.1008jobs.com  ಜಾಬ್‌ ಪೋರ್ಟಲ್‌ ಅನ್ನು ಪ್ರಾರಂಭಿಸಲಿದೆ.

ವೆಬ್‌ಸೈಟ್‌ನ ಹೆಸರೇ ಹೇಳುವಂತೆ ಸಾವಿರದ ಎಂಟು ವಲಯಗಳಲ್ಲಿ ಪೂರ್ಣಾವಧಿ, ಅಲ್ಪಾವಧಿ ಕೆಲಸಗಳನ್ನು ಮಾಡಲು ಬಯಸುವವರು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಇಂರ್ಟನ್‌ಶಿಪ್‌ ಮಾಡಲು ಬಯಸುವವರು ನೋಂದಣಿ ಮಾಡಿಕೊಳ್ಳಬಹುದು. ಇಲ್ಲಿ ಕೇವಲ ಐಟಿ–ಬಿಟಿ ಮಾತ್ರವಲ್ಲದೆ ವಾಣಿಜ್ಯ, ಕೈಗಾರಿಕೆಗಳು, ರೀಟೆಲ್‌ ವಲಯ, ಸಿನಿಮಾ ಕ್ಷೇತ್ರ, ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಕೆಲಸ ಮಾಡಲು ಬಯಸುವವರು ಕೆಲಸಗಳನ್ನು ಹುಡುಕಬಹುದು. ಸಂಗೀತ ಬಲ್ಲವರು, ವಾದ್ಯಗಳನ್ನು ನುಡಿಸಲುಬಲ್ಲವರು, ನಟ–ನಟಿಯರು, ನೃತ್ಯಗಾರರು, ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಗಂಟೆ ಲೆಕ್ಕದಲ್ಲಿ, ಅಥವಾ ದಿನದ ಲೆಕ್ಕದಲ್ಲಿ ಕೆಲಸ ಮಾಡಲು ಬಯಸುವವರು ತಮಗೆ ಬೇಕಾದ ಸ್ಥಳಗಳಲ್ಲಿ ಕೆಲಸಗಳನ್ನು ಹುಡುಕಬಹುದು.

ತೃತೀಯ ಲಿಂಗಿಗಳಿಗೂ ಅವಕಾಶ

ದೇಶದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವ ಸಲುವಾಗಿ ಈ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ವೆಬ್‌ಸೈಟ್‌ನ ಅರ್ಜಿ ನಮೂನೆಯಲ್ಲಿ ಮಹಿಳೆ, ಪುರುಷ ಹಾಗೂ ತೃತೀಯ ಲಿಂಗಿ ಎಂಬ ಆಯ್ಕೆಗಳನ್ನು ನೀಡಲಾಗಿದೆ.  ತೃತೀಯ ಲಿಂಗಿಗಳಿಗೆ ಅವಕಾಶ ನೀಡಲು ಬಯಸುವ ಸಂಸ್ಥೆಗಳು ಈ ಆಯ್ಕೆಯನ್ನು ಬಳಸಿಕೊಳ್ಳಲು ಸುಲಭವಾಗುತ್ತದೆ. ಇದರೊಂದಿಗೆ ಉದ್ಯೋಗ ಬಯಸುವ ತೃತೀಯ ಲಿಂಗಿಗಳೂ ತಮ್ಮ ವಿವರಗಳನ್ನು ಸುಲಭವಾಗಿ ವೆಬ್‌ಸೈಟ್‌ನಲ್ಲಿ ದಾಖಲಿಸಬಹುದು. ಇವರನ್ನು ತಲುಪಲು ಮುಂಬೈ, ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ತೃತೀಯ ಲಿಂಗಿಗಳ ಸಂಘ ಹಾಗೂ ಅವರೊಂದಿಗೆ ಕೆಲಸ ಮಾಡುವ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.  ಒಂದುವೇಳೆ ಯಾರಾದರೂ ಮುಂದೆ ಬಂದಲ್ಲಿ ಅವರಲ್ಲೇ ಒಬ್ಬರನ್ನು ಏಜೆಂಟ್‌ ಆಗಿ ನೇಮಿಸಿಕೊಳ್ಳಲು ವೆಬ್‌ಸೈಟ್‌ ಸಿದ್ಧವಿದೆ. ಇದಕ್ಕೆ ಅವರಿಗೆ ಯಾವುದೇ ರೀತಿ ಶುಲ್ಕ ವಿಧಿಸುವುದಿಲ್ಲ.

‘ಬೆಂಗಳೂರು ಸೇರಿದಂತೆ ದೇಶದ ಪ್ರತಿಯೊಂದು ಮೆಟ್ರೋಗಳಲ್ಲಿ ಪಾರ್ಟ್‌ಟೈಮ್‌ ಕೆಲಸಗಳಿಗೆ ಸಾಕಷ್ಟು ಅವಕಾಶಗಳಿವೆ. ಇದು ಕೇವಲ ಐಟಿ ವಲಯದಲ್ಲಿ ಮಾತ್ರವಲ್ಲದೆ ಎಲ್ಲಾ ವಲಯಗಳಲ್ಲೂ ಅವಕಾಶಗಳಿವೆ. ಆದರೆ ಪಾರ್ಟ್‌ಟೈಮ್‌ ಕೆಲಸ ಹುಡುಕುವವರಿಗೆ ಹಾಗೂ ಕೆಲಸಗಾರರ ಅಗತ್ಯ ಇರುವ ಸಂಸ್ಥೆಗಳ ನಡುವೆ ಸರಿಯಾದ ಸಂಪರ್ಕವಿಲ್ಲದೆ ಇಬ್ಬರೂ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ಇಂರ್ಟನ್‌ಶಿಪ್‌ ಅವಕಾಶ ನೀಡಲು ಸಾಕಷ್ಟು ಸಂಸ್ಥೆಗಳು ಕಾಯುತ್ತಿವೆ. ಆದರೆ ಈ ಬಗ್ಗೆ  ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ಇದರಿಂದಾಗಿಯೇ ಈ ವೆಬ್‌ಸೈಟ್‌ನಲ್ಲಿ ಪಾರ್ಟ್‌ ಟೈಮ್‌ ಹಾಗೂ ಇಂಟರ್ನ್‌ಶಿಪ್‌ ಅವಕಾಶ ಕಲ್ಪಿಸಲು ಮಹತ್ವ ನೀಡಲಾಗಿದೆ’ ಎನ್ನುತ್ತಾರೆ ವೆಬ್‌ಸೈಟ್‌ನ ಸಿಇಒ ಕೆ. ಪ್ರಶಾಂತ್‌.

‘ನಮ್ಮ ವೆಬ್‌ಸೈಟ್‌ ಸಂಪೂರ್ಣವಾಗಿ ಆಟೊಮೇಟೆಡ್‌. ಇಲ್ಲಿ ಯಾವ ಮಾನವ ಸಂಪನ್ಮೂಲ (ಎಚ್‌.ಆರ್‌) ಅಧಿಕಾರಿಗಳು ಕಾರ್ಯ ನಿರ್ವಹಿಸುವುದಿಲ್ಲ. ಎಲ್ಲ ಕೆಸಲಗಳು ಮಾನವ ರಹಿತವಾಗಿಯೇ ನಡೆಯುತ್ತದೆ. ಉದಾಹರಣೆಗೆ ಇಂರ್ಟನ್‌ಶಿಪ್‌ಗಾಗಿ ಹುಡುಕಾಟ ನಡೆಸುತ್ತಿರುವ ವಿದ್ಯಾರ್ಥಿಗಳು  ತಮ್ಮ ವಿದ್ಯಾರ್ಹತೆ, ಕೆಲಸ ಮಾಡಲು ಬಯಸುವ ವಲಯ ಹಾಗೂ ಸ್ಥಳವನ್ನು ಸ್ಪಷ್ಟವಾಗಿ ನೋಂದಣಿ ಮಾಡಿಕೊಳ್ಳಬೇಕು.

ಹಾಗೆಯೇ ಇಂಟರ್ನಿಗಳಿಗಾಗಿ ಹುಡುಕಾಟ ನಡೆಸುತ್ತಿರುವ ಸಂಸ್ಥೆಗಳು ನಮ್ಮಲ್ಲಿ ನೋಂದಣಿ ಮಾಡಿಕೊಂಡಿದ್ದರೆ, ನಮ್ಮ ಸಿಸ್ಟಂ ಎರಡನ್ನೂ ಮ್ಯಾಚ್‌ ಮಾಡಿ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ಇ–ಮೇಲ್‌ ಮೂಲಕ ಮಾಹಿತಿ ರವಾನಿಸುತ್ತದೆ. ಜತೆಗೆ ಸಂಸ್ಥೆಯಿಂದ ‍ಪ್ರತಿಕ್ರಿಯೆ ಬಂದಲ್ಲಿ ಸಂದರ್ಶನಕ್ಕೆ ದಿನಾಂಕ, ಸಮಯ ಹಾಗೂ ಸ್ಥಳವನ್ನು ನಿಗದಿ ಮಾಡಿ ವಿದ್ಯಾರ್ಥಿಗಳಿಗೆ ಇ–ಮೇಲ್‌ ಕಳುಹಿಸುತ್ತದೆ. ಇದು ಫುಲ್‌ಟೈಮ್‌ ಹಾಗೂ ಪಾರ್ಟ್‌ಟೈಮ್‌ ಕೆಲಸದಲ್ಲೂ ಹೀಗೆ ನಡೆಯುತ್ತದೆ’ ಎಂದು ವಿವರಿಸುತ್ತಾರೆ ಅವರು.

ಗ್ರಾಫಿಕ್‌ ಇನ್ಫೊ
ವೆಬ್‌ಸೈಟ್‌ನಲ್ಲಿ ಉದ್ಯೋಗಕ್ಕಾಗಿ ಅಭ್ಯರ್ಥಿಗಳು ದಾಖಲಿಸುವ ವಿವರಗಳನ್ನು ಗ್ರಾಫಿಕ್‌ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಅಗತ್ಯ ಮಾಹಿತಿಗಳು ಬಹಳ ಸುಲಭವಾಗಿ ಅರ್ಥವಾಗುತ್ತದೆ. ಇದಕ್ಕಾಗಿ ಅಭ್ಯರ್ಥಿ ಗಳಿಂದ ಯಾವುದೇ ರೀತಿ ಶುಲ್ಕ ತೆಗೆದುಕೊಳ್ಳುವುದಿಲ್ಲ.

ಎಚ್‌ಆರ್‌ ‘ಕಿಯೊಸ್ಕ್‌’
ಸಾರ್ವಜನಿಕ ಪ್ರದೇಶಗಳಲ್ಲಿ ಎಚ್‌ಆರ್‌ ಕಿಯೊಸ್ಕ್‌ಗಳನ್ನು ಇಡಲಾಗುತ್ತದೆ. ಅಂದರೆ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಏರ್‌ಪೋರ್ಟ್‌, ಕಾಲೇಜುಗಳ ಬಳಿ ಹೀಗೆ ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ ಸ್ಥಗಳಲ್ಲಿ ಇದನ್ನು ಇಡಲಾಗುತ್ತದೆ. ಇದರಲ್ಲಿ ಜನರು ತಮ್ಮ ಬಯೋಡೆಟಾವನ್ನು ಅಪ್‌ಲೋಡ್ ಮಾಡಿ, ಕೆಲಸಗಳನ್ನು ಹುಡುಕಬಹುದು. ಒಂದು ವೇಳೆ ಯಾವುದೇ ಸಂಸ್ಥೆ ಕೆಲಸ ಖಾಲಿ ಇರುವ ಬಗ್ಗೆ ಪ್ರಕಟಿಸಿದ್ದಲ್ಲಿ ಅದನ್ನೂ ಪರಿಶೀಲಿಸಬಹುದು. ಇದನ್ನು ಜೂನ್‌ ತಿಂಗಳ ಅಂತ್ಯಕ್ಕೆ ರೂಪಿಸಲಾಗುತ್ತದೆ.

ವಿಷ್ಯುವಲ್‌ ಇನ್ಫೊ
ಈ ವೆಬ್‌ಸೈಟ್‌ನಲ್ಲಿ ಉದ್ಯೋಗ ಖಾಲಿ ಇರುವ ಬಗ್ಗೆ ಪ್ರಕಟಣೆ ನೀಡುವ ಸಂಸ್ಥೆಗಳು ತಮ್ಮ ಕಚೇರಿಯ ಚಿತ್ರಗಳನ್ನೂ ಪ್ರಕಟಿಸಬಹುದು. ಇದಕ್ಕೆ ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ. ಇದರಿಂದ ಈ ಸಂಸ್ಥೆಗಳಿಗೆ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಮೊದಲೇ ಸಂಸ್ಥೆಯ ಕಚೇರಿಯ ಚಿತ್ರಣ ನೋಡಲು ದೊರೆಯುತ್ತದೆ. ಅದರಲ್ಲೂ ಸುರಕ್ಷತೆಯ ದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಇದು ಹೆಚ್ಚು ಅನುಕೂಲವಾಗಲಿದೆ.

ಏಜೆಂಟ್‌ 1008: ಇಂಟರ್‌ನೆಟ್‌ ಬಳಸಲು ಬಾರದ ಜನರ ಮಾಹಿತಿಯನ್ನು ದಾಖಲಿಸಲು ವೆಬ್‌ಟೈಟ್‌ ವತಿಯಿಂದ ಪ್ರತಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಏಜೆಂಟ್‌ಗಳನ್ನು ನೇಮಿಸಲಾಗುತ್ತದೆ.

ಈ ಏಜೆಂಟ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಇವರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಉದ್ಯೋಗ ಹುಡುಕಲು ಬಯಸುವ ಜನರ ಮಾಹಿತಿಯನ್ನು ಉಚಿತವಾಗಿ ವೆಬ್‌ಸೈಟ್‌ನಲ್ಲಿ ದಾಖಲಿಸುತ್ತಾರೆ. ನಂತರ ಸಂಸ್ಥೆಗಳ ಕಡೆಯಿಂದ ಯಾವುದೇ ಮಾಹಿತಿ ಬಂದರೂ ಅಭ್ಯರ್ಥಿಗಳಿಗೆ ಉಚಿತವಾಗಿ ಮುಟ್ಟಿಸುತ್ತಾರೆ. 

ಈ ವೆಬ್‌ಸೈಟ್‌ ಇದೇ 17ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದ್ದು, ದೇಶದಾದ್ಯಂತ ಯಾರು ಬೇಕಾದರೂ ಇದನ್ನು ಬಳಸಿಕೊಳ್ಳಬಹುದು. ಇಲ್ಲಿ ಕೆಲಸ ಹುಡುಕುವವರಿಗೆ ಉಚಿತ ಸೇವೆ. ಉದ್ಯೋಗಿಗಳಿಗಾಗಿ ಹುಡುಕಾಟ ನಡೆಸುವ ಸಂಸ್ಥೆಗಳು ಮಾತ್ರ ಅಭ್ಯರ್ಥಿಗಳು ದೊರೆತ ನಂತರ ಶುಲ್ಕವನ್ನು ಪಾವತಿಸಬೇಕು. ಈ ವೆಬ್‌ಸೈಟ್‌ನಲ್ಲಿ ಉದ್ಯೋಗ ಖಾಲಿ ಇರುವ ಬಗ್ಗೆ ಪ್ರಕಟಿಸಲು ಯಾವುದೇ ರೀತಿ ಶುಲ್ಕ ನೀಡುವಂತಿಲ್ಲ. ಇನ್ನು ಏಪ್ರಿಲ್‌ ಅಂತ್ಯಕ್ಕೆ ಮೊಬೈಲ್‌ ಆ್ಯಪ್‌ ಸಹ ಬಿಡುಗಡೆಯಾಗಲಿದೆ.  
ಮಾಹಿತಿಗೆ: ಟೋಲ್‌ಫ್ರೀ ನಂಬರ್‌: 1800–123–1008
ವೆಬ್‌ಸೈಟ್‌:  www.1008jobs.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT