ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಉಳಿತಾಯಕ್ಕೆ ಸ್ಪರ್ಧೆಯ ರಂಗು

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಿ ದ್ಯುತ್‌ ಉತ್ಪಾದನೆ ಪ್ರಮಾಣ ಕುಸಿಯುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಇಂಥ ಸಂದರ್ಭದಲ್ಲಿ ಗ್ರೀನ್‌ ಎನರ್ಜಿ ಫೌಂಡೇಷನ್‌ ಹಾಗೂ ರಾಕೋಲ್ಡ್‌ ಥರ್ಮಲ್‌ ಸಂಸ್ಥೆ ‘ವಿದ್ಯುತ್ ಉಳಿಸಿ ಲಕ್ಷಾಧಿಪತಿಗಳಾಗಿ’ ಸ್ಪರ್ಧೆ ನಡೆಸಲು ನಿರ್ಧರಿಸಿದೆ. ಅದಕ್ಕಾಗಿ ನಗರದಲ್ಲಿರುವ ವಸತಿ ಸಮುಚ್ಚಯಗಳಿಗೆ ಹಾಗೂ ಗೃಹ ನಿರ್ಮಾಣ ಸಂಸ್ಥೆಗಳಿಗೆ ಫೌಂಡೇಷನ್‌ನ ಸ್ವಯಂ ಸೇವಕರು ಭೇಟಿ ನೀಡಿ, ಸ್ಪರ್ಧೆಯ ಬಗ್ಗೆ ವಿವರಿಸುತ್ತಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ವಸತಿ ಸಮುಚ್ಚಯಗಳಲ್ಲಿ ಕಾಮನ್‌ ಲೈಟಿಂಗ್‌ ವ್ಯವಸ್ಥೆ ಇರುವ ಕಡೆಗಳಲ್ಲಿ ‘ಎನರ್ಜಿ ಹಾಗೂ ವಾಟರ್‌ ಆಡಿಟ್‌’ ಮಾಡಬೇಕಾಗುತ್ತದೆ. ಅಂದರೆ ಪಾರ್ಕಿಂಗ್‌, ಬಡಾವಣೆಯಲ್ಲಿರುವ ರಸ್ತೆಗಳಲ್ಲಿ ಅನಗತ್ಯವಾಗಿ ಬಲ್ಬ್‌ ಉರಿಸುವುದು, ಯಾವ ರೀತಿಯ ಬಲ್ಬ್‌ಗಳನ್ನು ಬಳಸಲಾಗುತ್ತಿದೆ? ಲಿಫ್ಟ್‌ ಇದ್ದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿದೆಯೋ, ಇಲ್ಲವೋ? ನೀರನ್ನು ಮೇಲಕ್ಕೆ ಎತ್ತುವ ನೀರಿನ ಪಂಪ್‌ ಅನಗತ್ಯವಾಗಿ ವಿದ್ಯುತ್‌ ಬಳಸುವಷ್ಟು ಹಳೆಯದಾಗಿದೆಯೇ? ಜತೆಗೆ ಉದ್ಯಾನಕ್ಕೆ ಬಳಸುವ ನೀರಿನ ನಲ್ಲಿ ಸರಿಯಾಗಿದೆಯೇ ಅಥವಾ ನೀರು ಸೋರಿಕೆಯಾಗುತ್ತಿದೆಯೇ? ಇವನ್ನೆಲ್ಲಾ ಪರಿಶೀಲಿಸಿ, ಇದರಿಂದ ಪ್ರತಿ ತಿಂಗಳು ಎಷ್ಟು ವಿದ್ಯುತ್‌ ಬಳಕೆಯಾಗುತ್ತಿದೆ ಎಂದು ವರದಿ ತಯಾರಿಸಬೇಕು.

ಈ ವರದಿಯೊಂದಿಗೆ ಕಾಮನ್‌ ಲೈಟಿಂಗ್‌ ಬಳಕೆಯಿಂದ ಬಂದಿರುವ ಆರು ತಿಂಗಳ ಹಿಂದಿನ ‘ವಿದ್ಯುತ್‌ ಶುಲ್ಕ’ ಪಾವತಿ ಚೀಟಿಯನ್ನು ಸ್ಪರ್ಧೆಯ ಆಯೋಜಕರಿಗೆ ನೀಡಬೇಕು. ವರದಿಯನ್ನು ಪರಿಶೀಲಿಸಿದ ನಂತರ ವಸತಿ ಸಮುಚ್ಚಯದಲ್ಲಿ ಎಲ್ಲಿ ಹೆಚ್ಚು ವಿದ್ಯುತ್‌ ಅನಗತ್ಯವಾಗಿ ಬಳಕೆಯಾಗುತ್ತಿದೆ, ಅದಕ್ಕೆ ಯಾವ ಬದಲಾವಣೆಗಳನ್ನು ಮಾಡಬೇಕು ಎಂದು ಆಯೋಜಕರು ಸಲಹೆ ನೀಡುತ್ತಾರೆ.

ಉದಾಹರಣೆಗೆ ಪಾರ್ಕಿಂಗ್‌ ಸ್ಥಳಗಳಲ್ಲಿ ಸೆನ್ಸಾರ್ ಲೈಟ್‌ ವ್ಯವಸ್ಥೆ ಅಳವಡಿಸುವುದು. ಯಾರಾದರೂ ಬಂದಾಗ ಮಾತ್ರ ಆ ಸ್ಥಳದಲ್ಲಿ ಬಲ್ಬ್‌ ಹೊತ್ತಿಕೊಳ್ಳುತ್ತದೆ. ಹಳೆಯ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬದಲಾಯಿಸುವುದು, ನೀರಿನ ಸೋರಿಕೆ ಇದ್ದಲ್ಲಿ ಸರಿಪಡಿಸುವುದು. ಆದಷ್ಟೂ ಸೋಲಾರ್‌, ವಿಂಡ್‌ ಮಿಲ್‌ ಅಳವಡಿಕೆ ಸೇರಿದಂತೆ ಪರಿಸರಸ್ನೇಹಿ ಮಾರ್ಗಗಳನ್ನು ಅನುಸರಿಸುವಂತೆ ಸಲಹೆ ಕೊಡಲಾಗುತ್ತದೆ.
ಸ್ಪರ್ಧೆ ಪ್ರಾರಂಭವಾದ ನಂತರ ಬದಲಾವಣೆಗಳನ್ನು ತರಲು ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಸ್ಪರ್ಧಿಗಳು ಅವರವರ ವಸತಿ ಸಮುಚ್ಚಯಗಳಲ್ಲಿ ಹಂತ ಹಂತವಾಗಿ ಬದಲಾವಣೆ ಮಾಡಿಕೊಳ್ಳುವ ಮೂಲಕ ವಿದ್ಯುತ್‌ ಬಳಕೆ ಕಡಿಮೆ ಮಾಡಬೇಕು. ಆ ಮೂರು ತಿಂಗಳ ‘ವಿದ್ಯುತ್‌ ಶುಲ್ಕ’ ಪಾವತಿ ಚೀಟಿಯನ್ನು ಆಯೋಜಕರಿಗೆ ನೀಡಬೇಕು.

ಈ ಮೂರು ತಿಂಗಳಿನ ಮಧ್ಯೆ ಒಮ್ಮೆ ಸ್ಪರ್ಧಿಗಳಿಗಾಗಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅಲ್ಲಿ ಪ್ರತಿಯೊಬ್ಬರೂ ತಾವು ಮಾಡಿರುವ ಬದಲಾವಣೆ ಹಾಗೂ ಬಳಸಿರುವ ತಂತ್ರಜ್ಞಾನದ ಬಗ್ಗೆ ಚರ್ಚಿಸುತ್ತಾರೆ. ಇದರಿಂದ ಮಾಹಿತಿ ವಿನಿಮಯವಾಗುತ್ತದೆ.
ಮೂರು ತಿಂಗಳಿನಲ್ಲಿ ಯಾರು, ಹೇಗೆ ಹಾಗೂ ಎಷ್ಟು ವಿದ್ಯುತ್‌ ಬಳಕೆ ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಪರಿಸರ ಸ್ನೇಹಿ ಮಾರ್ಗವನ್ನು ಅನುಸರಿಸಿದ್ದಾರೆಯೇ ಹೇಗೆ ಹಾಗೂ ಮೂರು ತಿಂಗಳಿನಲ್ಲಿ ಯಾರ ಪ್ರಯತ್ನ ನಿರಂತರವಾಗಿದೆ ಎಂಬುದನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸಲಾಗುವುದು.

ಸಂಸ್ಥೆಯ ವತಿಯಿಂದ ಈ ಹಿಂದೆ ಪುಣೆಯಲ್ಲಿ ವಿದ್ಯುತ್‌ ಉಳಿಸಿ ಸ್ಪರ್ಧೆ ನಡೆಸಲಾಗಿತ್ತು. ಅಲ್ಲಿ ಎಂಟು ಸಾವಿರ ಮಂದಿ ಭಾಗವಹಿಸಿದ್ದು, 48 ಸಾವಿರ ಯೂನಿಟ್‌ ವಿದ್ಯುತ್ ಉಳಿತಾಯ ಮಾಡಿದ್ದರು.  

ಭಾಗವಹಿಸಲು ಬೇಕಾದ ಅರ್ಹತೆ
ಗೃಹ ನಿರ್ಮಾಣ ಸಂಸ್ಥೆಗಳು, ಕನಿಷ್ಠ ೧೦೦ ಫ್ಲಾಟ್‌ಗಳನ್ನು ಹೊಂದಿರುವ ವಸತಿ ಗೃಹ ಸಮುಚ್ಚಯಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸಲು ಗೃಹ ನಿರ್ಮಾಣ ಸಂಸ್ಥೆ ಅಥವಾ ಫ್ಲಾಟ್ ಮಾಲೀಕರು ತಮ್ಮದೇ ಆದ ವಿದ್ಯುತ್ ನಿರ್ವಹಣಾ ಸಮಿತಿಯನ್ನು (ಇಎಂಸಿ) ರಚಿಸಿಕೊಳ್ಳಬೇಕು. ಎರಡರಿಂದ ಮೂರು ಸಾವಿರ ಮನೆಗಳಿರುವವರು ನೂರು ಮನೆಗಳಿಗೆ ಒಂದು ಸಮಿತಿಯನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಡಿಸೆಂಬರ್‌ ಮೊದಲ ವಾರದಿಂದ ಈ ಸ್ಪರ್ಧೆ ಪ್ರಾರಂಭವಾಗಲಿದ್ದು, ಮಾರ್ಚ್‌ನಲ್ಲಿ ವಿಜೇತರನ್ನು ಘೋಷಿಸಲಾಗುವುದು. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ ₨2 ಲಕ್ಷ , ಎರಡನೇ ಸ್ಥಾನಕ್ಕೆ ₨1 ಲಕ್ಷ ಹಾಗೂ ಮೂರನೇ ಸ್ಥಾನ ಪಡೆದವರಿಗೆ ₨50 ಸಾವಿರ ನಗದು ಬಹುಮಾನ ನೀಡಲಾಗುವುದು. ಸ್ಪರ್ಧಿಗಳಿಗೆ ಯಾವುದೇ ಮಿತಿ ಇಲ್ಲ.

–ಶರ್ಮಿಳಾ ಓಸ್ವಾಲ್, ಅಧ್ಯಕ್ಷೆ, ಗ್ರೀನ್ ಎನರ್ಜಿ ಫೌಂಡೇಷನ್‌

***
ಅನಗತ್ಯವಾಗಿ ವಿದ್ಯುತ್‌ ಬಳಸಿದರೆ ಬಿಲ್‌ ಹೆಚ್ಚಾಗಿ ಬಂದಾಗ ಒಂಟಿ ಮನೆಗಳಲ್ಲಿ ಇರುವವರ ಗಮನಕ್ಕೆ ಬರುತ್ತದೆ. ಅದೇ ವಸತಿ ಸಮುಚ್ಚಯಗಳು ಹಾಗೂ ಬಡಾವಣೆಗಳಲ್ಲಿರುವ ವಿಲ್ಲಾಗಳಲ್ಲಿ ಇರುವವರಿಗೆ ಇದರ ಪರಿವೆಯೇ ಇರುವುದಿಲ್ಲ. ಕಾರಣ ಉದ್ಯಾನ, ಈಜು ಕೊಳ, ಜಿಮ್‌ ಸೇರಿದಂತೆ ಇತರೆ ನಿರ್ವಹಣೆಗಳಿಗಾಗಿ ಒಟ್ಟಾರೆ ನಿರ್ವಹಣಾ ಶುಲ್ಕ ಎಂದು ಒಂದಿಷ್ಟು ಮೊತ್ತದ ಹಣ ನೀಡುತ್ತಾರೆ. ಅದಕ್ಕಾಗಿ ಈ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿರುವ ವಸತಿ ಸಮುಚ್ಚಯಗಳು ಹಾಗೂ ಬಡಾವಣೆಗಳ ಹೌಸಿಂಗ್‌ ಸೊಸೈಟಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

–ಜಯಂತ್‌,  ಸಂಚಾಲಕ, ಗ್ರೀನ್‌ ಎನರ್ಜಿ ಫೌಂಡೇಷನ್‌.

***
ಆಸಕ್ತರು ನವೆಂಬರ್‌ 30ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಮಾಹಿತಿಗೆ ಸಂಪರ್ಕಿಸಿ: jayanth751@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT