ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಪೂರೈಕೆಗೆ ಆಗ್ರಹ

Last Updated 3 ಸೆಪ್ಟೆಂಬರ್ 2015, 10:31 IST
ಅಕ್ಷರ ಗಾತ್ರ

ಮಾಗಡಿ: ಅಸಮರ್ಪಕ ವಿದ್ಯುತ್ ಸರಬರಾಜು ಸರಿಪಡಿಸುವಂತೆ ಆಗ್ರಹಿಸಿ ರೇಷ್ಮೆ ಹುರಿ ಕಾರ್ಖಾನೆಗಳ ನೂರಾರು ಮಾಲೀಕರು ಬುಧವಾರ ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದು ಬೆಸ್ಕಾಂ ಎಇಇ ಚಿಕ್ಕೇಗೌಡ ಅವರೊಂದಿಗೆ ವಾಗ್ವಾದ ನಡೆಸಿದರು. 565 ರೇಷ್ಮೆ ಹುರಿ ಕಾರ್ಖಾನೆ ಮಾಲೀಕರು ಕಲ್ಯಾ ಬಾಗಿಲಿನಿಂದ ಮೆರವಣಿಗೆಯಲ್ಲಿ ತೆರಳಿ ಬೈಚಾಪುರ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಮಧ್ಯಾನ 2 ಗಂಟೆಯ ವೇಳೆಗೆ ಬಂದ ಕಾರ್ಯಪಾಲಕ ಎಂಜಿನಿಯರ್‌ ಶಶಿಧರ್ ಶಿವಾಚಾರ್ಯ ಅವರೊಂದಿಗೆ ವಾಗ್ವಾದ ನಡೆಸಿದ ರೇಷ್ಮೆ ಹುರಿ ಕಾರ್ಖಾನೆ ಮಾಲೀಕರು ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. 

ಹುರಿ ಕಾರ್ಖಾನೆ ಮಾಲೀಕ ಕದಂಬಕೃಷ್ಣ ಮಾತನಾಡಿ, ರಾಮನಗರ ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಿ ವಿದ್ಯುತ್ ಕಡಿತವಾಗುತ್ತಿಲ್ಲ. ಆದರೆ ಮಾಗಡಿಯಲ್ಲಿ ನಿತ್ಯ ನಾಲ್ಕು ಗಂಟೆ ಸಹ ವಿದ್ಯುತ್ ಇರುವುದಿಲ್ಲ. ಮೂರುವರೆ ಸಾವಿರ ಜನ ಬಡ ಕಾರ್ಮಿಕರು ರೇಷ್ಮೆ ಹುರಿ ಕಾರ್ಖಾನೆಗಳಲ್ಲಿ ಜೀವನೋಪಾಯ ನಡೆಸುತ್ತಿದ್ದಾರೆ. ವಿದ್ಯುತ್ ಇಲ್ಲದಿದ್ದರೆ ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗುತ್ತದೆ.

ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗೃಹ ಬಳಕೆಯ ವಸ್ತುಗಳ ಮೇಲೆ ಹೆಚ್ಚಿನ ಬೆಲೆ ನಿಗದಿಗೊಳಿಸಿ ಬಡವರ ಪಾಲಿಗೆ ಮರಣ ಶಾಸನವಾಗಿವೆ. ಸಮರ್ಪಕ ವಿದ್ಯುತ್ ಒದಗಿಸದಿದ್ದರೆ ರೇಷ್ಮೆ ಹುರಿ ಕಾರ್ಖಾನೆ ಮಾಲೀಕರು ಬೆಸ್ಕಾಂ ಕಚೇರಿ ಮುಂದೆ ಆತ್ಮಹತ್ಯೆ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇಷ್ಮೆ ಹುರಿ ಕಾರ್ಖಾನೆ ಮಾಲೀಕ ರಾಘವೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಮಾಗಡಿ ಜನತೆಯನ್ನು ಮಲತಾಯಿ ಮಕ್ಕಳಂತೆ ನಡೆಸಿಕೊಳ್ಳುತ್ತಿದೆ. ಎಂದು ಆಗ್ರಹಿಸಿದರು. ಹುರಿ ಕಾರ್ಖಾನೆ ಮಾಲೀಕ ನಾಗೇಶ್ ಮತ್ತು ಮಂಜುನಾಥ್ ವಿದ್ಯುತ್ ಸರಬರಾಜು ಸರಿಪಡಿಸುವವರೆಗೆ ಅಮರಣಾಂತ ಉಪವಾಸ ನಡೆಸುವುದಾಗಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು.

ಅಪ್ಸರ್ ಫಾಷ, ದಯಾನಂದ್, ಭೈರಣ್ಣ, ಗದ್ದೆ ಬಯಲು ಸಿದ್ದರಾಜು, ಹೊಸಪೇಟೆ ಕೆಂಪಣ್ಣ, ನೇತೇನಹಳ್ಳಿ ದಶರಥ, ರಮೇಶ್, ಬಾಲಾಜಿ ಶ್ರೀನಿವಾಸ್, ಲಕ್ಷ್ಮಣಗೌಡ, ಮಂಜುನಾಥ, ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.

ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಶಶಿಧರ್ ಶಿವಾಚಾರ್ಯ ಮಾತನಾಡಿ, ನಾಲ್ಕು ದಿನಗಳಲ್ಲಿ ಜನರೇಟರ್ ಸಮಸ್ಯೆ ಸರಿಪಡಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿಸುವುದಾಗಿ ತಿಳಿಸಿದರು.

ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮಂಜುನಾಥ್, ತೇಜಸ್‌ಗೌಡ ಇತರರು ಸ್ಥಳಕ್ಕೆ ಭೇಟಿ ನೀಡಿ ಪ್ರತಸಿಭಟನಾ ನಿರತರೊಂದಿಗೆ ಮಾತನಾಡಿದರು. ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದವರು ಬೆಸ್ಕಾಂ ಕಛೇರಿ ಆವರಣದಲ್ಲಿಯೇ ಒಲೆ ಹಚ್ಚಿ ಅಡುಗೆ ಮಾಡಿ ಊಟ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT