ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸ್ವಲ್ಪ ದುಬಾರಿ

ಏಪ್ರಿಲ್ 1ರಿಂದ ಯೂನಿಟ್‌ಗೆ ಸರಾಸರಿ 13 ಪೈಸೆ ಏರಿಕೆ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಪ್ರಿಲ್‌ 1ರಿಂದ ರಾಜ್ಯ­ದಲ್ಲಿ ವಿದ್ಯುತ್‌ ತುಟ್ಟಿಯಾಗ­ಲಿದೆ. ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 10ರಿಂದ 20 ಪೈಸೆಯಷ್ಟು ಹೆಚ್ಚಿಸಲು ಎಸ್ಕಾಂಗಳಿಗೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿದೆ.

ಸರಾಸರಿ ಲೆಕ್ಕಾಚಾರದಲ್ಲಿ ಪ್ರತಿ ಯೂನಿಟ್‌ ವಿದ್ಯುತ್‌ ದರ 13 ಪೈಸೆ­ಯಷ್ಟು ಏರಿಕೆಯಾಗಲಿದೆ. ಪ್ರಸ್ತುತ ದರಕ್ಕೆ ಹೋಲಿಸಿದರೆ ಇದು ಶೇ 2ರಷ್ಟು ಹೆಚ್ಚಳ. ಕೆಇಆರ್‌ಸಿ ಅಧ್ಯಕ್ಷ ಎಂ. ಆರ್‌. ಶ್ರೀನಿವಾಸಮೂರ್ತಿ ಅವರು ಸೋಮ­ವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ಪ್ರಕಟಿಸಿದರು.

ಪ್ರತಿ ಯೂನಿಟ್‌ಗೆ 80 ಪೈಸೆಯಷ್ಟು ಹೆಚ್ಚಿಸಲು ಅನುಮತಿ ನೀಡಬೇಕು ಎಂದು ರಾಜ್ಯದ ಐದು ವಿದ್ಯುತ್‌ ಸರಬರಾಜು ಕಂಪೆನಿಗಳು (ಎಸ್ಕಾಂ) ಕಳೆದ ಡಿಸೆಂ­ಬರ್‌ 8ರಂದು ಆಯೋಗಕ್ಕೆ ಮನವಿ ಮಾಡಿದ್ದವು. ಆದರೆ, ಆಯೋ­ಗವು ಪ್ರತಿ ಯೂನಿಟ್‌ಗೆ ಸರಾಸರಿ 13 ಪೈಸೆಯಷ್ಟು ಮಾತ್ರ ದರ ಏರಿಸಲು ಅನುಮತಿ ನೀಡಿದೆ. ನೀರಾವರಿ ಪಂಪ್‌ಸೆಟ್‌ಗಳು ಮತ್ತು ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಗಳ ಫಲಾನು­ಭವಿ­ಗಳಿಗೆ ಇದು ಅನ್ವಯ­ವಾಗುವುದಿಲ್ಲ ಎಂದು ಅವರು ತಿಳಿಸಿದರು.

100 ಯೂನಿಟ್‌ವರೆಗೆ ಏರಿಕೆ ಇಲ್ಲ: ಗೃಹ ಬಳಕೆಯ ಉದ್ದೇಶದ ವಿದ್ಯುತ್‌ ಸಂಪರ್ಕ­ಗಳಲ್ಲಿ ಮೊದಲ 100 ಯೂನಿಟ್‌ ವಿದ್ಯುತ್‌ ಬಳಕೆಗೆ ದರ ಹೆಚ್ಚಳ ಮಾಡ­ಲಾಗಿಲ್ಲ. 100 ಯೂನಿ­ಟ್‌­­ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ ದರವನ್ನು 15 ಪೈಸೆ ಹೆಚ್ಚಿಸ­ಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಬಳಕೆ ದರವನ್ನು ಪ್ರತಿ ಯೂನಿಟ್‌ಗೆ 15 ರಿಂದ 20 ಪೈಸೆಯಷ್ಟು ಏರಿಸಲಾಗಿದೆ. 

ಅಲ್ಪಾವಧಿ ವಿದ್ಯುತ್‌ ಖರೀದಿ ದರ ಏರಿಕೆಯಿಲ್ಲ: ವಿದ್ಯುತ್‌ ಅಭಾವದ ಸಂದರ್ಭದಲ್ಲಿ ಎಸ್ಕಾಂಗಳು ಖರೀದಿಸುವ ಅಲ್ಪಾವಧಿ ಅಥವಾ

ಮಧ್ಯಾವಧಿ ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ ₹ 4.50ರಂತೆ ಮುಂದುವರಿಸಲಾಗಿದೆ

ಎಲ್‌ಇಡಿ ಬಲ್ಬ್‌ಗೆ ಉತ್ತೇಜನ: ಕಡಿಮೆ ವಿದ್ಯುತ್‌ ಬಳಸುವ ಎಲ್‌ಇಡಿ ಬಲ್ಬ್‌ಗಳ ಬಳಕೆಯನ್ನು ಉತ್ತೇಜಿಸು­ವುದ­ಕ್ಕಾಗಿ ಕೆಇಆರ್‌ಸಿ ಹೊಸ ಪ್ರಸ್ತಾವ ಮುಂದಿಟ್ಟಿದೆ. ಸ್ಥಳೀಯ ಸಂಸ್ಥೆಗಳು ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿದರೆ ಅದು ಬಳಸುವ ಪ್ರತಿ ಯೂನಿಟ್‌ಗೆ ₹ 4 ದರವನ್ನು ಆಯೋಗ ನಿಗದಿ ಪಡಿಸಿದೆ.

ಸಹಾಯಧನಕ್ಕೆ ಷರತ್ತು: 10 ಎಚ್‌.ಪಿ ಸಾಮರ್ಥ್ಯದ 22.75 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ  ಹಾಗೂ 29 ಲಕ್ಷ ಭಾಗ್ಯಜ್ಯೋತಿ, ಕುಟೀರಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್‌ ಸರಬರಾಜಿಗಾಗಿ ಸರ್ಕಾರ ನೀಡುವ ಸಹಾಯಧನವನ್ನು ಆಯೋಗವು 2015–16ನೇ ಸಾಲಿನಲ್ಲಿ ₹ 7,113 ಕೋಟಿಗೆ ಹೆಚ್ಚಿಸಿದೆ.  ಪ್ರಸಕ್ತ ಸಾಲಿನಲ್ಲಿ ₹ 6,308 ಕೋಟಿ ನಿಗದಿಪಡಿಸಲಾಗಿತ್ತು.

ಮುಂದಿನ ವರ್ಷದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ 1752.2 ಕೋಟಿ ಯೂನಿಟ್‌ ಮತ್ತು ಭಾಗ್ಯಜ್ಯೋತಿ, ಕುಟೀರಜ್ಯೋತಿ  ಉದ್ದೇಶಕ್ಕೆ 31.9 ಕೋಟಿ ಯೂನಿಟ್‌ ವಿದ್ಯುತ್‌ ಬೇಕಾಗ­-ಬಹುದು ಎಂದು ಅಂದಾಜಿಸಲಾಗಿದೆ. ಈ ಸಹಾಯಧನ ಬಿಡುಗಡೆ ಮಾಡಲು ಕೂಡ ಆಯೋಗವು ಎರಡು ಪ್ರಮುಖ ಷರತ್ತುಗಳನ್ನು ಹಾಕಿದೆ.

ಪ್ರತಿ ಯೂನಿಟ್‌ ವಿದ್ಯುತ್‌ ದರ ಸರಾಸರಿ 13 ಪೈಸೆಯಷ್ಟು ಹೆಚ್ಚಳ­ವಾಗುವು­ದರಿಂದ ಎಸ್ಕಾಂಗಳಿಗೆ ಒಟ್ಟು ₹425 ಕೋಟಿ ಸಂಗ್ರಹವಾಗಲಿದೆ.
– ಎಂ.ಆರ್‌. ಶ್ರೀನಿವಾಸ ಮೂರ್ತಿ.  ಕೆಇಆರ್‌ಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT