ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಆಘಾತ: ಬೇಡಿಕೆ– ಪೂರೈಕೆ ನಡುವೆ ಕಂದರ

Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ನಿರಂತರ. ಬೇಸಿಗೆ ಇರಲಿ ಮಳೆಗಾಲ ಬರಲಿ ಲೋಡ್‌ಶೆಡ್ಡಿಂಗ್‌, ಅನಿಯಮಿತ ವಿದ್ಯುತ್‌ ಕಡಿತ ಸರ್ವೇಸಾಮಾನ್ಯ. ದಿನೇದಿನೇ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು ರಾಜ್ಯ ತಿಣುಕಾಡುತ್ತಿರುವುದಕ್ಕೆ ಕಾರಣ ಏನು, ಪರಿಹಾರ ಹೇಗೆ ಎಂಬುದರ ಮೇಲೆ ಈ ಲೇಖನಗಳು ಬೆಳಕು ಚೆಲ್ಲಿವೆ.

ರಾಜ್ಯ ಕಳೆದ 20 ವರ್ಷಗಳಿಂದ ನಿರಂತರವಾಗಿ  ವಿದ್ಯುತ್ ಕೊರತೆಯನ್ನು ಎದುರಿಸು­ತ್ತಲೇ ಬಂದಿದೆ. ಇಲ್ಲಿ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಶೇ 15­ರಿಂದ 20ರಷ್ಟಿದೆ. ವಿದ್ಯುತ್ ಬೇಡಿಕೆ ಪ್ರತಿ ವರ್ಷ ಕನಿಷ್ಠ ಶೇ 8ರಿಂದ 10ರಷ್ಟು ಹೆಚ್ಚುತ್ತಿರುವುದಕ್ಕೆ ವಿವಿಧ ಕಾರಣಗಳಿವೆ. ಏರುತ್ತಿರುವ ಜನಸಂಖ್ಯೆ, ಉದ್ದಿಮೆ­ಗಳ ವಿಸ್ತರಣೆ, ಕೃಷಿ ಚಟುವಟಿಕೆ ಹಾಗೂ ಗೃಹೋಪ­ಯೋಗಿ ವಸ್ತು­ಗಳ ಬಳಕೆಯಲ್ಲಿ ಆಗುತ್ತಿರುವ ಅಗಾಧ ಬದಲಾವಣೆ­ಗಳಿಂದ ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಆದರೆ, ಎಷ್ಟೇ ಶ್ರಮ ಹಾಗೂ ಬಂಡವಾಳ ತೊಡಗಿಸಿ­ದರೂ ಸರ್ಕಾರದ ಕಡೆಯಿಂದ ವಾರ್ಷಿಕ ಶೇ 2ರಿಂದ 3ರಷ್ಟು ಹೆಚ್ಚುವರಿ ವಿದ್ಯುತ್ ಉತ್ಪಾ­ದನೆ ಮಾತ್ರ ಸಾಧ್ಯ­ವಾಗು­ತ್ತಿದೆ. ವಿದ್ಯುತ್ ಉತ್ಪಾ­ದ­ನೆಗೆ ಸರ್ಕಾರ ತನ್ನ ಪ್ರಯತ್ನಗಳನ್ನು ಹಾಕು­ತ್ತಿ­ದ್ದರೂ, ಫಲಿ­ತಾಂಶ ನಿರೀಕ್ಷಿತ ಮಟ್ಟ ತಲುಪುತ್ತಿಲ್ಲ. ಅದಕ್ಕಾಗಿ ಸರ್ಕಾರ ತನ್ನ ನೀತಿಯಲ್ಲಿ ಕೆಲವು ಬದಲಾವ­ಣೆ­ಗಳನ್ನು ತರುವುದು ಅವಶ್ಯವಾಗಿದೆ.

ಪ್ರಥಮಗಳ ಹೆಗ್ಗಳಿಕೆ: 1984ರವರೆಗೂ ಜಲ ವಿದ್ಯುತ್ ಮೇಲೇ ಅವ­ಲಂಬಿ­ತ­­ವಾಗಿದ್ದ ರಾಜ್ಯ, ವಿದ್ಯುತ್ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಹಲವಾರು ಪ್ರಥಮ­ಗಳಿಗೆ ಹೆಸರಾಗಿದೆ. ಕೃಷ್ಣರಾಜ ಒಡೆಯರ್  ಅವರ ಆಡಳಿತ ಇದ್ದಾಗ 1903­ರಲ್ಲಿ ಶಿವನ­ಸಮುದ್ರದಲ್ಲಿ ಏಷ್ಯಾ ಖಂಡದ ಮೊದಲ ಜಲ ವಿದ್ಯುತ್ ಉತ್ಪಾ­ದನಾ ಕೇಂದ್ರ­­ ಆರಂಭಿಸಿತು. 1908ರಲ್ಲೇ ಬೀದಿ ದೀಪ ಹಾಗೂ ಮನೆಗಳಿಗಾಗಿ ವಿದ್ಯುತ್ ಬಲ್‌್ಬಗಳನ್ನು ಬಳಸಿದ ದೇಶದ ಮೊದಲ ನಗರ ಬೆಂಗಳೂರು ಎಂಬುದು ಹೆಗ್ಗಳಿಕೆ. ವಿದ್ಯುತ್ ಉತ್ಪಾ­ದನೆ ಹಾಗೂ ವಿತರಣಾ ಕ್ಷೇತ್ರಗಳನ್ನು ಬೇರ್ಪ­ಡಿಸಿ 1970ರಲ್ಲಿ ಮೈಸೂರು ವಿದ್ಯುತ್ ನಿಗಮವನ್ನು ಆರಂಭಿಸಿದ ಮೊದಲ ರಾಜ್ಯ ಸಹ ನಮ್ಮದು. ನಂತರ ಇದು ಕರ್ನಾಟಕ ವಿದ್ಯುತ್‌ ನಿಗಮವಾಗಿ  ಬದಲಾಯಿತು.

ಕರ್ನಾಟಕ ವಿದ್ಯುತ್ ನಿಗಮ ರೂಪಿಸಿದ ಮೊದಲ ಭಾರಿ ಯೋಜನೆ­ ಕಾಳಿ ನದಿ ಜಲ ವಿದ್ಯುತ್ ಯೋಜನೆ. ಇದು ಸೂಪಾ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಣೇಶ ಗುಡಿಯಲ್ಲಿ ಪವರ್ ಹೌಸ್ ನಿರ್ಮಾಣವನ್ನು ಒಳ­ಗೊಂಡಿತ್ತು. ಅಣೆಕಟ್ಟೆಯು 145 ಟಿಎಂಸಿ ಅಡಿ ಜಲ ಸಂಗ್ರಹ ಸಾಮರ್ಥ್ಯ­ವನ್ನು ಹೊಂದಿದ್ದು, ನಿರ್ಮಾಣಕ್ಕೆ 10 ವರ್ಷ ಬೇಕಾ­ಯಿತು. ನಂತರ ನಿಗಮವು ಅದೇ ಪ್ರದೇಶದ ಇನ್ನಿತರ ಜಲ ವಿದ್ಯುತ್ ಯೋಜನೆಗಳಾದ ನಾಗಝರಿ, ಕದ್ರ, ಕೊಡಸಳ್ಳಿ ಸೇರಿ 1240 ಮೆಗಾ­ವಾಟ್ ವಿದ್ಯುತ್‌ ಅನ್ನು ಕರ್ನಾಟಕ ಗ್ರಿಡ್‌ಗೆ ಸೇರಿಸಿತು. ಆನಂತರ ಶರಾವತಿ ಜಲ ವಿದ್ಯುತ್ ಯೋಜನೆ­­ಯನ್ನು ಪೂರ್ಣಗೊಳಿಸಿತು.

ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿ­ಯಾಗಿ­ದ್ದಾಗ ರೂಪ ತಾಳಿದ ರಾಜ್ಯದ ಮೊದಲ ಕಲ್ಲಿದ್ದಲು ಆಧಾ­ರಿತ ರಾಯಚೂರು ಥರ್ಮಲ್ ಪವರ್ ಸ್ಟೇಷನ್   ಯೋಜನೆಯನ್ನು ನಿಗಮ ಕೈಗೆತ್ತಿಕೊಂಡಿತಲ್ಲದೆ, 210 ಮೆಗಾವಾಟ್ ಸಾಮರ್ಥ್ಯದ ಎರಡು  ಘಟಕಗಳು 80ರ ದಶಕದಲ್ಲಿ ಕಾರ್ಯಾರಂಭ ಮಾಡಿದವು. ಈ ಯೋಜನೆ­ಯನ್ನು ಆರ್.ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರಗಳು ಸಾಕಾರಗೊಳಿಸಿದವು. ಆದಾಗ್ಯೂ ಆಗ ಉತ್ಪಾದನೆಯಾಗುತ್ತಿದ್ದ ಒಟ್ಟಾರೆ ವಿದ್ಯುತ್ ­ಪ್ರಮಾಣದಲ್ಲಿ
ಶೇ 80ರಷ್ಟು ವಿದ್ಯುತ್ ಜಲ ಆಧಾ­ರಿತ ಯೋಜನೆಗಳನ್ನೇ  ಅವಲಂಬಿ­ಸಿತ್ತು.

ದಿನೇ­­ದಿನೇ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚು­ತ್ತಲೇ ಹೋಗು­ತ್ತಿ­ದ್ದುದರಿಂದ ಸರ್ಕಾರ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಗೆ ಗಮನ ಹರಿಸ­ಬೇಕಾದ ಅನಿವಾರ್ಯ ಉಂಟಾ­ಯಿತು. ಈ ಸಂದರ್ಭದಲ್ಲಿ ನಾನು 1995­ರಲ್ಲಿ ನಿಗಮದ ವ್ಯವ­ಸ್ಥಾಪಕ ನಿರ್ದೇ­ಶಕ­ನಾಗಿ ನೇಮಕ­ಗೊಂಡೆ. ಆಗ ಎಚ್.ಡಿ.­ದೇವೇ­ಗೌಡರು ಮುಖ್ಯ­ಮಂತ್ರಿಯಾ­ಗಿ­­­ದ್ದರು.  ಆ ವರ್ಷ ಮುಂಗಾರು ಮಳೆ ವಿಫಲ­ಗೊಂಡು ರಾಜ್ಯದ ಪ್ರಮುಖ ಅಣೆಕಟ್ಟೆ­ಗಳಾದ ಲಿಂಗನ­­ಮಕ್ಕಿ ಮತ್ತು ಸೂಪಾ ಇನ್ನೇನು ಬರಿದಾಗುವ ಹಂತ ತಲುಪಿ­ದ್ದವು. ಲೋಡ್‌­­ಶೆಡ್ಡಿಂಗ್‌ ವಿನಾ ಅನ್ಯ ದಾರಿ ಇರಲಿಲ್ಲ. ಉದ್ದೇ­­ಶಿತ ರಾಯ­ಚೂರು ಶಾಖೋ­ತ್ಪನ್ನ ವಿಸ್ತರಣಾ ಯೋಜನೆ, ಕದ್ರ, ಕೊಡಸಳ್ಳಿ, ಗೇರು­ಸೊಪ್ಪ ಜಲ ವಿದ್ಯುತ್‌ ಯೋಜನೆ­ಗಳನ್ನು ಕಾರ್ಯಗತ­ಗೊಳಿಸುವ ಸವಾಲೂ  ಇತ್ತು.

ರಾಯಚೂರು ಶಾಖೋ­ತ್ಪನ್ನ ವಿಸ್ತ­ರಣಾ ಯೋಜನೆಗೆ ₨ 1,500 ಕೋಟಿ ಹಾಗೂ ಸ್ಥಗಿತಗೊಂಡಿದ್ದ ಜಲ ವಿದ್ಯುತ್‌ ಯೋಜನೆಗಳನ್ನು ಪೂರ್ಣ­ಗೊಳಿಸಲು ಹೆಚ್ಚುವರಿ­ಯಾಗಿ ₨ 700 ಕೋಟಿ ಅವಶ್ಯಕತೆ ಇತ್ತು.  ಸಮರೋಪಾದಿಯಲ್ಲಿ ಕಾಮ­ಗಾರಿ­ಗಳನ್ನು ಕೈಗೆತ್ತಿಕೊಳ್ಳಲಾಯಿತು.  210 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕದ ಕಾಮ­ಗಾರಿ 36 ತಿಂಗಳ ಕಾಲಾವಧಿ­ಯಲ್ಲಿ ಪೂರ್ಣ­ಗೊಳ್ಳಬೇಕಾಗಿತ್ತು. ಆದರೆ ಅದು 28 ತಿಂಗಳಿಗೇ ಮುಗಿದು ಸಾರ್ವಕಾಲಿಕ ದಾಖಲೆ ಸ್ಥಾಪಿಸಿತು. ಹಾಗೆಯೇ 210 ಮೆಗಾವಾಟ್ ಸಾಮರ್ಥ್ಯದ  ಎರಡನೇ ಘಟಕ, ಅವಧಿಗೆ 9 ತಿಂಗಳ ಮೊದಲೇ ಪೂರ್ಣ­ಗೊಂಡಿತು. ಕರ್ನಾಟಕ  ವಿದ್ಯುತ್ ಗ್ರಿಡ್‌ಗೆ 420 ಮೆಗಾವಾಟ್ ವಿದ್ಯುತ್ ಸೇರ್ಪ­ಡೆ­­ಗೊಂಡು ಆರ್ಥಿಕವಾಗಿ  ಲಾಭ ತಂದುಕೊಟ್ಟಿತು. ವಿದೇಶದ ಕೆಲವೇ ಸಂಸ್ಥೆಗಳಿಗೆ ಮಾತ್ರ ಸಾಧ್ಯ ಎಂದು ಬಿಂಬಿತ­ಗೊಂಡಿದ್ದ ಇಂತಹ ಬೃಹತ್ ಕೆಲಸವನ್ನು ನಾವು ನಿಗದಿತ ಕಾಲಾವಧಿಗೂ ಮುನ್ನವೇ ಸಾಧಿಸಿ ತೋರಿಸಿದ್ದೆವು. ಆ ನಂತರ ರಾಯಚೂರು ಥರ್ಮಲ್ ಯೋಜನೆಗೆ ಮತ್ತಷ್ಟು ಘಟಕ­ಗಳನ್ನು ಸೇರ್ಪಡೆ ಮಾಡಲಾಯಿ­ತಾ­ದರೂ, ವಿದ್ಯುತ್ ಬೇಡಿ­ಕೆಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ.

ಖಾಸಗಿಯತ್ತ ಚಿಂತನೆ: 1992­ರಲ್ಲಿ ವಿದ್ಯುತ್ ಕ್ಷೇತ್ರ­ವನ್ನು ಖಾಸಗೀಕರಣ­ಗೊಳಿಸುವ ಗಾಳಿ ದೇಶದಾದ್ಯಂತ ಬೀಸಿತು. ಕರ್ನಾಟಕವೂ ಇದಕ್ಕೆ ಹೊರತಾಗಿರಲಿಲ್ಲ. ವಿದ್ಯುತ್ ಯೋಜನೆಗಳನ್ನು ಅನು­ಷ್ಠಾನ­ಗೊಳಿಸಲು ಸಾಕಾಗುವಷ್ಟು ಹಣ ಹೊಂದಿಸಲು ಅಸಾಧ್ಯ­ವಾಗಿದ್ದು ಹಾಗೂ ಕಾಲಮಿತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸ­ಲಾಗದೇ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿನ ಎಲ್ಲ ಹೊಸ ವಿದ್ಯುತ್ ಯೋಜನೆಗಳಿಗೆ ಖಾಸಗಿ ಬಂಡವಾಳ ತೊಡಗಿ­ಸುವ ಚಿಂತನೆ ಮಾಡಿತು.

ಈ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿದ್ಯುತ್ ಯೋಜನೆಗಳಿಗಾಗಿ ಖಾಸಗಿಯವ­ರೊಂದಿಗೆ ಬಹಳ ಸುಸೂತ್ರವಾಗಿ ಒಡಂ­ಬಡಿಕೆ ಮಾಡಿ­ಕೊಳ್ಳಲು ಮುಂದೆ ಬಂದವು. ರಾಜ್ಯ ಸರ್ಕಾರವು ಅಮೆರಿಕ ಒಡೆತನದ ಕೊಜೆಂಟ್ರಿಕ್ಸ್ ಕಂಪೆನಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,000 ಮೆಗಾವಾಟ್ ವಿದ್ಯುತ್ ಉತ್ಪಾದಿ­ಸುವ ಯೋಜನೆಗೆ ಒಪ್ಪಂದ ಮಾಡಿ­ಕೊಂಡಿತು. ಆದರೆ ಈ ಯೋಜನೆ ಫಲಪ್ರದ­ವಾಗಲಿಲ್ಲ. ಉಡುಪಿ ಬಳಿ ಖಾಸಗಿ ಶಾಖೋತ್ಪನ್ನ ಯೋಜ­ನೆ­ಯೊಂದು ಸುಮಾರು 1,200 ಮೆಗಾ­ವಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಇದು ರಾಜ್ಯ­ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿ­ಸುವ ಏಕೈಕ ಖಾಸಗಿ ವಿದ್ಯುತ್ ಘಟಕವಾಗಿದೆ.

ಪಂಪ್‌ಸೆಟ್‌ ಮಾಹಿತಿಯೇ ಇಲ್ಲ!
ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂಬ ವಾದ ಇದೆ. ಬಹಳ ಮುಖ್ಯವಾಗಿ, ರೈತರ ಕೃಷಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ  ಖಚಿತವಾಗಿ ಎಷ್ಟು ಪ್ರಮಾ­ಣದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂಬ ಬಗ್ಗೆ ಸರ್ಕಾರದ ಬಳಿಯೇ ಮಾಹಿತಿ ಇಲ್ಲ. ಕೊನೇ ಪಕ್ಷ ಅದಕ್ಕಾಗಿ ಸರ್ಕಾರ ಹೊರು­ತ್ತಿರುವ ಆರ್ಥಿಕ ಹೊರೆಯ ವಿವರವಾದರೂ ಲಭ್ಯವಾ­ದರೆ ಈ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಹಕಾರಿ­ಯಾಗುತ್ತದೆ.
ಒಂದು ಅಂದಾಜಿನಂತೆ ರಾಜ್ಯದಲ್ಲಿ 20 ಲಕ್ಷ ಪಂಪ್‌
­ಸೆಟ್‌­ಗಳಿವೆ. ರಾಜ್ಯದ ಒಟ್ಟಾರೆ ವಿದ್ಯುತ್ ಪ್ರಮಾಣದಲ್ಲಿ
ಶೇ 30ಕ್ಕಿಂತಲೂ ಅಧಿಕ ವಿದ್ಯುತ್‌ ಅನ್ನು ಈ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಈಗಿನ ದರದಲ್ಲಿ ವಾರ್ಷಿಕ ಸುಮಾರು ₨ 5,000 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಈ ಪ್ರಮಾಣದ ಒಂದೆರಡು ವರ್ಷಗಳ ನಷ್ಟವನ್ನೇ ಬಂಡವಾಳವಾಗಿ ತೊಡಗಿಸಿದರೆ ಶಾಶ್ವತ ವಿದ್ಯುತ್ ಯೋಜನೆಗಳನ್ನು ರೂಪಿಸಿ, ಬೇಡಿ­ಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ರೈತರು ತಮ್ಮ ಪಂಪ್‌ಸೆಟ್‌ಗಳಿಗಾಗಿ ಕರಾರುವಾಕ್ಕಾಗಿ ಎಷ್ಟು ವಿದ್ಯುತ್ ಬಳಸುತ್ತಾರೆ ಎಂಬ ಮಾಹಿತಿ ಇಲ್ಲದ ಕಾರಣ, ವಿದ್ಯುತ್ ಪ್ರಸಾರದಲ್ಲಿ ಏರುಪೇರಾಗಿ ಆಗಿಂದಾಗ್ಗೆ ಗ್ರಾಮೀಣ ಪ್ರದೇಶ­ಗಳಲ್ಲಿ ಟ್ರಾನ್‌್ಸಫಾರ್ಮರ್‌ಗಳು ಹಾಳಾಗುತ್ತಿವೆ.
ಹೈಟೆನ್ಷನ್ ತಂತಿ­ಗ­ಳಿಂದ ಗ್ರಾಮೀಣ ಭಾಗದ ಕೃಷಿ ಹಾಗೂ ಗೃಹ ಬಳಕೆಯ ವಿದ್ಯುತ್ ಪೂರೈಕೆಗಾಗಿ ಲೋಟೆನ್ಷನ್ ತಂತಿಗಳಿಗೆ ವಿದ್ಯುತ್ ಮಾರ್ಪ­ಡಿಸುವಾಗಲೂ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ನಷ್ಟ ಉಂಟಾ­ಗುತ್ತಿದೆ. ಎಲ್.ಟಿ ತಂತಿಯನ್ನು ದೂರಕ್ಕೆ ಎಳೆದು­ಕೊಂಡು ಹೋದಷ್ಟೂ ವಿದ್ಯುತ್ ನಷ್ಟದ ಪ್ರಮಾಣ  ಹೆಚ್ಚು­ತ್ತಲೇ ಹೋಗುತ್ತದೆ.

ರಾಜ್ಯ ನಿರಂತರವಾಗಿ ವಿದ್ಯುತ್ ಅಭಾವ ಎದುರಿ­ಸುತ್ತಿ­ರುವುದಕ್ಕೆ ಮೊದಲಿ­ನಿಂದಲೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೂ ಕಾರಣ ಎನ್ನ­ಬಹುದು. ಕೇಂದ್ರ ತನ್ನ ಗ್ರಿಡ್‌ನಿಂದ ವಿದ್ಯುತ್ ನೀಡುವಾಗ ರಾಜ್ಯದ ಬೇಡಿಕೆಯನ್ನು ಪರಿಗಣಿಸದೆ, ಗಾಡ್ಗೀಳ್‌ ಸೂತ್ರ­ವನ್ನು ಆಧಾರವಾಗಿ ಇಟ್ಟುಕೊಂಡು ವಿದ್ಯುತ್ ಹಂಚುವ ಪರಿಪಾಟ ­ಇಟ್ಟುಕೊಂಡಿದೆ. ಇದ­ರಿಂದ ರಾಜ್ಯದಲ್ಲಿ ಎಷ್ಟೇ ಪ್ರಮಾಣದ ವಿದ್ಯುತ್ ಕೊರತೆ­ಯಿದ್ದರೂ ನಿಗದಿತ ಪ್ರಮಾಣದಲ್ಲೇ ಕೇಂದ್ರ ವಿದ್ಯುತ್ ಹಂಚಿಕೆ ಮಾಡುತ್ತದೆ. ಸದ್ಯಕ್ಕೆ ಸೆಂಟ್ರಲ್ ಗ್ರಿಡ್‌ನಿಂದ ರಾಜ್ಯಕ್ಕೆ 1,500 ಮೆಗಾವಾಟ್‌ ವಿದ್ಯುತ್ ಸರಬರಾಜಾ­ಗು­ತ್ತಿದೆ. ಇದು ರಾಜ್ಯದ  ಬೇಡಿಕೆಗೆ ಹೋಲಿಸಿದರೆ ಬಹಳ ಕಡಿಮೆ ಎಂದೇ ಹೇಳಬಹುದು.

ಹಿಂದಿನ ಸರ್ಕಾರ ರಾಜ್ಯದ ವಿದ್ಯುತ್ ಸಂಕಷ್ಟದ ಚಿತ್ರಣವನ್ನು ಕೇಂದ್ರದ ಮುಂದಿ­ರಿಸಿ, ಅಂದಿನ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಹಾಗೂ ಪರಿಸರ ಸಚಿವ ಜೈರಾಮ್ ರಮೇಶ್ ಅವರ ಮನವೊಲಿಸಿ, ವಿಜಾಪುರ ಜಿಲ್ಲೆಯ ಕೂಡಗಿಯಲ್ಲಿ 4,000 ಮೆಗಾ­ವಾಟ್‌ ಸಾಮರ್ಥ್ಯದ  ಶಾಖೋತ್ಪನ್ನ ಘಟಕ ಕೈಗೆತ್ತಿಕೊಳ್ಳಲು ಹಸಿರು ನಿಶಾನೆ ತೋರಿಸಿತು. ಮೊದಲ ಹಂತದಲ್ಲಿ ತಲಾ 800 ಮೆಗಾವಾಟ್‌ ಸಾಮರ್ಥ್ಯದ ಮೂರು ಹಾಗೂ ಎರಡನೇ ಹಂತದಲ್ಲಿ 800 ಮೆಗಾವಾಟ್‌ ಸಾಮರ್ಥ್ಯದ ಎರಡು ಘಟಕಗಳು ಕಾರ್ಯಾ­ರಂಭ ಮಾಡಲಿವೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌­ನಲ್ಲಿ ಶೇ 25ರಷ್ಟನ್ನು ರಾಜ್ಯಕ್ಕೆ ನೀಡುವ ಒಪ್ಪಂದವಿದೆ. ಈ ಘಟಕ­ದಿಂದ ಶೇ 50ರಷ್ಟು ವಿದ್ಯುತ್‌ ಪಡೆದುಕೊಳ್ಳಲು ರಾಜ್ಯ ಪ್ರಯತ್ನ­ಪಡಬೇಕಿದೆ.

ಸಮರ್ಪಕವಾಗಿ ವಿದ್ಯುತ್ ಬೇಡಿಕೆ ಪೂರೈಸುವ ಸಂಬಂಧದಲ್ಲಿ ಲೋಡ್‌ ಶೆಡ್ಡಿಂಗ್‌  ಅನಿವಾರ್ಯ. ಆದರೆ, ಈ ಬಗ್ಗೆ ಸಾರ್ವಜನಿ­ಕರಿಗೆ ಅರಿವು ಮಾಡಿಕೊಡುವ ಮತ್ತು ಲೋಡ್‌ಶೆಡ್ಡಿಂಗ್‌ ಹೊರತಾಗಿ ಪೂರೈಸುವ ವಿದ್ಯುತ್ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳ­ಬೇಕಾದ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಶಾಶ್ವತ ಶಾಖೋತ್ಪನ್ನ ಯೋಜನೆಗಳಿಗೆ ಒತ್ತು ನೀಡುವ ಬದ್ಧತೆ ಸರ್ಕಾರ­ದ್ದಾಗ­ಬೇಕಾಗಿದೆ. ಅದು ಸ್ವತಃ ಇಂತಹ ಘಟಕಗಳ ಆರಂಭಕ್ಕೆ ಹೊಸ ಹೊಸ ಯೋಜನೆ­ಗಳನ್ನು ರೂಪಿಸುವುದರೊಂದಿಗೆ, ವಿದ್ಯುತ್ ಯೋಜನೆ­ಗಳನ್ನು ಆರಂಭಿಸಲು ಮುಂದೆ ಬರುವ ಖಾಸಗಿ ಕ್ಷೇತ್ರವನ್ನೂ ಪ್ರೋತ್ಸಾ­ಹಿಸಬೇಕಿದೆ. ಗಾಳಿಯಂತ್ರ ಹಾಗೂ ಸೌರಶಕ್ತಿ ಘಟಕಗಳನ್ನು ಹುರಿದುಂಬಿಸಬೇಕಾದ ಅವಶ್ಯಕತೆ ಇದ್ದರೂ, ಇವು  ಕಾಲಮಾನಕ್ಕೆ ಅನು­ಗುಣವಾಗಿ ಕಾರ್ಯ ನಿರ್ವಹಿಸುವುದರಿಂದ ಭವಿಷ್ಯದ ದೃಷ್ಟಿ­ಯಿಂದ ಹೆಚ್ಚು ಹೆಚ್ಚು ಶಾಖೋತ್ಪನ್ನ ಯೋಜನೆಗಳತ್ತ ಗಮನ ಹರಿಸ­ಬೇಕಾದ ಅನಿವಾರ್ಯ ಇದೆ. ಉತ್ಪಾ­ದನೆಗೆ ಹೆಚ್ಚಿನ ಆದ್ಯತೆ, ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳ ನಡುವೆ ಭಾಗೀದಾರಿಕೆ ಮತ್ತು ಪೂರೈಕೆಯಲ್ಲಿ ಸುಧಾರಣೆಯಂತಹ ಕ್ರಮಗಳು ರಾಜ್ಯದಲ್ಲಿ  ವಿದ್ಯುತ್ ಸುಧಾರಣೆಗೆ ವರದಾನವಾಗುತ್ತವೆ.

ಕಲ್ಲಿದ್ದಲು ಪಡೆಯುವುದೇ ಸವಾಲು
ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು ಪಡೆಯು­ವುದೇ ಒಂದು ಸವಾಲು. ನಾನು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇ­ಶಕ­ನಾಗಿದ್ದ ಅವಧಿಯಲ್ಲಿ, ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ಸರಬರಾಜಾ­ಗುತ್ತಿದ್ದ ಕಲ್ಲಿದ್ದಲು ಪೂರೈಕೆ ಪ್ರಮಾಣ ಕಡಿಮೆಯಾಗಿ ದಾಸ್ತಾನು ಇಲ್ಲವಾಗಿತ್ತು. ಕಲ್ಲಿದ್ದಲಿಗಾಗಿ ಎಂತಹ ಪರಿಸ್ಥಿತಿ ಇತ್ತೆಂದರೆ ಅದನ್ನು ದಾಸ್ತಾನು ಮಾಡಿದ್ದ ಸ್ಥಳದಲ್ಲಿ ಬಿದ್ದಿದ್ದ ಕಲ್ಲಿದ್ದಲು ದೂಳನ್ನೇ ವಿದ್ಯುತ್ ಘಟಕಗಳಿಗೆ ಪೂರೈಸಲಾಗುತ್ತಿತ್ತು.

ಸಿಂಗರೇಣಿ ಹಾಗೂ ನಾಗಪುರಗಳ ಕಲ್ಲಿದ್ದಲಿನ ಗಣಿಗಳಿಂದ ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ಕಲ್ಲಿದ್ದಲು ಪೂರೈಕೆಯಾಗುತ್ತಿದ್ದರೂ, ನಿಗದಿತ ಪ್ರಮಾಣದಲ್ಲಿ ಶೇ 60ರಷ್ಟು ಮಾತ್ರ ಪೂರೈಕೆಯಾಗು­ತ್ತಿತ್ತು. ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ, ಅವಶ್ಯವಿರುವಷ್ಟು ರೈಲ್ವೆ ವ್ಯಾಗನ್‌ಗಳನ್ನು ಪಡೆದು­ಕೊಳ್ಳುವ ಹಾಗೂ ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ಗಣಿಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪಡೆದುಕೊಳ್ಳಲು ಹರಸಾಹಸ ಮಾಡಿದೆವು.

ಛತ್ತೀಸ್‌ಗಡ ಸರ್ಕಾರದ ಜೊತೆ ಸಮಾಲೋಚಿಸಿ, ಅಲ್ಲಿ ಶಾಖೋತ್ಪನ್ನ ಘಟಕ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿ, ಸೂಕ್ತ ಭೂಮಿಯನ್ನೂ ಕೊಂಡಿತು. ಈ ಘಟಕದ ಆರಂಭಕ್ಕೂ ಈಗ ಕಲ್ಲಿದ್ದಲು ಪೂರೈಕೆ ಅನಿಶ್ಚಿತತೆಯ ತೊಡಕು ಉಂಟಾಗಿದೆ.
(ಲೇಖಕರು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT