ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಯೋಜನೆಗಳ ಅಗತ್ಯ

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ವಿಜಾಪುರ ಜಿಲ್ಲೆ ಕೂಡಗಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ   ರೈತರು ನಡೆಸಿದ ಪ್ರತಿಭಟನೆ  ಹಿಂಸೆಗೆ ತಿರುಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗುಂಪು ಚದುರಿಸಲು  ಪೊಲೀಸರು ಗಾಳಿ­ಯಲ್ಲಿ ಹಾರಿಸಿದ ಗುಂಡಿನಿಂದ ಇಬ್ಬರು ರೈತರು ತೀವ್ರವಾಗಿ ಗಾಯ­ಗೊಂಡಿ­ದ್ದಾರೆ. ಜೊತೆಗೆ ಲಾಠಿ ಪ್ರಹಾರ ಹಾಗೂ ಕಲ್ಲುತೂರಾಟಗಳಲ್ಲಿ ಪೊಲೀಸರು ಸೇರಿ­ದಂತೆ ಅನೇಕ ಮಂದಿ ಗಾಯಗೊಂಡಿರುವುದು ದುರದೃಷ್ಟಕರ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್‌ಟಿಪಿಸಿ), 4000 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ಸ್ಥಾವರ ಸ್ಥಾಪನೆಗಾಗಿ ಕೂಡಗಿಯಲ್ಲಿ ಈಗಾಗಲೇ ರೈತರ ಜಮೀನುಗಳನ್ನು ಸರ್ಕಾರ  ಸ್ವಾಧೀನ­ಪಡಿಸಿ­ಕೊಂಡಿದ್ದು ಕಾಮಗಾರಿಗಳೂ ಪ್ರಾರಂಭವಾಗಿವೆ. ಯೋಜನೆಯ ಪ್ರಕಾರ, ಮೊದಲ ಘಟಕ 2015ರ ಡಿಸೆಂಬರ್‌ನಲ್ಲಿ ವಿದ್ಯುತ್ ಉತ್ಪಾದನೆ  ಆರಂಭಿ­ಸಬೇಕಾಗಿದೆ. ಇಂತಹ ಹೊತ್ತಿನಲ್ಲಿ ಈ ಪ್ರತಿಭಟನೆ ಶುರುವಾಗಿದೆ. 

ಪ್ರತಿಭಟನೆಯ ಹಿಂದಿನ ಕಾರಣಗಳೇನು ಎಂಬುದನ್ನು  ಸರ್ಕಾರ ಮೊದಲು ಅರಿತುಕೊಳ್ಳಬೇಕು.  ಸ್ಥಳೀಯರಿಗೆ ಉದ್ಯೋಗ ಹಾಗೂ ಹೆಚ್ಚಿನ ಪರಿಹಾರದ ಭರವಸೆಗಳನ್ನು ನೀಡಲಾಗಿದ್ದು  ಈ ಭರವಸೆಗಳನ್ನು ಈಡೇರಿಸಬೇಕಾದುದು ಸರ್ಕಾ­ರದ ಕರ್ತವ್ಯ. ಹಾರುಬೂದಿ ಮಾಲಿನ್ಯ, ಜನರ ಆರೋಗ್ಯ ಇತ್ಯಾದಿ ವಿಚಾರ­ಗಳ ಬಗೆಗಿನ ಆತಂಕಗಳನ್ನು ನಿವಾರಿಸಿ ಜನರನ್ನು ವಿಶ್ವಾಸಕ್ಕೆ ತೆಗೆದು­ಕೊಂಡು ಯೋಜನೆಯನ್ನು ಮುಂದುವರಿಸಲು  ಗಮನ ಕೊಡ­ಬೇಕಾದುದು ತುರ್ತು ಅಗತ್ಯ.  ಈಗಾಗಲೇ ರಾಜ್ಯದಲ್ಲಿ  ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಇದರ ಪರಿಹಾರಕ್ಕೆ ವಿದ್ಯುತ್ ಉತ್ಪಾದನಾ ಯೋಜನೆಗಳು ಅವಶ್ಯ ಎಂಬು­ದನ್ನು ನಾವು ಮನಗಾಣಬೇಕು.

ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಿಂದ ಇನ್ನು 20 ದಿನ ಮಾತ್ರ ಜಲ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಇಂಧನ ಸಚಿವರು ಇದೇ ಸಂದರ್ಭ­ದಲ್ಲಿ ಹೇಳಿದ್ದಾರೆ. ರಾಜ್ಯದ ವಿದ್ಯುತ್ ಕೊರತೆ ನೀಗಲು  ಜಲ ವಿದ್ಯುತ್ ಯೋಜನೆಗಳು ಸಾಕಾಗುವುದಿಲ್ಲ ಎಂಬುದು ಗೊತ್ತಿರುವ ಸಂಗತಿ.   ಇನ್ನು ರಾಯಚೂರಿನಲ್ಲಿರುವ ಶಾಖೋತ್ಪನ್ನ ಘಟಕಗಳಲ್ಲಿ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಬರೀ ತತ್ಕಾಲದ ಉಪ­ಶಮನ ಕ್ರಮಗಳನ್ನಷ್ಟೇ ಸರ್ಕಾರ ಅನುಸರಿಸುತ್ತಿದ್ದರೆ ಪ್ರಯೋಜನವಿಲ್ಲ. ಹೊಸ ವಿದ್ಯುತ್ ಯೋಜನೆಗಳು ಅಸ್ತಿತ್ವಕ್ಕೆ ಬರದಿದ್ದಲ್ಲಿ ರಾಜ್ಯದ ವಿದ್ಯುತ್  ಪರಿ­ಸ್ಥಿತಿ ಶೋಚನೀಯವಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಬಗ್ಗೆಯೂ  ನಿರ್ದಿಷ್ಟ ನಿಲುವು ತಳೆಯಲು ಸರ್ಕಾರಕ್ಕೆ ಸಾಧ್ಯ­ವಾಗಿಲ್ಲ.  ರಾಜ್ಯ ಸರ್ಕಾರ ಅಪೇಕ್ಷೆ ಪಟ್ಟರೆ ಮಾತ್ರ ನಿಡ್ಡೋಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 

ಆದರೆ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ಒಮ್ಮತ­ವಿಲ್ಲದಿರುವುದು ವಿಷಾದನೀಯ. ಕರಾ­ವಳಿ ಜನರು ಹಾಗೂ ಜನಪ್ರತಿನಿಧಿ­ಗಳು ಸಹಕಾರ ನೀಡಿದರೆ ನಿಡ್ಡೋಡಿ­ಯಲ್ಲಿ ಶಾಖೋತ್ಪನ್ನ  ವಿದ್ಯುತ್ ಸ್ಥಾವರ  ಆರಂಭಿಸಲು ಅವಕಾಶವಿದೆ ಎಂಬಂ­ತಹ ಇಂಧನ ಸಚಿವರ ಮಾತಿಗೆ, ದಕ್ಷಿಣ ಕನ್ನಡ ಜಿಲ್ಲೆಯವರಾದ  ಸಚಿವ ಕೆ. ಅಭಯಚಂದ್ರ ಜೈನ್   ಕಳೆದ ವಾರವೂ ವಿಧಾನಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸಮುದ್ರಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣವಾದಲ್ಲಿ ಕಲ್ಲಿದ್ದಲು ಸಾಗಣೆ ವೆಚ್ಚ ತಗ್ಗಿಸ­ಬಹು­ದೆಂಬ ದೃಷ್ಟಿಯಿಂದ ನಿಡ್ಡೋಡಿ ಸ್ಥಾವರದ ಬಗ್ಗೆ ಸರ್ಕಾರ ಒಲವು ತೋರಿದೆ. ಇಂತಹ ವಿಚಾರಗಳಲ್ಲಿ ಅಭಿವೃದ್ಧಿ ದೃಷ್ಟಿಕೋನ ಮುಖ್ಯವಾಗ­ಬೇಕು.  ಪಕ್ಷಾತೀತ ಸಹಕಾರ  ಏರ್ಪಡಬೇಕಾದುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT