ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವೆಯ ಬಿಡಿಗಾಸು ಕಾಣಿಕೆ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಪತಿಯನ್ನು ಕಳೆದುಕೊಂಡು ಸಮಾಜವಿತ್ತ ವಿಧವೆಯೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡ ಮಹಿಳೆಯರ ಜೀವನದ ಪರಿಸ್ಥಿತಿಯು ಪ್ರಪಂಚದ ಯಾವುದೇ ಭಾಗದಲ್ಲಿಯಾಗಲಿ, ಯಾವುದೇ ಸಮಾಜದಲ್ಲಾಗಲಿ ಸಾಧಾರಣವಾಗಿ ಒಂದೇ ರೀತಿಯದ್ದಾಗಿರುತ್ತದೆ. ಅವಳೊಂದು ಕೊನೆಗೊಂಡ ಅಧ್ಯಾಯ, ‘ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುತ್ತದೆ. ನಮ್ಮ ಭಾರತ ದೇಶದಲ್ಲಂತೂ ಅವಳನ್ನು ರೀತಿ-ರಿವಾಜುಗಳಿಂದ ಹೆಡೆಮುರಿ ಕಟ್ಟಿ ಮಿಸುಕಾಡದಂತಹ ಪರಿಸ್ಥಿತಿ ಇದೆ. ಅವಳ ಬಿಡುಗಡೆಗಾಗಿ ಬಹಳಷ್ಟು ಮಹನೀಯರು, ಮಹಿಳೆಯರು ಪ್ರಯತ್ನ ಪಟ್ಟಿದ್ದರಾದರೂ, ಹೆಚ್ಚೇನೂ ಬದಲಾವಣೆ ಆಗಿಲ್ಲ.

ಜೆರುಸಲೇಮಿನ ಮಹಾದೇವಾಲಯದ ಹುಂಡಿಗೆ ಬಹಳಷ್ಟು ಹಣ, ಒಡವೆ, ಇನ್ನಿತರ ಬೆಲೆಬಾಳುವ ವಸ್ತುಗಳು ಬೀಳುತ್ತಿದ್ದವು. ಶ್ರೀಮಂತರು ತಮ್ಮ ಆಸ್ತಿ-ಆದಾಯದ ಒಂದು ಭಾಗವನ್ನು ಹುಂಡಿಗೆ ಕಾಣಿಕೆಯಾಗಿ ಹಾಕುತ್ತಿದ್ದರು. ಈ ಶ್ರೀಮಂತರ ಸಾಲಿನ ಕೊನೆಯಲ್ಲಿ ಮುಜುಗರದಿಂದ ಹುಂಡಿಯನ್ನು ಸಮೀಪಿಸಿದ ಕೃಶಕಾಯದ ವಿಧವೆಯೊಬ್ಬಳು ತನ್ನ ವಸ್ತ್ರದ ಚುಂಗಿನಲ್ಲಿ ಜೋಪಾನವಾಗಿ ಕಟ್ಟಿರಿಸಿದ್ದ ತಾಮ್ರದ ಎರಡು ನಾಣ್ಯಗಳನ್ನು ಹುಂಡಿಯಲ್ಲಿ ಹಾಕಿ ಭಯಭಕ್ತಿಯಿಂದ ಹೊರಟು ಹೋದಳು. ಇದನ್ನು ಗಮನಿಸಿದ ಯೇಸುಸ್ವಾಮಿ ಬೆರಗುಗೊಂಡರು. ತಮ್ಮ ಶಿಷ್ಯರೆಡೆಗೆ ತಿರುಗಿ ಅವರೆಂದರು, ಈ ಬಡವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.

ಶ್ರೀಮಂತರು ತಮ್ಮ ಆಸ್ತಿಯಲ್ಲಿ ಒಂದಿಷ್ಟನ್ನು ಹಾಕಿದರೆ, ಬಡ ವಿಧವೆ ತನ್ನಲ್ಲಿದ್ದುದನ್ನೆಲ್ಲಾ ಹುಂಡಿಗೆ ಹಾಕಿದ್ದರಿಂದ ಯೇಸುಸ್ವಾಮಿ ಆ ಮಾತನ್ನು ಆಡಿದರು ಎಂಬುದು ತಕ್ಷಣಕ್ಕೆ ಮನದಟ್ಟಾಗುವ ಸತ್ಯ. ಆದರೆ ಯೇಸುಸ್ವಾಮಿ ಆಡಿದ ಮಾತುಗಳ ಅರ್ಥ ಇನ್ನೂ ಗಾಢ. ತನ್ನ ಯಾವುದೇ ತಪ್ಪು, ಪಾಪವಿಲ್ಲದೆ ಅನಿರೀಕ್ಷಿತವಾಗಿ ಪತಿಯನ್ನು ಕಳೆದುಕೊಳ್ಳುವ ಮಹಿಳೆ ಬಹಳ ವಿಷಮ ಪರಿಸ್ಥಿತಿಯಲ್ಲಿ ಸಿಲುಕುತ್ತಾಳೆ. ಕುಟುಂಬದ ಆದಾಯ, ಆಗುಹೋಗುಗಳನ್ನು ಸಂಪೂರ್ಣವಾಗಿ ನಿಭಾಯಿಸಿ, ಎಂಥಹ ಕಷ್ಟಕಾಲದಲ್ಲೂ ಧೃತಿಗೆಡದೆ ಮುನ್ನಡೆಸುತ್ತಿದ್ದ ಮನೆಯ ಯಜಮಾನ, ತನ್ನ ಪತಿ, ಅಕಸ್ಮಾತ್ ಗತಿಸಿಹೋದ ಪರಿಸ್ಥಿತಿಯನ್ನು ನಿಭಾಯಿಸುವುದು ಅವಳಿಗೆ ಅಸಾಧ್ಯವಾದ ಕೆಲಸ.

ಮಕ್ಕಳ ಲಾಲನೆ-ಪಾಲನೆ, ವಿದ್ಯಾಭ್ಯಾಸ, ಭವಿಷ್ಯ ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಎಲ್ಲವನ್ನು ಪತಿಯ ಸುಪರ್ದಿಗೆ ನೀಡಿದ್ದ ಅವಳಿಗೆ ಈಗ ಈ ಎಲ್ಲಾ ಜವಾಬ್ದಾರಿಗಳು ಹೆಗಲೇರಿ, ಬಂಡೆಯ ಭಾರದಡಿ ಚಡಪಡಿಸುವಂತಾಗುತ್ತಾಳೆ. ಇಂಥಹ ವಿಷಮ ಪರಿಸ್ಥಿತಿಯಲ್ಲಿದ್ದರೂ, ಮನೆಯ ಯಜಮಾನನಾಗಿ, ಮಕ್ಕಳಿಗೆ ಅಪ್ಪಾ-ಅಮ್ಮಾ ಎರಡೂ ಆಗಿ, ಧೈರ್‍ಯದಿಂದ ತನ್ನ ಕುಟುಂಬವನ್ನು ಮುನ್ನಡೆಸುವ ಅವಳ ಎದೆಗಾರಿಕೆಯು ನಿಜವಾಗಿಯೂ ಅಲೌಕಿಕ. ‘ಹೆಣ್ಣು ಅಬಲೆ ಎಂಬ ಹಣೆಪಟ್ಟಿಯನ್ನು ಕಿತ್ತೊಗೆದು ಆದರ್ಶ ಪ್ರಾಯವಾಗುತ್ತಾಳೆ. ಪತಿಯ ಅನುಪಸ್ಥಿತಿಯಲ್ಲಿ, ಸಮಾಜ ಅವಳಿಗೆ ವಿಧವೆ ಎಂದು ಕ್ಷುಲ್ಲಕವಾಗಿ ಕರೆದು ಹೀಯಾಳಿಸಿದರೂ, ಅವಳು ತನ್ನ ಕುಟುಂಬದ ಏಳಿಗೆಗಾಗಿ ಇತರ ಎಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸುತ್ತಾಳೆ.

ಸಮಾಜವು ವಿಧವೆಯೆಂದು ಹೀಯಾಳಿಸಿದ ಬಡ ಮಹಿಳೆಯಲ್ಲಿ ಯೇಸುಸ್ವಾಮಿ ಶ್ರೇಷ್ಠತನವನ್ನು ಕಂಡುಕೊಂಡರು. ನಮ್ಮೀ ಸುಸಂಸ್ಕೃತ ಸಮಾಜವು ವಿಧವೆಯರಲ್ಲಿ ಶ್ರೇಷ್ಠತನವನ್ನು ಕಾಣಲಾರದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT