ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ್ ಬಳಗದ ಗೆಲುವಿನ ಕನಸು ಭಗ್ನ

ರಣಜಿ: ಬೌಲರ್‌ಗಳ ಬೆವರಿಳಿಸಿದ ಶೋರೆ – ರಾಣ ದ್ವಿಶತಕದ ಜೊತೆಯಾಟ
Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶ್ರಮವೆಲ್ಲ ವ್ಯರ್ಥವಾಯಿತು. ನಿರೀಕ್ಷೆಗಳನ್ನು ಬುಡಮೇಲು ಮಾಡಿದ ದೆಹಲಿ ಬ್ಯಾಟ್ಸ್‌ಮನ್‌ಗಳು ಕರ್ನಾಟಕದ ಬೌಲರ್‌ಗಳನ್ನು ದಿನವಿಡೀ ಕಾಡಿದರು; ಆತಿಥೇಯರ ಜಯದ ಆಸೆಯನ್ನು ಕಸಿದುಕೊಂಡರು.

ಈ ಮೂಲಕ ರಣಜಿ ಟೂರ್ನಿಯ ಎ ಗುಂಪಿನಲ್ಲಿ ನಾಕೌಟ್ ಹಂತ ಪ್ರವೇಶಿಸುವ ಕನಸನ್ನು ಜೀವಂತ ವಿರಿಸಿಕೊಂಡ ದೆಹಲಿ ಕರ್ನಾಟಕದ ಹಾದಿಯನ್ನು ಕಠಿಣಗೊಳಿಸಿತು.

ಇಲ್ಲಿನ ರಾಜನಗರದ ಕೆ.ಎಸ್‌.ಸಿ.ಎ ಮೈದಾನದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಗುರುವಾರ ಇನಿಂಗ್ಸ್‌ ಜಯದ ಕನಸಿನೊಂದಿಗೆ ಕರ್ನಾಟಕ ಅಂಗಳಕ್ಕೆ ಇಳಿದಿತ್ತು. ಬುಧ ವಾರ ಫಾಲೊ ಆನ್‌ಗೆ ಗುರಿಯಾಗಿದ್ದ ದೆಹಲಿ 13 ಓವರ್‌ಗಳಲ್ಲಿ 22 ರನ್‌ ಗಳಿಸಿತ್ತು. ಇನಿಂಗ್ಸ್‌ ಸೋಲಿನಿಂದ ತಪ್ಪಿಸಿ ಕೊಳ್ಳಬೇಕಾದರೆ ಅಂತಿಮ ದಿನ ಗರಿಷ್ಠ 91 ಓವರ್‌ಗಳಲ್ಲಿ 220 ರನ್‌ ಗಳಿಸ ಬೇಕಾಗಿತ್ತು.

ದಿನದಾಟ ಮುಕ್ತಾಯ ಗೊಂಡಾಗ ಕೇವಲ 2 ವಿಕೆಟ್ ಕಳೆದು ಕೊಂಡು 290 ರನ್‌ ಗಳಿಸಿದ ತಂಡ ಎದುರಾಳಿಗಳಿಗೆ ಕೇವಲ 3 ಪಾಯಿಂಟ್‌ ಬಿಟ್ಟುಕೊಟ್ಟು ಒಂದು ಪಾಯಿಂಟ್‌ ಅನ್ನು ಬುಟ್ಟಿಗೆ ಹಾಕಿಕೊಂಡಿತು. ಶತಕ ವೀರರಾದ ಧ್ರುವ ಶೋರೆ ಮತ್ತು ನಿತೀಶ್‌ ರಾಣ ಮೂರನೇ ವಿಕೆಟ್‌ಗೆ ಸೇರಿಸಿದ 240 ರನ್‌ ಪಂದ್ಯ ವನ್ನು ದೆಹಲಿಯತ್ತ ವಾಲಿಸಿತು.  

ನಾಲ್ವರು ವೇಗಿಗಳು ಮತ್ತು ಒಬ್ಬ ಲೆಗ್‌ ಸ್ಪಿನ್ನರ್‌ ದಾಳಿಯನ್ನು ಎದುರಿಸಿ ದಿನವಿಡೀ ಬ್ಯಾಟಿಂಗ್‌ ಮಾಡಬೇಕಾಗಿದ್ದ ಅನಿವಾರ್ಯ ಸ್ಥಿತಿಯಲ್ಲಿ ದೆಹಲಿ ಆತಂಕ ದಿಂದಲೇ ಬ್ಯಾಟಿಂಗ್‌ ಆರಂಭಿಸಿತ್ತು. ದಿನದ ಐದನೇ ಓವರ್‌ನಲ್ಲಿ ನಾಯಕ ಗೌತಮ್‌ ಗಂಭೀರ್‌ ವಿಕೆಟ್‌ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು. ಶ್ರೀನಾಥ ಅರವಿಂದ ಅವರ ಎಸೆತದಲ್ಲಿ ವಿಕೆಟ್‌ ಕೀಪರ್‌ ಸಿ.ಎಂ.ಗೌತಮ್‌ಗೆ ಸುಲಭ ಕ್ಯಾಚ್ ನೀಡಿದ ಗಂಭೀರ್‌ ಬುಧವಾರ ಗಳಿಸಿದ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ಔಟಾದರು.

ಆಕ್ರಮಣಕಾರಿ ಫೀಲ್ಡಿಂಗ್‌ ಬಲೆ ಹೆಣೆದು ಪರಿಣಾಮಕಾರಿ ಬೌಲಿಂಗ್ ಮಾಡಿದ ವಿನಯ ಕುಮಾರ್‌ ಬಳಗ ದವರು ಎಲ್‌.ಬಿ.ಡಬ್ಲ್ಯುಗೆ ನಿರಂತರ ಮನವಿ ಮಾಡಿ ಅಂಗಳದಲ್ಲಿ ‘ಸದ್ದು’ ಮಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ ಉನ್ಮುಕ್ತ್‌ ಚಾಂದ್‌ ಮತ್ತು ಧ್ರುವ ಶೋರೆ ಮೊದಲ ಪಾನೀಯ ವಿರಾಮದ ವರೆಗೆ ಈ ಒತ್ತಡವನ್ನು ಮೆಟ್ಟಿ ನಿಂತರು. ಪಾನೀಯ ಸೇವನೆ ನಂತರದ ಮೂರನೇ ಓವರ್‌ನಲ್ಲಿ ದೆಹಲಿಗೆ ಅರವಿಂದ ಮತ್ತೊಂದು ಆಘಾತ ನೀಡಿದರು. ಉನ್ಮುಕ್ತ್ ಚಾಂದ್‌ ಎಲ್‌.ಬಿ.ಡಬ್ಲ್ಯು ಬಲೆಗೆ ಬಿದ್ದರು.

ಸುದೀರ್ಘ ಇನಿಂಗ್ಸ್‌: ಕರ್ನಾಟಕದ ಆಟ ಗಾರರು ಮತ್ತು 200ರಷ್ಟಿದ್ದ ಪ್ರೇಕ್ಷಕರ ಸಂಭ್ರಮ ಅಷ್ಟಕ್ಕೇ ಕೊನೆಗೊಂಡಿತು. ಧ್ರುವ ಶೋರೆ ಅವರನ್ನು ಸೇರಿಕೊಂಡ ಎಡಗೈ ಬ್ಯಾಟ್ಸ್‌ಮನ್‌ ನಿತೀಶ್‌ ರಾಣ ಕರ್ನಾಟಕದ ಗೆಲುವಿನ ಆಸೆಯನ್ನು ಚಿವುಟಿ ಹಾಕಿದರು. ಪಂದ್ಯದ ಗತಿಯನ್ನು ಬದಲಿಸಿದ ಈ ಜೋಡಿ ಕೊನೆ ಕೊನೆಗೆ ಬೌಲರ್‌ಗಳು ಪಂದ್ಯದ ಮೇಲೆ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದರು.

ಎಚ್ಚರಿಕೆಯಿಂದಲೇ ಬ್ಯಾಟ್‌ ಬೀಸಿದ ಇವರಿಬ್ಬರು ಇನಿಂಗ್ಸ್‌ನ 37ನೇ ಓವರ್‌ ನಲ್ಲಿ ಮೊದಲ ದಿನದ ಮೊದಲ ಬೌಂಡರಿ ಗಳಿಸಿದರು. ಅರವಿಂದ ಹಾಕಿದ ಈ ಓವರ್‌ನಲ್ಲಿ ಫ್ಲಿಕ್ ಮತ್ತು ಲೇಟ್‌ ಕಟ್‌ ಮೂಲಕ ಎರಡು ಬೌಂಡರಿ ಚಚ್ಚಿದ ರಾಣ ಬೌಲರ್‌ಗಳ ಮೇಲೆ ಹಿಡಿತ ಸಾಧಿ ಸಿದ ಸೂಚನೆ ನೀಡಿದರು. 39ನೇ ಓವರ್‌ ನಲ್ಲಿ ಶೋರೆ ಕೂಡ ಬೌಂಡರಿ ಗಳಿಸಿ ದರು. 41ನೇ ಓವರ್ ಹಾಕಿದ ವಿನಯ್‌ ಎರಡು ಬೌಂಡರಿ ಬಿಟ್ಟುಕೊಟ್ಟರು.

ಇಲ್ಲಿಂದ ಕರ್ನಾಟಕ ತಂಡದ ಸಂಕಷ್ಟ ಆರಂಭಗೊಂಡಿತು. ನಂತರ ನಾಯಕ ವಿವಿಧ ತಂತ್ರಗಳ ಮೊರೆ ಹೋದರು. ನಾಲ್ವರು ವೇಗಿಗಳು ಸ್ಪಿನ್‌ ಬೌಲಿಂಗ್ ಮಾಡಿದರು; ಆಫ್‌ ಸ್ಪಿನ್ನರ್‌ ಆರ್‌.ಸಮರ್ಥ್‌ ಮಧ್ಯಮ ವೇಗಿಯಾ ದರು. ಸಿ.ಎಂ.ಗೌತಮ್‌ ವಿಕೆಟ್‌ ಕೀಪಿಂಗ್ ಪ್ಯಾಡ್‌ ಬಿಚ್ಚಿಟ್ಟು ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್‌ ಮಾಡಿದರು. ಮನೀಶ್‌ ಪಾಂಡೆ ಮತ್ತು ಮಯಂಕ್‌ ಅಗರವಾಲ್‌ ವಿಕೆಟ್‌ ಕೀಪಿಂಗ್‌ ಮಾಡಿದರು.

ಆದರೆ ಇದ್ಯಾವುದಕ್ಕೂ ಫಲ ಸಿಗಲಿಲ್ಲ. ಶೋರೆ ಮತ್ತು ರಾಣ ರನ್‌ ಗಳಿ ಸುತ್ತ ಸಾಗಿದರು. ಭೋಜನ ವಿರಾಮದ ನಂತರ 58ನೇ ಓವರ್‌ನಲ್ಲಿ ರಾಣ ಮತ್ತು 59ನೇ ಓವರ್‌ನಲ್ಲಿ ಶೋರೆ ಅರ್ಧ ಶತಕ ಪೂರೈಸಿದರು. ತಂಡ 200 ರನ್‌ ಗಳಿಸುವ ಮುನ್ನ ರಾಣ 2 ಸಿಕ್ಸರ್ ಎತ್ತಿದರು. ಅಭಿಮನ್ಯು ಮಿಥುನ್‌ ಅವರ ‘ಸ್ಪಿನ್’ ಎಸೆತವನ್ನು ಕಟ್ ಮಾಡಿ ಬೌಂಡರಿಗೆ ಅಟ್ಟಿದ ರಾಣ ವೈಯಕ್ತಿಕ ಶತಕ ಪೂರೈಸಿದರು. ಮೂರಂಕಿ ತಲುಪಲು 137 ಎಸೆತ ಎದುರಿಸಿದ ಅವರು 14 ಬಾರಿ ಚೆಂಡನ್ನು ಬೌಂಡರಿಗೆ ಕಳುಹಿಸಿದ್ದರು.

ಚಹಾ ವಿರಾಮದ ನಂತರ ಎರಡನೇ ವಿಕೆಟ್‌ಗೆ 200 ರನ್‌ಗಳ ಜೊತೆಯಾಟ ಪೂರೈಸಿದ ಬೆನ್ನಲ್ಲೇ ಶೋರೆ ಕೂಡ ಮೂರಂಕಿ ದಾಟಿದರು. 206 ಎಸೆತ ಗಳಲ್ಲಿ ಶತಕ ಗಳಿಸಿದ ಅವರು 14 ಬೌಂಡರಿ ಗಳಿಸಿದ್ದರು. ಚಹಾ ವಿರಾಮದ ನಂತರ 50 ನಿಮಿಷಗಳಲ್ಲಿ ಕಡ್ಡಾಯ ಓವರ್‌ಗಳು ಆರಂಭವಾಗಬೇಕಾಗಿತ್ತು. ಆದರೆ ಅಷ್ಟರಲ್ಲಿ ಉಭಯ ನಾಯಕರ ಜೊತೆ ಚರ್ಚಿಸಿದ ಅಂಪೈರ್‌ಗಳು ಪಂದ್ಯವನ್ನು ಮುಕ್ತಾಯಗೊಳಿಸಿದರು.  ಅಲ್ಲಿಗೆ ಶೋರೆ ಮತ್ತು ರಾಣ ನಡುವಿನ ಸುದೀರ್ಘ ಇನಿಂಗ್ಸ್‌ಗೆ ತೆರೆ ಬಿತ್ತು. ಒಟ್ಟು 209 ನಿಮಿಷ ಕ್ರೀಸ್‌ನಲ್ಲಿದ್ದ ಈ ಜೋಡಿ 356 ಎಸೆತಗಳನ್ನು ಎದುರಿಸಿದ್ದರು. ಶೋರೆ 107 (284 ನಿಮಿಷ. 226 ಎಸೆತ; 14 ಬೌಂಡರಿ) ಮತ್ತು ರಾಣ 132 (209 ನಿಮಿಷ. 175 ಎಸೆತ; 2 ಸಿಕ್ಸರ್‌, 19 ಬೌಂ) ರನ್‌ ಗಳಿಸಿದರು.

ಕರ್ನಾಟಕ ಮೊದಲ ಇನಿಂಗ್ಸ್‌  542 (149 ಓವರ್‌ಗಳಲ್ಲಿ)
ದೆಹಲಿ ಪ್ರಥಮ ಇನಿಂಗ್ಸ್‌  301 (104.1  ಓವರ್‌ಗಳಲ್ಲಿ)
ದೆಹಲಿ ಎರಡನೇ ಇನಿಂಗ್ಸ್‌  290ಕ್ಕೆ 2 (92 ಓವರ್‌ಗಳಲ್ಲಿ)

(ಬಧವಾರದ ಅಂತ್ಯಕ್ಕೆ 13 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 22)
ಉನ್ಮುಕ್ತ್‌ ಚಾಂದ್‌ ಎಲ್‌.ಬಿ.ಡಬ್ಲ್ಯು ಬಿ. ಅರವಿಂದ  15
ಗೌತಮ್‌ ಗಂಭೀರ್‌ ಸಿ. ಸಿ.ಎಂ.ಗೌತಮ್‌ ಬಿ. ಅರವಿಂದ  15
ಧ್ರುವ್‌ ಶೋರೆ ಔಟಾಗದೆ  107
ನಿತೀಶ್ ರಾಣ ಔಟಾಗದೆ  132
ಇತರೆ:  (ಬೈ 8, ಲೆಗ್‌ಬೈ 9, ನೋಬಾಲ್‌ 2, ವೈಡ್‌ 2)  21
 
ವಿಕೆಟ್‌ ಪತನ: 1–25 (ಗೌತಮ್‌ ಗಂಭೀರ್‌, 17.4), 2–50 (ಉನ್ಮುಕ್ತ್‌ ಚಾಂದ್‌, 32.4)

ಬೌಲಿಂಗ್‌: ಆರ್‌.ವಿನಯಕುಮಾರ್‌ : 13–3–37–0, ಎಚ್‌.ಎಸ್‌.ಶರತ್‌ : 15–1–35–0 (2 ವೈಡ್‌), ಎಸ್‌.ಅರವಿಂದ : 19–6–39–2 (1 ನೋಬಾಲ್‌), ಅಭಿಮನ್ಯು ಮಿಥುನ್‌ 10–1–47–0, ಶ್ರೇಯಸ್‌ ಗೋಪಾಲ್‌ : 17–3–40–0, ಕರುಣ್‌ ನಾಯರ್‌ : 5–0–21–0. ಆರ್‌.ಸಮರ್ಥ್‌ 7–0–26–0 (1 ನೋಬಾಲ್‌), ಮಯಾಂಕ್‌ ಅಗರವಾಲ್‌ : 6–0–28–0

ಫಲಿತಾಂಶ: ಪಂದ್ಯ ಡ್ರಾ.
ಕರ್ನಾಟಕದ ಮುಂದಿನ ಪಂದ್ಯ: ಪುಣೆಯಲ್ಲಿ, ಮಹಾರಾಷ್ಟ್ರ ವಿರುದ್ಧ ಡಿಸೆಂಬರ್‌ 1ರಿಂದ

ಪಂದ್ಯಶ್ರೇಷ್ಠ: ಮಯಂಕ್‌ ಅಗರವಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT