ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಯ್ತಿ ಕೋರಿದ್ದ ಜಯಾ ಅರ್ಜಿ ವಜಾ

ಆದಾಯ ತೆರಿಗೆ ವಂಚನೆ ಪ್ರಕರಣ
Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸದ ಪ್ರಕರಣ ಕುರಿತ ವಿಚಾರಣೆಗೆ ಖುದ್ದು ಹಾಜರಿಗೆ ವಿನಾಯ್ತಿ ನೀಡುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸಲ್ಲಿಸಿದ ಅರ್ಜಿಯನ್ನು ಗುರುವಾರ ವಜಾ ಮಾಡಿರುವ ಕೋರ್ಟ್‌, ಇದೇ 10ಕ್ಕೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದರಿಂದ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಿಗೆ ತೀವ್ರ ಹಿನ್ನಡೆಯಾಗಿದೆ.

‘ಆರೋಪಿಯ ಈ ಅರ್ಜಿಯು ಕಾನೂನಿನಡಿಯಲ್ಲಿ ಸಮರ್ಥನೀಯವಲ್ಲ’ ಎಂದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಕೋರ್ಟ್‌ನ (ಎಸಿಎಂಎಂ) ನ್ಯಾಯಾಧೀಶ ಆರ್‌. ದಕ್ಷಿಣಾಮೂರ್ತಿ ಅವರು, ‘ನ್ಯಾಯಾಲಯದ ಸೂಚನೆ ಉಪೇಕ್ಷಿಸಿದರೆ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಿಡುವು ಸಿಗದ ಕಾರಣ ಖುದ್ದು ಹಾಜರಿಗೆ ವಿನಾಯ್ತಿ ನೀಡಬೇಕು ಎಂದು ಜಯಲಲಿತಾ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಹಿನ್ನೆಲೆ: 1993–94ನೇ ಸಾಲಿನ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸದ ಆರೋಪದ ಮೇಲೆ ಜಯಲಲಿತಾ ಮತ್ತು ಅವರ  ಆಪ್ತ ಗೆಳತಿಯಾಗಿದ್ದ ಶಶಿಕಲಾ ನಟರಾಜನ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಏ.3ರಂದು ನಡೆಯುವ ಈ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೋರ್ಟ್‌ ಮಾರ್ಚ್‌ 20ರಂದು ಸೂಚಿಸಿತ್ತು. ಆದರೆ, ಜಯಲಲಿತಾ ಅವರು ಸ್ವಯಂ ಹಾಜರಾಗುವ ಬದಲು  ತಮ್ಮ ಪರ ವಕೀಲರಾದ ಬಿ. ಕುಮಾರ್‌ ಅವರ ಮೂಲಕ ಖುದ್ದು ಹಾಜರಿಗೆ ವಿನಾಯ್ತಿ ನೀಡುವಂತೆ ಕೋರಿ ಈ ಅರ್ಜಿ ಸಲ್ಲಿಸಿದ್ದರು.

ಸಹ ಆರೋಪಿ ಶಶಿಕಲಾ ಕೂಡ ಅನಾರೋಗ್ಯದ ಕಾರಣ ನೀಡಿ ಹಾಜರಾಗಿರಲಿಲ್ಲ. ಶಶಿಕಲಾ ಅವರು ನೀಡಿದ ಕಾರಣವನ್ನು ಮಾನ್ಯ ಮಾಡಿದ ನ್ಯಾಯಾಲಯ, ಏ. 10ರಂದು ತಪ್ಪದೆ ಹಾಜರಾಗುವಂತೆ ಸೂಚಿಸಿದೆ.

ಖುದ್ದು ಹಾಜರಿಗೆ ವಿನಾಯಿತಿ
ಬೆಂಗಳೂರು
: ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು  ಶನಿವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಿಲ್ಲ.

ಆದರೆ ಜಯಲಲಿತಾ ಅವರ  ಆಪ್ತರಾಗಿರುವ ಶಶಿಕಲಾ, ಇಳವರಸಿ ಮತ್ತು ಸುಧಾಕರ್‌  ಮಾತ್ರ ಖುದ್ದಾಗಿ ಹಾಜರಿರಬೇಕು ಎಂದು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಎಂ. ಕುನ್ಹಾ ಗುರುವಾರ ಆದೇಶಿಸಿದ್ದಾರೆ.

ಜಯಲಲಿತಾ ಅವರೂ ವಿಚಾರಣೆ ವೇಳೆ ಹಾಜರಿರಬೇಕು ಎಂದು ನ್ಯಾಯಾಧೀಶರು ಮೊದಲು ಸೂಚಿಸಿದ್ದರು. ಆದರೆ ಭದ್ರತೆಯ ಕಾರಣದಿಂದ ಜಯಲಲಿತಾ ಅವರಿಗೆ ಮಾತ್ರ ವಿನಾಯಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT