ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋದನ ಸಿನಿ ಚಾರಣ...

Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇಪ್ಪತ್ತೆರಡನೇ ವಯಸ್ಸಿನಲ್ಲಿಯೇ ನಾಲ್ಕು ಪದವಿಗಳ ಪ್ರಮಾಣ ಪತ್ರಗಳನ್ನು ಗಿಟ್ಟಿಸಿಕೊಂಡಿದ್ದ ವಿನೋದ್ ರಾಜೇಂದ್ರ ಆರಾಮಾಗಿ ವ್ಹೈಟ್ ಕಾಲರ್ ನೌಕರಿ ಹಿಡಿದು ಕೈ ತುಂಬ ಹಣ ಸಂಪಾದಿಸುವ ಎಲ್ಲ ದಾರಿಗಳನ್ನೂ ಸುಗಮವಾಗಿಸಿಕೊಂಡಿದ್ದರು. ವಿನೋದ್ ಪಾಲಿಗೆ ಓದು ಉದ್ಯೋಗ ಪಡೆವ ಸಾಧನವಷ್ಟೇ ಆಗಿದ್ದರೆ ಅವರ ಕಥೆ ಇಂದು ಬೇರೆಯದ್ದೇ ಆಗಿರುತ್ತಿತ್ತು.  ಆದರೆ ಸಿನಿಮಾ ಮೋಹದಿಂದಾಗಿ, ನಾಲ್ಕು ಪದವಿಗಳನ್ನೂ ಬದಿಗಿಟ್ಟು ಮತ್ತೊಂದು ಪದವಿಯ ಬೆನ್ನು ಹತ್ತಿದರು.

ಈ ಐದನೇ ಪದವಿ ಅವರ ನಿಜವಾದ ಆಸಕ್ತಿಯನ್ನು ಪೋಷಿಸುವ ವಿದ್ಯಾರ್ಹತೆಯಾಗಿತ್ತು. ಸಿನಿ ಪ್ರಪಂಚ ಒಂದು ಬಗೆಯ ಹುಚ್ಚು. ಆ ಹುಚ್ಚುತನದ ಬೆನ್ನು ಹತ್ತಿದವರಿಗೆ ಏನೇ ಆದರೂ ಅಲ್ಲಿಂದ ಇಳಿಯುವುದು ಕಷ್ಟ. ಸೋಲಿರಲಿ, ಗೆಲುವಿರಲಿ, ನೋವಿರಲಿ, ನಲಿವಿರಲಿ ಎಲ್ಲವನ್ನೂ ಇಲ್ಲೇ ಕಾಣುತ್ತೇನೆ ಎನ್ನುವಷ್ಟು ಮೋಹ ಅವರಿಗೆ ಸಿನಿಮಾ ಕ್ಷೇತ್ರದ ಮೇಲೆ. ಕಲೆಯ ಮಟ್ಟಿಗೆ ಆ ಬಗೆಗಿನ ಹುಚ್ಚುತನವನ್ನು ಪೋಷಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ. ಅದು ಕೊಡುವ ತೃಪ್ತಿಯೂ ದೊಡ್ಡದು. ಹೀಗೆಯೇ ಸಿನಿಮಾ ಕುರಿತಾದ ಅಪಾರ ಪ್ರೀತಿಯನ್ನೇ ಜೀವಕ್ಕಂಟಿಸಿಕೊಂಡ ಯುವಕ ಈ ವಿನೋದ್.

ಈಗಿನ್ನೂ ಇಪ್ಪತ್ತನಾಲ್ಕು ವರ್ಷದ ವಿನೋದ್ ತಮ್ಮ ‘ಆರ್‌ವಿ ಫಿಲಮ್ಸ್’ ಮುಖಾಂತರ ಈಗಾಗಲೇ ಏಳು ಕಿರುಚಿತ್ರ, ಒಂದು ಸಾಕ್ಷ್ಯಚಿತ್ರ ಹಾಗೂ ಜಾಹೀರಾತನ್ನೂ ನಿರ್ಮಿಸಿದ್ದಾರೆ. ಅವರ ಪ್ರಯತ್ನದ ಕೂಸುಗಳಾದ ಈ ದೃಶ್ಯಿಕೆಗಳು ಪ್ರತಿಫಲವಾಗಿ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ತಂದಿತ್ತಿವೆ. ಅದಕ್ಕೂ ಮಿಗಿಲಾದ ಸಂಗತಿಯೆಂದರೆ ಕಿರುಚಿತ್ರವೊಂದಕ್ಕೆ ಅವರೇ ರಚಿಸಿದ ಚಿತ್ರಕಥೆಯು ‘ಆಸ್ಕರ್’ ಗ್ರಂಥಾಲಯದಲ್ಲಿ ಸ್ಥಾನ ಗಿಟ್ಟಿಸಿದೆ.

ಐದು ಪದವಿಗಳು ಜೋಳಿಗೆಯಲ್ಲಿ
ವಿನೋದ್ ಹುಟ್ಟಿ ಬೆಳೆದಿದ್ದು ಆಂಧ್ರಪ್ರದೇಶದ ಹಿಂದೂಪುರದಲ್ಲಿ. ಅಲ್ಲಿನ ‘ಬಿಐಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯಲ್ಲಿ ಬಿ.ಟೆಕ್ ಪದವಿ ಪೂರೈಸುತ್ತಲೇ ಅಣ್ಣಾಮಲೈ ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಿಂದ ಮನಃಶಾಸ್ತ್ರ ವಿಷಯದಲ್ಲಿ ಪದವಿ ಗಳಿಸಿದರು. ಅದೇ ವಿಶ್ವವಿದ್ಯಾಲಯದಿಂದ ಆನ್ವಯಿಕ ಮನಃಶಾಸ್ತ್ರದಲ್ಲಿ ಎಂ.ಎಸ್ಸಿಯನ್ನೂ ದೂರಶಿಕ್ಷಣ ಮಾದರಿಯಲ್ಲಿಯೇ ಮುಗಿಸಿಕೊಂಡರು.

ಅವರ ಆಸಕ್ತಿ ಕ್ಷೇತ್ರಗಳಲ್ಲಿ ಮನೋವಿಜ್ಞಾನವೂ ಒಂದು. ಮುಂದೆ ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ತವರಿನಿಂದ ಬೆಂಗಳೂರಿಗೆ ಬಂದು ವ್ಹಿಜ್‌ಟೂನ್ ಮೀಡಿಯಾ ಅಂಡ್ ಡಿಸೈನ್ ಕಾಲೇಜಿನಲ್ಲಿ ಎಂ.ಎಸ್್ಸಿ ಮಲ್ಟಿಮೀಡಿಯಾ ಟೆಕ್ನಾಲಜಿ ಕೋರ್ಸ್ ಸೇರಿದ ವಿನೋದ್ ಇತ್ತೀಚೆಗಷ್ಟೇ ಐದನೇ ಪದವಿ ಮುಗಿಸಿದ್ದಾರೆ. ಅವರ ಬದುಕಿನ ಮಹತ್ವದ ಪುಟಗಳು ತೆರೆದುಕೊಳ್ಳಲಾರಂಭಿಸಿದ್ದು ಬೆಂಗಳೂರಿನಿಂದಲೇ. ಇಲ್ಲಿಯೇ ಅವರು ಕಿರುಚಿತ್ರ ನಿರ್ಮಾಣಕ್ಕೆ ತೊಡಗಿದ್ದು.

ನಿರ್ಮಾಣ ಸಂಸ್ಥೆ ಆರ್‌ವಿ ಫಿಲಮ್ಸ್
ಕಲ್ಪನಾ ಲೋಕವೆಂದರೆ ವಿನೋದ್‌ಗೆ ಚಿಕ್ಕಂದಿನಿಂದಲೂ ಆಪ್ತ. ಆ ಸಾಗರದಲ್ಲಿ ವಿಹಾರ ಮಾಡಲು ಅವರು ಆಯ್ದುಕೊಂಡಿದ್ದು ಸಿನಿ ಮಾಧ್ಯಮವನ್ನು. ಸಿನಿಮಾ ಮಾಡಬೇಕು ಎಂಬುದು ಅವರ ಮಹತ್ತರ ಕನಸು. ಈ ಕನಸನ್ನು ಸಾಕಾರಗೊಳಿಸಿಕೊಳ್ಳಲು ಹೊರಟ ವಿನೋದ್ ಎಂಟು ಜನ ಸ್ನೇಹಿತರ ತಂಡವೊಂದನ್ನು ಕಟ್ಟಿಕೊಂಡು ಸ್ವತಃ ಸಿನಿಮಾ ನಿರ್ಮಾಣಕ್ಕೆ ಮುಂದಾದರು.

ಅದರ ಮೊದಲ ಹಂತವಾಗಿ ಆರಂಭವಾಗಿದ್ದು ‘ಆರ್‌ವಿ ಫಿಲಮ್ಸ್’ ಎಂಬ ನಿರ್ಮಾಣ ಸಂಸ್ಥೆ. ರವಿ ಗೌಡ, ಪ್ರವೀಣ್ ಸಾಗರ್, ಪ್ರವೀಣ್ ಪೈ, ಪವನ್ ಕುಮಾರ್, ರವಿ ಕುಮಾರ್, ಸಂತೋಷ್ ರೆಡ್ಡಿ, ಪರಮೇಶ್ ಕಲ್ಯಾಣ್ ಈ ಗುಂಪಿನ ಸ್ವಯಂ ಪ್ರೇರಿತ ಸದಸ್ಯರು. ಇವರಲ್ಲಿ ಕೆಲವರು ವಿದ್ಯಾರ್ಥಿಗಳಿದ್ದರೆ ಮತ್ತೆ ಕೆಲವರು ಉದ್ಯೋಗಿಗಳು.

ಮೊದ ಮೊದಲು ತೀರಾ ಸಾಮಾನ್ಯ ವಿಚಾರಗಳನ್ನು ಆಯ್ದುಕೊಂಡು ಕಿರುಚಿತ್ರ ಹೆಣೆಯುವ ಕೆಲಸಕ್ಕೆ ವಿನೋದ್ ಕೈ ಹಾಕಿದರು. ಹೀಗೆ ತಯಾರಾದವುಗಳು ‘ಆ್ಯಸ್ ಫಾರ್ ಆ್ಯಸ್’, ‘ಫಿಯರ್’, ‘ಓವರ್ ರಿಯಾಕ್ಷನ್’ (ಈ ಮೂರರಲ್ಲೂ ಸಂಭಾಷಣೆ ಇಲ್ಲ), ‘ಪಯಣಂ’ ಮತ್ತು ‘ಎಕ್ಸಾಂ’. ಇವುಗಳಲ್ಲಿ ‘ಆ್ಯಸ್ ಫಾರ್ ಆ್ಯಸ್’ ಮತ್ತು ‘ಪಯಣಂ’ ಕೌಟುಂಬಿಕ ಬಾಂಧವ್ಯಗಳ ಕುರಿತಾದ್ದು.

ಹಾರರ್ ಕಿರುಚಿತ್ರ ‘ಫಿಯರ್’ ಮೂಲಕ ಭಯ ಪಡಿಸುವ ಪ್ರಯತ್ನ ಮಾಡಿದರು. ‘ಓವರ್ ರಿಯಾಕ್ಷನ್’ ಮತ್ತು ‘ಎಕ್ಸಾಂ’ ಹಾಸ್ಯದ ಹಿನ್ನೆಲೆಯಿರುವವು. ‘ಎಕ್ಸಾಂ’ ಕಿರುಚಿತ್ರವು ವಿನೋದ್ ಅವರ ಕಾಲೇಜಿನಲ್ಲಿ ನಡೆದ ‘ವ್ಹಿಜ್‌ಟೂನ್ ಫಿಲಮ್ಸ್’ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಗಳಿಸಿತು. ಅದು ವಿನೋದ್‌ಗೆ ಸಂದ ಮೊದಲ ಗೌರವವಾಗಿತ್ತು.

ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ, ‘ಬೆಂಗಳೂರು ಕಿರುಚಿತ್ರೋತ್ಸವ’ದಲ್ಲಿ ‘ಬೆಸ್ಟ್ ಎಮರ್ಜಿಂಗ್ ಪ್ರೊಡಕ್ಷನ್ ಹೌಸ್’, ಮುಂಬೈನಲ್ಲಿ ನಡೆದ ‘ಇಂಡಿಯನ್ ಸಿನಿ ಫಿಲ್ಮ್ ಫೆಸ್ಟಿವಲ್’ನಲ್ಲಿ ‘ಬೆಸ್ಟ್ ಪ್ರೊಡಕ್ಷನ್ ಹೌಸ್’ ಹಾಗೂ ‘ಮೂರನೇ ದೆಹಲಿ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ದಲ್ಲಿಯೂ ‘ಬೆಸ್ಟ್ ಪ್ರೊಡಕ್ಷನ್ ಹೌಸ್’ ಗೌರವಗಳು ‘ಆರ್‌ವಿ ಫಿಲಮ್ಸ್’ಗೆ ದಕ್ಕಿವೆ.

ಮುಂದಿನದು ‘ಚೇಂಜ್’
ಮೊದಲ ಪ್ರಶಸ್ತಿ ಕೈ ಸೇರುತ್ತಿದ್ದಂತೆ ವಿನೋದ್ ವಿಚಾರ ಲಹರಿ ಬದಲಾಗಿತ್ತು. ಇದುವರೆಗೆ ಮಾಡಿದಂತೆ ಸಾಮಾನ್ಯ ವಿಷಯಗಳ ಕುರಿತಾಗಿ ಚಿತ್ರ ಮಾಡುವುದಕ್ಕಿಂತ ಕೊಂಚ ಗಂಭೀರವಾದ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ಅವರ ನಿರ್ಧಾರದ ಮೊದಲ ಪ್ರಯತ್ನವಾಗಿ ಶುರುವಾಗಿದ್ದೇ ‘ಚೇಂಜ್’. ಇದರಲ್ಲಿ ಅವರು ಹೇಳ ಹೊರಟಿದ್ದು ಯುವ ಪೀಳಿಗೆಯ ಸಾಂಪ್ರದಾಯಿಕ ಚಿಂತನೆಗಳ ಹಿಂದಿನ ತರ್ಕ ಮತ್ತು ತತ್ವಗಳನ್ನು.

ಒಬ್ಬನೇ ಪಾತ್ರಧಾರಿ ಇದ್ದ ಈ ಕಿರುಚಿತ್ರವು ವಿನೋದ್‌ಗೆ ನಿರೀಕ್ಷೆಗೂ ಮೀರಿ ಯಶಸ್ಸು ತಂದುಕೊಟ್ಟಿತು. ಇದರಿಂದಾಗಿ ವಿನೋದ್ ಬದುಕಿನಲ್ಲಿ ಅಕ್ಷರಶಃ ‘ಬದಲಾವಣೆ’ ಉಂಟಾದವು. ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ನಡೆಸಿದ ‘ರಾಷ್ಟ್ರೀಯ ವಿದ್ಯಾರ್ಥಿ ಚಿತ್ರೋತ್ಸವ’ದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ‘ಚೇಂಜ್’ ಪಾತ್ರವಾಯಿತು. ಇದೇ ಚಿತ್ರಕ್ಕಾಗಿ ‘ಗುಜರಾತ್ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ದಲ್ಲಿ ವಿನೋದ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಲಭಿಸಿತು. ‘ಚೇಂಜ್’ ಕುರಿತಾದ ಇತ್ತೀಚಿನ ಸಿಹಿ ಸುದ್ದಿಯೆಂದರೆ ಇದರ ಚಿತ್ರಕಥೆಯು ‘ಆಸ್ಕರ್’ ಗ್ರಂಥಾಲಯವನ್ನು ಸೇರಿದ್ದು.

‘ಆಸ್ಕರ್’ ನಿಯಮದ ಪ್ರಕಾರ ಚಿತ್ರಕಥೆಯೊಂದು ಇಂಥ ಗೌರವಕ್ಕೆ ಪಾತ್ರವಾಗಬೇಕಾದರೆ ಅದು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಗಳಿಸಿರಬೇಕು ಅಥವಾ ಅಮೆರಿಕದಲ್ಲಿ ಚಿತ್ರ ತೆರೆ ಕಂಡಿರಬೇಕು. ‘ಆಸ್ಕರ್’ ಸಮಿತಿಗೆ ಇಷ್ಟವಾಗಬೇಕು. ‘ಆಸ್ಕರ್’ ಗ್ರಂಥಾಲಯದ ಗ್ರಂಥಪಾಲಕ ಗ್ರೇಗ್ ವಾಲ್ಷ್ ‘ಚೇಂಜ್’ ಚಿತ್ರ ವೀಕ್ಷಿಸಿ ಖುಷಿಗೊಂಡು ಈ ಸ್ಕ್ರಿಪ್ಟ್‌ಗೆ ಲೈಬ್ರರಿಯಲ್ಲಿ ಸ್ಥಾನ ಪಡೆವ ಎಲ್ಲ ಅರ್ಹತೆಗಳೂ ಇವೆ ಎಂದು ನಿರ್ಧರಿಸಿದ್ದರು. ‘ಆಸ್ಕರ್’ ಗ್ರಂಥಾಲಯ ಸೇರಿದ ದಕ್ಷಿಣ ಭಾರತದ ಮೊದಲ ಕಿರುಚಿತ್ರದ ಸ್ಕ್ರಿಪ್ಟ್ ಎಂಬ ಹೆಗ್ಗಳಿಕೆಯೂ ಇದರದ್ದಾಯಿತು.

ತಮ್ಮ ಸ್ಕ್ರಿಪ್ಟ್ ‘ಆಸ್ಕರ್’ ಸೇರಿದ್ದಕ್ಕೆ ವಿನೋದ್‌ಗೆ ಸಂತಸವಿದ್ದರೂ ಅದಕ್ಕಿಂತ ಖುಷಿ ಕೊಡುವ ವಿಚಾರವೊಂದಿದೆ. ಅದೆಂದರೆ, ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಚಿತ್ರೀಕರಣ ಮಾಡಲಾದ ಈ ಚಿತ್ರವನ್ನು ಕೆಲ ಪ್ರಾದೇಶಿಕ ಹಾಗೂ ವಿದೇಶಿ ಭಾಷೆಗಳು ಸೇರಿದಂತೆ ಒಟ್ಟು ಹನ್ನೊಂದು ಭಾಷೆಗೆ ಡಬ್ಬಿಂಗ್ ಮಾಡಿರುವುದು.

‘ಲೇಪಾಕ್ಷಿ’ಯ ಕೃಪಾಕಟಾಕ್ಷ
‘ಆರ್‌ವಿ ಫಿಲಮ್ಸ್’ ಮೂಲಕ ಇದುವರೆಗೆ ನಿರ್ಮಾಣವಾದ ಏಕೈಕ ಸಾಕ್ಷ್ಯಚಿತ್ರ ‘ಲೇಪಾಕ್ಷಿ’. ಇದೂ ದೊಡ್ಡ ಮಟ್ಟಿನ ಯಶಸ್ಸು ಕಂಡ ಹಾಗೂ ಹನ್ನೊಂದು ಭಾಷೆಗಳಿಗೆ ಡಬ್ ಆದ ಮತ್ತೊಂದು ಚಿತ್ರ. ಆಂಧ್ರಪ್ರದೇಶದ ಪಾರಂಪರಿಕ ಸ್ಥಳ ಲೇಪಾಕ್ಷಿ ಕುರಿತಾದ ಈ ಸಾಕ್ಷ್ಯಚಿತ್ರ ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿದೆ. ಇದರ ತೆಲುಗು ಅವತರಿಣಿಕೆಯು ‘ಗ್ರೇಟರ್ ವಾಷಿಂಗ್ಟನ್ ತೆಲುಗು ಕಲ್ಚರಲ್ ಸಂಗಮ್’ ಸ್ಪರ್ಧೆಯಲ್ಲಿ ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ ಪಡೆಯಿತು.

ಫ್ರೆಂಚ್ ಅವತರಿಣಿಕೆಯು ‘ಕೋಲ್ಕತ್ತ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ದಲ್ಲಿ ‘ಸ್ಪರ್ಧೆಯ ವಿಶೇಷ ಪ್ರಶಸ್ತಿ’, ಜೊತೆಗೆ ಅಂತರ್ಜಾಲದ ಮುಖಾಂತರವೇ ನಡೆಯುವ ‘ವಿಶ್ವ ಬರಹಗಾರರ ಕಿರುಚಿತ್ರೋತ್ಸವ’ದಲ್ಲಿ ‘ಅಂತರ್ಜಾಲದಲ್ಲಿ ವೀಕ್ಷಿಸಿದ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತು. ಹಾಗೇ ತಮಿಳು ಅವತರಣಿಕೆಯು ‘ಮೂರನೇ ದೆಹಲಿ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲೂ ‘ವಿಶೇಷ ಪ್ರಶಸ್ತಿ’ಗೆ ಪಾತ್ರವಾಯಿತು.

ನಂತರ ‘ಆರ್‌ವಿ ಫಿಲಮ್ಸ್’ ಕುರಿತಾಗಿಯೇ ನಿರ್ಮಿಸಿದ ಒಂದು ನಿಮಿಷದ, ಸಂಭಾಷಣೆಯೇ ಇಲ್ಲದ ಜಾಹೀರಾತು ಕೂಡ ದೆಹಲಿಯಲ್ಲಿ ನಡೆದ ‘ನಾಲ್ಕನೇ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ’ ದಲ್ಲಿ ‘ಅತ್ಯುತ್ತಮ ಪರಿಕಲ್ಪನೆ’ ಹೆಗ್ಗಳಿಕೆಗೆ ಪಾತ್ರವಾಯಿತು. ಮಹಿಳಾ ಸಬಲೀಕರಣ ವಿಚಾರದ ಕುರಿತು ಇತ್ತೀಚೆಗೆ ನಿರ್ಮಿಸಿದ ‘ಅರಣಿ’ ಎಂಬ ಮಲಯಾಳಂ ಕಿರುಚಿತ್ರವು ಮುಂಬೈನಲ್ಲಿ ನಡೆದ ‘ಇಂಡಿಯನ್ ಸಿನಿ ಫಿಲ್ಮ್ ಫೆಸ್ಟಿವಲ್’ನ ಸಾಮಾಜಿಕ ಜಾಗೃತಿ ವಿಭಾಗದಲ್ಲಿ ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ ಗಳಿಸಿತು. ವಿನೋದ್‌ಗೆ ಈ ಎಲ್ಲ ಪ್ರಶಸ್ತಿಗಳು ಸಂದಿದ್ದೂ 2014 ರಲ್ಲಿಯೇ ಎಂಬುದು ಮತ್ತೊಂದು ಗಮನಾರ್ಹ ಸಂಗತಿ.

ಕಿರುಚಿತ್ರಕಾರನ ದೊಡ್ಡ ಕನಸು
ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಿದೆ. ಅದು ಸೃಜನ ಲೋಕದಲ್ಲೂ ಇದ್ದಿದ್ದೇ. ಹಲವು ಆಸಕ್ತರು ನಿರ್ದೇಶಕರು, ನಿರ್ಮಾಪಕರ ಹತ್ತಿರವೋ ಅವಕಾಶ ಕೇಳುವುದುಂಟು. ಅದರ ಜೊತೆಯಲ್ಲೇ ಮತ್ತೊಂದು ಬಗೆಯ ಪ್ರತಿಭಾವಂತರಿದ್ದಾರೆ. ಅವರು ಅವಕಾಶಕ್ಕಾಗಿ ಅಲೆದಾಡದೇ ತಮ್ಮ ಪ್ರತಿಭೆ ಮೇಲೆ ನಂಬಿಕೆ ಇಟ್ಟುಕೊಂಡವರು. ಈ ವಿಭಾಗದಲ್ಲಿ ಸೇರುತ್ತಾರೆ ವಿನೋದ್. ಮೊದಲು ಒಂದಷ್ಟು ಅನುಭವ ಪಡೆದು ಮುಂದೆ ವೃತ್ತಿಪರ ಚಿತ್ರೋದ್ಯಮಕ್ಕೆ ಕಾಲಿಡುವುದು ಅವರ ಆಶಯ.

ಚಿತ್ರ ಚಾರಣ
ವಿನೋದ್ ಪಾಲಿಗೆ ಚಿತ್ರ ನಿರ್ಮಾಣವು ಚಾರಣದ ಅನುಭವಕ್ಕೆ ಸಮ. ಬೆಟ್ಟ ಗುಡ್ಡ ಹತ್ತುವ ಚಾರಣಿಗರಿಗೆ ಕಲ್ಲು ಮುಳ್ಳು ಹೇಗೆ ಅಡ್ಡಾಗುತ್ತವೋ ಹಾಗೆ ವಿನೋದ್ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಮನೆಯಲ್ಲಿ ‘ಇಷ್ಟ ಬಂದಿದ್ದನ್ನು ಮಾಡು’ ಎಂದು ಪ್ರೋತ್ಸಾಹಿಸುವ ಹೆತ್ತವರು. ಆದರೆ ವಿನೋದ್ ಆಸೆಗೆ ಸ್ಪಂದಿಸುವ ಆರ್ಥಿಕ ಪರಿಸ್ಥಿತಿ ಅವರದಲ್ಲ.

ಹೇಗಾದರೂ ಸರಿ, ಚಿತ್ರ ನಿರ್ಮಿಸಲೇಬೇಕು ಎಂದುಕೊಂಡಾಗ ವಿನೋದ್ ಬಳಿ ಕ್ಯಾಮೆರಾ ಕೊಳ್ಳಲೂ ಹಣವಿರಲಿಲ್ಲ. ಆಗ ತಾಯಿಯ ಒಡವೆಯನ್ನು ಅಡವಿಟ್ಟು ಕ್ಯಾಮೆರಾ ಖರೀದಿಸಿದ ವಿನೋದ್ ಇಂದು ಈ ಎತ್ತರಕ್ಕೆ ತಲುಪಿದ್ದಾರೆಂದರೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ?
ಆರ್ಥಿಕ ಕಾರಣಕ್ಕಾಗಿಯೇ ಆರ್‌ವಿ ಫಿಲಮ್ಸ್್‌ನ ಚಿತ್ರೀಕರಣದ ಆವರಣಗಳು ಇನ್ನೂ ಬೆಂಗಳೂರು ಮತ್ತು ಅನಂತಪುರ ಜಿಲ್ಲೆಯ ಹೊರಗೆ ವಿಸ್ತರಿಸಿಲ್ಲ. ಸಂಸ್ಥೆಯ ಸದಸ್ಯರೇ ಅದರ ಬೆನ್ನೆಲುಬುಗಳು. ಅವರ ಪಾಕೆಟ್ ಮನಿಯೇ ಚಿತ್ರಕ್ಕೆ ಬಂಡವಾಳ.

ಯಾವ ಪ್ರಾಯೋಜಕರನ್ನೂ ಹುಡುಕಿಕೊಂಡು ಹೋಗಿಲ್ಲ. ಚಿತ್ರದ ಪ್ರತಿ ಕೆಲಸವನ್ನೂ ಈ ಸ್ನೇಹಿತರೇ ಮಾಡುವುದು ವಿಶೇಷ. ಆರ್‌ವಿ ಫಿಲಮ್ಸ್್‌ಗೆ ಇದುವರೆಗೂ ಸ್ವಂತ ಕಚೇರಿ ಇಲ್ಲ ಅಂದರೆ ನಿಮಗೆ ಅಚ್ಚರಿಯಾಗಬಹುದು. ಇಂಥ ಕಷ್ಟದ ಕಾಲದಲ್ಲೂ ಜತೆಗಿದ್ದ ಗೆಳೆಯರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ ವಿನೋದ್.

ಮುಂದಿನ ಯೋಜನೆಗಳು
ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಬಾಚಿಕೊಳ್ಳುತ್ತಿರುವ ವಿನೋದ್ ರಾಜೇಂದ್ರ ಅವರ ತಲೆಯಲ್ಲಿ ಇನ್ನೂ ಅನೇಕ ಯೋಜನೆಗಳು ಹರಿದಾಡುತ್ತಿವೆ. ಮುಂದಿನ ಆರು ತಿಂಗಳಲ್ಲಿ ತತ್ವಶಾಸ್ತ್ರ, ಧರ್ಮ, ಪ್ರೀತಿ ಸೇರಿದಂತೆ ಕೆಲ ವಿಷಯಗಳನ್ನಿಟ್ಟುಕೊಂಡು ನಾಲ್ಕು ಕಿರುಚಿತ್ರಗಳು ತಯಾರಾಗಲಿವೆ. ಹಾಗಂತ ಅವರು ಸಂಪೂರ್ಣವಾಗಿ ಕಿರುಚಿತ್ರಗಳಿಗೇ ಸೀಮಿತ ಎಂದುಕೊಳ್ಳಬೇಕಿಲ್ಲ. ಏಕೆಂದರೆ ಈ ವರ್ಷದ ಕೊನೆಯಲ್ಲಿ ಕಥಾಚಿತ್ರವನ್ನೂ ನಿರ್ದೇಶಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಒಂದು ಸ್ಕ್ರಿಪ್ಟ್ ‘ಆಸ್ಕರ್’ ಲೈಬ್ರರಿ ಸೇರಿದೆ. ಅವರ ಮುಂದಿನ ಗುರಿ ‘ಆಸ್ಕರ್’ಗೆ ಸಮಾನವಾದ ‘ಬರ್ಲಿನ್ ಅವಾರ್ಡ್’ನ ಬಣ್ಣದ ಅಂಗಳಕ್ಕೆ ಕಾಲಿಡುವುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT