ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋದಾವಳಿ!

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಶಾಲಾ ದಿನಗಳಲ್ಲಿ ಚಲನಚಿತ್ರಗಳ ಸಂಭಾಷಣೆ ಅನುಕರಿಸಿ ಸಹಪಾಠಿಗಳು ಮತ್ತು ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದ ಹುಡುಗನಿಗೆ ನಟನಾಗುವ ತುಡಿತವೇನೂ ಇರಲಿಲ್ಲ. ಆದರೆ, ಆತನೊಳಗಿನ ಕಲಾಕಾರನನ್ನು ಗುರ್ತಿಸಿದ ಶಿಕ್ಷಕಿ ‘ನೀನು ಚೆನ್ನಾಗಿ ಅಭಿನಯಿಸುತ್ತೀಯ, ನಟನಾಗು’ ಎಂದು ಹುರಿದುಂಬಿಸಿದ್ದೇ ಆ ಹುಡುಗ ಚಿತ್ರರಂಗದತ್ತ; ಕ್ಯಾಮೆರಾದತ್ತ ಮುಖ ಮಾಡಲು ಕಾರಣ.

ಹೀಗೆ ಚಿತ್ರಲೋಕಕ್ಕೆ ಕಾಲಿಟ್ಟ ವಿನೋದ್ ಕುಮಾರ್, ಕನ್ನಡ ಪ್ರೇಕ್ಷಕರಿಗೆ ಅಜ್ಞಾತವಾಗಿಯೇ ಕಾಣುವ ಹೆಸರು. ಗಿರಿರಾಜ್ ನಿರ್ದೇಶನದ ‘ಜಟ್ಟ’ ಚಿತ್ರದ ರಾಜೇಶ ಎಂದೊಡನೆ ಪ್ರೇಕ್ಷಕನ ಸ್ಮೃತಿಗೆ ಥಟ್ಟನೆ ಬರುವುದು ಕಾಡಿನಲ್ಲಿ ಟ್ರಕ್ಕಿಂಗ್‌ಗೆ ಬಂದು ಜಟ್ಟನ ಹೆಂಡತಿಯನ್ನು ಹಾರಿಸಿಕೊಂಡು ಹೋದ ಸ್ಫುರದ್ರೂಪಿ ಚಹರೆ. ‘ಜಟ್ಟ’ ಚಿತ್ರದಲ್ಲಿನ ಅವರ ಒಂದು ಸಣ್ಣ ಪಾತ್ರ ಚಿತ್ರಕಥೆಯ ಅಂಶ–ಆಶಯಗಳನ್ನು ಪ್ರಧಾನವಾಗಿ ಪ್ರತಿಬಿಂಬಿಸಿತು.

ವಿನೋದ್ ಅವರಿಗೀಗ ಹಲವು ಅವಕಾಶಗಳು ಸಿಗುತ್ತಿದ್ದು, ಅವರ ಸಿನಿಮಾ ಹಾದಿ ಉಜ್ವಲವಾಗುವ ಲಕ್ಷಣಗಳಿವೆ. ‘ಜಟ್ಟ’ದಲ್ಲಿ ಗಂಭೀರ ವದನರಾಗಿ ಕಾಣಿಸಿಕೊಂಡಿದ್ದ ಅವರು ಶೀಘ್ರದಲ್ಲಿಯೇ ಹಾಸ್ಯದ ಔತಣ ಉಣಿಸುವ ಹೆಬ್ಬಯಕೆಯಲ್ಲಿದ್ದಾರೆ. ಗಿರಿರಾಜ್ ನಿರ್ದೇಶನದ ‘ತುಂಡ್‌ ಹೈಕ್ಳ ಸಾವಾಸ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ವಿನೋದ್, ನಾಯಕ ನಟನಾಗಿ ಬಡ್ತಿ ಪಡೆದು ಮತ್ತೊಂದು ಇಮೇಜು ಪಡೆಯುವ ಯತ್ನದಲ್ಲಿದ್ದಾರೆ.

ಅಲ್ಲದೆ ‘ಮಾಮು ಟೀ ಅಂಗಡಿ’, ‘ಮೈತ್ರಿ’, ‘ಪ್ರೇಮ ಪಲ್ಲಕ್ಕಿ’, ವಿನಯ್ ರಾಜ್‌ಕುಮಾರ್ ಅಭಿನಯದ ‘ಸಿದ್ಧಾರ್ಥ’ ಸಿನಿಮಾಗಳಲ್ಲಿ ಪ್ರತಿಭೆಯನ್ನು ಒರೆಗೆ ಹಚ್ಚುವ ಪಾತ್ರಗಳು ಅವರಿಗೆ ಸಿಕ್ಕಿವೆ. ಅಂದುಕೊಂಡಂತೆ ಆದರೆ ಅವರು ನಟಿಸಿರುವ ಬಹಪಾಲು ಚಿತ್ರಗಳು ಈ ವರ್ಷ ತೆರೆ ಕಾಣಲಿವೆ.

ಗಿರಿರಾಜ್ ಗರಡಿಗೆ
ಉತ್ತರ ಕರ್ನಾಟಕ ಮೂಲದ ವಿನೋದ್ ತಮ್ಮ ಚಿತ್ರ ಜೀವನದ ಹಾದಿಯಲ್ಲಿ ನೆನೆಯುವ ಪ್ರಮುಖ ಹೆಸರು ಗಿರಿರಾಜ್. ‘‘ಖಾಸಗಿ ಕೇಬಲ್ ವಾಹಿನಿಯಲ್ಲಿ ನಿರೂಪಕನಾಗಿ ಸೇರುವ ಮೂಲಕ ಕ್ಯಾಮೆರಾ ಎದುರು ಕಾಣಿಸಿಕೊಂಡೆ. ಅಲ್ಲಿಂದ ‘ರಾಜ್ ಮ್ಯೂಸಿಕ್’ ವಾಹಿನಿಗೆ ನಿರೂಪಕನಾಗಿ ಸೇರಿದಾಗ ಗಿರಿರಾಜ್ ಅಲ್ಲಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಡಲು ಬಂದಿದ್ದರು. ಆಗ ಅವರ ಗರಡಿ ಸೇರಿದೆ. ಬಾಲ್ಯದಲ್ಲಿ ತಾರೆಯರ ಸಂಭಾಷಣೆಗಳನ್ನು ಅನುಕರಿಸಿ ಹೇಳುತ್ತಿದ್ದೆ.

ಶಾಲಾ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದೆ. ಎಂಟನೇ ತರಗತಿಯಲ್ಲಿರುವಾಗ ಮಂಜುಳಾ ಟೀಚರ್ ‘ನೀನು ಸಿನಿಮಾ ಸ್ಟಾರ್ ಆಗು’ ಎಂದು ಹೇಳಿ ನನ್ನಲ್ಲಿ ನಟನಾಗುವ ಆಸೆ ಬಿತ್ತಿದರು. ಶಾಲೆಯಲ್ಲಿ ಏನಾಗಬೇಕು ಎಂದು ಕೊಂಡಿದ್ದೀರಿ? ಎಂದು ಯಾರಾದರೂ ಕೇಳಿದರೆ ನಾನು ಸಿನಿಮಾ ಸ್ಟಾರ್ ಎನ್ನುತ್ತಿದ್ದೆ. ಗಿರಿರಾಜ್ ಅವರೇ ನನಗೆ ಗುರುಗಳು. ನಾನು ಕೆಲಸ ಮಾಡಿದ ಮೊದಲ ಸಿನಿಮಾ ‘ಕೃಷ್ಣನ್‌ ಲವ್ ಸ್ಟೋರಿ’ ಆ ಚಿತ್ರಕ್ಕೆ ಗಿರಿರಾಜ್ ಚಿತ್ರಕಥೆಯ ಮೇಲೆ ಕೆಲಸ ಮಾಡಿದ್ದರು.

ನನಗೂ ಒಂದು ಸಣ್ಣ ಪಾತ್ರ ಕೊಡಿಸಿದರು. ಆನಂತರ ಅವರ ನಿರ್ದೇಶನದ ‘ಜಟ್ಟ’ ಚಿತ್ರದಲ್ಲಿ ಬಣ್ಣ ಹಚ್ಚಿದೆ. ಈಗ ‘ತುಂಡ್‌ ಹೈಕ್ಳ ಸಾವಾಸ’ ಎಂದು ತಮ್ಮ ಚಿತ್ರ ಜರ್ನಿಯ ಮಾಹಿತಿ ನೀಡುತ್ತಾರೆ. ತುಂಡ್‌ ಹೈಕ್ಳು... ಪಕ್ಕಾ ಕಾಮಿಡಿ ಚಿತ್ರವಾದರೂ ಅಲ್ಲಿ ಒಂದು ಸದಾಶಯ–ಪರಿಣಾಮಕಾರಿ ಅಂಶವೂ ಇರಲಿದೆ. ಇಲ್ಲಿ ವಿನೋದ್ ಫ್ಯಾಷನ್ ಡಿಸೈನರ್‌ ಪಾತ್ರ ಪೋಷಿಸಿದ್ದಾರೆ. ನಟ ಎಂದು ಗುರುತಾಗಿರುವಂತೆ ಸಹಾಯಕ ನಿರ್ದೇಶಕನ ಅನುಭವಗಳನ್ನೂ ಪಡೆದುಕೊಂಡಿದ್ದಾರೆ. ‘ಅದ್ವೈತ’, ‘ನವಿಲಾದವರು’ ಚಿತ್ರಗಳಲ್ಲಿ ತೆರೆಯ ಹಿಂದೆ ನಿಂತು ಕೆಲಸ ಮಾಡಿದ್ದಾರೆ. ಆ ತೆರೆ ಹಿಂದಿನ ಅನುಭವಗಳು ಗಟ್ಟಿಗೊಂಡಂತೆ ಮುನ್ನೆಲೆಗೆ ಬಂದರು.

ದೇಹ ತೂಕ ಇಳಿಕೆ
‘ತುಂಡ್‌ ಹೈಕ್ಳ ಸಾವಾಸ’ ಚಿತ್ರಕ್ಕೆ ವಿನೋದ್ ನಾಯಕನಾಗಿ ಆಯ್ಕೆಯಾದಾಗ ಅವರ ದೇಹ ತೂಕ ಹೆಚ್ಚಿತ್ತು. ಈ ಸುರ ಸುಂದರ ನಟನಿಗೆ ಗಿರಿರಾಜ್ ಕೊಟ್ಟ ಸಲಹೆ; ಮೈ ಕರಗಿಸುವುದು. ‘ಚಿತ್ರಕ್ಕಾಗಿ ಎರಡು ತಿಂಗಳಲ್ಲಿ 12 ಕೆ.ಜಿ ತೂಕ ಇಳಿಸಿದ್ದೇನೆ. ಬೆಳಿಗ್ಗೆ ಎರಡು ಕಿಲೋಮೀಟರ್ ಓಟ. ಮೂರು ಚಪಾತಿ ಅಷ್ಟೇ. ಜಿಮ್‌ನಲ್ಲಿ ನನ್ನ ವರ್ಕ್‌ಔಟ್‌ ನೋಡಿ ‘ಸಾಕು ಹೋಗಪ್ಪ ಸುಸ್ತಾದ್ರೆ ಕಷ್ಟ’ ಎಂದು ಹೇಳುತ್ತಿದ್ದರು.

ಆ ಕಸರತ್ತು ನನಗೆ ಅನುಕೂಲವಾಯಿತು’ ಎನ್ನುವ ಅವರ ಮಾತಿನಲ್ಲಿ ಚಿತ್ರಗಳಿಗಾಗಿ ಯಾವುದೇ ಕಸರತ್ತಿಗೂ ಸೈ ಎನ್ನುವ ಛಾಯೆ ಕಾಣಿಸುತ್ತದೆ. ಸದ್ಯ ‘ಸಿದ್ಧಾರ್ಥ’ನ ಚಿತ್ರೀಕರಣದಲ್ಲಿ ತೊಡಗಿರುವ ಅವರಿಗೆ ನಾಯಕನ ಗೆಳೆಯನ ಪಾತ್ರ. ನಾಯಕನಾದರೂ ಸೈ–ಸ್ನೇಹಿತನಾದರೂ ಸೈ ಪಾತ್ರ ಪ್ರೇಕ್ಷಕನಲ್ಲಿ ಉಳಿದುಕೊಳ್ಳಬೇಕು ಎನ್ನುವ ನಿಲುವು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT