ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸಕ್ಕೊಲಿದ ದಂಪತಿ

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಬಣ್ಣಗಳ ಮಿಶ್ರಣ, ವಿನ್ಯಾಸ ವೈವಿಧ್ಯದಿಂದಲೇ ದೇಶ ವಿದೇಶದಲ್ಲಿ ಹೆಸರು ಮಾಡಿದ ದಂಪತಿ ಫಾಲ್ಗುಣಿ ಹಾಗೂ ಶೇನ್‌ ಪೀಕಾಕ್‌. ದಿರಿಸುಗಳ ಮೂಲಕ ಮಹಿಳೆಯರನ್ನು ಇನ್ನಷ್ಟು ಅಂದವಾಗಿಸುವ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವಂತೆ ಮಾಡುವ ಈ ದಂಪತಿಯದ್ದು ‘ಬ್ರೈಡಲ್‌ ವೇರ್‌’ ವಿನ್ಯಾಸದಲ್ಲೂ ಎತ್ತಿದ ಕೈ.

ಇತ್ತೀಚೆಗಷ್ಟೇ ನಗರದಲ್ಲಿ ನಡೆದ ಬಿಎಂಡಬ್ಲ್ಯು ಬ್ರೈಡಲ್‌ ಫ್ಯಾಷನ್‌ ವೀಕ್‌ನಲ್ಲಿ ತಾವು ವಿನ್ಯಾಸಗೊಳಿಸಿದ ‘ದಟ್‌ ಈಸ್‌ ಇಟ್‌’ ಸಂಗ್ರಹವನ್ನು ಪ್ರದರ್ಶಿಸಿದ ಈ ದಂಪತಿ ಎಂದಿನಂತೆ ಪ್ರಶಂಸೆಗೆ ಒಳಗಾದರು. ಬಣ್ಣಗಳ ಆಯ್ಕೆ, ವಿನ್ಯಾಸ ಶೈಲಿ ಹಾಗೂ ಅವುಗಳ ಮೇಲೆ ಮೂಡಿಸಿದ ಕುಸುರಿ ಆಕರ್ಷಕವಾಗಿತ್ತು. ಫ್ರಾನ್ಸ್‌ನಿಂದ ಸ್ಫೂರ್ತಿ ಪಡೆದ ಈ ಸಂಗ್ರಹದ ದಿರಿಸುಗಳು ಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸಗಳ ಮಿಶ್ರಣದಂತೆ ಭಾಸವಾದವು.

ದಿರಿಸು ವಿನ್ಯಾಸಗೊಳಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ವಿಷಯಗಳ ಬಗೆಗೂ ಹೆಚ್ಚು ಆಸಕ್ತಿ ವಹಿಸಿ, ಚರ್ಚಿಸಿ ನಿರ್ಧಾರ ಕೈಗೊಳ್ಳುವ ಈ ದಂಪತಿ ‘ಮೆಟ್ರೊ’ದೊಂದಿಗೆ ಕೆಲವು ಮಾಹಿತಿಯನ್ನು ಹಂಚಿಕೊಂಡರು. ಎಂಜಿನಿಯರಿಂಗ್‌ ಅಭ್ಯಸಿಸಿದ ಆಂಗ್ಲೊ ಇಂಡಿಯನ್‌ ಶೇನ್‌ ಹಾಗೂ ಗುಜರಾತಿ ಮೂಲದ ಫಾಲ್ಗುಣಿ ಇಬ್ಬರೂ ವಿನ್ಯಾಸ ಆಸಕ್ತಿಯ ಮೂಲಕವೇ ಜೊತೆಯಾದವರು. 2002ರಲ್ಲಿ ಪೀಕಾಕ್‌ ಬ್ರೈಡ್‌ ಎಂಬ ಸ್ವಂತ ಬ್ರ್ಯಾಂಡ್‌ ಒಂದನ್ನು ಪ್ರಾರಂಭಿಸಿದ ಈ ಜೋಡಿ ವಿನ್ಯಾಸ ಮಾಡಿದ ದಿರಿಸುಗಳನ್ನು ಬಾಲಿವುಡ್‌ ಹಾಗೂ ಹಾಲಿವುಡ್‌ ಸೆಲೆಬ್ರಿಟಿಗಳನೇಕರು ಧರಿಸಿದ್ದಾರೆ. ಕೇಟಿ ಪೆರ್ರಿ, ರಿಹನ್ನಾ, ಫೆರ್ಜಿ ಮುಂತಾದವರು ತಾವು ನಡೆಸುವ ಕಾರ್ಯಕ್ರಮ ಹಾಗೂ ಷೋಗಳಲ್ಲಿ ಇವರ ವಿನ್ಯಾಸದ ದಿರಿಸುಗಳನ್ನು ಧರಿಸಿ ಮಿಂಚಿದ್ದಾರೆ.

ತಾವು ಅನುಭವಿಸುವ, ಕಣ್ಣಿಗೆ ಕಾಣುವ ಎಲ್ಲ ಸನ್ನಿವೇಶಗಳಿಂದ ಕಲ್ಪನಾ ಸ್ಫೂರ್ತಿ ಪಡೆಯುವ ಇವರು ದಿನನಿತ್ಯ ಹೆಚ್ಚಿನ ಸಮಯದಲ್ಲಿ ವಿನ್ಯಾಸದ ಬಗೆಗೆ ಯೋಚಿಸುತ್ತಾರೆ. ಯಾವುದೇ ದಿರಿಸು ಕಂಡರೂ ಅದನ್ನು ಇನ್ನಷ್ಟು ಸುಂದರವಾಗಿ ಹೇಗೆ ಮಾಡಬಹುದಿತ್ತು ಎನ್ನುವುದರ ಕುರಿತೇ ಈ ದಂಪತಿಯ ನಡುವೆ ಚರ್ಚೆ ನಡೆಯುತ್ತದೆ. ಬಿಡುವಿನಲ್ಲಿ ಸಿನಿಮಾ ನೋಡಿದರೂ ಮಾತು ಹರಿಯುವುದು ವಿನ್ಯಾಸದ ವಿಷಯ ಕುರಿತೇ.

ಆಧುನಿಕ, ಸಮಕಾಲೀನ ಹಾಗೂ ಬ್ರೈಡಲ್‌ ವೇರ್‌ ವಿನ್ಯಾಸದಲ್ಲಿ ಮೇಲುಗೈ ಸಾಧಿಸಿರುವ ಅವರು, ‘ಪ್ರತಿಯೊಬ್ಬರಿಗೂ ಮದುವೆ ಜೀವನದ ಮುಖ್ಯ ಘಟ್ಟ. ಖುಷಿಯ ಸಂದರ್ಭವೂ ಅದೇ. ಇಂದಿನವರು ಹೆಚ್ಚು ಹೆಚ್ಚು ಆಧುನಿಕವಾಗಿರಲು ಬಯಸುತ್ತಾರೆ. ಅಲ್ಲದೆ ಮದುವೆಯ ದಿನ ಚೆನ್ನಾಗಿ ಕಾಣಬೇಕು ಎಂದು ಆಶಿಸುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಬ್ರೈಡಲ್‌ ವೇರ್‌ಗೆ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತಿದೆ. ಭಾರತೀಯ ವಿನ್ಯಾಸದ ಜೊತೆಗೆ ಆಧುನಿಕ ಮೆರುಗು ನೀಡುವುದು ನಮ್ಮ ವಿನ್ಯಾಸದ ವೈಶಿಷ್ಟ್ಯ. ಹೀಗಾಗಿಯೇ ಅನೇಕರು ಬೆಲೆಯ ಬಗ್ಗೆ ಯೋಚಿಸದೆ ಅಂದ ಚೆಂದದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ‘ಮಾಡರ್ನ್‌ ಲುಕ್‌’ನತ್ತ ಮನಸೋಲುತ್ತಿದ್ದಾರೆ.

ಭಾರತೀಯ ದಿರಿಸುಗಳ ಜೊತೆ ಪಾಶ್ಚಾತ್ಯ ದಿರಿಸುಗಳನ್ನೂ ಅವರು ಯಾವುದೇ ಸಂಕೋಚವಿಲ್ಲದೆ ಧರಿಸುವಂತಾಗಿದೆ. ಹೀಗಾಗಿಯೇ ಬ್ರೈಡಲ್‌ ವೇರ್‌ ಇಂದಿನ ಮುಖ್ಯ ಆದ್ಯತೆ ಆಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಫಾಲ್ಗುಣಿ. ತಮ್ಮ ‘ದಟ್‌ ಈಸ್‌ ಇಟ್‌’ ಸಂಗ್ರಹದ ಬಗ್ಗೆ ಅವರು ವಿವರಿಸುವುದು ಹೀಗೆ: ‘ರಜಾ ದಿನ ಕಳೆಯಲೆಂದು ನಾವು ಪ್ಯಾರಿಸ್‌ಗೆ ತೆರಳಿದ್ದೆವು. ಪಯಣದ ತುಂಬೆಲ್ಲಾ ವಿನ್ಯಾಸಕ್ಕೆ ನೆರವಾಗುವ ಕಲ್ಪನಾ ಸ್ಫೂರ್ತಿಯನ್ನು ಬಾಚಿಕೊಳ್ಳುತ್ತಲೇ ಸಾಗಿದೆವು. ಹೆಚ್ಚಿನ ವಿನ್ಯಾಸಗಳು ಹೂವಿನ ಅಂದ–ಚೆಂದದಿಂದ ಸ್ಫೂರ್ತಿ ಪಡೆದಿವೆ. ಅದೂ ಅಲ್ಲದೆ ಲೆಹೆಂಗಾಗಳಲ್ಲಿ ಸಾಫ್ಟ್‌ ಎಂಬ್ರಾಯ್ಡರಿ ಮೆರುಗು ಮೂಡಿಸಿದ್ದೇವೆ. ಭಾರತೀಯ ಮೆರುಗಿಗೆ ಪಾಶ್ಚಾತ್ಯ ವಿನ್ಯಾಸಗಳ ಚೆಂದ ಸೇರಿಸಿ ಈ ಸಂಗ್ರಹಕ್ಕೆ ಹೊಸ ಲುಕ್‌ ನೀಡಿದ್ದೇವೆ’ ಎನ್ನುತ್ತಾರೆ.

ಬೇರೆ ಬೇರೆ ಪ್ರದೇಶಕ್ಕೆ ಪಯಣ ಹೊರಟು ವಾಪಸ್ಸಾಗುವ ಹೊತ್ತಿಗೆ ಕಲ್ಪನಾ ಗುಚ್ಛಗಳೇ ಮೈಮನವನ್ನು ಆಕ್ರಮಿಸಿಕೊಂಡಿರುತ್ತವೆ. ಅದೇ ವಿನ್ಯಾಸದ ದಾರಿಯನ್ನು ಸುಲಭವಾಗಿಸುತ್ತದೆ ಎಂದು ನಂಬಿರುವ ಈ ದಂಪತಿ ತಮಗೆ ಬೇಕಾದ ಬಗೆಯ ಬಟ್ಟೆಗಳನ್ನು, ಪ್ರಿಂಟ್‌ಗಳ ವಿನ್ಯಾಸವನ್ನು ಸ್ವತಃ ನಿರ್ಧರಿಸಿ ತಯಾರಿಸಿಕೊಳ್ಳುತ್ತಾರೆ.  ಹೂವಿನ ಸೊಬಗನ್ನು ಹೋಲುವ ದಿರಿಸುಗಳಲ್ಲಿ ವೆಲ್ವೆಟ್‌, ಗರಿಗಳನ್ನು ಬಳಸಿಕೊಂಡು ವಿಶೇಷವಾಗಿಸಿದೆ ಈ ಜೋಡಿ.

ಸಮಯದೊಂದಿಗೆ ದೇಸಿ ಹಾಗೂ ವಿದೇಶಿ  ವಿನ್ಯಾಸಗಳೊಂದಿಗೆ ಭಾರತೀಯ ಫ್ಯಾಷನ್‌ ಕ್ಷೇತ್ರವೂ ಬದಲಾವಣೆಯ ಉತ್ತುಂಗದಲ್ಲಿದೆ ಎನ್ನುತ್ತಾರೆ ಅವರು. ‘ಫ್ಯಾಷನ್‌ಗೆ ಸಂಬಂಧಿಸಿದಂತೆ ಭಾರತೀಯರ ಮನಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ನಾನು ಗಮನಿಸಿದಂತೆ ಬೆಂಗಳೂರಿಗರೂ ತಾವು ಧರಿಸುವ ದಿರಿಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತಮ್ಮನ್ನು ವಿಭಿನ್ನವಾಗಿ ಗುರುತಿಸಿಕೊಳ್ಳಲು ಹಂಬಲಿಸುವ ಇಲ್ಲಿನ ಜನ ವಿಶೇಷ ದಿರಿಸುಗಳನ್ನೂ ಧರಿಸಲು ಮುಂದಾಗುತ್ತಿದ್ದಾರೆ’ ಎನ್ನುತ್ತಾರೆ.

ಮಹಿಳಾ ಔದ್ಯೋಗೀಕರಣದ ಬಗ್ಗೆಯೂ ಹೆಚ್ಚಿನ ಆಸಕ್ತಿ ತೋರುತ್ತಿರುವ ಇಂದಿನವರಿಗೆ ಫ್ಯಾಷನ್‌ ಕ್ಷೇತ್ರ ಹೆಚ್ಚು ಸೂಕ್ತ ಎಂಬುದೂ ಫಾಲ್ಗುಣಿ ಭಾವನೆ. ‘ವಿನ್ಯಾಸ ಕ್ಷೇತ್ರದಲ್ಲೂ ಮಹಿಳೆಯರನ್ನೇ ಹೆಚ್ಚಾಗಿ ಬಳಸಿಕೊಳ್ಳಬಹುದಾದ ಆಯ್ಕೆ ಇಲ್ಲಿದೆ. ಅಲ್ಲದೆ ಬಗೆಬಗೆಯ ದಿರಿಸು ಧರಿಸುವುದರಲ್ಲೂ ಮಹಿಳೆಯರು ಧೈರ್ಯ ತೋರುತ್ತಿದ್ದಾರೆ. ಆತ್ಮವಿಶ್ವಾಸವೂ ಹೆಚ್ಚುತ್ತಿದೆ.

ಇದರಿಂದ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮನಸ್ಥಿತಿ ಜಾಗೃತವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಫಾಲ್ಗುಣಿ ಚರ್ಮದ ಬಣ್ಣ ಅಥವಾ ನ್ಯೂಡ್‌ ಕಲರ್ ಹಾಗೂ ಬೇಜ್‌ ಕಲರ್‌ನಲ್ಲಿ ವಿನ್ಯಾಸ ಮೂಡಿಸಲು ಹೆಚ್ಚು ಇಷ್ಟಪಡುತ್ತಾರೆ. ಅವರ ನೆಚ್ಚಿನ ಬಣ್ಣ ಕಪ್ಪು. ಎಲ್ಲ ವಿನ್ಯಾಸಗಳೂ ಕಪ್ಪು ಬಣ್ಣದ ಮೇಲೆ ಚೆಂದವಾಗಿ ಮೂಡುವುದರಿಂದ ಕಪ್ಪು ಹೆಚ್ಚು ಪ್ರಿಯ ಎನ್ನುವ ಅವರು, ದಿನವೂ ಕಪ್ಪು ಬಣ್ಣದ ದಿರಿಸು ಧರಿಸಲು ಅಂಜುವುದಿಲ್ಲ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT