ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸದ ವೇದಿಕೆಯಿಂದ ನಿರ್ಮಾಣದ ಏಣಿಗೆ...

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಳೆದ ಹದಿನೈದು ವರ್ಷಗಳಿಂದ ಸಿನಿ ಜಗತ್ತಿಗೆ ಅಂದದ ವಸ್ತ್ರಗಳನ್ನು ವಿನ್ಯಾಸ ಮಾಡಿಕೊಡುತ್ತಿದ್ದ ರೋಷನಿ ದಿನಕರ ಇದೀಗ ಮಲಯಾಳಂ ಚಿತ್ರವೊಂದಕ್ಕೆ ನಿರ್ಮಾಪಕರಾಗಿಯೂ, ನಿರ್ದೇಶಕರಾಗಿಯೂ ಕೆಲಸ ಮಾಡುವ ಉತ್ಸಾಹದಲ್ಲಿದ್ದಾರೆ.

ಸಿನಿಮಾಗಳಲ್ಲಿ ನಟೀಮಣಿಯರ ಚೆಲುವು ಕಂಡು ಹುಬ್ಬೇರಿಸದವರು ಯಾರೂ ಇಲ್ಲ. ಒಂದೆಡೆ ಮೇಕಪ್‌ ಅಂದವನ್ನು ಹೆಚ್ಚಿಸಿದರೆ, ಇನ್ನೊಂದೆಡೆ ಅವರು ತೊಟ್ಟ ದಿರಿಸು ಸೌಂದರ್ಯವನ್ನು ಇಮ್ಮಡಿ ಮಾಡಿರುತ್ತದೆ.

ಸಿನಿಮಾಗಳಲ್ಲಿ ಬರುವ ಸನ್ನಿವೇಶ ಹಾಗೂ ಪಾತ್ರಗಳಿಗೆ ಅನುಗುಣವಾಗುವಂತೆ ವಿವಿಧ ಬಗೆಯ ದಿರಿಸುಗಳನ್ನು ಹೆಣೆಯುವ ವಸ್ತ್ರವಿನ್ಯಾಸಕರ ಕೈಚಳಕ ಇಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.

ಕಳೆದ 15 ವರ್ಷಗಳಿಂದ ಸಿನಿಮಾ ಜಗತ್ತಿನಲ್ಲಿ ಅನೇಕ ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕಿ ಆಗಿ ಕೆಲಸ ಮಾಡಿದವರು ರೋಷನಿ ದಿನಕರ್. ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಕೆಲಸ ಮಾಡಿರುವ ಅವರು, ಇದುವರೆಗೆ ಸುಮಾರು 35 ಚಿತ್ರಗಳಲ್ಲಿ ಅನುಭವ ಪಡೆದುಕೊಂಡಿದ್ದಾರೆ.

ಫ್ಯಾಷನ್‌ ಡಿಸೈನಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಅಗತ್ಯ ಬಿದ್ದದ್ದೇ ಬಾಲಿವುಡ್‌ ಚಿತ್ರವೊಂದಕ್ಕೆ ವಸ್ತ್ರ ವಿನ್ಯಾಸ ಮಾಡಿಕೊಟ್ಟರು.

ಇದೇ ಸಂದರ್ಭದಲ್ಲಿ ಪರಿಚಯವಾದ ಶಿವಧ್ವಜ್‌ ತಮ್ಮ ಸಿನಿಮಾ ‘ಶುಭಂ’ನಲ್ಲಿ ಕೆಲಸ ಮಾಡುವಂತೆ ಕೇಳಿಕೊಂಡರು. ರವಿ ಗರಣಿ ನಿರ್ದೇಶನದ ಈ ಚಿತ್ರ ರೋಷನಿ ವಸ್ತ್ರವಿನ್ಯಾಸ ಮಾಡಿಕೊಟ್ಟ ಮೊದಲ ಸಿನಿಮಾ.

‘ನಮ್ಮಣ್ಣ’, ‘ಲವ್‌ ಯು ಆಲಿಯಾ’, ‘ವಿಷ್ಣುವರ್ಧನ’, ‘ಚಾರುಲತಾ’, ‘ಮುಂಗಾರು ಮಳೆ 2’, ‘ಬುಗುರಿ’, ‘ಯಶೋಗಾಥೆ’ ಮುಂತಾದ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಅಲ್ಲದೆ ಅನೇಕ ಫ್ಯಾಷನ್‌ ಡಿಸೈನಿಂಗ್‌ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.

ರವಿಚಂದ್ರನ್‌, ಪ್ರಿಯಾಮಣಿ ಸೇರಿದಂತೆ ಅನೇಕರಿಗೆ ಅವರು ವೈಯಕ್ತಿಕ ವಿನ್ಯಾಸಕಿಯೂ ಹೌದು. ಪಾತ್ರಕ್ಕೆ ತಕ್ಕಂತೆ ವಸ್ತ್ರವಿನ್ಯಾಸ ಇರಬೇಕು ಎಂದು ನಂಬಿರುವ ಅವರು ವಸ್ತ್ರ ವಿನ್ಯಾಸ ಮಾಡಿದ್ದ ‘ಕಲ್ಲರಳಿ ಹೂವಾಗಿ’ ಚಿತ್ರಕ್ಕೆ ಉತ್ತಮ ವಿನ್ಯಾಸಕಿ ರಾಜ್ಯ ಪ್ರಶಸ್ತಿಯೂ ಲಭಿಸಿತ್ತು.

ಪ್ರತಿ ಬಾರಿ ವಿನ್ಯಾಸ ಪ್ರಾರಂಭಿಸುವ ಮೊದಲು ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಅಂತರ್ಜಾಲದಲ್ಲಿ ಮಾಹಿತಿಯನ್ನು ಕಲೆಹಾಕುತ್ತಾರೆ. ‘ನಾನು ಈ ಕ್ಷೇತ್ರಕ್ಕೆ ಕಾಲಿಡುವ ಹೊತ್ತಿಗೆ ವಸ್ತ್ರವಿನ್ಯಾಸಕಿಯಾಗಿ ಮಹಿಳೆಯರು ಇದ್ದುದು ತೀರಾ ಕಡಿಮೆ. ಅಲ್ಲದೆ ಆಗ ಅಷ್ಟೊಂದು ಬೇಡಿಕೆಯೂ ಇರಲಿಲ್ಲ. ವಿನ್ಯಾಸ ಎಂದರೆ ಅದ್ಭುತವಾದದ್ದೇನನ್ನಾದರೂ ಸೃಷ್ಟಿಸಿಕೊಡಬೇಕು ಎಂಬುದು ಎಲ್ಲರ ಬಯಕೆಯಾಗಿತ್ತು.

ಕಾಸ್ಟ್ಯೂಮರ್ಸ್‌ ಇರುತ್ತಿದ್ದರೇ ವಿನಾ ವಿನ್ಯಾಸಕರಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳ ಲುಕ್‌ಗೆ ಸಿಕ್ಕಾಪಟ್ಟೆ ಪ್ರಾಮುಖ್ಯವಿದೆ. ಅನೇಕರು ಸಿನಿಮಾದಲ್ಲಿಯ ದಿರಿಸುಗಳನ್ನು ನೋಡಿ ಅನುಕರಿಸುತ್ತಾರೆ. ಹೀಗಾಗಿ ಸಿನಿಮಾದವರೇ ವಸ್ತ್ರವಿನ್ಯಾಸಕರನ್ನು ಹೈರ್‌ ಮಾಡಲಾರಂಭಿಸಿದರು.

ಅನೇಕರು ವಿನ್ಯಾಸಗೊಳಿಸಿ ಬೇರೆಯವರಿಂದ ದಿರಿಸು ತಯಾರಿಸಿಕೊಳ್ಳುತ್ತಿದ್ದರು. ಆದರೆ ನಾನು ಎಂದಿಗೂ ಸ್ಥಳೀಯರಿಗೇ ಹೆಚ್ಚಿನ ಅವಕಾಶ ನೀಡಿದ್ದೇನೆ. ನಾ ಕಂಡ ಉತ್ತಮ ಕಾಸ್ಟ್ಯೂಮರ್‌ಗಳಲ್ಲಿ ನಾಗಲಕ್ಷ್ಮಣರಾವ್‌ ಕೂಡ ಒಬ್ಬರು’ ಎಂದು ಮಾಹಿತಿ ನೀಡುತ್ತಾರೆ ರೋಷನಿ.

ನಾವು ತೊಡುವ ದಿರಿಸು ನಮ್ಮ ಮನಸ್ಥಿತಿಯನ್ನು, ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಒಂದು ಸಾಧನ ಎಂದು ನಂಬಿರುವ ಅವರು ಸಿನಿಮಾಗಳಲ್ಲಿ ಯಾವ ಪಾತ್ರ ಎಂಥದ್ದು, ಅದರ ಇಷ್ಟಕಷ್ಟಗಳೇನು ಎನ್ನುವುದರ ಮೇಲೆ ವಿನ್ಯಾಸವನ್ನು ಹೆಣೆಯುತ್ತಾರೆ.

‘ಏನನ್ನಾದರೂ ಮಾಡುವ ಆಸೆ ಅದಮ್ಯವಾಗಿದ್ದರೆ ಸಾಧನೆಗೆ ಸಮಯದ ಕೊರತೆ ಆಗದು. ನನಗೆ ಅಮ್ಮ, ಪತಿ, ಮಕ್ಕಳು ತುಂಬಾ ಪ್ರೋತ್ಸಾಹ ನೀಡುತ್ತಾರೆ. ‘ಚಾರುಲತಾ’ ಶೂಟಿಂಗ್‌ ನಡೆಯುತ್ತಿದ್ದಾಗ ಒಂದು ಮಗುವಿಗೆ ಎರಡು ವರ್ಷ.

ಇನ್ನೊಬ್ಬನಿಗೆ ನಾಲ್ಕು ತಿಂಗಳು. ಅವರನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ನನ್ನ ಕೆಲಸವನ್ನು ನಾನು ಮಾಡಿಕೊಂಡೆ. ನಿತ್ಯವೂ ಅಷ್ಟೇ ಕೆಲಸ ಮುಗಿಸಿ ಮನೆಗೆ ತೆರಳಿ ಅಡುಗೆ ಮಾಡಿ ಮಕ್ಕಳನ್ನು ಮಲಗಿಸಿ ನನ್ನ ಕೆಲಸವನ್ನು ಮತ್ತೆ ಪ್ರಾರಂಭಿಸುತ್ತೇನೆ. ಹೀಗಾಗಿ ಎಲ್ಲವನ್ನೂ ನಿರ್ವಹಿಸುವುದು ನನಗೆ ಕಷ್ಟವಾಗಿಲ್ಲ’ ಎನ್ನುವುದು ರೋಷನಿ ಅನುಭವ.

ಸ್ಥಳೀಯರಿಗಿಂತ ಬೇರೆ ಭಾಷಿಕರಿಗೆ ಹೆಚ್ಚು ಹೆಚ್ಚು ಅವಕಾಶ ಸಿಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳುವ ಅವರು, ‘ವಸ್ತ್ರವಿನ್ಯಾಸ ಭಾಷೆಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಪ್ರಾರಂಭದ ಹಂತಗಳಲ್ಲಿ ನಮ್ಮ ಪ್ರತಿಭೆಯನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅವಕಾಶಗಳು ಸಿಗುತ್ತವೆ. ಅವಕಾಶ ಅವರವರ ಅದೃಷ್ಟಕ್ಕೆ ಸಂಬಂಧಿಸಿದ್ದು’ ಎನ್ನುತ್ತಾರೆ.
 

ನಿರ್ದೇಶನದ ಗುಂಗಿನಲ್ಲಿ
ಮಹಿಳೆಯರಿಗೆ ಸಹಜವಾಗಿಯೇ ಮಲ್ಟಿಟಾಸ್ಕಿಂಗ್‌ ಮಾಡುವ ನೈಪುಣ್ಯವಿದೆ ಎಂದು ನಂಬಿರುವ ಅವರು, ಇದೀಗ ಮಲಯಾಳಂ ಸಿನಿಮಾವೊಂದಕ್ಕೆ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.

ಚಿತ್ರದ ನಿರ್ಮಾಪಕರೂ ಅವರೇ ಆಗಿದ್ದು, ನಾಯಕರಾಗಿ ಪೃಥ್ವಿರಾಜ್‌ ಅಭಿನಯಿಸಲಿದ್ದಾರೆ. ಚಿತ್ರದ ಕಥೆ ‘ಊರ್ಮಿ’ ಚಿತ್ರ ಮಾಡಿದ ಶಂಕರ್‌ ರಾಮಕೃಷ್ಣ ಅವರದ್ದು. ಸಿನಿಮಾಟೋಗ್ರಫಿ ನಿರ್ದೇಶನ ರತ್ನವೇಲು ಅವರದ್ದು. ಚಿತ್ರಕ್ಕೆ ಪ್ರಿಯಾಂಕಾ ಪ್ರೇಮ್‌ಕುಮಾರ್‌ ಅವರ ಸಂಕಲನವಿದೆ.

‘ನಾನು ಹದಿನೈದು ವರ್ಷದಿಂದ ಸಿನಿಮಾ ಕ್ಷೇತ್ರದಲ್ಲಿದ್ದವಳು. ಆಯ್ದ ಕಲಾವಿದರಿಗೆ ಕಾಸ್ಟ್ಯೂಮ್‌ ಡಿಸೈನರ್‌ ಅಷ್ಟೇ ಆಗಿರದೆ ನಾನು ಇಡೀ ಸಿನಿಮಾದ ಎಲ್ಲಾ ಪಾತ್ರಗಳಿಗೂ ವಸ್ತ್ರವಿನ್ಯಾಸಕಿಯಾಗಿರುತ್ತಿದ್ದೆ. ಹೀಗಾಗಿ ಚಿತ್ರದ ಸಂಪೂರ್ಣ ಸ್ಕ್ರಿಪ್ಟ್‌ ಓದಿ, ಯಾವ ಕಾಲಮಾನದ ಚಿತ್ರ ಎಂದು ನಿರ್ಧರಿಸಿ, ಅಂದಿನ ಕಾಲಘಟ್ಟದ ದಿರಿಸುಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಚಿತ್ರಕ್ಕೆ ಹೊಂದುವಂತೆ ವಸ್ತ್ರವಿನ್ಯಾಸ ಮಾಡುತ್ತಿದ್ದೆ.

ಆದ್ದರಿಂದ ಸಿನಿಮಾ ಜಗತ್ತಿನ ಎಲ್ಲವನ್ನೂ ತೀರಾ ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿರುವುದರಿಂದ ನಿರ್ದೇಶನವನ್ನೂ ಮಾಡಬಲ್ಲೆ ಎನಿಸಿತು. ಅಲ್ಲದೆ ನನ್ನೀ ಆಸಕ್ತಿಯನ್ನು ಎಲ್ಲರೂ ಪ್ರೀತಿಯಿಂದಲೇ ಪ್ರೋತ್ಸಾಹಿಸಿದರು’ ಎಂದು ಹರ್ಷಿಸುತ್ತಾರೆ ರೋಷನಿ.

ರೊಮ್ಯಾನ್ಸ್‌ ಹಾಗೂ ಹಾಸ್ಯ ಪ್ರಧಾನವಾದ ಈ ಚಿತ್ರ ಸಂಪೂರ್ಣವಾಗಿ ಯುರೋಪ್‌ನ ಮ್ಯಾಡ್ರಿಡ್‌, ಪೋರ್ಚುಗಲ್‌ ಹಾಗೂ ಸ್ವಿಟ್ಜರ್‌ಲೆಂಡ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ. ಜೂನ್‌ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಡಿಸೆಂಬರ್‌ 30ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹತ್ತು ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ನಿಜವಾದ ಬದುಕು ಹಾಗೂ ಸಿನಿಮಾ ಬದುಕಿನ ಪಾತ್ರಗಳ ನಡುವಿನ ಸಣ್ಣ ಎಳೆಯನ್ನು ಪರಿಣಾಮಕಾರಿಯಾಗಿ ಬಿಚ್ಚಿಡುವ ಈ ಚಿತ್ರ ತೀರಾ ಪ್ರಬುದ್ಧವಾದ, ಭಾವನಾತ್ಮಕ ಅಂಶವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT