ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಫಲವಾದ ಸಾರಿಗೆ ನೌಕರರ ಮಾತುಕತೆ

ಶೇ 35 ರಷ್ಟು ವೇತನ ಹೆಚ್ಚಳಕ್ಕೆ ಒಪ್ಪದ ರಾಜ್ಯ ಸರ್ಕಾರ
Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಹೆಚ್ಚಳದ ಬಗ್ಗೆ ರಾಜ್ಯ ಸಾರಿಗೆ ನಿಗಮಗಳ ನೌಕರರ ಸಂಘ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ  ಶುಕ್ರವಾರ ನಡೆದ ಮಾತುಕತೆಯೂ ವಿಫಲವಾಯಿತು.

ಸಾರಿಗೆ ಇಲಾಖೆ ನೌಕರರು ಸಂಧಾನದ ಬಾಗಿಲನ್ನು ಮುಕ್ತವಾಗಿಟ್ಟಿದ್ದು ಶನಿವಾರ ಮತ್ತೊಮ್ಮೆ ಮುಖ್ಯಮಂತ್ರಿ ಅವರ ಜತೆ ಚರ್ಚೆ ಮುಂದುವರಿಸಲಿದ್ದಾರೆ.
ಸಾರಿಗೆ ನೌಕರರ ವೇತನವನ್ನು ಶೇ 10ರಷ್ಟು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ನೌಕರರು ಶೇ 35ರಷ್ಟು ವೇತನ ಹೆಚ್ಚಳ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಇದರಿಂದಾಗಿ  ಇದೇ 25ರಂದು ನಡೆಯುವ ಮುಷ್ಕರದಲ್ಲಿ ಬದಲಾವಣೆ ಇಲ್ಲ ಎಂದು ಕಾರ್ಮಿಕ ಸಂಘಟನೆಗಳ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಚಿವ ಸಂಪುಟ ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇ 8ರಷ್ಟು ಹೆಚ್ಚಿಸಲು ನಿರ್ಧರಿಸಿತ್ತು. ನೌಕರರು ಅದನ್ನು ಒಪ್ಪದೆ ಮುಷ್ಕರಕ್ಕೆ ಮುಂದಾಗಿರುವುದರಿಂದ ಇನ್ನೂ ಶೇ 2ರಷ್ಟು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ ಎಂದು ಮನವರಿಕೆ ಮಾಡಿದರು.

ವೇತನವನ್ನು ಶೇ10ರಷ್ಟು ಹೆಚ್ಚಳ ಮಾಡುವುದರಿಂದ  ಸರ್ಕಾರದ ಮೇಲೆ ಮುಂದಿನ ನಾಲ್ಕು ವರ್ಷಗಳಿಗೆ ₹1414 ಕೋಟಿ ಹೊರ ಬೀಳಲಿದೆ. ಅಲ್ಲದೆ, ನೌಕರರ ಬಾಟಾ, ಭತ್ಯೆಗಳನ್ನು ಕನಿಷ್ಠ ಶೇ 50ರಿಂದ ಗರಿಷ್ಠ ಶೇ 100ಕ್ಕೆ ಏರಿಸಲು ಒಪ್ಪಲಾಗಿದೆ. ಇದರಿಂದ ₹ 143 ಕೋಟಿ ಹೊರೆ ಆಗಲಿದೆ.

ಆದರೆ, ನೌಕರರು ಎಂಟು ಗಂಟೆ ಕೆಲಸ. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ವೈದ್ಯಕೀಯ ವೆಚ್ಚ ಸೇರಿದಂತೆ 41 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಈ ಬೇಡಿಕೆಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ಮಾತುಕತೆ ಫಲಶೃತಿ ನೋಡಿಕೊಂಡು ಮುಷ್ಕರದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಕೆಲವು ಹೊತ್ತು ಸಾರಿಗೆ ನಿಗಮಗಳ ನೌಕರರ  ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಬಳಿಕ ಅವರು ಮೈಸೂರಿಗೆ ತೆರಳಿದ್ದರಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT