ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆ ಪ್ರಕ್ರಿಯೆ: ಸಂಯಮ ಇರಲಿ

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಆಂಧ್ರಪ್ರದೇಶದಲ್ಲಿ ವಿಭಜನೆಗೆ ಸಂಬಂಧಿಸಿದ ಗೊಂದಲಕ್ಕೆ ಇನ್ನೂ ಪೂರ್ಣವಿರಾಮ ಬಿದ್ದಿಲ್ಲ. ಚುನಾವಣೆ ಪ್ರಕ್ರಿಯೆ ಜತೆಜತೆಗೇ ಆರಂಭವಾದ ರಾಜ್ಯ ವಿಭಜನೆ ಪ್ರಕ್ರಿಯೆ ಬಹುಪಾಲು ಮುಕ್ತಾಯದ ಹಂತ ತಲುಪಿದೆಯಾದರೂ ಸಂಪನ್ಮೂಲ ಹಾಗೂ ಸಿಬ್ಬಂದಿ ಹಂಚಿಕೆ ವಿಷಯದಲ್ಲಿ ಮುಖಂಡರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.

ಸಚಿವಾಲಯ ಸಿಬ್ಬಂದಿ ಹಂಚಿಕೆ ವಿಚಾರವಂತೂ  ವಿವಾದಕ್ಕೆ ಕಾರಣವಾಗಿದೆ. ‘ತೆಲಂಗಾಣ ರಾಜ್ಯದ ಕಚೇರಿಗಳಲ್ಲಿ ಕೆಲಸ ಮಾಡಲು  ಸೀಮಾಂಧ್ರ ಮೂಲದ ನೌಕರರಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳುವ ಮೂಲಕ ತೆಲಂಗಾಣದ ನಿಯೋಜಿತ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಸಂಘರ್ಷದ ಕಿಡಿ ಹಾರಿಸಿ­­ದ್ದಾರೆ. ‘ಎರಡೂ ರಾಜ್ಯಗಳ ಸಚಿವಾಲಯ ಒಂದೇ ಕಟ್ಟಡದಲ್ಲಿ­ರುವುದು ಬೇಡ’ ಎಂದು ತೆಲಂಗಾಣ ಸರ್ಕಾರಿ ನೌಕರರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

‘ನೌಕರರ ನಡುವೆ ಮನಸ್ತಾಪ ಮರುಕಳಿಸುವ ಸಾಧ್ಯತೆಗಳಿವೆ’ ಎಂಬ ನೆಪ ಮುಂದಿಟ್ಟು ಅವರು ಈ ಬೇಡಿಕೆ ಇಟ್ಟಿದ್ದಾರೆ. ಕೆಸಿಆರ್‌ ಬೆದರಿಕೆ ಎಷ್ಟು ವಿವೇಚನಾರಹಿತವೊ ನೌಕರರ ಬೇಡಿಕೆಯೂ ಅಷ್ಟೇ ಅರ್ಥವಿಲ್ಲದ್ದು. ಇದಕ್ಕೆ ಕಿವಿಗೊಡಬೇಕಾದ ಅಗತ್ಯ ಇಲ್ಲ. ಸಚಿವಾಲಯ  ಕಟ್ಟಡ ಯಾರೊಬ್ಬರ ಜಹಗೀರು ಅಲ್ಲ. ದ್ವೇಷ ಸಾಧಿಸಲು ರಾಜ್ಯ ಎಂಬುದು ಪಿತ್ರಾರ್ಜಿತ ಆಸ್ತಿಯೂ ಅಲ್ಲ. ‘ರಾಜನಂತೆ ಪ್ರಜೆ’ ಎಂಬ ಗಾದೆಯಂತೆ ನಾಯಕನ ಮಾತಿನ ವರಸೆಯನ್ನು ನೌಕರರೂ ರೂಢಿಸಿಕೊಳ್ಳು­ವುದು ಬೇಡ. ಪ್ರತ್ಯೇಕ ತೆಲಂಗಾಣ ರಾಜ್ಯ ಸಾಧನೆಗಾಗಿ ತೀಕ್ಷ್ಣವಾಗಿ ಮಾತಾ­ಡಿದ್ದಕ್ಕೆ ಸಮರ್ಥನೆ ಇರಬಹುದು. ಆ ಉದ್ದೇಶ ಈಡೇರಿದೆ. ನವ ತೆಲಂಗಾಣ­ವನ್ನು ಮುನ್ನಡೆಸುವ ಹೊಣೆಗಾರಿಕೆ ವಹಿಸಿಕೊಳ್ಳಲಿರುವ ಕೆಸಿಆರ್ ಇನ್ನೂ ಅದೇ ಧಾಟಿಯಲ್ಲಿ ಮಾತನಾಡುವುದು ಸರಿಯಲ್ಲ. ಅದರ ಅಗತ್ಯವೂ ಇದ್ದಂತಿಲ್ಲ. ಆಡುವ ಮಾತು ಪ್ರಬುದ್ಧವಾಗಿದ್ದರೆ ಅದರ ಮೌಲ್ಯ ಹೆಚ್ಚುತ್ತದೆ.

ರಾಜ್ಯ ವಿಭಜನೆ ಪ್ರಕ್ರಿಯೆ ಸುಲಭವಾದುದಲ್ಲ, ಅತ್ಯಂತ ಜಟಿಲ ಕಸರತ್ತು. ನೆಲ, ಜಲ ಒಳಗೊಂಡಂತೆ ಸಮಸ್ತ ಸಂಪನ್ಮೂಲ ಹಾಗೂ ಕಚೇರಿ, ಕಡತ ಎಲ್ಲವೂ ನ್ಯಾಯಬದ್ಧವಾಗಿ ಹಂಚಿಕೆಯಾಗಬೇಕು. ಸಣ್ಣಪುಟ್ಟ ಲೋಪಗಳಾ­ಗಿದ್ದರೆ ನಿಯಮಾನುಸಾರ ಸರಿಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ. ಅದಕ್ಕಾಗಿ ಸಮಿತಿಗಳೂ ರಚನೆಯಾಗಿವೆ. ತೆಲಂಗಾಣದ ವೃಂದದಲ್ಲಿ ಸೇರಿರ­ಬಹು­ದಾದ ಸೀಮಾಂಧ್ರ ಮೂಲದ ನೌಕರರನ್ನು ಗುರುತಿಸುವಂತೆ ಕೆಸಿಆರ್‌ ಅವರು ನೌಕರರ ಸಂಘಟನೆಗಳಿಗೆ ಕರೆ ನೀಡಿರುವುದು ಒಳ್ಳೆಯ ಬೆಳವಣಿಗೆ­ಯಲ್ಲ.

ಈ ಹೊಣೆಗಾರಿಕೆ ನಿಭಾಯಿಸಲೆಂದೇ ಕೆಲವರು ನಿಯೋಜನೆ­ಗೊಂಡಿ­ದ್ದಾರೆ. ಆ ಕೆಲಸವನ್ನು ಅವರೇ ನಿಭಾಯಿಸಲಿ. ಅದರಲ್ಲಿ ಇನ್ಯಾರೋ ಮೂಗು ತೂರಿಸುವುದು ಬೇಡ. ಭಾವಾವೇಶದಿಂದ ಏನನ್ನೂ ಸಾಧಿಸ­ಲಾಗದು.  ಅಖಂಡ ಆಂಧ್ರಪ್ರದೇಶ, ಜೂನ್ ಎರಡಕ್ಕೆ ವಿಧ್ಯುಕ್ತವಾಗಿ ಎರಡು ರಾಜ್ಯವಾಗಲಿದೆ. ವಿಭಜನೆಗೆ ಎರಡೂ ರಾಜ್ಯಗಳ ಮುಖ್ಯಸ್ಥರು ಸಂಪೂರ್ಣ ಸಹಕಾರ ನೀಡಬೇಕು. ಸಂಪನ್ಮೂಲ ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು. ಸಂಘರ್ಷದಿಂದ ಉಭಯ ರಾಜ್ಯ­ಗಳಿಗೂ ಹಾನಿ ಆಗಲಿದೆಯೇ ಹೊರತು ಪ್ರಯೋಜನವಂತೂ ಆಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT