ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ರುಚಿಯ ಆಂಧ್ರದ ಅಡುಗೆ

ನಳಪಾಕ
Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಬೀಟ್‌ರೂಟ್‌ ಚಟ್ನಿ
ಸಾಮಗ್ರಿ: ಕಾಲು ಕೆ. ಜಿ. ಬೀಟ್‌ರೂಟ್‌, 200 ಗ್ರಾಂ ಈರುಳ್ಳಿ, ಅರ್ಧ ತೆಂಗಿನಕಾಯಿ, ಟೊಮೆಟೊ 3,  ಚಿಕ್ಕ ಹಸಿರುಮೆಣಸಿನಕಾಯಿ 5, ಒಣಮೆಣಸಿನಕಾಯಿ 2, ಬೆಳ್ಳುಳ್ಳಿ ಸ್ವಲ್ಪ, ಜೀರಿಗೆ ಸ್ವಲ್ಪ, ಹುಣಸೆಹುಳಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ ಎರಡು ಟೀ ಚಮಚ, ಅರಿಶಿಣ ಪುಡಿ 1 ಟೀ ಚಮಚ, ಧನಿಯಾ ಪುಡಿ 1 ಟೀ ಚಮಚ, ಕರಿಯಲು ಎಣ್ಣೆ.

ವಿಧಾನ: ಕಡಾಯಿಗೆ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕತ್ತರಿಸಿದ ಟೊಮೆಟೊ, ಬೀಟ್‌ರೂಟ್‌ ಹಾಕಿ. ನಂತರ ಖಾರದ ಪುಡಿ, ಧನಿಯಾ, ಅರಿಶಿಣಪುಡಿ, ಮೆಣಸಿನ ಕಾಯಿ, ಹುಣಸೆಹುಳಿ ಹಾಕಿ ಮಿಶ್ರಣ ಮಾಡಿ.

10 ನಿಮಿಷ ಹುರಿದುಕೊಳ್ಳಿ. ನಂತರ ತುರಿದ ಕಾಯಿ ಹಾಕಿ. ಈ ಎಲ್ಲ ಮಸಾಲೆಯನ್ನು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಚಟ್ನಿಗೆ ಸಾಸಿವೆ, ಕರಿಬೇವು ಒಗ್ಗರಣೆಯನ್ನು ಹಾಕಿ. ಈ ಚಟ್ನಿಯು ಎಲ್ಲ ಸ್ಟಾರ್ಟರ್‌ನೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಪೆಸರುಪಪ್ಪು ಚಾರು
ಸಾಮಗ್ರಿ:
ಹೆಸರು ಕಾಳು 250 ಗ್ರಾಂ, ಹಸಿರುಮೆಣಸಿನಕಾಯಿ 5ರಿಂದ 6, ಪಾಲಕ್‌ ಸೊಪ್ಪು 1ಕಟ್ಟು, ಹುಣಸೆಹುಳಿ ಸ್ವಲ್ಪ.  

ವಿಧಾನ: ಮೊದಲು ಪಾಲಕ್‌ ಸೊಪ್ಪು ಹಾಗೂ ಹಸಿರು ಮೆಣಸಿನಕಾಯಿ ಕತ್ತರಿಸಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸ್ವಲ್ಪ ಜೀರಿಗೆ ಹಾಕಿ ಸಾಟೆ ಮಾಡಿ ಆನಂತರ ಕತ್ತರಿಸಿದ ಹಸಿಶುಂಠಿ ಹಾಕಿ, ಪಾಲಕ್‌ ಸೊಪ್ಪು ಹಾಕಿದ ಐದು ನಿಮಿಷದ ನಂತರ ಬೇಯಿಸಿದ ಹೆಸರು ಕಾಳನ್ನು ಅರೆದು ಹಾಕಿ (ಕಾಲು ಕೆ.ಜಿ.ಗೆ ಒಂದು ಲೀಟರ್‌ ನೀರು ಹಾಕಿ ಬೇಯಿಸಿ, ಸ್ವಲ್ಪ ಅರಿಶಿಣ ಪುಡಿ ಹಾಕಿರಬೇಕು), ಚೆನ್ನಾಗಿ ಕುದಿ ಬಂದ ನಂತರ ರುಚಿಗೆ ಸ್ವಲ್ಪ ಉಪ್ಪು ಹಾಕಿ. ಕೊನೆಗೆ ಹುಣಸೆಹುಳಿ ಅಥವಾ ನಿಂಬೆರಸ ಹಾಕಿ. ಇದು ಸೂಪ್‌ ಥರ ಇರುತ್ತದೆ.

ಗೋಂಗೂರ ಪಪ್ಪು
ಸಾಮಗ್ರಿ:
ತೊಗರಿ ಬೇಳೆ ಅರ್ಧ ಕೆ.ಜಿ., ಗೋಂಗೂರ ಸೊಪ್ಪು 200 ಗ್ರಾಂ, ಹಸಿರು ಮೆಣಸಿನಕಾಯಿ ಹತ್ತು, ಹುಳಿ ಸ್ವಲ್ಪ, ಹಸಿಶುಂಠಿ 10 ಗ್ರಾಂ, ಜೀರಿಗೆ ಸ್ವಲ್ಪ, ಉದ್ದಿನಬೇಳೆ ಸ್ವಲ್ಪ, ಬೆಳ್ಳುಳ್ಳಿ 50ಗ್ರಾಂ, ಈರುಳ್ಳಿ ಐದು.

ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಜೀರಿಗೆ, ಮೂರ್ನಾಲ್ಕು ಒಣ ಮೆಣಸಿನ ಕಾಯಿ, ಬೆಳ್ಳುಳ್ಳಿ ಹಾಕಿ, ನಂತರ ಹೆಚ್ಚಿದ ಈರುಳ್ಳಿ, ಉದ್ದಿನಬೇಳೆ ಹಾಕಿ ಫ್ರೈ ಮಾಡಬೇಕು, ಆಮೇಲೆ ಹಸಿರು ಮೆಣಸಿನಕಾಯಿ, ಶುಂಠಿ, ಗೋಂಗೂರ ಸೊಪ್ಪನ್ನು ಕತ್ತರಿಸಿ ಹಾಕಿ, ಕಾಲು ಲೀಟರ್‌ನಷ್ಟು ನೀರು ಹಾಕಿ. ಅದಕ್ಕೆ ಅರಿಶಿಣ ಪುಡಿ, ಖಾರದ ಪುಡಿ ಹಾಕಿ, ನಂತರ ಬೇಯಿಸಿದ ಬೇಳೆ ಹಾಕಿ ಕುದಿಸಿ. ಸ್ವಲ್ಪ ಹುಣಸೆಹುಳಿ ಹಾಕಿ 15 ನಿಮಿಷ ಬೇಯಿಸಿ. ಕೊನೆಗೆ ತುಪ್ಪ ಹಾಕಿದರೆ ಗೋಂಗೂರ ಪಪ್ಪು ಸಿದ್ಧವಾದಂತೆ. ಇದು ಅನ್ನದೊಂದಿಗೆ ತಿನ್ನಲು ತುಂಬ ರುಚಿಯಾಗಿರುತ್ತದೆ.

*
ಬಾಣಸಿಗ ಸುಜೊ ಬಬಿನ್‌ ತಮಿಳುನಾಡಿನ ಕನ್ಯಾಕುಮಾರಿಯವರು. ಬಿಎಸ್ಸಿ ಹೋಟೆಲ್‌ ಮ್ಯಾನೇಜ್‌ಮೆಂಟ್‌, ಎಂಬಿಎ ಕೋರ್ಸ್‌ ಮಾಡಿರುವ ಇವರು ಮೊದಲು ಬೆಂಗಳೂರಿನ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ಬಾಣಸಿಗರಾಗಿ ತರಬೇತಿ ಪೆಡೆದಿದ್ದಾರೆ, ಅಲ್ಲದೇ ಲೀಲಾ ಪ್ಯಾಲೇಸ್‌ನಲ್ಲೂ ಕೆಲಸ ಮಾಡಿದ್ದಾರೆ.

ಸದ್ಯ ಬೆಂಗಳೂರಿನ ಕೋರಮಂಗಲದಲ್ಲಿರುವ ಸೌತ್‌-ಇಂಡೀಸ್‌ ರೆಸ್ಟೋರೆಂಟ್‌ನಲ್ಲಿ ಬಾಣಸಿಗರಾಗಿ ಕೆಲಸ ನಿರ್ವಹಿಸುತ್ತಿರುವ ಸುಜೊಗೆ ಇಲ್ಲಿ ಹತ್ತು ವರ್ಷಗಳ ಅನುಭವ ಇದೆ. ಕೇರಳ, ತಮಿಳುನಾಡು, ಆಂಧ್ರ ಹಾಗೂ ಕರ್ನಾಟಕ ರಾಜ್ಯಗಳ ಅಡುಗೆ ಮಾಡುವಲ್ಲಿ ಇವರು ನಿಪುಣರು. ‘ಪ್ರಜಾವಾಣಿ’ ಓದುಗರಿಗಾಗಿ ಆಂಧ್ರ ಪ್ರದೇಶದ ಕೆಲವು ರೆಸಿಪಿಗಳನ್ನು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT