ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಕ್ಕೆ ಹಕ್ಕಿಯಂತಹ ರೆಕ್ಕೆ!

Last Updated 9 ಜೂನ್ 2015, 19:30 IST
ಅಕ್ಷರ ಗಾತ್ರ

ಮಾನಗಳ ರೆಕ್ಕೆಗಳನ್ನು ಹಕ್ಕಿಗಳಂತೆಯೇ ರೂಪಿಸುವ ಪ್ರಯತ್ನ ಇದೀಗ ಸಾಗಿದೆ. ರೆಕ್ಕೆಗಳ ವಿನ್ಯಾಸದಲ್ಲಿ ಬದಲಾವಣೆ ತರುವ ಮೂಲಕ ತಂತ್ರಜ್ಞರು ಹೊಸ ಚಿಂತನೆಯನ್ನು ಮೂಡಿಸಿ ದ್ದಾರೆ. ವೈಮಾನಿಕ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆ ಇದಾಗಿದ್ದು, ವಿಮಾನದ ತೂಕವನ್ನು ಕಡಿಮೆಗೊಳಿಸುವ ಮತ್ತು ಇಂಧನದ ಮಿತ ಬಳಕೆ ಮೂಲಕ ಕೋಟ್ಯಂತರ ಮೊತ್ತದ ಹಣ ಉಳಿತಾಯವಾಗಲಿದೆ ಎಂದೇ ಅಂದಾಜು ಮಾಡಲಾಗಿದೆ.

ಅಗತ್ಯಕ್ಕೆ ತಕ್ಕಂತೆ ಆಕಾರವನ್ನು ಬದಲಾಯಿಸುವಂತಹ ರೆಕ್ಕೆಗಳ ವಿನ್ಯಾಸವನ್ನು ರೂಪಿಸಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ವೈಮಾನಿಕ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಸತತ 6 ತಿಂಗಳ ಕಾಲ 22 ವಿಮಾನಗಳ ಪರೀಕ್ಷಾರ್ಥ ಹಾರಾಟದ ನಂತರ ಹೊಸ ವಿನ್ಯಾಸದ ರೆಕ್ಕೆಗಳ ತಂತ್ರಜ್ಞಾನವನ್ನು ನಾಸಾ ಪ್ರಕಟಿಸಿದೆ. 40 ಸಾವಿರ ಅಡಿ ಎತ್ತರದಲ್ಲಿ ಇವುಗಳ ಪರೀಕ್ಷಾರ್ಥ ಹಾರಾಟವನ್ನೂ ಯಶಸ್ವಿಯಾಗಿ ನಡೆಸಲಾಗಿದೆ.

ಈ ರೆಕ್ಕೆ ಆಕಾರ ಬದಲಿಸುವ ತಂತ್ರಜ್ಞಾನವು ಹಾರಾಟದ ವೇಳೆಯಲ್ಲಿ ವಿಮಾನದ ತೂಕವನ್ನು ಕಡಿಮೆಗೊಳಿಸಲಿದೆ. ಜತೆಗೆ ಹಾರಾಟ ಸಂದರ್ಭದಲ್ಲಿ ಮತ್ತು ಆಗಸಕ್ಕೆ ನೆಗೆ ಯುವಾಗ ಹಾಗೂ ಭೂಮಿಗೆ ಇಳಿಯುವಾಗ ಉಂಟಾಗುವ ಶಬ್ದವವನ್ನೂ ಗಣನೀಯವಾಗಿ ತಗ್ಗಿಸಲಿದೆ. ಅಲ್ಲದೆ ಪ್ರತಿ ವರ್ಷ ಕೋಟ್ಯಂತರ ಡಾಲರ್‌ ಮೌಲ್ಯದ ಇಂಧನ ಉಳಿತಾಯವಾಗ ಲಿದೆ ಎಂದು ನಾಸಾ ಪ್ರತಿಪಾದಿಸಿದೆ.

ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ರೆಕ್ಕೆಗಳನ್ನು –2ರಿಂದ 30 ಡಿಗ್ರಿಗಳ ಕೋನದಲ್ಲಿ ಅಳವಡಿಸಲಾಗಿದೆ. ಅಂದರೆ ವಿಮಾನಗಳ ಹಾರಾಟದ ದಿಕ್ಕು ಮತ್ತು ವೇಗದ ಅಗತ್ಯಕ್ಕೆ ತಕ್ಕಂತೆ ರೆಕ್ಕೆಗಳ ಆಕಾರವನ್ನು ಬದಲಾಯಿಸಲು ಸಹ ಸಾಧ್ಯವಿದೆ ಎಂದು ನಾಸಾ ತಿಳಿಸಿದೆ.

ನಾಗರಿಕ ಪ್ರಯಾಣದ ವಿಮಾನಗಳಿಗೆ ಹೊರತಾದ ಹಲವು ವಿನ್ಯಾಸಗಳ ಮತ್ತು ವಿವಿಧ ಸಾಮರ್ಥ್ಯದ ವಿಮಾನಗಳು ಈಗ ಬಳಕೆಯಲ್ಲಿವೆ. ಕ್ಷಿಪಣಿಗಳನ್ನು ಹೊತ್ತೊಯ್ಯುವ ವಿಮಾನಗಳು, ಆಗಸದಲ್ಲಿ ಒಂದನ್ನೊಂದು ಬೆನ್ನಟ್ಟಿ ಸೆಣಸಾಡುವ ವಿಮಾನಗಳು, ಬೇಹು ಗಾರಿಕೆ ಉದ್ದೇಶದ ಪರಿವೀಕ್ಷಣಾ ವಿಮಾನ ಗಳು ಸೇರಿದಂತೆ ಹತ್ತಾರು ಬಗೆಯ ಯುದ್ಧ ವಿಮಾನಗಳಿವೆ. ಎಲ್ಲ ವಿಮಾನಗಳ ಪಾತ್ರವೂ ಒಂದೇ ಬಗೆಯದಾಗಿರುವುದಿಲ್ಲ. ಒಂದು ಕೆಲಸಕ್ಕೆ ಅತಿ ವೇಗದಲ್ಲಿ ಧಾವಿಸಬೇಕು, ಮತ್ತೊಂದು ಕಾರ್ಯಕ್ಕೆ ಅತಿ ಎತ್ತರದಲ್ಲಿ ಹಾರಾಟ ನಡೆಸಬೇಕು.

ಈ ರೀತಿ ವಿವಿಧ ಕಾರ್ಯಗಳಿಗೆ ಭಿನ್ನ ಬಗೆಯಲ್ಲಿ ಬಳಕೆ ಆಗುವಂತೆಯೇ ವಿಮಾನಗಳನ್ನು ವಿನ್ಯಾಸಕಾರರು ಸಜ್ಜುಗೊಳಿಸಿರುತ್ತಾರೆ. ಈ ವಿಮಾನಗಳ ಬಳಕೆ ರೀತಿ ಬದಲಾದರೂ ಮೂಲ ವಿನ್ಯಾಸ ಒಂದೇ ಆಗಿರುವುದರಿಂದ ವಿಮಾನಗಳ ಕಾರ್ಯಕ್ಷಮತೆ ಕುಗ್ಗುವುದು ಸಹಜ. ವಿವಿಧ ಸಂದರ್ಭಗಳ, ವಿವಿಧ ವಾತಾವರಣಗಳಲ್ಲಿ ವಿಮಾನ ಸಂಚಲನಕ್ಕೆ ಎದುರಾಗುವ ಅಡೆತಡೆಗಳು ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಈ ಅಡೆತಡೆಗ ಳನ್ನು ಎದುರಿಸಲು ವ್ಯಯಿಸಬೇಕಾದ ಹೆಚ್ಚು ವರಿ ಶಕ್ತಿಗೆ ಅಪಾರ ಇಂಧನ ಬಳಕೆಯಾಗು ವುದರಿಂದ ಕಾರ್ಯಕ್ಷಮತೆ ತಗ್ಗುತ್ತದೆ.

ಹೀಗಾಗಿಯೇ ಅಗತ್ಯಕ್ಕೆ ತಕ್ಕಂತೆ, ಪಕ್ಷಿಗಳಂತೆ ರೆಕ್ಕೆಗಳನ್ನು ಸ್ವಲ್ಪ ಮಡಚಿಕೊಳ್ಳುವ ಅಥವಾ ಒಂದನ್ನು ಪೂರ್ತಿ ಮಡಚಿಕೊಂಡು ಮತ್ತೊಂದನ್ನು ವಿಶಾಲವಾಗಿ ತೆರೆದಿಡುವ ವ್ಯವಸ್ಥೆ ವಿಮಾನಗಳಲ್ಲಿದ್ದರೆ ಈಗಿರುವ ತೊಡಕುಗಳನ್ನು ನಿವಾರಿಸಿಕೊಳ್ಳಬಹುದು ಎನ್ನುವುದು ತಂತ್ರಜ್ಞರ ಅಭಿಪ್ರಾಯ.

ಈ ತೊಡಕುಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ನಾಸಾದ ‘ಆರ್ಮ್‌ಸ್ಟ್ರಾಂಗ್‌ ಫ್ಲೈಟ್‌ ರಿಸರ್ಚ್‌ ಸೆಂಟರ್‌’ನ ತಂಡ ವಿಶೇಷ ವೈಮಾನಿಕ ಹಾರಾಟದ ಬಗ್ಗೆ ವಿಶೇಷ ಪರೀಕ್ಷೆಗಳನ್ನು ಕೈಗೊಂಡು ರೆಕ್ಕೆಗಳ  ಆಕಾರ ಬದಲಿಸುವ ತಂತ್ರಜ್ಞಾನದಲ್ಲಿ ಯಶಸ್ಸು ಸಾಧಿಸಿದೆ.

‘ಈ ರೀತಿಯ ವೈಮಾನಿಕ ಪರೀಕ್ಷೆಗಳು ನಾಸಾದ ಪರಿಸರ ಹೊಣೆಗಾರಿಕೆ ವೈಮಾನಿಕ ಯೋಜನೆಯಲ್ಲೂ ಮಹತ್ವದ ಪಾತ್ರ ವಹಿಸಲಿದೆ. ಪರಿಸರದ ಮೇಲೆ ವೈಮಾನಿಕ ಕ್ಷೇತ್ರದಿಂದ ಉಂಟಾಗುತ್ತಿರುವ ಪರಿಣಾಮಗಳನ್ನು ತಡೆಯಲು ಇದು ಪ್ರಯೋಜನಕಾರಿಯಾಗಿದೆ’ ಎನ್ನುತ್ತಾಋಎ ಯೋಜನಾ ವ್ಯವಸ್ಥಾಪಕ ಫೆ ಕೊಲ್ಲಿರ್‌.

ಈ ತಂತ್ರಜ್ಞಾನವನ್ನು ಈಗಿರುವ ಅಥವಾ ಹೊಸದಾಗಿ ನಿರ್ಮಾಣವಾಗುತ್ತಿರುವ ವಿಮಾನಗಳಲ್ಲಿ ಅಳವಡಿಸಬಹುದಾಗಿದೆ. ರೆಕ್ಕೆಗಳ ತೂಕ ಕಡಿಮೆ ಮಾಡುವ ಮೂಲಕ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಿ ಎಂಜಿನ್‌ಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ನಾಸಾ ತಿಳಿಸಿದೆ.

‘ವೈಮಾನಿಕ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ತೊಡಕಗಳು ಉಂಟಾಗಿಲ್ಲ. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ. ಈ ತಂತ್ರಜ್ಞಾನ ವೈಮಾನಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು’ ಎಂದು ಪ್ರತಿಪಾದಿಸಿದ್ದಾರೆ ಓಹಿಯೊದ ವಾಯುಪಡೆ ಸಂಶೋಧನಾ ಪ್ರಯೋಗಾಲಯದ ಪೀಟ್‌ ಫ್ಲಿಕ್‌.

‘ಹೊಸ ತಂತ್ರಜ್ಞಾನದ ವೈಮಾನಿಕ ಪರೀಕ್ಷೆ ಗಳ ಫಲಿತಾಂಶವನ್ನು ವಿಮಾನ ತಯಾರಿಕೆಯ ವಿನ್ಯಾಸದ ಅಧ್ಯಯನಗಳಲ್ಲಿ ಅಳವಡಿಸಲಾಗು ತ್ತಿದೆ.  ಇದರಿಂದ ಭವಿಷ್ಯದಲ್ಲಿ ಬೃಹತ್‌ ಗಾತ್ರದ ವಿಮಾನಗಳನ್ನು ರೂಪಿಸುವ ಸಂದರ್ಭದಲ್ಲಿ ಅನುಕೂಲ ವಾಗಲಿದೆ’ ಎನ್ನುತ್ತಾರೆ ಫ್ಲೀಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT