ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಗಳಿಗೆ ಬೆದರಿಕೆ ಕರೆ

ದೆಹಲಿ, ಬೆಂಗಳೂರು ನಿಲ್ದಾಣಗಳಲ್ಲಿ ಆತಂಕದ ವಾತಾವರಣ
Last Updated 27 ಜನವರಿ 2016, 19:33 IST
ಅಕ್ಷರ ಗಾತ್ರ

ನವದೆಹಲಿ/ ಬೆಂಗಳೂರು: ಮೂರು ಬಾಂಬ್‌ ಬೆದರಿಕೆ ಕರೆಗಳು ಮತ್ತು ವಿಮಾನವೊಂದರ ಶೌಚಾಲಯದಲ್ಲಿ ಪತ್ತೆಯಾದ ಪತ್ರದಿಂದಾಗಿ ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಬುಧವಾರ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಇದರ ಪರಿಣಾಮವಾಗಿ ಎರಡು ಅಂತರರಾಷ್ಟ್ರೀಯ ಮಾರ್ಗದ ವಿಮಾನಗಳು ಸೇರಿ ಮೂರು ವಿಮಾನಗಳು ತಡವಾಗಿ ಸಂಚರಿಸಿದವು.
ದೆಹಲಿ ವಿಮಾನ ನಿಲ್ದಾಣದಿಂದ ಕಠ್ಮಂಡುವಿಗೆ ಹೊರಟಿದ್ದ ಏರ್‌ ಇಂಡಿಯಾ ಮತ್ತು ಜೆಟ್‌ ಏರ್‌ವೇಸ್‌ ವಿಮಾನಗಳನ್ನು ಬಾಂಬ್‌ ಬೆದರಿಕೆ ಕಾರಣಕ್ಕೆ ತಡೆಯಲಾಯಿತು. ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಏರ್‌ ಏಷ್ಯಾ ವಿಮಾನ ಕೂಡ ಅದೇ ಕಾರಣಕ್ಕೆ 4 ತಾಸು ತಡವಾಗಿ ನಿರ್ಗಮಿಸಿತು.

ಮಧ್ಯಾಹ್ನ 3.15ರ ಹೊತ್ತಿಗೆ ದೆಹಲಿ ವಾಯುಪಡೆ ನಿಲ್ದಾಣ ಸಮೀಪ ಗುಡಗಾಂವ್‌–ಫರೀದಾಬಾದ್‌  ಪ್ರದೇಶದಲ್ಲಿ ಬಲೂನೊಂದು ಹಾರಾಡುತ್ತಿರುವುದನ್ನು ಗಸ್ತು ಸಿಬ್ಬಂದಿ ಗುರುತಿಸಿದರು. ತಕ್ಷಣವೇ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಯಿತು. ನಿಲ್ದಾಣದಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು.
ತಪಾಸಣೆ: ಏರ್‌ ಇಂಡಿಯಾ ಮತ್ತು ಜೆಟ್‌ ಏರ್‌ವೇಸ್‌ ವಿಮಾನಗಳು ಕ್ರಮವಾಗಿ ಮಧ್ಯಾಹ್ನ 1.15 ಮತ್ತು 1.25ಕ್ಕೆ ದೆಹಲಿಯಿಂದ ಹೊರಡಬೇಕಿದ್ದವು. ಆದರೆ ಒಂದು ಗಂಟೆಗೆ ಅನಾಮಧೇಯ ಕರೆ ಬಂದ ನಂತರ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಯಿತು.

ರಾತ್ರಿ 7.50ರ ಸುಮಾರಿಗೆ ಏರ್‌ ಇಂಡಿಯಾ ಪ್ರಯಾಣಿಕರನ್ನು ಬೇರೊಂದು  ವಿಮಾನದಲ್ಲಿ ಕಠ್ಮಂಡುವಿಗೆ ಕಳುಹಿಸಲು ಏರ್ಪಾಟು ಮಾಡುತ್ತಿದ್ದಾಗಲೇ   ಮತ್ತೊಂದು ಬೆದರಿಕೆ ಕರೆ ಬಂದು ವಿಮಾನ ಹೊರಡುವುದು ಇನ್ನಷ್ಟು ವಿಳಂಬವಾಯಿತು.

ಬೆದರಿಕೆ ಪತ್ರ: ಜೈಪುರದಿಂದ ಬುಧವಾರ ಮಧ್ಯಾಹ್ನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಬಂದಿಳಿದ ‘ಏರ್‌ ಏಷ್ಯಾ’ ವಿಮಾನದಲ್ಲಿ ಪತ್ತೆಯಾದ ಬೆದರಿಕೆ ಪತ್ರವು ಸುಮಾರು ಮೂರೂವರೆ ತಾಸು ಆತಂಕ ಸೃಷ್ಟಿಸಿತು.

‘ವಿಮಾನದಲ್ಲಿ ಬಾಂಬ್ ಇಡಲಾಗಿದೆ. ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಳ್ಳುತ್ತದೆ’ ಎಂಬ ಬರಹವು ಪತ್ರದಲ್ಲಿತ್ತು. ವಿಮಾನದ ಶೌಚಾಲಯದಲ್ಲಿ ಆ ಪತ್ರ ಕಂಡ ಗಗನಸಖಿಯರು ನಿಲ್ದಾಣದ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

ಇದೇ ವೇಳೆ ಡಿಸಿಪಿ ಪಿ.ಎಸ್.ಹರ್ಷ ಸೇರಿದಂತೆ ಈಶಾನ್ಯ ವಿಭಾಗದ ಪೊಲೀಸರು, ಮತ್ತೊಂದು ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಭದ್ರತೆ ಒದಗಿಸಲು ನಿಲ್ದಾಣದಲ್ಲಿದ್ದರು. ಬೆದರಿಕೆ ಪತ್ರದ ವಿಷಯ ತಿಳಿಯುತ್ತಿದ್ದಂತೆಯೇ ಬಾಂಬ್ ನಿಷ್ಕ್ರಿಯ ದಳ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ಶ್ವಾನದಳದ ಜತೆ ವಿಮಾನದ ಬಳಿ ದೌಡಾಯಿಸಿದರು. ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನ ಮಾತ್ರವಲ್ಲದೆ ಇಡೀ ನಿಲ್ದಾಣವನ್ನು ತಪಾಸಣೆ ನಡೆಸಲಾಯಿತು. ಬಳಿಕ ‘ಯಾವುದೇ ಸ್ಫೋಟಕ ವಸ್ತುಗಳಿಲ್ಲ. ಇದು ಹುಸಿ ಬೆದರಿಕೆ ಪತ್ರ. ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಮಧ್ಯಾಹ್ನ 3.30ರ ಸುಮಾರಿಗೆ ಘೋಷಿಸಲಾಯಿತು. ನಂತರ 4.40ಕ್ಕೆ ವಿಮಾನ ಗೋವಾಕ್ಕೆ ಹೊರಟಿತು.

160 ಪ್ರಯಾಣಿಕರಿದ್ದರು: ‘ಜೈಪುರದಿಂದ ಮಧ್ಯಾಹ್ನ 12.07ಕ್ಕೆ ಕೆಐಎಎಲ್‌ಗೆ ಬಂದ ವಿಮಾನದಲ್ಲಿ 160 ಪ್ರಯಾಣಿಕರಿದ್ದರು. ನಂತರ 12.30ಕ್ಕೆ ಗೋವಾಕ್ಕೆ ಹೊರಡಬೇಕಿತ್ತು ’ ಎಂದು ಕೆಐಎಎಲ್ ಕಾರ್ಪೊರೇಟ್ ಸೇವೆಗಳ ವಿಭಾಗದ ಸರೋಜ್ ಜೋಸೆಫ್ ‘ಪ್ರಜಾವಾಣಿ’ಗೆ ತಿಳಿಸಿದರು.
*
ಅಣಕು ಪ್ರದರ್ಶನ ಎಂದ ಡಿಸಿಪಿ
ಏರ್‌ಏಷ್ಯಾ ವಿಮಾನದಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದ್ದರೂ, ‘ಇದೊಂದು ಅಣಕು ಪ್ರದರ್ಶನ’ ಎಂದು ಬೆಂಗಳೂರಿನ ಈಶಾನ್ಯ ಡಿಸಿಪಿ ಹರ್ಷ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT