ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್‌ ಕಿರಿಕಿರಿ

ಫಲ ನೀಡದ ಪ್ರಾಯೋಗಿಕ ಮಾರ್ಗ ಬದಲಾವಣೆ * ಶೇ 60ರಷ್ಟು ಹೆಚ್ಚು ದಟ್ಟಣೆ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಉಂಟಾಗುವ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸರು ಶನಿವಾರ ಜಾರಿಗೆ ತಂದ ಪ್ರಾಯೋಗಿಕ ಮಾರ್ಗ ಬದಲಾವಣೆಯಿಂದ ಆ ರಸ್ತೆಯಲ್ಲಿ ಸವಾರರು ಟ್ರಾಫಿಕ್‌ ಜಾಮ್‌ನ ಕಿರಿಕಿರಿ ಅನುಭವಿಸಿದರು.

ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ರಾಜಭವನ ಜಂಕ್ಷನ್‌ನಿಂದ   ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಎಲ್.ಆರ್.ಡಿ.ಇ. ಜಂಕ್ಷನ್, ಹೈಗ್ರೌಂಡ್ಸ್ ಜಂಕ್ಷನ್ ಮೂಲಕ  ದ್ವಿಮುಖ  ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು.  ಆದರೆ, ಹೈಗ್ರೌಂಡ್ಸ್ ಜಂಕ್ಷನ್‌ಗೆ ನಾಲ್ಕು ದಿಕ್ಕುಗಳಿಂದಲೂ ವಾಹನಗಳು ಬಂದು ಸೇರಿದವು.

ಆಗ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ಸಾಲಾಗಿ ನಿಂತುಕೊಂಡವು. ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್‌ ಕಮಿಷನರ್‌್ ಎನ್.ಎಸ್‌. ಮೇಘರಿಕ್‌್, ದಟ್ಟಣೆ ನೋಡಿ ಹೈಗ್ರೌಂಡ್ಸ್ ಜಂಕ್ಷನ್‌ ಮಾರ್ಗ ಬದಲಾವಣೆ ರದ್ದುಪಡಿಸಿದರು.   

‘ವಿಮಾನ ನಿಲ್ದಾಣವನ್ನು ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿದ್ದರಿಂದ  ಒಂದು ದಿನದ ಪ್ರಾಯೋಗಿಕ ಮಾರ್ಗ ಬದಲಾವಣೆ ಮಾಡಿದ್ದೆವು. ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿ ಸಮಸ್ಯೆಯಾಯಿತು. ಇನ್ನು ಕೆಲವೆಡೆ  ಸಂಚಾರ ಸುಗಮವಾಗಿದೆ.

ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವೆಡೆ ಶಾಶ್ವತವಾಗಿ ಮಾರ್ಗ ಬದಲಾವಣೆ ಮಾಡುತ್ತೇವೆ’ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್‌ ಆರ್‌. ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರ್ಗ ಬದಲಾವಣೆ ಮಾಹಿತಿ ಇಲ್ಲದ ಚಾಲಕರು, ತಮ್ಮ ವಾಹನವನ್ನು ಮೊದಲಿದ್ದ ಮಾರ್ಗದಲ್ಲೇ ಚಲಾಯಿಸಿಕೊಂಡು ಬಂದರು. ಅದು ದಟ್ಟಣೆ ಹೆಚ್ಚಾಗಲು ಕಾರಣವಾಯಿತು’.

‘ಬಿ.ಎಚ್.ಇ.ಎಲ್. ವೃತ್ತದಿಂದ ಕಾವೇರಿ ಎಲಿಮೆಂಟ್ಸ್, ಅಲ್ಲಿಂದ ಎಡ ತಿರುವು ಪಡೆದು ರಮಣಮಹರ್ಷಿ ರಸ್ತೆ ಮೂಲಕ ಮೇಖ್ರಿ ವೃತ್ತಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಸಂಚಾರ ಸುಗಮವಾಗಿತ್ತು.

‘ಸಂಜೆ ವೇಳೆ ಮೇಖ್ರಿ ವೃತ್ತದಿಂದ ಮೆಜೆಸ್ಟಿಕ್ ಕಡೆ ಹೋಗುವ ವಾಹನಗಳಿಗೆ ಟಿ.ಚೌಡಯ್ಯ ರಸ್ತೆ, ಹೈಗ್ರೌಂಡ್ಸ್ ಜಂಕ್ಷನ್, ಎಲ್.ಆರ್.ಡಿ.ಇ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಅಥವಾ ಲೀ ಮೆರಿಡಿಯನ್ ಹೋಟೆಲ್ ಬಳಿ ಎಡ ತಿರುವು ಪಡೆದು ಕನ್ನಿಂಗ್‌ಹ್ಯಾಂ ರಸ್ತೆ,

ಅವಿನಾಶ್ ಪೆಟ್ರೋಲ್ ಬಂಕ್, ಚಂದ್ರಿಕಾ ಜಂಕ್ಷನ್, ಮಿಲ್ಲರ್ ರಸ್ತೆ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಬದಲಾವಣೆಯಿಂದ ರಸ್ತೆಯಲ್ಲಿ ಪ್ರತಿದಿನಕ್ಕಿಂತ ಶೇ 60ರಷ್ಟು ದಟ್ಟಣೆ ಹೆಚ್ಚಾಯಿತು’ ಎಂದು ಅವರು ತಿಳಿಸಿದರು.

ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್: ಪ್ಯಾಲೆಸ್‌ ರಸ್ತೆಯಲ್ಲಿ ದಟ್ಟಣೆ ಹೆಚ್ಚಾಗಿದ್ದರಿಂದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌್ ಸುಮಾರು ಅರ್ಧ ತಾಸು ರಸ್ತೆಯಲ್ಲೇ ನಿಲ್ಲುವಂತಾಯಿತು. ಅದನ್ನು ನೋಡಿದ ಸಂಚಾರ ಪೊಲೀಸರು, ಮಾರ್ಗ ಬದಲಾವಣೆ ಕೈಬಿಟ್ಟು ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಬಳಿಕ ಆಂಬುಲೆನ್ಸ್ ಹೋಗಲು ದಾರಿ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT